
ಮಿಗ್ -21 ಯುದ್ಧ ವಿಮಾನ
ಭಾರತೀಯ ಸೇನೆಯ ʼವರ್ಕ್‌ಹಾರ್ಸ್ʼ, ಖ್ಯಾತಿ - ಅಪಖ್ಯಾತಿ ಹೊಂದಿದ್ದ ಮಿಗ್ -21ಗೆ ಭಾವುಕ ವಿದಾಯ
ವಿಶ್ವದ ಅತ್ಯಾಧುನಿಕ ಯುದ್ಧ ವಿಮಾನಗಳಿಗೆ ಪೈಪೋಟಿ ನೀಡಿ ಅವುಗಳನ್ನು ನಾಶ ಮಾಡಿದ್ದ ಖ್ಯಾತಿಗೆ ಪಾತ್ರವಾಗಿದ್ದರೂ, ಕೆಲವೊಮ್ಮೆ ತಾಂತ್ರಿಕ ಕಾರಣಗಳಿಂದ ಪತನಗೊಂಡು ಹಲವಾರು ವಾಯುಪಡೆ ಅಧಿಕಾರಿಗಳ ಸಾವಿಗೂ ಕಾರಣವಾಗಿತ್ತು.
ಕಳೆದ ಆರು ದಶಕಗಳಿಂದ ಭಾರತೀಯ ವಾಯುಸೇನೆಯಲ್ಲಿ ಹಲವು ಯುದ್ಧಗಳಲ್ಲಿ ಪಾಲ್ಗೊಂಡು ಅಜೇಯನಾಗಿದ್ದ ಯುದ್ಧವಿಮಾನ ಮಿಗ್-21 ಶುಕ್ರವಾರ(ಸೆ.26) ತನ್ನ ಅಂತಿಮ ಹಾರಾಟ ನಡೆಸಿ ವಿದಾಯ ಹೇಳಲಿದೆ.
ಈ ಮೂಲಕ ವಾಯುಪಡೆಯ ಪರಂಪರೆಯಲ್ಲಿ ಶೌರ್ಯ ಮೆರೆದಿದ್ದ ಮಿಗ್ -21 ಯುದ್ಧವಿಮಾನಕ್ಕೆ ಸೇನಾ ಅಧಿಕಾರಿಗಳು ಇಂದು ಚಂಡಿಗಢದಲ್ಲಿ ವಿದಾಯ ಸಮಾರಂಭ ಏರ್ಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ವಾಯುಪಡೆ ಮುಖ್ಯಸ್ಥ ಮಾರ್ಷಲ್ ಎಪಿ ಸಿಂಗ್ ಮತ್ತು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಸೇರಿದಂತೆ ಹಲವಾರು ಗಣ್ಯರು ಹಾಗೂ ಸೇನೆಯ ಹಿರಿಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ವಿಶ್ವದ ಅತ್ಯಾಧುನಿಕ ಯುದ್ಧ ವಿಮಾನಗಳಿಗೆ ಪೈಪೋಟಿ ನೀಡಿ ಅವುಗಳನ್ನು ನಾಶ ಮಾಡಿದ್ದ ಖ್ಯಾತಿಗೆ ಪಾತ್ರವಾಗಿದ್ದರೂ, ಕೆಲವೊಮ್ಮೆ ತಾಂತ್ರಿಕ ಕಾರಣಗಳಿಂದ ಪತನಗೊಂಡು ಹಲವಾರು ವಾಯುಪಡೆ ಅಧಿಕಾರಿಗಳ ಸಾವಿಗೂ ಕಾರಣವಾಗಿ ʼಹಾರುವ ಶವಪೆಟ್ಟಿಗೆʼ ಎಂದೇ ಕುಖ್ಯಾತಿಯನ್ನೂ ಪಡೆದಿತ್ತು.
ಮಿಗ್21 ಮೂಲ?
ಭಾರತವು ರಷ್ಯಾದಿಂದ ಮಿಗ್ 21 ಯುದ್ಧ ವಿಮಾನಗಳನ್ನು 1960ರಲ್ಲಿ ಆಮದು ಮಾಡಿಕೊಳ್ಳಲು ಪ್ರಾರಂಭಿಸಿತು ಹಾಗೂ ವಾಯುಪಡೆಗೆ ನಿಯೋಜಿಸಿತು. ಇದು ಸಬ್‌ಸಾನಿಕ್ ಮಿಗ್-15 ಮತ್ತು ಮಿಗ್-17 ಮತ್ತು ಸೂಪರ್‌ಸಾನಿಕ್ ಮಿಗ್-19 ಗಳ ಮುಂದುವರಿದ ಯುದ್ಧ ವಿಮಾನವಾಗಿತ್ತು. ಹಲವಾರು ಪ್ರಾಯೋಗಿಕ ಪರೀಕ್ಷೆಗಳನ್ನು ಮಾಡಿ, ಮ್ಯಾಕ್ 2 ವೇಗದಲ್ಲಿ (ಗಂಟೆಗೆ ೨ ಸಾವಿರ ಕಿಲೋಮೀಟರ್ಗಿಂತ ವೇಗ) ಸಂಚರಿಸುವಂತೆ ವಿನ್ಯಾಸಗೊಳಿಸಿ ಸುಖೋಯ್ 7 ನಂತೆ ನಿರ್ಮಿಸಿದ್ದರಿಂದ ಮಿಗ್-21 ಅತ್ಯಂತ ಯಶಸ್ವಿಯಾಗಿತ್ತು. 1955ರ ಜೂನ್ 16 ರಂದು ತನ್ನ ಮೊದಲ ಹಾರಾಟವನ್ನು ಮಾಡಿತ್ತು. ಜುಲೈ 1956 ರಲ್ಲಿ ಮಾಸ್ಕೋದ ತುಶಿನೋ ವಾಯುನೆಲೆಯಲ್ಲಿ ಸೋವಿಯತ್ ಒಕ್ಕೂಟದ ವಾಯುಪಡೆ ದಿನದ ಪ್ರದರ್ಶನದ ಸಮಯದಲ್ಲಿ ಅದರ ಮೊದಲ ಸಾರ್ವಜನಿಕ ಪ್ರದರ್ಶನವನ್ನು ಮಾಡಿತ್ತು.
ಮಿಗ್ 21 ವಿಶೇಷತೆ ?
ಮಿಗ್-21 ವಿಮಾನವು ಫೈಟರ್ ಮತ್ತು ಇಂಟರ್‌ಸೆಪ್ಟರ್ ಗುಣಲಕ್ಷಣಗಳನ್ನು ಸಂಯೋಜಿಸಿದ ಮೊದಲ ಯಶಸ್ವಿ ಸೋವಿಯತ್ ವಿಮಾನವಾಗಿತ್ತು. ಇದು ಹಗುರ ಫೈಟರ್ ಆಗಿದ್ದು, ಕಡಿಮೆ-ಶಕ್ತಿಯ ಆಫ್ಟರ್‌ಬರ್ನಿಂಗ್ ಟರ್ಬೋಜೆಟ್‌ನೊಂದಿಗೆ ಮ್ಯಾಕ್ 2 ವೇಗವನ್ನು ಹೊಂದಿತ್ತು. ಆದ್ದರಿಂದ ಇದನ್ನು ಅಮೆರಿಕನ್ ಲಾಕ್‌ಹೀಡ್ ಎಫ್-104 ಸ್ಟಾರ್‌ಫೈಟರ್ ಮತ್ತು ನಾರ್ತ್ರೋಪ್ ಎಫ್-5 ಫ್ರೀಡಂ ಫೈಟರ್ ಮತ್ತು ಫ್ರೆಂಚ್ ಡಸಾಲ್ಟ್ ಮಿರಾಜ್ 3 ಗೆ ಹೋಲಿಸಬಹುದು. ಗಂಟೆಗೆ 2,230 ಕಿ.ಮೀ ವೇಗವಾಗಿ ಹಾರಬಲ್ಲ ಈ ವಿಮಾನವು ಶತ್ರು ರಾಷ್ಟ್ರಗಳ ವಿಮಾನಗಳನ್ನು ಶೀಘ್ರವಾಗಿ ಹಿಮ್ಮಟ್ಟಿಸುವ ಸಾಮರ್ಥ್ಯ ಹೊಂದಿತ್ತು. ಗನ್, ಕ್ಷಿಪಣಿ ಮತ್ತು ಬಾಂಬ್ಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿತ್ತು.
ಭಾರತದ ಮೊದಲ ಸೂಪರ್ ಸಾನಿಕ್ ಯುದ್ಧ ವಿಮಾನ
ಮಿಗ್-21 ವಿಮಾನವನ್ನು ಭಾರತದ ಮೊದಲ ಸೂಪರ್‌ಸಾನಿಕ್ ಯುದ್ಧ ವಿಮಾನವೆಂದು ಪರಿಗಣಿಸಲಾಗಿತ್ತು. ಶಬ್ದದ ವೇಗಕ್ಕಿಂತ ಅಧಿಕ ವೇಗವಾಗಿ ಹಾರುವ ಈ ವಿಮಾನವು ಕಣ್ಣು ಮಿಟುಕಿಸುವ ಮ್ಯಾಕ್ 2 ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಮಿಗ್-21 ಪಾಕಿಸ್ತಾನದ ವಿರುದ್ಧ 1965 ಹಾಗೂ 1971ರ (ಬಾಂಗ್ಲಾದೇಶ ವಿಮೋಚನಾ ಯುದ್ಧ) ಎರಡು ಯುದ್ಧಗಳುಮತ್ತು 1999ರ ಕಾರ್ಗಿಲ್ ಯುದ್ಧಗಳಲ್ಲಿ ಪಾಲ್ಗೊಂಡು ತನ್ನ ವೇಗ ಹಾಗೂ ಚಾಕಚಕ್ಯತೆಯಿಂದ ಭಾರತದ ಗೆಲುವಿನ ಕೊಡುಗೆ ನೀಡಿತ್ತು.
ಅಮೆರಿಕದ ಎಫ್-16 ವಿಮಾನವನ್ನೇ ಹೊಡೆದುರುಳಿಸಿತ್ತು
ಹಲವು ಯುದ್ಧ ಹಾಗೂ ಪ್ರಮುಖ ಸೇನಾ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದ ಮಿಗ್ 21 ವಿಮಾನವನ್ನು 2019ರ ಬಾಲಾಕೋಟ್ ವಾಯುದಾಳಿಯ ಸಂದರ್ಭದಲ್ಲಿಯೂ ಬಳಸಲಾಗಿತ್ತು. ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಚಲಾಯಿಸುತ್ತಿದ್ದ ಮಿಗ್-21 ವಿಮಾನ ಪತನ ಹೊಂದುವುದಕ್ಕೂ ಮುನ್ನ ಪಾಕ್‌ನ ಅತ್ಯಂತ ಶಕ್ತಿಶಾಲಿ ಯುದ್ಧವಿಮಾನ, ಅಮೆರಿಕ ನಿರ್ಮಿತ ಎಫ್-16 ಫೈಟರ್ ಜೆಟ್ ಹೊಡೆದುರುಳಿಸುವ ಮೂಲಕ ತನ್ನ ಶಕ್ತಿ ಪ್ರದರ್ಶಿಸಿತ್ತು. ಈ ಕಾರ್ಯಾಚರಣೆ ವಿಶ್ವದ ಶಕ್ತಿಶಾಲಿ ಯುದ್ಧವಿಮಾನ ಎಂದೇ ಖ್ಯಾತವಾಗಿದ್ದ ಎಫ್-16 ಸಾಮರ್ಥ್ಯದ ಬಗ್ಗೆ ರಕ್ಷಣಾವಲಯದ ವಿಶ್ಲೇಷಕರಲ್ಲಿ ಸಂಶಯ ಮೂಡಿತ್ತು.
ಮಿಗ್ -21 ಸರಣಿಗಳು
ಕಾಲ ಕಳೆದಂತೆ ಮಿಗ್-21 ಯುದ್ಧ ವಿಮಾನವೂ ಹೊಸ ಆವೃತ್ತಿಗಳನ್ನು ಹೊಂದಿತ್ತು. 1963ರಲ್ಲಿ ತನ್ನ ಮೊದಲ ಆವೃತ್ತಿ ಆರಂಭವಾಯಿತು. 1961ರಲ್ಲಿ ಮಿಗ್-21 ಎಫ್‌ಎಲ್ ಮೊದಲ ಭಾರತೀಯ ನಿರ್ಮಾಣದ ಆವೃತ್ತಿಯಾಗಿದ್ದು, ಉತ್ತಮ ಗನ್‌ಗಳನ್ನು ಹೊಂದಿ 1971ರ ಪಾಕಿಸ್ತಾನ ಯುದ್ಧದಲ್ಲಿ ಅಸಾಧಾರಣ ಯುದ್ಧ ಸಾಮರ್ಥ್ಯ ಪ್ರದರ್ಶಿಸಿತ್ತು. 1973ರಲ್ಲಿ ಮಿಗ್-21ಎಂ ಆವೃತ್ತಿ ಸುಧಾರಿತ ಎಂಜಿನ್, ರೇಡಾರ್ ಮತ್ತು ಹೊಸ ಕ್ಷಿಪಣಿಗಳೊಡನೆ ನಿರ್ಮಾಣಗೊಂಡಿತ್ತು. 1975-78ರಲ್ಲಿ ಮಿಗ್-21 ಬಿಐಎಸ್ ಯುದ್ಧ ವಿಮಾನದ ಅತ್ಯಂತ ಆಧುನಿಕ ಆವೃತ್ತಿಯಾಗಿದ್ದು, ಹೆಚ್ಚು ಶಕ್ತಿಶಾಲಿ ಇಂಜಿನ್, ರೇಡಾರ್ ಎಚ್ಚರಿಕೆ ರಿಸೀವರ್ ಮತ್ತು ಸುಧಾರಿತ ಏವಿಯಾನಿಕ್ಸ್ ಹೊಂದಿತ್ತು.
1990ರ ದಶಕದಲ್ಲಿ, ಭಾರತವು ರಷ್ಯಾದ ನೆರವಿನೊಂದಿಗೆ ತನ್ನ ಮಿಗ್-21 ಯುದ್ಧ ವಿಮಾನಗಳನ್ನು ಆಧುನೀಕರಿಸಿ, ಅವುಗಳನ್ನು 'ಬೈಸನ್' ಆವೃತ್ತಿಯಾಗಿ ಮೇಲ್ದರ್ಜೆಗೇರಿಸಿತು. ಈ ಸುಧಾರಿತ ಆವೃತ್ತಿಯು ಹಲವು ಹೊಸ ಫೀಚರ್ಗಳು ಒಳಗೊಂಡಿತ್ತು. ವಿಶಾಲ ನೋಟಕ್ಕೆ ನೆರವಾಗುವ ಬಬಲ್ ಕ್ಯಾನೊಪಿ ಮತ್ತು ಬಾಗಿದ ವಿಂಡ್‌ಸ್ಕ್ರೀನ್, ಏಕಕಾಲದಲ್ಲಿ ಹಲವು ಗುರಿಗಳನ್ನು ಗುರುತಿಸಬಲ್ಲ ಆಧುನಿಕ ರೇಡಾರ್, ಹಾಗೂ ಪೈಲಟ್‌ನ ದೃಷ್ಟಿಪಥದಲ್ಲಿಯೇ ವಿಮಾನದ ವೇಗ, ಎತ್ತರ ಮತ್ತು ಗುರಿಯ ವಿವರಗಳನ್ನು ಪ್ರದರ್ಶಿಸುವ ಹೆಡ್-ಅಪ್ ಡಿಸ್‌ಪ್ಲೇ (HUD) ಇದರ ಪ್ರಮುಖ ಆಕರ್ಷಣೆಗಳಾಗಿದ್ದವು. ಜೊತೆಗೆ, ನಕ್ಷೆ, ರೇಡಾರ್, ಆಯುಧಗಳು ಮತ್ತು ಎಂಜಿನ್ ಮಾಹಿತಿಯನ್ನು ಒದಗಿಸುವ ಮಲ್ಟಿ-ಫಂಕ್ಷನ್ ಡಿಸ್‌ಪ್ಲೇ (MFD) ಅನ್ನು ಇದರಲ್ಲಿ ಅಳವಡಿಸಲಾಗಿತ್ತು. ಇದು ಸ್ಮಾರ್ಟ್‌ಫೋನ್‌ನಂತೆ ವಿವಿಧ ಅಪ್ಲಿಕೇಶನ್‌ಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿತ್ತು. ಈ ವಿಮಾನವು R-73 ಮತ್ತು R-77 ನಂತಹ ಗಾಳಿಯಿಂದ ಗಾಳಿಗೆ ದಾಳಿ ನಡೆಸಬಲ್ಲ ಅತ್ಯಾಧುನಿಕ ಕ್ಷಿಪಣಿಗಳಿಂದ ಸಜ್ಜುಗೊಂಡಿತ್ತು. 2019ರ ಬಾಲಾಕೋಟ್ ದಾಳಿಯ ನಂತರ ನಡೆದ ಸಂಘರ್ಷದಲ್ಲಿ, ಪಾಕಿಸ್ತಾನದ ಅಮೆರಿಕ ನಿರ್ಮಿತ F-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದು ಇದೇ 'ಬೈಸನ್' ಆವೃತ್ತಿಯ ಮಿಗ್-21 ವಿಮಾನವಾಗಿತ್ತು.
'ವರ್ಕ್‌ಹಾರ್ಸ್' ಎಂದೇ ಖ್ಯಾತಿ
ಅತ್ಯಂತ ದೀರ್ಘಾವಧಿಗೆ ವಾಯುಪಡೆಯ ಭಾಗವಾಗಿದ್ದ ಈ ವಿಮಾನ ಪೈಲಟ್‌ಗಳ ತರಬೇತಿಗೂ ಬಳಕೆಯಾಗುತ್ತಿತ್ತು. ತನ್ನ ವೇಗ, ಸರಳತೆಯಿಂದ 'ವರ್ಕ್‌ಹಾರ್ಸ್' ಎಂದೇ ಹೆಸರು ಪಡೆದಿದ್ದ ಈ ಯುದ್ಧ ವಿಮಾನವು ಕಳೆದ 62 ವರ್ಷಗಳ ಸೇವೆಗೆ ಅಂತ್ಯ ಹಾಡುತ್ತದೆ.
'ಹಾರಾಡುವ ಶವಪೆಟ್ಟಿಗೆ'ಯೆಂಬ ಅಪಖ್ಯಾತಿ
ಯುದ್ದಗಳಲ್ಲಿ ಭಾರತದ ಆಪತ್ಬಾಂಧವನಾಗಿದ್ದ ಮಿಗ್- 21 ಹಲವಾರು ಅವಘಡಗಳ ಮೂಲಕ ಅಪಖ್ಯಾತಿಯನ್ನೂ ಮೈಗಂಟಿಸಿಕೊಂಡಿತ್ತು. ಸತತ ದುರಸ್ತಿಗೆ, ಪೈಲಟ್‌ಗಳು ಮತ್ತು ನಾಗರಿಕರ ಸಾವಿಗೆ ಕಾರಣವಾಗಿದ್ದರಿಂದ 'ಹಾರಾಡುವ ಶವಪೆಟ್ಟಿಗೆ' ಎಂಬುದಾಗಿಯೂ ಕರೆಸಿಕೊಂಡಿತ್ತು. ಇದುವರೆಗೆ ಸುಮಾರು 400 ವಿಮಾನಗಳು ಅಪಘಾತಕ್ಕೀಡಾಗಿದ್ದು, 200 ಪೈಲಟ್‌ಗಳು ಹಾಗೂ 60 ಮಂದಿ ನಾಗರಿಕರು ಮೃತಪಟ್ಟಿದ್ದೇ ಈ ಅಪಖ್ಯಾತಿಗೆ ಮೂಲ ಕಾರಣ.
ಯಾವ ದೇಶಗಳಲ್ಲಿ ಮಿಗ್-21 ಬಳಕೆ
1960 ರ ದಶಕದಲ್ಲಿ ಅಮೆರಿಕ ಹಾಗೂ ಸೋವಿಯತ್ ಒಕ್ಕೂಟದ ನಡುವಿನ ಶೀತಲ ಸಮರದ ಸಂದರ್ಭದಲ್ಲಿ ರಷ್ಯಾ ತನ್ನ ಮಿತ್ರ ರಾಷ್ಟ್ರಗಳಾದ ಭಾರತ, ಈಜಿಪ್ಟ್ ಹಾಗೂ ವಿಯೆಟ್ನಾಂ ಸೇರಿದಂತೆ ಇತರ ದೇಶಗಳಿಗೂ ರಪ್ತು ಮಾಡಿತ್ತು. ಇಂದಿಗೂ ಮಿಗ್-21 ಅನ್ನು ಸಕ್ರಿಯವಾಗಿ ಬಳಸುತ್ತಿರುವ ಪ್ರಮುಖ ದೇಶಗಳೆಂದರೆ ಆಫಘಾನಿಸ್ತಾನ್, ಕ್ಯೂಬಾ, ಗಿನಿ, ಲಿಬಿಯಾ, ಮಾಲಿ, ಮೊಜಾಂಬಿಕ್, ಉತ್ತರ ಕೊರಿಯಾ, ಸುಡಾನ್, ಸಿರಿಯಾ, ಯೆಮೆನ್, ಆಂಗೋಲಾ, ಉಗಾಂಡಾ ಸೇರಿದಂತೆ ಇದುವರೆಗೆ ಸುಮಾರು 60 ದೇಶಗಳಲ್ಲಿ ಬಳಕೆಯಲ್ಲಿದೆ. ಇಲ್ಲಿಯವರೆಗೂ ಒಟ್ಟು 11,496 ಯುದ್ಧ ವಿಮಾನಗಳನ್ನು ತಯಾರಿಸಲಾಗಿದ್ದು, ರಷ್ಯಾದಲ್ಲಿ10,645, ಭಾರತದಲ್ಲಿ 840 ಮತ್ತು ಜೆಕೊಸ್ಲೊವಾಕಿಯಾದಲ್ಲಿ 194 ಉತ್ಪಾದಿಸಲಾಗಿದೆ.
ಮಿಗ್ -21 ಯುದ್ಧ ವಿಮಾನ ಶುಕ್ರವಾರ (ಸೆ.26) ತನ್ನ ಕೊನೆಯ ಹಾರಾಟ ನಡೆಸಿ ವಿದಾಯ ಹೇಳಿದರೂ, ದೇಶಕ್ಕೆ ಸಲ್ಲಿಸಿದ ಸೇವೆ, ಯುದ್ಧಗಳಲ್ಲಿ ಪ್ರದರ್ಶಿಸಿದ್ದ ತನ್ನ ಕೌಶಲವನ್ನು ಸೇನೆ ಹಾಗೂ ದೇಶದ ಜನತೆ ಯಾವತ್ತು ಮರೆಯುವುದಿಲ್ಲ.