ನನ್ನ ಸ್ಪರ್ಧೆಗೆ ಅಮಿತ್ ಶಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ: ಕೆ ಎಸ್ ಈಶ್ವರಪ್ಪ
x

ನನ್ನ ಸ್ಪರ್ಧೆಗೆ ಅಮಿತ್ ಶಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ: ಕೆ ಎಸ್ ಈಶ್ವರಪ್ಪ

ʻʻಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಗೆ ಕರೆದಾಗ ಗೌರವ ಕೊಟ್ಟು ಹೋಗಿದ್ದೆ. ಆದರೆ, ಅವರು ಭೇಟಿಯಾಗದೆ ವಾಪಸ್‌ ಕಳಿಸುವ ಮೂಲಕ ನಾನು ಸ್ಪರ್ಧೆ ಮಾಡುವುದಕ್ಕೆ ಗೀನ್ ಸಿಗ್ನಲ್ ಕೊಟ್ಟಿದ್ದಾರೆʼʼ ಎಂದು ಈಶ್ವರಪ್ಪ ಹೇಳಿದ್ದಾರೆ.


"ಅಮಿತ್ ಶಾ ಅವರ ಅಪೇಕ್ಷೆ ನಾನು ಚುನಾವಣೆಗೆ ಸ್ಪರ್ಧಿಸೋದೆ ಆಗಿತ್ತು. ಹಾಗಾಗಿ ಅವರು ದೆಹಲಿಗೆ ಕರೆಸಿಕೊಂಡು, ಭೇಟಿ ಮಾಡುವುದನ್ನು ನಿರಾಕರಿಸಿದ್ದಾರೆ" ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

ಬಿಜೆಪಿ ವರಿಷ್ಠ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಲು ದೆಹಲಿಗೆ ಹೋಗಿ, ಭೇಟಿ ಮಾಡಲಾಗದೆ ವಾಪಸ್‌ ಬಂದ ಬಳಿಕ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ʻʻಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಗೆ ಕರೆದಾಗ ಗೌರವ ಕೊಟ್ಟು ಹೋಗಿದ್ದೆ. ಆದರೆ, ಅವರು ಭೇಟಿಯಾಗದೆ ವಾಪಸ್‌ ಕಳಿಸುವ ಮೂಲಕ ನಾನು ಸ್ಪರ್ಧೆ ಮಾಡುವುದಕ್ಕೆ ಗೀನ್ ಸಿಗ್ನಲ್ ಕೊಟ್ಟಿದ್ದಾರೆʼʼ ಎಂದರು.

ʻʻಬಿಜೆಪಿಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಅವರು ನನಗೆ ಅಮಿತ್ ಶಾ ಮನೆಗೆ ಹೋಗಲು ಹೇಳಿದ್ದರು. ಅಮಿತ್ ಶಾ ಮನೆಯಲ್ಲಿ ಇರಲಿಲ್ಲ. ಅವರು ಭೇಟಿ ಮಾಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಬಳಿಕ ದೆಹಲಿಯಿಂದ ವಾಪಸ್ ಹೋಗೋದಾ ಎಂದು ಕೇಳಿದೆ. ಹೌದು ವಾಪಸ್ ಹೋಗು ಎಂದರು. ಅವರ ಅಭಿಪ್ರಾಯ ನಾನು ಬಂದು ಚುನಾವಣೆಗೆ ಸ್ಪರ್ಧಿಸುವುದೇ ಆಗಿತ್ತು. ಅದಕ್ಕೆ ನನ್ನನ್ನು ಅವರು ಭೇಟಿಯಾಗಲಿಲ್ಲʼʼ ಎಂದು ತಿಳಿಸಿದ್ದಾರೆ.

ʻʻಅಮಿತ್‌ ಶಾ ಅವರು ನನಗೆ ಕರೆ ಮಾಡಿದಾಗ ನಾನು ಸ್ಪರ್ಧೆಯ ಉದ್ದೇಶವನ್ನು ತಿಳಿಸಿದ್ದೇನೆ. ರಾಜ್ಯದಲ್ಲಿ ಕುಟುಂಬ ರಾಜಕಾರಣ ಬೆಳೆಯುತ್ತಿದೆ. ಕುಟುಂಬ ರಾಜಕಾರಣ ಕಿತ್ತೊಗೆಯಬೇಕು. ಅನೇಕ ಹಿಂದುತ್ವ ನಾಯಕರನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂಬುದನ್ನು ಅವರಿಗೆ ಹೇಳಿದ್ದೇನೆ. ಆದರೆ ಇಂತಹ ನನ್ನ ಪ್ರಶ್ನೆಗಳಿಗೆ ಅವರ ಬಳಿ ಉತ್ತರ ಇರಲಿಲ್ಲ. ಹೀಗಾಗಿಯೇ ಅವರು ನನ್ನ ಮನವೊಲಿಸಲು ಸಾಧ್ಯ ಆಗುತ್ತಿರಲಿಲ್ಲ" ಎಂದು ಈಶ್ವರಪ್ಪ ಹೇಳಿದ್ದಾರೆ.

ʻʻನಾನು ಚುನಾವಣೆಗೆ ಸ್ಪರ್ಧಿಸೋದೇ ಸೂಕ್ತ ಎಂದು ಅವರಿಗೂ(ಅಮಿತ್‌ ಶಾ) ಅನ್ನಿಸಿದೆ. ಅವರ ಅಪೇಕ್ಷೆಯಂತೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಅಮಿತ್ ಶಾ ಕರೆದಾಗ ಏನು ಕೇಳ್ತಾರೆ? ಏನು ಉತ್ತರ ಕೊಡಬೇಕು ಎಂದು ತಯಾರಿ ಆಗಿದ್ದೆ. ಅಮಿತ್ ಶಾ ತುಂಬಾ ಚಾಣಕ್ಷ ನಿರ್ಧಾರ ಕೈಗೊಂಡಿದ್ದಾರೆ. ಅವರ ನಿರ್ಧಾರ ಸ್ವಾಗತಿಸುತ್ತೇನೆ. ಆ ನಿರ್ಧಾರಕ್ಕಾಗಿ ಅವರನ್ನು ಅಭಿನಂದಿಸುತ್ತೇನೆʼʼ ಎಂದು ಅವರು ಹೇಳಿದ್ದಾರೆ.

ʻʻಇಡೀ ರಾಜ್ಯದಿಂದ ಜನರು ನನಗೆ ಕರೆ ಮಾಡಿ ನಾಮಪತ್ರ ವಾಪಸ್ ತೆಗೆದುಕೊಳ್ಳಬೇಡಿ ಎಂದು ಹೇಳುತ್ತಿದ್ದಾರೆ. ಹಿರಿಯರು ಹೇಳಿದ್ರೆ ವಾಪಸ್ ಪಡೆಯುತ್ತಾರೆ ಎನ್ನುವ ಅನುಮಾನ ಕಾರ್ಯಕರ್ತರದ್ದು. ಭಗವಂತನ ನಿರ್ಣಯ ಸಹ ನಾನು ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂಬುದೇ ಇದೆ ಎನಿಸುತ್ತದೆʼʼ ಎಂದರು.

"ರಾಜೇಶ್ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ರಾಧ ಮೋಹನ್ ದಾಸ್ ಅಗರ್ವಾಲ್ ನಮ್ಮ ಮನೆಗೆ ಬಂದಿದ್ದರು. ಅವರಿಗೆ ನನ್ನ ಎಲ್ಲಾ ಸಮಸ್ಯೆ ತಿಳಿಸಿದೆ. ನನಗೆ ಚುನಾವಣೆಗೆ ಸ್ಪರ್ಧೆ ಮಾಡಬೇಡಿ ಎಂದರು. ನಾನು ಪಕ್ಷ ಶುದ್ಧೀಕರಣಕ್ಕಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಅವರಿಗೆ ಹೇಳಿದ್ದೆ. ಅಲ್ಲದೆ ಯತ್ನಾಳ್ ನನ್ನ ಬೇಡಿಕೆ ಸರಿ ಇದೆ ಎಂದಿದ್ದಾರೆ. ಅವರೆಲ್ಲಾ ಅಪೇಕ್ಷೆಯಂತೆ ಸ್ಪರ್ಧೆ ಮಾಡಿ ಗೆಲ್ಲುತ್ತೇನೆ" ಎಂದೂ ಈಶ್ವರಪ್ಪ ಪಕ್ಷದೊಳಗೇ ತಮಗೆ ಇರುವ ಬೆಂಬಲ ವಿವರಿಸಿದರು.

ಮೋದಿ ಭಾವಚಿತ್ರ ಬಳಕೆ ವಿಚಾರವಾಗಿ ಸಂಸದ ಹಾಗೂ ಬಿಜೆಪಿ ಅಧಿಕೃತ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, "ಮೋದಿ ಏನು ಅವರಪ್ಪನ ಮನೆ ಆಸ್ತಿನಾ? ಮೋದಿ ವಿಶ್ವ ನಾಯಕ, ನನ್ನ ಎದೆ ಬಗೆದರೆ ಮೋದಿ ಕಾಣ್ತಾರೆ. ಅವರ ಎದೆ ಬಗೆದರೆ ಯಾರು ಕಾಣ್ತಾರೆ? ನಾನು ಗೆದ್ದ ನಂತರ ಮೋದಿಯವರಿಗೆ ಕೈ ಎತ್ತುವವನೇ" ಎಂದು ಈಶ್ವರಪ್ಪ ಹೇಳಿದ್ದಾರೆ.

Read More
Next Story