
Karnataka Budget 2025 : ಅಂಗನವಾಡಿ ಕಾರ್ಯಕರ್ತರ ಹುಸಿಯಾದ ನಿರೀಕ್ಷೆ
ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು 1,000 ರೂ. ಹಾಗೂ ಸಹಾಯಕಿಯರ ಗೌರವಧನವನ್ನು 750 ರೂ. ಹೆಚ್ಚಿಸಲಾಗುವುದು ಎಂಬ ಬಜೆಟ್ ಘೋಷಣೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮಾಧಾನ ತಂದಿಲ್ಲ.
ಬಜೆಟ್ ಬಗ್ಗೆ ಭಾರೀ ಆಸೆ ಇಟ್ಟುಕೊಂಡಿದ್ದ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರಿಗೆ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಿಂದ ಭಾರೀ ನಿರಾಸೆಯಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ಕೊಟ್ಟ ೪೦೦೦ ರೂ. ಗೌರವ ಧನ ಹೆಚ್ಚಳ ಮಾಡುವ ಭರವಸೆ ಹುಸಿಯಾಗಿದೆ.
ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು 1,000 ರೂ. ಹಾಗೂ ಸಹಾಯಕಿಯರ ಗೌರವಧನವನ್ನು 750 ರೂ. ಹೆಚ್ಚಿಸಲಾಗುವುದು ಎಂಬ ಬಜೆಟ್ ಘೋಷಣೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮಾಧಾನ ತಂದಿಲ್ಲ.
ಕರ್ನಾಟಕದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 10 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ. ಇದರಲ್ಲಿ ಕೇಂದ್ರ ಸರ್ಕಾರ 2,700 ರೂ.ನೀಡಿದರೆ, ರಾಜ್ಯ ಸರ್ಕಾರ 7,300 ರೂ. ಭರಿಸುತ್ತಿದೆ. ಗೌರವಧನವನ್ನು ರಾಜ್ಯ ಸರ್ಕಾರ ೪ ಸಾವಿರ ರೂ. ಹೆಚ್ಳಳ ಮಾಡುವ ಭರವಸೆ ನೀಡಿತ್ತು. ಕನಿಷ್ಠ ೨ ಸಾವಿರ ರೂ. ಗಳಾದರೂ ಹೆಚ್ಚಳ ಮಾಡುವ ನಿರೀಕ್ಷೆ ಇತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮನ್ನು ಪರಿಗಣಿಸಿಲ್ಲ ಎಂದು ಅಂಗನವಾಡಿ ನೌಕರರು ನೊಂದುಕೊಂಡಿದ್ದಾರೆ. ಪ್ರಸ್ತುತ 20 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ 11,500 ರೂ. ವೇತನ ಸಿಗುತ್ತಿದೆ. 20 ವರ್ಷಕ್ಕಿಂತ ಕಡಿಮೆ ಸೇವಾವಧಿ ಹಾಗೂ ಹೊಸಬರಿಗೆ 10,500 ರೂ. ನೀಡಲಾಗುತ್ತಿದೆ.
ಈ ಬಗ್ಗೆ ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ , "ಅಂಗನವಾಡಿ ನೌಕರರಿಗೆ ಈ ಬಜೆಟ್ ನಲ್ಲಿ ನ್ಯಾಯ ಒದಗಿಸಿಲ್ಲ," ಎಂದು ಸ್ಪಷ್ಟವಾಗಿ ಹೇಳಿದ್ದಾರೆ. "ವಿದಾನಸಭಾ ಚುನಾವಣಾ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷ ಕೊಟ್ಟ ಅಶ್ವಾಸನೆ 4000 ರೂ. ಸಿದ್ದರಾಮಯ್ಯ ಎರಡು ಬಜೆಟ್ ಮಂಡನೆ ಮುಗಿದಿದೆ ಕನಿಷ್ಠ ಎರಡು ಸಾವಿರ ನಿರೀಕ್ಷೆ ಇತ್ತು ಆದರೆ ಮಾನ್ಯ ಸಿದ್ದರಾಮಯ್ಯರವರು ನಮ್ಮನ್ನು ಪರಿಗಣಿಸಲಿಲ್ಲ. ಇದು ತುಂಬಾ ನೋವಿನ ವಿಷಯ," ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಬಹುಷಃ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಜೆಟ್ ಗೃಹ ಲಕ್ಷ್ಮಿ ಹಣ ಸೇರಿದೆ ಎಂದು ಕಾಣುತ್ತದೆ, ಜನಸಂಖ್ಯೆಯ ಅರ್ಧದಷ್ಟು ಇರುವ ಮಹಿಳೆಯರ ಇಲಾಖೆ ಗೆ ಮತ್ತಷ್ಟು ಅನುದಾನ ಅಗತ್ಯತೆ ಇತ್ತು. ಕೇಂದ್ರ ಸರ್ಕಾರ ಅಂಗನವಾಡಿ ಗಳಿಗೆ ಕೊಡುವ ಬಜೆಟ್ ನ್ನು ಪಾಲನ್ನು ಹೆಚ್ಚಿಸದೇ ಇರುವುದು ಈ ಪರಿಸ್ಥಿತಿ ಗೆ ಕಾರಣವಾಗಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ. ಆ ಮೂಲಕ ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಹಣಕಾಸು ಹೊಂದಾಣಿಕೆ ಮಾಡುತ್ತಿರುವುದು ತಮ್ಮ ಬೇಡಿಕೆಗಳ ಈಡೇರಿಕೆ ಆಗದಿರುವುದಕ್ಕೆ ಕಾರಣ ಎಂದು ಪರೋಕ್ಷವಾಗಿ ಹೇಳಿದಂತಾಗಿದೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಐಎಲ್‌ಸಿ ಶಿಫಾರಸ್ಸಿನಂತೆ ನೌಕರರಂತೆ ಗುರುತಿಸಿ ಕನಿಷ್ಟ ವೇತನ ಜಾರಿಮಾಡಬೇಕು. ಅಂಗನವಾಡಿ ನೌಕರರನ್ನು ಕಾಯಂ ಮಾಡಬೇಕು, ಅಲ್ಲಿಯವರೆಗೆ ಕಾರ್ಯಕರ್ತೆಯರಿಗೆ ₹ 30 ಸಾವಿರ ಮತ್ತು ಸಹಾಯಕಿಯರಿಗೆ 21 ಸಾವಿರ ರೂ. ವೇತನ ನೀಡಬೇಕು ಎಂಬ ಬೇಡಿಕೆಗಳೂ ಇದ್ದವು.
ಬಜೆಟ್ ಘೋಷಣೆ
ರಾಜ್ಯದ 37 ಲಕ್ಷ ಮಕ್ಕಳ ಆರೈಕೆ ಮತ್ತು ಕಲಿಕೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು 1,000 ರೂ. ಹಾಗೂ ಸಹಾಯಕಿಯರ ಗೌರವಧನವನ್ನು 750 ರೂ. ಹೆಚ್ಚಿಸಲಾಗುವುದು ಹಾಗೂ ಸಕ್ಷಮ ಅಂಗನವಾಡಿ ಯೋಜನೆಯಡಿ ರಾಜ್ಯದ 17,454 ಅಂಗನವಾಡಿ ಕೇಂದ್ರಗಳಿಗೆ ಹೆಚ್ಚುವರಿ ಸೌಲಭ್ಯಗಳನ್ನು ಕಲ್ಪಿಸಲು ತಲಾ ಒಂದು ಲಕ್ಷ ರೂ. ನಂತೆ ಒಟ್ಟು 175 ಕೋಟಿ ರೂ. ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕಾಗಿ ನಗರಸಭೆ/ ಪುರಸಭೆಗಳಲ್ಲಿ ಲಭ್ಯವಿರುವ 173 ಸಿ.ಎ ನಿವೇಶನಗಳನ್ನು ನಗರಾಭಿವೃದ್ಧಿ ಇಲಾಖೆಯಿಂದ ಶೇ.50 ರಷ್ಟು ರಿಯಾಯಿತಿ ದರದಲ್ಲಿ ಖರೀದಿಸಲು 10 ಕೋಟಿ ರೂ. ಮೀಸಲಿರಿಸಲಾಗಿದೆ ಎಂದೂ ತಿಳಿಸಿದ್ದಾರೆ.
ಇನ್ನೂ ಈಡೇರದ ಬೇಡಿಕೆಗಳು
ಈ ಹಿಂದೆ ತಮ್ಮ ಭೇಟಿ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 25,000 ಮತ್ತು ಸಹಾಯಕರಿಯರಿಗೆ ರೂ. 12,000 ವೇತನ ನೀಡಬೇಕು ಎಂಬ ಬೇಡಿಕೆ ಬಗ್ಗೆಯೂ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದರು. ಅಂಗನವಾಡಿ ಕಾರ್ಯಕರ್ತೆಯರನ್ನು ಗ್ರೇಡ್ 3 (ಸಿ ದರ್ಜೆ )ಮತ್ತು ಗ್ರೇಡ್ 4 (ಡಿ ದರ್ಜೆ) ನೌಕರರೆಂದು ಗುಜರಾತ್ ಹೈಕೋರ್ಟ್ ಆದೇಶದಂತೆ ಕರ್ನಾಟಕದಲ್ಲೂ ಸರ್ಕಾರಿ ನೌಕರರೆಂದು ಎಂದು ಪರಿಗಣಿಸಬೇಕು ಎಂಬ ಬೇಡಿಕೆಯನ್ನು ಪರಿಗಣಿಸುವ ಸಂಬಂಧ ಯೋಚಿಸಲಾಗುವುದು ಎಂದೂ ಅವರು ಹೇಳಿದ್ದರು.
ಮೂರರಿಂದ ಆರು ವರ್ಷದವರೆಗಿನ ಕಂದಮ್ಮಗಳ ಪೋಷಣೆ, ಬಾಣಂತಿ ಹಾಗೂ ಗರ್ಭಿಣಿಯರ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಅಂಗನವಾಡಿ ಕಾರ್ಯಕರ್ತೆಯರ ಯೋಗಕ್ಷೇಮವನ್ನೇ ಸರ್ಕಾರ ಮರೆತಿದೆ ಎಂಬುದು ಅಂಗನವಾಡಿ ಕಾರ್ಯಕರ್ತರ ಅಳಲು. ಸಮಗ್ರ ಶಿಶು ಅಭಿವೃದ್ಧಿ ಸೇವೆಯ (ICDS) ಪರಿಣಾಮಕಾರಿ ಜಾರಿಯ ಜೊತೆಗೆ ಸರ್ಕಾರದ ಕಾರ್ಯಕ್ರಮ ಅನುಷ್ಠಾನ, ವಿವಿಧ ಸಮೀಕ್ಷೆಗಳಲ್ಲಿ ತೊಡಗಿಸಿಕೊಂಡರೂ ಅಂಗನವಾಡಿ ನೌಕರರ ಬೇಡಿಕೆಗೆ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಅಧಿಕ ಕಾರ್ಯದೊತ್ತಡದಿಂದ ಅನಾರೋಗ್ಯಕ್ಕೆ ತುತ್ತಾದರೂ ಅಂಗನವಾಡಿ ಕಾಯಕರ್ತೆಯರ ಯೋಗಕ್ಷೇಮ ಕೇಳುತ್ತಿಲ್ಲ. ಮಕ್ಕಳು ಹಾಗೂ ಗರ್ಭಿಣಿ-ಬಾಣಂತಿಯರ ಪೋಷಣೆಯ ಜವಾಬ್ದಾರಿ ಹೊತ್ತಿರುವ ಕಾರ್ಯಕರ್ತೆಯರು ಸರ್ಕಾರ ನೀಡುವ ನೆರವು ಸಾಕಾಗದೇ ತಮ್ಮ ಒಡವೆಗಳನ್ನೇ ಅಡವಿಟ್ಟು ಆರೈಕೆಯ ವೆಚ್ಚ ಭರಿಸಬೇಕಾದ ಪರಿಸ್ಥಿತಿ ರಾಜ್ಯದಲ್ಲಿದೆ ಎಂಬುದು ಅವರ ಅಳಲಾಗಿದೆ.
ರಾಜ್ಯ ಸರ್ಕಾರ ಮೂರು ವರ್ಷದ ಹಿಂದೆ ಕೆಪಿಎಸ್‌ಸಿ ಮೂಲಕ ಮೇಲ್ವಿಚಾರಕರ ಹುದ್ದೆಗೆ ಭರ್ತಿ ಮಾಡಿದೆ. ಆದರೆ, ಸಾಕಷ್ಟು ವರ್ಷಗಳ ಕಾಲ ಅಂಗನವಾಡಿಗಳಲ್ಲಿ ಸೇವೆ ಸಲ್ಲಿಸಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಅವಕಾಶ ಕೊಟ್ಟಿಲ್ಲ. ಅಂಗನವಾಡಿ ಸಿಬ್ಬಂದಿಯನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಲು ಒತ್ತಾಯಿಸಿದರೂ ಇದುವರೆಗೆ ಬೇಡಿಕೆ ಈಡೇರಿಲ್ಲ.
ಅಂಗನವಾಡಿ ಕಾರ್ಯಕರ್ತರಿಗೆ ಚುನಾವಣಾ ಆಯೋಗದ ಬಿಎಲ್ಒ, ಮಾತೃವಂದನಾ, ಭಾಗ್ಯಲಕ್ಷ್ಮಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಸಮೀಕ್ಷೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಒತ್ತಡ ಅಧಿಕವಾಗಿದೆ. ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ಎಲ್ ಕೆಜಿ ಮತ್ತು ಯುಕೆಜಿ ಆಗಿ ಮೇಲ್ದರ್ಜೆಗೇರಿಸಬೇಕು; ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ಪಿಂಚಣಿ ರೂ.10,000 ರೂ. ನೀಡಬೇಕು; ಗ್ರಾಚ್ಯುಯಿಟಿ ಪಾವತಿ ಕಾಯ್ದೆ 1972 ರ ಅಡಿಯಲ್ಲಿ ನೌಕರರಿಗೆ ಗ್ರಾಚ್ಯುಯಿಟಿ ಒದಗಿಸಬೇಕೆಂಬ ಬೇಡಿಕೆಗಳೂ ಇವೆ.