Cyber Crime| ಸೈಬರ್ ವಂಚಕರ ಜಾಲಕ್ಕೆ ಹೆದರಿ ದುರಂತ ಅಂತ್ಯಕಂಡ  ವೃದ್ಧ ದಂಪತಿ
x

ಸೈಬರ್‌ ವಂಚಕರ ಕಿರುಕುಳಕ್ಕೆ ಬಲಿಯಾದ ವೃದ್ಧ ದಂಪತಿ 

Cyber Crime| ಸೈಬರ್ ವಂಚಕರ ಜಾಲಕ್ಕೆ ಹೆದರಿ ದುರಂತ ಅಂತ್ಯಕಂಡ ವೃದ್ಧ ದಂಪತಿ

ತಮ್ಮ ಕೊನೆಯ ದಿನಗಳಲ್ಲಿ ಶಾಂತಿಯ ಜೀವಿತಕ್ಕಾಗಿ ಸಂಗ್ರಹಿಸಿದ್ದ ಪಿಂಚಣಿಯ ಹಣ, ಚಿನ್ನ ಅಡವಿಟ್ಟು 7 ಲಕ್ಷ ರೂ ಸೇರಿದಂತೆ ದಂಪತಿಯ 50 ಲಕ್ಷ ರೂ ಹಣ ವಂಚಕರ ಪಾಲಾಗಿತ್ತು.


ಮಕ್ಕಳೇ ಇಲ್ಲದ ದಂಪತಿಗೆ ತಮಗೆ ತಾವೇ ಎಲ್ಲವೂ ಆಗಿದ್ದರು. ತಮ್ಮ ಮುಪ್ಪಿನ ಜೀವನವನ್ನೂ ಬಹಳ ಸುಂದರವಾಗಿ ಕಳೆಯುತ್ತಿದ್ದ, ಒಬ್ಬರಿಗೊಬ್ಬರು ಆಧಾರವಾಗಿದ್ದ ಡಿಯಾಂಗೋ ನಜರತ್ (83) ಮತ್ತು ಪ್ಲೇವಿಯಾನಾ ನಜರತ್ (79) ಸೈಬರ್ ವಂಚಕರ ಜಾಲಕ್ಕೆ ಬಲಿಯಾಗಿ ಜೊತೆಯಾಗಿಯೇ ದುರಂತ ಅಂತ್ಯ ಕಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಸೈಬರ್ ವಂಚಕರ ಬೆದರಿಗೆ ಹೆದರಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಸೆಕ್ರೆಟರಿ ಕಚೇರಿಯಲ್ಲಿ ನೌಕರನಾಗಿದ್ದ ಡಿಯಾಂಗೋ ನಿವೃತ್ತಿ ಬಳಿಕ ಪತ್ನಿಯೊಂದಿಗೆ ಬೆಳಗಾವಿಯ ಹಳ್ಳಿಯಲ್ಲಿ ಜೀವನ ನಡೆಸುತ್ತಿದ್ದರು. ಎರಡು ಎಕರೆ ಜಮೀನು, ಮನೆ ಹಾಗೂ ನಿವೃತ್ತಿ ಪಿಂಚಣಿಯಲ್ಲಿ ಆರಾಮವಾಗಿ ಜೀವನ ಸಾಗಿಸುತ್ತಿದ್ದರು. ಆದರೆ ಸೈಬರ್ ಅಪರಾಧಿಗಳ ಕಿರುಕುಳಕ್ಕೆ ವೃದ್ಧ ದಂಪತಿ ದುರಂತ ಸಾವು ಕಂಡಿದ್ದಾರೆ.

ಗುರುವಾರ (ಮಾರ್ಚ್ 28) ಸಂಜೆ ತಮ್ಮ ಮನೆಯಲ್ಲೇ ಗಂಡ ಡಿಯಾಂಗೋ ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂದ್ದರು ಇದನ್ನ ನೋಡಿದ ಹೆಂಡತಿ ಕೂಡ ಸಕ್ಕರೆ ಕಾಯಿಲೆಯ ಮಾತ್ರೆಗಳೆಲ್ಲವನ್ನೂ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ನಂದಗಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಎರಡು ಪುಟದ ಒಂದು ಡೆತ್ ನೋಟ್ ಕೂಡ ಸಿಕ್ಕಿದ್ದು ಅದರಲ್ಲಿ ಬರೆದ ವಿಷಯ ಪೊಲೀಸರನ್ನೂ ಬೆಚ್ಚಿ ಬೀಳಿಸಿದೆ. ಸದ್ಯ ಶವಗಳನ್ನ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ವೃದ್ಧ ದಂಪತಿ ಆತ್ಮಹತ್ಯೆಗೆ ಕಾರಣವೇನು?

ಕೆಲವು ದಿನಗಳ ಹಿಂದೆ ಡಿಯಾಂಗೋ ಅವರಿಗೆ ಅಪರಿಚಿತ ನಂಬರ್‌ನಿಂದ ವೀಡಿಯೋ ಕಾಲ್ ಬಂದಿದೆ. ನಿಮ್ಮ ನಗ್ನ ಚಿತ್ರಗಳನ್ನು ದುರುಪಯೋಗ ಪಡಿಸಿಕೊಂಡು ವಂಚನೆ ನಡೆದಿದೆ ಎಂದು ವಂಚಕರು ಹೆದರಿಸಿದ್ದರು. ಬಳಿಕ ಮೇಲಧಿಕಾರಿಗಳು ಮಾತನಾಡುತ್ತಾರೆ ಎಂದು ನಂಬಿಸಿ, ಮತ್ತೊಬ್ಬರಿಗೆ ಕರೆ ಟ್ರಾನ್ಸ್‌ಫರ್ ಮಾಡಿದ್ದರು. ಅವರು ಕೂಡ ದಂಪತಿಯನ್ನು ಹೆದರಿಸಿ, ದೂರು ತಪ್ಪಿಸಲು ಹಣ ಕಟ್ಟುವಂತೆ ಒತ್ತಾಯಿಸಿದ್ದರು.

50 ಲಕ್ಷ ರೂ ಹಣ ವಂಚಕರ ಪಾಲು

ವಂಚನೆಯಾದ ಹಣವನ್ನ ನೀವು ಕಟ್ಟಿದರೆ ನಿಮ್ಮನ್ನ ನಾವು ಬಚಾವ್‌ ಮಾಡುತ್ತೇವೆ ಎಂದು ಹೇಳಿ ಆರಂಭದಲ್ಲಿ ವಂಚಕರು ಮೊದಲು 5 ಲಕ್ಷ ರೂ ಬೇಡಿಕೆ ಇಟ್ಟಿದ್ದಾರೆ. ಬಳಿಕ ಒಂದಿಲ್ಲೊಂದು ಸುಳ್ಳು ಹೇಳುತ್ತಾ ದಂಪತಿಯನ್ನು ಹೆದರಿಸಿ 50 ಲಕ್ಷ ರೂವರೆಗೆ ಹಣವನ್ನು ಬಲವಂತವಾಗಿ ವರ್ಗಾಯಿಸಿಕೊಂಡಿದ್ದರು. ತಮ್ಮ ಕೊನೆಯ ದಿನಗಳಲ್ಲಿ ಶಾಂತಿಯ ಜೀವಿತಕ್ಕಾಗಿ ಸಂಗ್ರಹಿಸಿದ್ದ ಪಿಂಚಣಿಯ ಹಣ, ಗೋಲ್ಡ್ ಅಡವಿಟ್ಟು 7 ಲಕ್ಷ ರೂ ಸೇರಿದಂತೆ ದಂಪತಿಯ 50 ಲಕ್ಷ ರೂ ಹಣ ವಂಚಕರ ಪಾಲಾಗಿತ್ತು.

ಇದಾದ ಬಳಿಕ ಮೊನ್ನೆ ಖುದ್ದು ಡಿಯಾಂಗೋ ಕರೆ ಬಂದ ನಂಬರ್‌ಗೆ ಕಾಲ್ ಮಾಡಿದ್ದಾರೆ. ಆದರೆ ಅವರು ರಿಸೀವ್ ಮಾಡದಿದ್ದಾಗ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಸೇಜ್ ಹಾಕಿದ್ದಾರೆ. ಆದರೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ದಂಪತಿ ಹತಾಶರಾಗಿದ್ದಾರೆ. ಬಳಿಕ ಎರಡು ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

ತನಿಖೆಗೆ ವಿಶೇಷ ತಂಡ ರಚನೆ

ಸ್ಥಳಕ್ಕೆ ಎಸ್ಪಿ ಡಾ.ಭೀಮಾಶಂಕರ್ ಗುಳೇದ್‌ ಭೇಟಿ ನೀಡಿ ತನಿಖೆಗೆ ಒಂದು ವಿಶೇಷ ತಂಡ ರಚನೆ ಮಾಡಲು ಸೂಚಿಸಿದ್ದಾರೆ. ಸೈಬರ್ ವಂಚಕರನ್ನು ಪತ್ತೆಹಚ್ಚಲು ಸಿಇಎನ್ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾಯಿಸಿ, ಡಿವೈಎಸ್ಪಿ ನೇತೃತ್ವದಲ್ಲಿ ಹುಡುಕಾಟ ಆರಂಭವಾಗಿದೆ.

ಜಾಗೃತಿಯ ಅಗತ್ಯ

ಸರ್ಕಾರ ಮತ್ತು ಪೊಲೀಸರು ಸೈಬರ್ ವಂಚನೆ ಕುರಿತು ಜಾಗೃತಿ ಮೂಡಿಸುತ್ತಿದ್ದರೂ, ಜನರು ಮತ್ತೆ ಮತ್ತೆ ಮೋಸಕ್ಕೆ ಸಿಲುಕುತ್ತಿದ್ದಾರೆ. ಉನ್ನತ ಮಟ್ಟದ ಹುದ್ದೆಯಲ್ಲಿದ್ದು ನಿವೃತ್ತಿಯಾಗಿ ಬಂದವರು ಕೂಡ ಮೋಸ ಹೋಗಿ ಜೀವ ಕಳೆದುಕೊಂಡಿದ್ದು ವಿಪರ್ಯಾಸ. ಈ ಘಟನೆಯಿಂದ ಎಲ್ಲರೂ ಎಚ್ಚರಿಕೆ ವಹಿಸಿ, ಸೈಬರ್ ವಂಚಕರ ಬಲಿಯಾಗದಂತೆ ಎಚ್ಚವಹಿಸಬೇಕಾಗಿದೆ.

Read More
Next Story