
ಸಾಂದರ್ಭಿಕ ಚಿತ್ರ
ಆನೇಕಲ್: ಕೆರೆಯಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು
ಅತ್ತಿಬೆಲೆಯ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ ಅರ್ಹಮಾನ್ ಹಾಜಾ (10) ಮತ್ತು ಬಳ್ಳೂರು ಸರ್ಕಾರಿ ಶಾಲೆಯಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಅನಿಕೇತ್ (8) ಮೃತಪಟ್ಟ ದುರ್ದೈವಿಗಳು.
ಶಾಲೆ ಮುಗಿಸಿ ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಬಳ್ಳೂರು ಗ್ರಾಮದಲ್ಲಿ ನಡೆದಿದೆ.
ಅತ್ತಿಬೆಲೆಯ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ ಅರ್ಹಮಾನ್ ಹಾಜಾ (10) ಮತ್ತು ಬಳ್ಳೂರು ಸರ್ಕಾರಿ ಶಾಲೆಯಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಅನಿಕೇತ್ (8) ಮೃತಪಟ್ಟ ದುರ್ದೈವಿಗಳು. ಶನಿವಾರ ಅರ್ಧ ದಿನವಷ್ಟೇ ಶಾಲೆಯಿದ್ದ ಕಾರಣ, ಮಕ್ಕಳಿಬ್ಬರೂ ಮಧ್ಯಾಹ್ನ ಶಾಲೆ ಮುಗಿದ ಬಳಿಕ ಗ್ರಾಮದ ಸಮೀಪವಿರುವ ಬಳ್ಳೂರು ಕೆರೆಗೆ ಈಜಲು ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಮಕ್ಕಳ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಕೆರೆಯ ಬಳಿ ಜಮಾಯಿಸಿದ್ದು, ಅವರ ಆಕ್ರಂದನ ಮುಗಿಲುಮುಟ್ಟಿತ್ತು.
ಕೆರೆಗೆ ಬೇಲಿ ನಿರ್ಮಿಸಲು ಸ್ಥಳೀಯರ ಆಗ್ರಹ
ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಕೆರೆ ಸಂಪೂರ್ಣವಾಗಿ ಭರ್ತಿಯಾಗಿದೆ. ಆದರೆ, ಕೆರೆಯ ಸುತ್ತ ಯಾವುದೇ ರಕ್ಷಣಾ ಬೇಲಿ ಇಲ್ಲದಿರುವುದರಿಂದ ಇಂತಹ ದುರಂತಗಳು ಪದೇ ಪದೇ ಸಂಭವಿಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಇದೇ ಕೆರೆಯಲ್ಲಿ ನೀರಿಗಿಳಿದ ಆರು ಮಂದಿ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆರೆಯ ಸುತ್ತಲೂ ಬೇಲಿ ನಿರ್ಮಿಸಿ ಮುಂದಾಗಬಹುದಾದ ಅನಾಹುತಗಳನ್ನು ತಡೆಯಬೇಕು ಎಂದು ಗ್ರಾಮಸ್ಥರು ಬಲವಾಗಿ ಒತ್ತಾಯಿಸಿದ್ದಾರೆ.

