ವಕೀಲರೊಬ್ಬರ ಕೊಲೆಯ ಹಿಂದೆ ‘ಅನಾಮಧೇಯ ಅಶೋಕ್ ಕುಮಾರ್’
x

ವಕೀಲರೊಬ್ಬರ ಕೊಲೆಯ ಹಿಂದೆ ‘ಅನಾಮಧೇಯ ಅಶೋಕ್ ಕುಮಾರ್’

ನಟ ಕಿಶೋರ್, ಪರಭಾಷೆಗಳಲ್ಲಿ ಅದೆಷ್ಟೇ ಬ್ಯುಸಿಯಾಗಿದ್ದರೂ, ಕನ್ನಡ ಚಿತ್ರಗಳಲ್ಲಿ ಅವರು ನಟಿಸುವುದನ್ನು ಬಿಟ್ಟಿಲ್ಲ. ಒಂದಲ್ಲ ಒಂದು ಚಿತ್ರಗಳಲ್ಲಿ ಅವರು ನಟಿಸುತ್ತಲೇ ಇದ್ದು, ಈಗ ಅವರು ‘ಅನಾಮಧೇಯ ಅಶೋಕ್‍ ಕುಮಾರ್’ ಎಂಬ ಚಿತ್ರದಲ್ಲಿ ಸದ್ದಿಲ್ಲದೆ ನಟಿಸಿದ್ದಾರೆ.


ನಟ ಕಿಶೋರ್, ಪರಭಾಷೆಗಳಲ್ಲಿ ಅದೆಷ್ಟೇ ಬ್ಯುಸಿಯಾಗಿದ್ದರೂ, ಕನ್ನಡ ಚಿತ್ರಗಳಲ್ಲಿ ಅವರು ನಟಿಸುವುದನ್ನು ಬಿಟ್ಟಿಲ್ಲ. ಒಂದಲ್ಲ ಒಂದು ಚಿತ್ರಗಳಲ್ಲಿ ಅವರು ನಟಿಸುತ್ತಲೇ ಇದ್ದು, ಈಗ ಅವರು ‘ಅನಾಮಧೇಯ ಅಶೋಕ್‍ ಕುಮಾರ್’ ಎಂಬ ಚಿತ್ರದಲ್ಲಿ ಸದ್ದಿಲ್ಲದೆ ನಟಿಸಿದ್ದಾರೆ.

ಈ ಚಿತ್ರಕ್ಕೆ ಅವರು ಬರೀ ನಟರಷ್ಟೇ ಅಲ್ಲ, ಸಹನಿರ್ಮಾಪಕರೂ ಹೌದು. ಕಥೆ ಮತ್ತು ಚಿತ್ರತಂಡದ ಕೆಲಸ ನೋಡಿ ಖುಷಿಯಾಗಿರುವ ಕಿಶೋರ್‍, ಈ ಚಿತ್ರದ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಚಿತ್ರವನ್ನು ಸಾಗರ್ ಕುಮಾರ್ ನಿರ್ದೇಶನ ಮಾಡಿದ್ದು, ಇದು ಅವರ ಮೊದಲ ಚಿತ್ರ. ಸಾಗರ್ ಕುಮಾರ್ ಮೂಲತಃ ಐಟಿ ಉದ್ಯೋಗಿಯಂತೆ. ಇದಕ್ಕೂ ಮುನ್ನ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಅವರು, ಇದೇ ಮೊದಲ ಹಿರಿತೆರೆಯಲ್ಲಿ ಚಿತ್ರ ಮಾಡಿದ್ದಾರೆ. ದೇಶದಲ್ಲಿ ನಡೆದ ಕೆಲವು ಕ್ರೈಮ್ ಫಟನೆಗಳು ಹಾಗೂ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಬರೆದ ಪುಸ್ತಕ ಈ ಚಿತ್ರದ ಕಥೆಗೆ ಸ್ಪೂರ್ತಿಯಂತೆ.

ಈ ಚಿತ್ರದ ಕುರಿತು ಮಾತನಾಡುವ ಅವರು, ‘ಇದು ಸಂಜೆ ಆರರಿಂದ ಬೆಳಗ್ಗೆ ಆರರವರೆಗೂ ನಡೆಯುವ ಕಥೆ. ಪ್ರಸಿದ್ದ ವಕೀಲರೊಬ್ಬರ ಕೊಲೆಯ ಸುತ್ತ ನಡೆಯುವ ಕಥೆ ಇದು. ಚಿತ್ರಕ್ಕೆ ನಾನೇ ಕಥೆ ಬರದಿದ್ದೇನೆ. ಚಿತ್ರಕಥೆಯನ್ನು ನಾನು ಹಾಗೂ ಬೆನ್ನಿ ಥಾಮಸ್ ಇಬ್ಬರೂ ಬರೆದಿದ್ದೇವೆ. ಕಿಶೋರ್ ಕುಮಾರ್ ಪತ್ರಕರ್ತನ ಪಾತ್ರದಲ್ಲಿ ಹಾಗೂ ಹರ್ಷಿಲ್ ಕೌಶಿಕ್ ಸರ್ಕಲ್ ಇನ್‍ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಧೀಂದ್ರ ನಾಯರ್, ಕಾಂತರಾಜ್ ‘ಕಡ್ಡಿಪುಡಿ’, ವೀರೇಶ್ ಮುಂತಾದವರು ನಟಿಸಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ.

ಸಾಗರ್ ಕುಮಾರ್ ಅವರು ಹೇಳಿದ ಕಥೆ ಇಷ್ಟವಾಯಿತು ಎನ್ನುವ ನಟ ಕಿಶೋರ್, ‘ನಾನು ಈ ಚಿತ್ರದಲ್ಲಿ ಪತ್ರಕರ್ತನಾಗಿ ಅಭಿನಯಿಸಿದ್ದೇನೆ‌‌. ಅನಾಮಧೇಯ ಎಂದರೆ ಹೆಸರಿಲ್ಲದವನು ಎಂದು. ನಮ್ಮ ಚಿತ್ರದಲ್ಲಿ ‘ಅನಾಮಧೇಯ ಅಶೋಕ್ ಕುಮಾರ್’ ಯಾರು? ಎಂಬ ಗುಟ್ಟನ್ನು ನಿರ್ದೇಶಕರು ಬಿಟ್ಟುಕೊಟ್ಟಿಲ್ಲ. ಅದು ಯಾರು ಎಂಬುದನ್ನು ಚಿತ್ರ ನೋಡಿ ತಿಳಿದುಕೊಳ್ಳಬೇಕು’ ಎನ್ನುತ್ತಾರೆ.

ಎಸ್‌.ಕೆ.ಎನ್ ಫಿಲಂಸ್ ಲಾಂಛನದಲ್ಲಿ ನಿರ್ಮಲಾ ಕುಮಾರ್ ಹಾಗು ರಮ್ಯ ಸಾಗರ್ ಕುಮಾರ್ ನಿರ್ಮಿಸಿರುವ ‘ಅನಾಮಧೇಯ ಅಶೋಕ್‍ ಕುಮಾರ್‍’ ಚಿತ್ರಕ್ಕೆ ಆಜಾದ್ ಸಂಗೀತ, ಸುನೀಲ್‍ ಹೊನಳ್ಳಿ ಛಾಯಾಗ್ರಹಣವಿದೆ.

‘ಅನಾಮಧೇಯ ಅಶೋಕ್‍ ಕುಮಾರ್’ ಚಿತ್ರವು ಫೆಬ್ರವರಿ 07ರಂದು ಬಿಡುಗಡೆಯಾಗುತ್ತಿದೆ.

Read More
Next Story