ಅಂಬೇಡ್ಕರ್ ಬಗ್ಗೆ ಗೃಹ ಸಚಿವ ಅಮಿತ್ ಶಾ ಹೇಳಿಕೆ; ಕಾಂಗ್ರೆಸ್, ಬಿಜೆಪಿ ಮಾತಿನ ಸಮರ
ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊಟ್ಟಿರುವ ಹೇಳಿಕೆ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ರಾಜ್ಯದಲ್ಲಿಯೂ ಕೂಡ ಕಾಂಗ್ರೆಸ್ ನಾಯಕರು ಅಮಿತ್ ಶಾ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಆಡಿರುವ ಮಾತು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಇಡೀ ದೇಶಾದ್ಯಂತ ಅಮಿತ್ ಶಾ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿಯೂ ಕೂಡ ಕಾಂಗ್ರೆಸ್ ನಾಯಕರು ಅಮಿತ್ ಶಾ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬಹಿರಂಗ ಪತ್ರ ಬರೆದು ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ್ಯ ಬಿಜೆಪಿ ರಾಜ್ಯಸಭೆಯಲ್ಲಿ ಅಮಿತ್ ಶಾ ಹೇಳಿಕೆಯ ಸಂಪೂರ್ಣ ವಿಡಿಯೊವನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಜ್ಯ ಬಿಜೆಪಿ ಸ್ಪಷ್ಟನೆ ಕೊಟ್ಟಿದೆ. ಕಾಂಗ್ರೆಸ್ ನಾಯಕರು ಹೇಳುತ್ತಿರುವುದೆಲ್ಲವೂ ಸುಳ್ಳು ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು ಅರ್ಧ ಬಿತ್ತರಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಈಗಲೂ ಅವಮಾನಿಸುತ್ತಿದೆ ಎಂದು ತನ್ನ ಎಕ್ಸ್ ಖಾತೆಯಲ್ಲಿ ರಾಜ್ಯ ಬಿಜೆಪಿ ಸ್ಪಷ್ಟನೆ ಕೊಟ್ಟಿದೆ.
ಕಾಂಗ್ರೆಸ್ ಪಕ್ಷಕ್ಕೆ ಅಂಬೇಡ್ಕರ್ ಹೆಸರು ಫ್ಯಾಶನ್ ಆಗಿಬಿಟ್ಟಿದೆ. ಆದರೆ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅತಿ ಹೆಚ್ಚು ದ್ರೋಹ ಬಗೆದಿದೆ. ದೇಶದ ಮೊದಲ ಸಸಚಿವ ಸಂಪುಟಕ್ಕೆ ರಾಜೀನಾಮೆ ನೀಡುವಂತೆ ಅಂಬೇಡ್ಕರ್ರನ್ನು ಕಾಂಗ್ರೆಸ್ ನಡೆಸಿಕೊಂಡಿತ್ತು. ಅಂಬೇಡ್ಕರ್ ರಾಜೀನಾಮೆ ನೀಡಿದರೆ ಏನಾಗುತ್ತದೆ? ಎಂಬ ಪ್ರಶ್ನೆಗೆ ನೆಹರು ಅವರು ಅಂಬೇಡ್ಕರ್ ಅವರು ಸಚಿವ ಸಂಪುಟದಿಂದ ಹೊರನಡೆದರೆ ಏನೇನೂ ಆಗುವುದಿಲ್ಲ ಎಂದು ಉತ್ತರಿಸಿದ್ದರು. ಇದು ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಮಾಡಿರುವ ಅವಮಾನವಲ್ಲವೇ? ಸಮಯ ಸಾಧಕರಂತೆ ಅಂಬೇಡ್ಕರ್ ಅವರ ಹೆಸರನ್ನು ಬಳಸಿಕೊಳ್ಳುವುದಷ್ಟೇ ಕಾಂಗ್ರೆಸ್ಸಿಗರಿಗೆ ಗೊತ್ತಿರುವುದು ಎಂದು ಕಾಂಗ್ರೆಸ್ ಪಕ್ಷಕ್ಕೆ ಪ್ರಶ್ನೆ ಮಾಡಿದೆ.
ಜೊತೆಗೆ ಅಮಿತ್ ಶಾ ರಾಜ್ಯಸಭೆಯಲ್ಲಿ ಆಡಿರುವ ಮಾತುಗಳ ವಿಡಿಯೊವನ್ನು ತನ್ನ ಎಕ್ಸ್ ಖಾತೆಯಲ್ಲಿ ಬಿಜೆಪಿ ಹಂಚಿಕೊಂಡಿದೆ.
ಸಿಎಂ ಖಂಡನೆ
ನಿಮ್ಮ ಮಾತಿನ ಧಾಟಿಯಲ್ಲಿಯೇ ಪ್ರತಿಕ್ರಿಯಿಸುತ್ತೇನೆ. ನಿಮ್ಮ ಪಕ್ಷ ಮತ್ತು ಅದರ ಹಿಂದಿರುವ ಪರಿವಾರಕ್ಕೆ ಇತ್ತೀಚೆಗೆ ಮೋದಿ…ಮೋದಿ.. ಮೋದಿ ಎಂದು ಹೇಳುವುದು ಒಂದು ವ್ಯಸನ ಆಗಿದೆ. ಮೋದಿಯವರ ಬದಲಿಗೆ ಅಷ್ಟು ಬಾರಿ ದೇವರ ನಾಮ ಸ್ಮರಣೆ ಮಾಡಿದ್ದರೆ ಏಳು ಜನ್ಮದಲ್ಲಿ ಮಾತ್ರ ಅಲ್ಲ, ನೂರು ಜನ್ಮದಲ್ಲಿಯೂ ನಿಮಗೆ ಸ್ವರ್ಗವೇ ಸಿಗುತ್ತಿತ್ತು, ಕೇವಲ ಅಧಿಕಾರದಲ್ಲಿ ಉಳಿಯಲಿಕ್ಕಾಗಿ ಮಾಡಿರುವ ಪಾಪಕೃತ್ಯಗಳಿಗೆ ಕ್ಷಮೆಯೂ ಸಿಗುತ್ತಿತ್ತು ಎಂದು ಸಿದ್ದರಾಮಯ್ಯ ಅಮಿತ್ ಶಾಗೆ ಬರೆದಿರುವ ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ರಾಜ್ಯ ಕಾಂಗ್ರೆಸ್ ಕೂಡ ಅಮಿತ್ ಶಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ.
ಅಪಮಾನ ಸಹಿಸುವುದಿಲ್ಲ
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಅಕ್ಷಮ್ಯ ಮಾತುಗಳಿಗಾಗಿ ಅಮಿತ್ ಶಾ ದೇಶದ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಅಂಬೇಡ್ಕರ್ ಅವರಿಗೆ ಮಾಡುವ ಅಪಮಾನವನ್ನು ಸಹಿಸುವುದಿಲ್ಲ ಎಂದು ಕರ್ನಾಟಕ ಕಾಂಗ್ರೆಸ್ ತನ್ನ ಎಕ್ಸ್ ಖಾತೆಯ ಮೂಲಕ ಎಚ್ಚರಿಕೆ ಕೊಟ್ಟಿದೆ.
ಇಂತಹ ಅವಹೇಳನಕಾರಿ ಮಾತುಗಳು ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಾಯಕರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಎಷ್ಟು ದ್ವೇಷವಿದೆ ಎಂಬುದನ್ನು ತೋರಿಸುತ್ತದೆ. ಅವರ ಹೆಸರೂ ಇವರನ್ನು ಕೆರಳಿಸುವಷ್ಟು ದ್ವೇಷವಿದೆ.
ಅಮಿತ್ ಶಾ ಪೂರ್ವಜರು ಬಾಬಾ ಸಾಹೇಬರ ಪ್ರತಿಕೃತಿಯನ್ನು ದಹಿಸುತ್ತಿದ್ದವರು, ಬಾಬಾ ಸಾಹೇಬರು ಕೊಟ್ಟ ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಮಾತನಾಡುತ್ತಿದ್ದರು. ಜನ ಇವರಿಗೆ ತಕ್ಕ ಪಾಠ ಕಲಿಸಿದಾಗ ಬಾಬಾ ಸಾಹೇಬರ ಹೆಸರು ಹೇಳುವವರ ವಿರುದ್ಧ ಕಿಡಿಕಾರಿದ್ದಾರೆ. ಈ ಬಾರಿ ಇವರಿಗೆ ಪೂರ್ಣ ಬಹುಮತ ಸಿಕ್ಕಿದ್ದರೆ ಸಂವಿಧಾನ ಬದಲಾಯಿಸುವ ಪ್ರಯತ್ನಕ್ಕಿಳಿಯುತ್ತಿದ್ದರು. ಇದಕ್ಕೆ ಇವರ ಮಾತುಗಳೇ ಸಾಕ್ಷಿ ಎಂದು ಕರ್ನಾಟಕ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.
ಮತಿಹೀನ ಕೇಂದ್ರ ಸಚಿವ ಅಮಿತ್ ಶಾ
ಅಮಿತ್ ಶಾ ಮತಿಹೀನರಾಗಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರ ಮಾತಿನ ಮಾತು ಹಾಗೂ ಮಾತಿನ ದಾಟಿ ಸಂಪೂರ್ಣ ದುರಹಂಕಾರದಿಂದ ಕೂಡಿದ್ದು, ಅಧಿಕಾರದ ಅಮಲು ಅವರ ತಲೆಗೇರಿದೆ ಎಂದು ತಮ್ಮ ಎಕ್ಸ್ ಖಾತೆಯ ಮೂಲಕ ಅಮಿತ್ ಶಾ ಹೇಳಿಕೆಯನ್ನು ಖಂಡಿಸಿದ್ದಾರೆ.
ಅಮಿತ್ ಶಾ ‘ಏಳು ಜನ್ಮಗಳಲ್ಲಿ’ ಗಳಲ್ಲಿ ದೇವರ ಹೆಸರನ್ನು ಜಪಿಸುವುದರಿಂದ ಸ್ವರ್ಗ ಸಿಗುವುದಿಲ್ಲ. ಆದರೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಹೆಸರು ಜಪಿಸುವುದರಿಂದ ದೇಶದ ಕಡೆಯ ವ್ಯಕ್ತಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಮಾನತೆಯೊಂದಿಗೆ ಘನತೆಯ ಜೀವನವನ್ನು ಒದಗಿಸಿದೆ. ಪ್ರಮುಖವಾಗಿ ಬಾಬಾಸಾಹೇಬ್ ಹೆಸರನ್ನು ಜಪಿಸುವುದರಿಂದ ಮನುಸ್ಮೃತಿಯಿಂದ ಮುಕ್ತಿಯನ್ನು ಪಡೆಯುತ್ತೇವೆ. ಬಿಜೆಪಿ ದೇಶದ ಸಂವಿಧಾನಕ್ಕೆ ವಿರುದ್ಧವಾಗಿದೆ, ಮುಂದೆ ಯಾವಾಗಲೂ ಅದು ಸಂವಿಧಾನಕ್ಕೆ ವಿರುದ್ಧವಾಗಿಯೇ ಇರುತ್ತದೆ. ನಮ್ಮ ಸಂವಿಧಾನ ಆರ್‌ಎಸ್‌ಎಸ್ ಸಿದ್ಧಾಂತ ವಿರೋಧಿಸುವ ದಮನಿತ ವರ್ಗಗಳಿಗೆ ಸಮಾನತೆ ಮತ್ತು ಘನತೆಯ ಜೀವನವನ್ನು ಒದಗಿಸುತ್ತದೆ. ಹೀಗಾಗಿ ಬಿಜೆಪಿ ಸಂವಿಧಾನದ ವಿರೋಧಿಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.