ಪ್ರಾಣಿಬಲಿ ಪ್ರಕರಣಕ್ಕೆ ಟ್ವಿಸ್ಟ್ | ಪ್ರಸಾದ್ ಅತ್ತಾವರ ಪತ್ನಿ ಮಹಿಳಾ ಪಿಎಸ್ಐ ಹೆಸರು ಮುನ್ನೆಲೆಗೆ!
ಮುಡಾ ಹಗರಣದ ದೂರದಾರರಾದ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರ ಫೋಟೋಗೆ ಪ್ರಾಣಿಬಲಿ ರಕ್ತ ಲೇಪಿಸಿ ವಾಮಾಚಾರ ನಡೆಸಿದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಆರೋಪಿಯಾದ ರಾಮಸೇನೆ ಮುಖ್ಯಸ್ಥ ಪ್ರಸಾದ್ ಅತ್ತಾವರ ಪತ್ನಿಯಾದ ಉಡುಪಿ ಮಹಿಳಾ ಪೊಲೀಸ್ ಠಾಣೆಯ ಪಿಎಸ್ಐ ಸುಮಾ ಆಚಾರ್ಯ ಅವರ ಹೆಸರೂ ಕೂಡ ಪ್ರಕರಣದಲ್ಲಿ ಬಯಲಾಗಿದೆ.
ಮಂಗಳೂರಿನ ಸ್ಪಾ ಮತ್ತು ಪಾರ್ಲರ್ ಮೇಲಿನ ದಾಳಿ ಪ್ರಕರಣದಲ್ಲಿ ವಾರದ ಹಿಂದೆ ರಾಮಸೇನೆ ಮುಖ್ಯಸ್ಥ ಪ್ರಸಾದ್ ಅತ್ತಾವರ್ ಎಂಬವರನ್ನು ಬಂಧಿಸಲಾಗಿತ್ತು. ಪ್ರಕರಣದ ತನಿಖೆಯ ಭಾಗವಾಗಿ ಪೊಲೀಸರು ಅತ್ತಾವರ ಮೊಬೈಲ್ ಪರಿಶೀಲಿಸಿದಾಗ, ಸ್ನೇಹಮಯಿ ಕೃಷ್ಣ ಹಾಗೂ ಗಂಗರಾಜು ಅವರಿಗೆ ಬಲ ತುಂಬಲು 5 ಕುರಿಗಳನ್ನು ಕಾಳಿಗೆ ಬಲಿ ಕೊಟ್ಟಿರುವ ವಿಡಿಯೋ ಪತ್ತೆಯಾಗಿತ್ತು.
ಆ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದ ಪ್ರಮುಖ ದೂರುದಾರರಾದ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರ ಪರವಾಗಿ ಪ್ರಸಾದ್ ಅತ್ತಾವರ ಆಪ್ತರು ವಾಮಾಚಾರ ನಡೆಸಿರುವುದು ಮತ್ತು ಅದರಲ್ಲಿ ಆತನ ಪತ್ನಿಯಾದ ಉಡುಪಿ ಮಹಿಳಾ ಪೊಲೀಸ್ ಠಾಣೆ ಪಿಎಸ್ಐ ಆದ ಸುಮಾ ಆಚಾರ್ಯ ಕೂಡ ಭಾಗಿಯಾಗಿರುವ ಸಂಗತಿ ತಿಳಿದುಬಂದಿದೆ.
ಆ ಮೂಲಕ ಪ್ರಾಣಿ ಬಲಿ ಪ್ರಕರಣಕ್ಕೆ ಹೊಸ ತಿರುವು ಬಂದಿದ್ದು, ಸಿದ್ದರಾಮಯ್ಯ ವಿರುದ್ಧ ದೂರುದಾರರಿಗೆ ಬಲ ತುಂಬುವ ಯತ್ನವಾಗಿ ಪ್ರಸಾದ್ ಅತ್ತಾವರ ನೇತೃತ್ವದ ರಾಮಸೇನೆ ಸೇರಿದಂತೆ ಕೆಲವು ಸಂಘಟನೆಗಳು ವಾಮಾಚಾರದ ಮೊರೆ ಹೋಗಿರುವುದು ಬಯಲಾಗಿದೆ.
ಪ್ರಕರಣದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ವಾರದ ಹಿಂದೆ ಪ್ರಸಾದ್ ಅತ್ತಾವರ ಬಂಧನ ಮಾಡಲಾಗಿತ್ತು. ಬಂಧಿತ ಪ್ರಸಾದ್ ಮೊಬೈಲ್ಫೋನ್ ಪರಿಶೀಲನೆ ವೇಳೆ ದೇವಸ್ಥಾನದಲ್ಲಿ ಪ್ರಾಣಿ ಬಲಿಕೊಡುವ ದೃಶ್ಯ ಪತ್ತೆಯಾಗಿತ್ತು. ಸ್ನೇಹಮಯಿ ಕೃಷ್ಣ, ಗಂಗರಾಜು ಅವರಿಗೆ ಬಲ ತುಂಬುವುದಕ್ಕೆ ಈ ರೀತಿ ಮಾಡಿದ್ದಾರೆ ಎಂದು ಗೊತ್ತಾಗಿದೆ. ವಿಡಿಯೋದಲ್ಲಿ 5 ಕುರಿಗಳನ್ನು ಬಲಿ ಕೊಟ್ಟಿರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ.
ಈ ಬಲಿ ಎಲ್ಲಿ ನೀಡಲಾಗಿದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಆದರೆ, ಅನಂತ ಭಟ್ ಎಂಬಾತ ಈ ಬಲಿ ಮಾಡಿಸಿರುವುದು ತಿಳಿದುಬಂದಿದೆ. ಆ ಅನಂತ್ ಭಟ್ ಯಾರೆಂದು ತನಿಖೆ ಮಾಡ್ತಿದ್ದೇವೆ. ಪ್ರಾಥಮಿಕ ಮಾಹಿತಿ ಪ್ರಕಾರ ಸ್ನೇಹಮಯಿ, ಗಂಗರಾಜು ಪರವಾಗಿ ಈ ಪ್ರಾಣಿಬಲಿ ಮಾಡಲಾಗಿದೆ. ಈ ಪ್ರಕರಣದ ಸಂಬಂಧ ಸ್ವಯಂಪ್ರೇರಿತ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ. ರಾಜ್ಯದಲ್ಲಿ ಪ್ರಾಣಿಬಲಿಗೆ ನಿಷೇಧ ಇದೆ. ಜೊತೆಗೆ ವಿಡಿಯೋದಲ್ಲಿ ಹಣದ ಬ್ಯಾಗ್ನ ಫೋಟೋ ಸಹ ಇದೆ. ಈ ನಡುವೆ ಅನಂತ್ ಭಟ್ಗಾಗಿ ಹುಡುಕಾಟ ನಡೆಯುತ್ತಿದೆ ಎಂದಿದ್ದಾರೆ.
ಅಲ್ಲದೆ, ಹಣ ತುಂಬಿದ ಬ್ಯಾಗಿನ ಫೋಟೋವನ್ನು ಪ್ರಸಾದ್ ತನ್ನ ಪತ್ನಿಗೆ ಕಳಿಸಿರುವುದು ಕೂಡ ವಾಟ್ಸಪ್ ಚಾಟ್ ರಿಟ್ರೀವ್ ಮಾಡಿದಾಗ ಪತ್ತೆಯಾಗಿದೆ. ಅಷ್ಟೇ ಅಲ್ಲದೆ, ಪತ್ನಿ ಸುಮಾ ಆಚಾರ್ಯ ಮಾತ್ರವಲ್ಲದೆ ತನ್ನ ಸಹಚರರಾದ ಪ್ರಶಾಂತ ಬಂಗೇರ, ಹರ್ಷ ಮೈಸೂರು, ಅನಂತ ಭಟ್ ಗೂ ಹಣದ ಬ್ಯಾಗಿನ ಫೋಟೋ ಕಳುಹಿಸಿದ್ದಾರೆ ಎಂದೂ ಪೊಲೀಸರು ಹೇಳಿದ್ದಾರೆ. ಪ್ರಕರಣದ ಸಂಬಂಧ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಟ್ಟಾರೆ, ಇದೀಗ ಪ್ರಾಣಿಬಲಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ದೂರುದಾರರಿಗೂ ಪ್ರಸಾದ್ ಅತ್ತಾವರಗೂ ಇರುವ ಸಂಬಂಧವೇನು? ಯಾವ ಕಾರಣಕ್ಕೆ ದೂರುದಾರರ ಫೋಟೋ ಇಟ್ಟು ಪ್ರಾಣಿಬಲಿ ಕೊಡಲಾಗಿದೆ? ಪ್ರಾಣಿಬಲಿ ಘಟನೆಗೂ ಹಣದ ಬ್ಯಾಗಿನ ಪೋಟೋಗು ಇರುವ ನಂಟೇನು? ಈ ಪ್ರಕರಣದ ಹಿಂದೆ ಇನ್ನೂ ಯಾರೆಲ್ಲಾ ಇದ್ದಾರೆ? ಎಂಬ ಬಗ್ಗೆ ಪೊಲೀಸರ ತನಿಖೆ ಬೆಳಕು ಚೆಲ್ಲುವ ಸಾಧ್ಯತೆ ಇದೆ.