ಧರ್ಮಸ್ಥಳ ಪ್ರಕರಣ: ಅನನ್ಯಾ ನನ್ನ ಮಗಳೇ ಅಲ್ಲ, ಹೇಳಿದ್ದೆಲ್ಲಾ ಸುಳ್ಳು:  ಗೊಂದಲ ಸೃಷ್ಟಿಸಿದ ಸುಜಾತಾ ಭಟ್
x

'ಅನನ್ಯಾ' ಎಂಬ ಮಗಳೇ ನನಗೆ ಇರಲಿಲ್ಲಎಂದು ಸುಜಾತಾ ಭಟ್ ತಿಳಿಸಿದ್ದಾರೆ. 

ಧರ್ಮಸ್ಥಳ ಪ್ರಕರಣ: "ಅನನ್ಯಾ ನನ್ನ ಮಗಳೇ ಅಲ್ಲ, ಹೇಳಿದ್ದೆಲ್ಲಾ ಸುಳ್ಳು: ಗೊಂದಲ ಸೃಷ್ಟಿಸಿದ ಸುಜಾತಾ ಭಟ್

ಅನನ್ಯಾ ಭಟ್‌ ಎಂಬ ಮಗಳೇ ನನಗೆ ಇರಲಿಲ್ಲ. ಗಿರೀಶ್ ಮಟ್ಟಣ್ಣನವರ್, ಜಯಂತ್ ಹೇಳಿಕೊಟ್ಟಂತೆ ನಾನು ಹೇಳಿದ್ದೆ ಎಂದು ಸುಜಾತ ಭಟ್‌ ತಿಳಿಸಿದ್ದಾರೆ.


ರಾಜ್ಯಾದ್ಯಂತ ಬಹುದೊಡ್ಡ ಸಂಚಲನ ಮೂಡಿಸಿದ್ದ, 2003 ರಲ್ಲಿ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಳೆನ್ನಲಾದ ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಪ್ರಕರಣದ ಕೇಂದ್ರಬಿಂದುವಾಗಿದ್ದ ತಾಯಿ ಸುಜಾತಾ ಭಟ್, ತಾನೇ ಹೆಣೆದಿದ್ದ ಕಥೆಯನ್ನು ಒಪ್ಪಿಕೊಂಡು, "ಅನನ್ಯಾ ಭಟ್ ನನ್ನ ಮಗಳೇ ಅಲ್ಲ, ನಾನು ಹೇಳಿದ್ದೆಲ್ಲವೂ ಸುಳ್ಳು" ಎಂದು ತಪ್ಪೊಪ್ಪಿಕೊಂಡಿದ್ದಾರೆ. ಆದರೆ ಸುಜಾತ ಅವರು ಆ ಬಳಿಕವೂ ಗೊಂದಲಕಾರಿ ಹೇಳಿಕೆ ಮುಂದುವರಿಸಿದ್ದಾರೆ. ಒತ್ತಾಯಪೂರ್ವಕವಾಗಿ ಹೇಳಿಕೆ ಬದಲಾಯಿಸಿದೆ ಎಂಬುದಾಗಿ ಹೇಳಿದ್ದಾರೆ.

ಯೂಟ್ಯೂಬರ್ ಒಬ್ಬರ ಮುಂದೆ ಕಣ್ಣೀರಿಟ್ಟ ಸುಜಾತಾ ಭಟ್, "ನನಗೆ ಅನನ್ಯಾ ಎಂಬ ಮಗಳೇ ಇರಲಿಲ್ಲ. ನನ್ನ ತಾತನ ಆಸ್ತಿಗಾಗಿ ಈ ಕಥೆಯನ್ನು ಕಟ್ಟಿದ್ದೆ. ನಾನು ಬಿಡುಗಡೆ ಮಾಡಿದ್ದ ಫೋಟೋ ಕೂಡ ನಕಲಿ. ಗಿರೀಶ್ ಮಟ್ಟಣ್ಣನವರ್ ಮತ್ತು ಜಯಂತ್ ಅವರು ಹೇಳಿಕೊಟ್ಟಂತೆ ನಾನು ನಡೆದುಕೊಂಡೆ. ಈ ಪ್ರಕರಣ ಇಷ್ಟೊಂದು ದೊಡ್ಡದಾಗುತ್ತದೆ ಎಂದು ನಾನು ಊಹಿಸಿರಲಿಲ್ಲ," ಎಂದು ಹೇಳಿಕೆ ನೀಡಿದ್ದಾರೆ.

ತಮ್ಮನ್ನು ಈ ಪ್ರಕರಣದಲ್ಲಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿರುವ ಅವರು, "ನಾನು ಜನರ ಭಾವನೆಗಳೊಂದಿಗೆ ಆಟವಾಡಲಿಲ್ಲ, ನನ್ನನ್ನು ಆ ರೀತಿ ಆಡುವಂತೆ ಮಾಡಿದರು. ನಾನು ದೇಶದ ಜನತೆಗೆ, ಕರ್ನಾಟಕದ ಜನತೆಗೆ, ಧರ್ಮಸ್ಥಳಕ್ಕೆ ಮತ್ತು ಮಂಜುನಾಥ ಸ್ವಾಮಿಗೆ ಕ್ಷಮೆ ಕೇಳುತ್ತೇನೆ. ದಯವಿಟ್ಟು ನನ್ನನ್ನು ಇದರಿಂದ ಮುಕ್ತಿಗೊಳಿಸಿ," ಎಂದು ಕಣ್ಣೀರು ಹಾಕಿದ್ದಾರೆ.

ಪ್ರಕರಣದ ಗೊಂದಲಮಯ ಹಿನ್ನೆಲೆ

ಕೆಲವು ತಿಂಗಳ ಹಿಂದೆ, ಸುಜಾತಾ ಭಟ್ ಅವರು 2003ರಲ್ಲಿ ಧರ್ಮಸ್ಥಳದಲ್ಲಿ ತಮ್ಮ ಮಗಳು ಅನನ್ಯಾ ಭಟ್ ನಾಪತ್ತೆಯಾಗಿದ್ದಳು ಎಂದು ದೂರು ನೀಡಿದ್ದರು. "ಕನಿಷ್ಠ ನನ್ನ ಮಗಳ ಅಸ್ಥಿಯನ್ನಾದರೂ ಹುಡುಕಿಕೊಡಿ, ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಿ ಆಕೆಯ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಬೇಕು," ಎಂದು ಎಸ್ಐಟಿ ಮುಂದೆ ಕಣ್ಣೀರಿಟ್ಟಿದ್ದರು.

ಈ ಕಥೆಯಲ್ಲಿ ಆರಂಭದಿಂದಲೂ ಹಲವು ಗೊಂದಲಗಳಿದ್ದವು. ಸುಜಾತಾ ಅವರು ತೋರಿಸಿದ ಫೋಟೋವನ್ನು ಮಡಿಕೇರಿಯ ವಿಜಯ್ ಎಂಬುವವರು, "ಇದು ನನ್ನ ತಂಗಿ ವಾಸಂತಿ," ಎಂದು ಗುರುತಿಸಿದ್ದರು. ಅಲ್ಲದೆ, ಸುಜಾತಾ ಅವರ ಭಾವನೇ, "ಅವರಿಗೆ ಮಗಳೇ ಇರಲಿಲ್ಲ," ಎಂದು ಸ್ಪಷ್ಟಪಡಿಸಿದ್ದರು. ಆದರೂ, ಸುಜಾತಾ ಅವರು ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡಿ, "ಅನನ್ಯಾ ನನ್ನ ಮಗಳೇ," ಎಂದು ವಾದ ಮುಂದುವರಿಸಿದ್ದರು.

ಆರೋಪಕ್ಕೆ ಗಿರೀಶ್ ಮಟ್ಟಣ್ಣನವರ್ ಪ್ರತಿಕ್ರಿಯೆ

ಸುಜಾತಾ ಭಟ್ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್, "ನಾನು ಸುಜಾತಾ ಭಟ್ ಅವರನ್ನು ಸಂಪರ್ಕಿಸಿರಲಿಲ್ಲ, ಅವರೇ ನಮ್ಮ ಬಳಿ ಬಂದಿದ್ದರು. ಆರಂಭದಲ್ಲಿ ಅವರು ಅನನ್ಯಾಳ ಫೋಟೋ ಆಗಲಿ, ಜನನ ಪ್ರಮಾಣಪತ್ರವಾಗಲಿ ನೀಡಿರಲಿಲ್ಲ. ಆದರೂ, ಮಾನವೀಯತೆಯ ದೃಷ್ಟಿಯಿಂದ ನಾವು ಅವರಿಗೆ ಸಹಾಯ ಮಾಡಿದ್ದೆವು," ಎಂದು ಸ್ಪಷ್ಟಪಡಿಸಿದ್ದಾರೆ.

Read More
Next Story