
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದರು.
ಕೇಂದ್ರದ ವಿರುದ್ಧ ಅಂಗನವಾಡಿ ನೌಕರರ ಪ್ರತಿಭಟನೆ; ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರಿಗೆ ನಿಗದಿತ ವೇತನ, ಇಎಸ್ಐ, ಪಿಎಫ್ ಸೌಲಭ್ಯವಿದೆ. ದೇಶದಲ್ಲಿ 64 ಲಕ್ಷ ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ಸೌಲಭ್ಯ ನೀಡಿಲ್ಲ. ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತೆಯರನ್ನು ಕಾಯಂಗೊಳಿಸಿಲ್ಲ ಎಂದು ದೂರಿ ಪ್ರತಿಭಟನೆ ಆರಂಭಿಸಿದ್ದಾರೆ.
ಅಂಗನವಾಡಿ, ಆಶಾ ಹಾಗೂ ಅಕ್ಷರ ದಾಸೋಹ ಸಿಬ್ಬಂದಿಯನ್ನು ʼಸಿʼ ಹಾಗೂ ʼಡಿʼ ದರ್ಜೆ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೂರೂ ಸಂಘಟನೆಗಳ ಕಾರ್ಯಕರ್ತೆಯರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೇಂದ್ರ ಸಚಿವರ ನಿವಾಸಗಳ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ, ತುಮಕೂರು, ಮಂಡ್ಯ, ಹುಬ್ಬಳ್ಳಿ ಸೇರಿದಂತೆ ಹಲವು ಜಿಲ್ಲಾ ಕೇಂದ್ರಗಳಲ್ಲಿ ಕೇಂದ್ರ ಸಚಿವರ ನಿವಾಸಗಳ ಎದುರು ಸೋಮವಾರದಿಂದ ಪ್ರತಿಭಟನೆ ಆರಂಭಿಸಿದ್ದಾರೆ. ಅಂಗನವಾಡಿ ಘಟಕ ವೆಚ್ಚ ಹೆಚ್ಚಳ, ಪ್ರಾದೇಶಿಕವಾರು ಆಹಾರ ಪದಾರ್ಥಗಳ ಪೂರೈಕೆ, ಭೌತಿಕ ಗುರುತು ವ್ಯವಸ್ಥೆ(ಎಫ್ಆರ್ಎಸ್) ರದ್ದು ಮಾಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಆಗ್ರಹಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತಯರಿಗೆ ಮಾಸಿಕ 11,800 ರೂ, ಸಹಾಯಕಿಯರಿಗೆ 6,500 ರೂ. ವೇತನ ಸಿಗುತ್ತಿದೆ. ಈ ವೇತನದಲ್ಲಿ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರ 2,750 ರೂ., ಸಹಾಯಕಿಯರಿಗೆ 1350 ರೂ. ನೀಡುತ್ತಿದೆ. ಉಳಿದ ಹಣವನ್ನು ರಾಜ್ಯ ಸರ್ಕಾರ ಭರಿಸುತ್ತಿದೆ. 2018ರಿಂದಲೂ ಅಂಗನವಾಡಿ ನೌಕರರಿಗೆ ಕೇಂದ್ರ ಸರ್ಕಾರ ವೇತನವನ್ನೇ ಹೆಚ್ಚಿಸಿಲ್ಲ. ಕನಿಷ್ಠ ವೇತನವನ್ನೂ ನೀಡದೇ ವಂಚಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರವು ಅಂಗನವಾಡಿಗಳಲ್ಲಿ ಭೌತಿಕ ಗುರುತು ವ್ಯವಸ್ಥೆ ಜಾರಿಗೊಳಿಸಿದೆ. ಗುಣಮಟ್ಟದ ಮೊಬೈಲ್ ನೀಡಿಲ್ಲ, ನೆಟ್‌ವರ್ಕ್ ಸಮಸ್ಯೆ ಹೆಚ್ಚಾಗಿದ್ದು, ಎಫ್ಆರ್‌ಎಸ್‌ನಲ್ಲಿ ಮಕ್ಕಳ ಭಾವಚಿತ್ರ ಅಪ್ಲೋಡ್ ಮಾಡುವುದಕ್ಕೂ ಸಾಧ್ಯವಾಗದಂತಿದೆ. ಎಫ್‌ಆರ್‌ಎಸ್ ವ್ಯವಸ್ಥೆ ಇರುವ ಅಂಗನವಾಡಿಗಳಿಗೆ ವೈಫೈ ಸೌಲಭ್ಯ ಕಲ್ಪಿಸಬೇಕು. ಅಂಗನವಾಡಿ ಸಿಬ್ಬಂದಿಯನ್ನು ಚುನಾವಣೆ ಕೆಲಸಗಳಿಗೆ ಬಳಸಬಾರದು ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರಿಗೆ ನಿಗದಿತ ವೇತನ, ಇಎಸ್ಐ, ಪಿಎಫ್ ಸೌಲಭ್ಯವಿದೆ. ದೇಶದಲ್ಲಿ 64 ಲಕ್ಷ ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ಸೌಲಭ್ಯ ನೀಡಿಲ್ಲ. ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತೆಯರನ್ನು ಕಾಯಂಗೊಳಿಸಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಾತುಕತೆಗಾಗಿ ದೆಹಲಿಗೆ ಆಹ್ವಾನಿಸಿದ ಎಚ್ಡಿಕೆ
ಮಂಡ್ಯದಲ್ಲಿ ಧರಣಿನಿರತ ಅಂಗನವಾಡಿ ನೌಕರರ ಜತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿ ಮೂಲಕ ದೆಹಲಿಯಿಂದಲೇ ದೂರವಾಣಿಯಲ್ಲಿ ನೌಕರರ ಪ್ರಮುಖರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ.
ರಾಜ್ಯ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿ ಶ್ರೀಕುಮಾರಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು, ನೀವು ಚಳಿಯಲ್ಲಿ ರಸ್ತೆಯಲ್ಲಿ ಧರಣಿ ಕೂರುವುದು ಬೇಡ. ನಿಮ್ಮ ಸಂಘದ ಪ್ರತಿನಿಧಿಗಳಲ್ಲಿ ಹತ್ತು ಮಂದಿ ಪ್ರಮುಖರು ನವದೆಹಲಿಗೆ ಬನ್ನಿ. ನಾನೇ ಸಂಬಂಧಪಟ್ಟ ಸಚಿವರು, ಅಧಿಕಾರಿಗಳ ಜತೆ ಸಭೆ ಏರ್ಪಾಡು ಮಾಡಿಸುತ್ತೇನೆ. ನಾನೂ ನಿಮ್ಮ ಜತೆ ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ. ಧರಣಿ ಕೊನೆಗೊಳಿಸಿ ಎಂದು ಕೋರಿದ್ದಾರೆ.
ನೀವು ಬಂದು ಹೋಗುವ ವಿಮಾನಯಾನ ವೆಚ್ಚ ಹಾಗೂ ದೆಹಲಿಯಲ್ಲಿ ವಸತಿ ವ್ಯವಸ್ಥೆಯನ್ನು ನಾನೇ ಕಲ್ಪಿಸುವೆ. ತಾಯಂದಿರು ಚಳಿಯಲ್ಲಿ, ಬೀದಿಯಲ್ಲಿ ಇರುವುದು ಬೇಡ. ದಯಮಾಡಿ ಚರ್ಚೆಗೆ ಬನ್ನಿ ಎಂದು ಕುಮಾರಸ್ವಾಮಿ ವಿನಂತಿಸಿದ್ದಾರೆ.
ಸಚಿವರ ಮಾತಿಗೆ ಸ್ಪಂದಿಸಿದ ಶ್ರೀಕುಮಾರಿ ಅವರು, ಈ ಬಗ್ಗೆ ಸಂಘದ ಪದಾಧಿಕಾರಿಗಳ ಜತೆ ಚರ್ಚೆ ನಡೆಸಿ ತಿಳಿಸುವುದಾಗಿ ಹೇಳಿದರು.

