ಹಿಂದೂ ಅಲ್ಲದವರಿಗೆʼ ಪ್ರವೇಶ ನಿರಾಕರಣೆ ವಿವಾದ;  ಯಾವ ಪ್ರಮುಖ ದೇಗುಲಗಳಲ್ಲಿ ಅಂತಹ ಕಟ್ಟುಪಾಡುಗಳಿವೆ?
x

'ಹಿಂದೂ ಅಲ್ಲದವರಿಗೆʼ ಪ್ರವೇಶ ನಿರಾಕರಣೆ ವಿವಾದ; ಯಾವ ಪ್ರಮುಖ ದೇಗುಲಗಳಲ್ಲಿ ಅಂತಹ ಕಟ್ಟುಪಾಡುಗಳಿವೆ?

ಮಾಜಿ ಸಿಎಂ ಜಗನ್ ಮೋಹನ ರೆಡ್ಡಿ ಹಿಂದೂ ಅಲ್ಲ, ಕ್ರಿಶ್ಚಿಯನ್ ಧರ್ಮ ಪಾಲಕ. ಹಾಗಾಗಿ ದೇವಾಲಯಕ್ಕೆ ಭೇಟಿ ನೀಡುವ ಮೊದಲು ತಮ್ಮ ನಂಬಿಕೆ ಘೋಷಿಸಬೇಕು ಎಂಬುದು ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸೇರಿದಂತೆ ರಾಜ್ಯದ ಬಲಪಂಥೀಯ ಎನ್‌ಡಿಎ ಮಿತ್ರಪಕ್ಷಗಳ ಒತ್ತಾಯ. ದೇವಸ್ಥಾನಗಳ ಪ್ರವೇಶದ ವೇಳೆ ನಂಬಿಕೆ, ಸಂಪ್ರದಾಯ ಪಾಲಿಸಬೇಕೆಂಬ ಅಲಿಖಿತ ನಿಯಮ ಬಹುತೇಕ ದೇವಾಲಯಗಳಲ್ಲೂ ಇದೆ.


ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್‌ ಮೋಹನರೆಡ್ಡಿ ಅವರು ತಿರುಪತಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯುವ ಮುನ್ನ ತಮ್ಮ ಧಾರ್ಮಿಕ ನಂಬಿಕೆ ಘೋಷಿಸಬೇಕು ಎಂಬ ವಿಚಾರ ಮುನ್ನೆಲೆಗೆ ಬಂದಿದೆ.

ಮಾಜಿ ಸಿಎಂ ಜಗನ್ ಮೋಹನ ರೆಡ್ಡಿ ಹಿಂದೂ ಅಲ್ಲ, ಕ್ರಿಶ್ಚಿಯನ್ ಧರ್ಮ ಪಾಲಕ. ಹಾಗಾಗಿ ದೇವಾಲಯಕ್ಕೆ ಭೇಟಿ ನೀಡುವ ಮೊದಲು ತಮ್ಮ ನಂಬಿಕೆ ಘೋಷಿಸಬೇಕು ಎಂಬುದು ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸೇರಿದಂತೆ ರಾಜ್ಯದ ಬಲಪಂಥೀಯ ಎನ್‌ಡಿಎ ಮಿತ್ರಪಕ್ಷಗಳ ಒತ್ತಾಯ. ದೇವಸ್ಥಾನಗಳ ಪ್ರವೇಶದ ವೇಳೆ ನಂಬಿಕೆ, ಸಂಪ್ರದಾಯ ಪಾಲಿಸಬೇಕೆಂಬ ಅಲಿಖಿತ ನಿಯಮ ಬಹುತೇಕ ದೇವಾಲಯಗಳಲ್ಲೂ ಇದೆ. ಈ ಹಿನ್ನೆಲೆಯಲ್ಲಿ ನಡೆದ ಒಂದು ಅವಲೋಕನ ಇಲ್ಲಿದೆ. ದೇಶದ ಅದರಲ್ಲೂ ದಕ್ಷಿಣ ಭಾರತದ ಯಾವ ದೇವಾಲಯಗಳಲ್ಲಿ ಹಿಂದೂಯೇತರರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಅಲ್ಲಿನ ಅನುಸರಿಸುವ ನಿಯಮಗಳೇನು ಎಂಬ ವಿವರದ ಒಂದು ಪಕ್ಷನೋಟ.

ಗುಜರಾತಿನ ಸೋಮನಾಥ ದೇವಸ್ಥಾನ

ಗುಜರಾತಿನ ಪ್ರಸಿದ್ಧ ಸೋಮನಾಥ ದೇವಾಲಯದ ಟ್ರಸ್ಟಿಗಳ ಮಂಡಳಿ 2015ರಲ್ಲಿ ಪೂರ್ವಾನುಮತಿ ಇಲ್ಲದೆ ಹಿಂದೂಯೇತರರ ಪ್ರವೇಶ ನಿರ್ಬಂಧಿಸಿತು ಅಂದು ಟ್ರಸ್ಟಿಗಳ ಮಂಡಳಿಯಲ್ಲಿ ಈಗಿನ ಪ್ರಧಾನಿ ನರೇಂದ್ರ ಮೋದಿ ಕೂಡ ಇದ್ದರು. ದೇವಸ್ಥಾನದ ಪಾವಿತ್ರ್ಯತೆ ಹಾಗೂ ರಕ್ಷಣೆ ದೃಷ್ಟಿಯಿಂದ ಅಂದು ಈ ನಿರ್ಣಯ ತೆಗೆದುಕೊಳ್ಳಲಾಗಿತ್ತು ಎಂಬುದು ಆಡಳಿತ ಮಂಡಳಿಯ ಸ್ಪಷ್ಟನೆ. ಹಿಂದೂಗಳಲ್ಲದವರು ದೇವಾಲಯ ಪ್ರವೇಶಿಸಲು ಪ್ರಧಾನ ವ್ಯವಸ್ಥಾಪಕರ ಕಚೇರಿಯಿಂದ ಅನುಮತಿ ಪಡೆಯಬೇಕು ಎಂದು ದೇವಾಲಯದ ಮುಖ್ಯ ದ್ವಾರದಲ್ಲಿ ಸೂಚಿಸಲಾಗಿದೆ.

ಕೇರಳದ ಗುರುವಾಯೂರ್ ದೇವಸ್ಥಾನ

ಕೇರಳದ ಗುರುವಾಯೂರಿನ ಶ್ರೀಕೃಷ್ಣ ದೇವಸ್ಥಾನದಲ್ಲಿ ಹಿಂದೂಗಳಿಗೆ ಮಾತ್ರ ಪ್ರವೇಶವಿದೆ. ಜೊತೆಗೆ ವತ್ರಸಂಹಿತೆ ಕೂಡ ಅನುಸರಿಸಬೇಕು. ಇಲ್ಲಿ ಅನ್ಯ ಧರ್ಮಿಯರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ಹಿಂದೆ ಕ್ರಿಶ್ಚಿಯನ್‌ ಧರ್ಮಪಾಲಕ, ಖ್ಯಾತ ಗಾಯಕ ಯೇಸುದಾಸ್ ಅವರು ದೇವಾಲಯದ ದ್ವಾರದಲ್ಲೇ ನಿಂತು ದೇವರ ದರ್ಶನ ಪಡೆದಿದ್ದರು. ದೇವಾಲಯದ ಹೊರಗೆ ನಿಂತು ಭಜನೆಗಳನ್ನು ಹಾಡಿದ್ದರು. ಕೇರಳದ ಗುರುವಾಯೂರಿನಲ್ಲಿ ಅನುಸರಿಸುವಷ್ಟು ಕಟ್ಟುನಿಟ್ಟಿನ ನಿಯಮವನ್ನು ಆ ರಾಜ್ಯದ ಬೇರಾವ ದೇವಾಲಯದಲ್ಲೂ ಆಚರಿಸುವುದಿಲ್ಲ.

2010ರಲ್ಲಿ ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು ಗುರುವಾಯೂರಿಗೆ ಭೇಟಿ ನೀಡಿದ್ದಕ್ಕೆ ದೊಡ್ಡ ಗಲಾಟೆಯೇ ನಡೆದಿತ್ತು.

ಒಡಿಶಾದ ಪುರಿಯ ಜಗನ್ನಾಥ ದೇವಾಲಯ

ಒಡಿಶಾದ ಪುರಿ ಜಗನ್ನಾಥ ದೇವಾಲಯದಲ್ಲಿ ಸಾಂಪ್ರದಾಯಿಕ ಹಿಂದೂಗಳನ್ನು ಹೊರತುಪಡಿಸಿ ಯಾರಿಗೂ ದೇವಾಲಯ ಪ್ರವೇಶ ಇಲ್ಲ. 1984 ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಭೇಟಿ ನೀಡಿದರೂ ದೇವಾಲಯದ ನಿಯಮ ಸಡಿಲಿಸಲಿಲ್ಲ. ಅಲ್ಲಿನ ಅರ್ಚಕರು ಇಂದಿರಾಗಾಂಧಿ ಅವರನ್ನು ಒಳಗೆ ಬಿಡದಿರಲು ಅವರು ಪಾರ್ಸಿ ಸಮುದಾಯದ ಫಿರೋಜ್ ಗಾಂಧಿ ಅವರೊಂದಿಗಿನ ವಿವಾಹ ಉಲ್ಲೇಖಿಸಿದ್ದು ಕಾರಣವಾಗಿತ್ತು.

ಬೌದ್ಧ ಧರ್ಮ ಪಾಲಿಸುತ್ತಿದ್ದ ಥಾಯ್ಲೆಂಡ್ ರಾಣಿ, ಮಹಾಚಕ್ರಿ ಸಿರಿಧರನ್ನಂತಹ ವಿದೇಶಿ ಗಣ್ಯರನ್ನು ಕೂಡ 2005 ರಲ್ಲಿ ದೇವಾಲಯದ ಒಳಗೆ ಬಿಟ್ಟಿರಲಿಲ್ಲ. ೨೦೦೬ರಲ್ಲಿ ದೇವಾಲಯಕ್ಕೆ 1.78 ಕೋಟಿ ರೂ. ದೇಣಿಗೆ ನೀಡಿದ್ದ ಸ್ವಿಸ್ ಪ್ರಜೆ ಎಲಿಜಬೆತ್ ಜಿಗ್ಲರ್ ಅವರಿಗೂ ಪ್ರವೇಶ ನಿರ್ಬಂಧಿಸಲಾಗಿತ್ತು. 1319ರಲ್ಲಿ ಸಂತ ಕಬೀರ್, 1505ರಲ್ಲಿ ಗುರುನಾನಕ್‌ ಹಾಗೂ ಅವರ ಶಿಷ್ಯರಾದ ಮರ್ಡಿನಾ ಅವರನ್ನು ದೇವಾಲಯದ ಒಳಕ್ಕೆ ಬಿಟ್ಟಿರಲಿಲ್ಲ. ಆಗ ಪುರಿಯ ಗಜಪತಿ ರಾಜ ಮಧ್ಯಸ್ಥಿಕೆ ವಹಿಸಿದ ಮೇಲೆ ಕಬೀರ್ ಮತ್ತು ನಾನಕ್ ಅವರನ್ನು ಸಕಲ ಗೌರವಗಳೊಂದಿಗೆ ದೇವಾಲಯಕ್ಕೆ ಅನುಮತಿಸಲಾಗಿತ್ತು.

ಕೇರಳದ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ

ಹಿಂದೂಗಳ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸುವ ಕೇರಳದ ಮತ್ತೊಂದು ದೇವಾಲಯ ಪದ್ಮನಾಭ ಸ್ವಾಮಿ ದೇವಸ್ಥಾನ. ಅನೇಕ ವಿದೇಶಿಗರು ದೇವಾಲಯಕ್ಕೆ ಭೇಟಿ ನೀಡಿದಾಗ, ಅವರು ಹೊರಗಿನಿಂದ ಇಣುಕಿ ಪೋಟೊ ತೆಗೆದುಕೊಂಡು ಹೋಗುತ್ತಾರೆ.

16 ನೇ ಶತಮಾನದಲ್ಲಿ ತಿರುವಾಂಕೂರು ರಾಜರಿಂದ ನಿರ್ಮಿಸಲ್ಪಟ್ಟ ಇದು ವಿಶ್ವದ ಅತ್ಯಂತ ಶ್ರೀಮಂತ ದೇವಾಲಯ ಎಂದು ಹೇಳಲಾಗುತ್ತದೆ. ಮೂಲಗಳ ಪ್ರಕಾರ ದೇವಾಲಯದಲ್ಲಿ ೯೦೦೦೦ ಕೋಟಿ ಮೌಲ್ಯದ ನಿಧಿ ಇದೆ ಎನ್ನಲಾಗಿದೆ.

ಉತ್ತರ ಪ್ರದೇಶದ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನ

ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ವಿಶ್ವನಾಥ ದೇವಾಲಯ ಭಾರತದ ಅತ್ಯಂತ ಪವಿತ್ರವಾದ ಶಿವ ದೇವಾಲಯಗಳಲ್ಲಿ ಒಂದು. ಗಂಗಾನದಿ ಪಕ್ಕದಲ್ಲಿರುವ ದೇವಾಲಯದೊಳಗೆ ಹಿಂದೂಯೇತರರಿಗೆ ಪ್ರವೇಶವಿಲ್ಲ, ಆದರೂ ಅಷ್ಟೇ ಕಟ್ಟುನಿಯಮ ಇಲ್ಲಿಲ್ಲ. ಆದರೆ, ಹಿಂದೂಯೇತರರು ದೇವಾಲಯದ ಉತ್ತರದಲ್ಲಿರುವ ಗ್ಯಾನ್ ಕುಪೋರ್ ಬಾವಿ ಸಂಕೀರ್ಣದವರೆಗೆ ಪ್ರವೇಶಿಸುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.

ತಮಿಳುನಾಡಿನ ಕಪಾಲೀಶ್ವರರ್ ದೇವಸ್ಥಾನ

7ನೇ ಶತಮಾನದ ಮೈಲಾಪುರದ ಈ ಶಿವ ದೇವಾಲಯದ ಗರ್ಭಗುಡಿಯೊಳಗೆ ವಿದೇಶಿಯರಿಗೆ ಮತ್ತು ಹಿಂದೂಯೇತರರಿಗೆ ಪ್ರವೇಶವಿಲ್ಲ. ಇಲ್ಲಿ ಶಿವನನ್ನು ಕಪಾಲೀಶ್ವರರ್ ಎಂದು ಪೂಜಿಸಲಾಗುತ್ತದೆ. ಶಿವನ ಪತ್ನಿ ಪಾರ್ವತಿಯನ್ನು ಕರ್ಪಗಂಬಲ್ ಎಂದು ಪೂಜಿಸಲಾಗುತ್ತದೆ.

ಒಡಿಶಾದ ಭುವನೇಶ್ವರದ ಲಿಂಗರಾಜ ದೇವಸ್ಥಾನ

ಭುವನೇಶ್ವರದಲ್ಲಿರುವ ಅತ್ಯಂತ ಪೂಜ್ಯನೀಯ ಧಾರ್ಮಿಕ ಮತ್ತು ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಲಿಂಗರಾಜ ದೇವಸ್ಥಾನವೂ ಒಂದು. ದೇವಾಲಯವನ್ನು ಟ್ರಸ್ಟ್ ಮತ್ತು ಭಾರತೀಯ ಪುರಾತತ್ವ ಇಲಾಖೆ ಎರಡೂ ಸೇರಿ ನಿರ್ವಹಿಸುತ್ತವೆ. ದೇವಾಲಯವು ದಿನಕ್ಕೆ ಸುಮಾರು 6,000 ಭಕ್ತರನ್ನು ಆಕರ್ಷಿಸುತ್ತಿದೆ. ವಿಶೇಷ ಹಬ್ಬ ಹರಿದಿನಗಳಲ್ಲಿ ಭಕ್ತರ ಸಂಖ್ಯೆ ಲಕ್ಷವೂ ದಾಟಲಿದೆ.

೧೧ನೇ ಶತಮಾನದ ಈ ದೇವಾಲಯಕ್ಕೆ 2012 ರಲ್ಲಿ ರಷ್ಯಾದ ಪ್ರವಾಸಿಗರು ಅನಧಿಕೃತವಾಗಿ ಪ್ರವೇಶಿಸಿ ಸಿಕ್ಕಿಬಿದ್ದ ನಂತರ ದೊಡ್ಡ ಹೈಡ್ರಾಮ ನಡೆಯಿತು. ಪುರೋಹಿತರು ದೇವಾಲಯ ಶುದ್ಧೀಕರಣ ನಡೆಸಿದ್ದರಿಂದ ನಾಲ್ಕು ಗಂಟೆಗಳ ಕಾಲ ಎಲ್ಲಾ ವಿಧಿವಿಧಾನಗಳನ್ನು ನಿಲ್ಲಿಸಲಾಗಿತ್ತು.

ನಿಯಮ ಉಲ್ಲಂಘಿಸಿದ್ದಕ್ಕಾಗಿ ಪ್ರವಾಸಿಗರಿಗೆ ದಂಡ ವಿಧಿಸಲಾಯಿತು. ಅದೇ ಸಮಯದಲ್ಲಿ ದೇವರಿಗೆ ಸಿದ್ಧಪಡಿಸಿದ್ದ 50,000 ರೂ.ಗಿಂತ ಹೆಚ್ಚು ಮೌಲ್ಯದ ಪ್ರಸಾದವನ್ನೂ ನಾಶಪಡಿಸಲಾಗಿತ್ತು.

ತಮಿಳುನಾಡಿನ ಕಾಮಾಕ್ಷಿ ಅಮ್ಮನ ದೇವಸ್ಥಾನ

ಕಾಂಚಿಪುರಂನಲ್ಲಿರುವ ಕಾಮಾಕ್ಷಿ ಅಮ್ಮನ ದೇವಾಲಯದಲ್ಲಿ ಹಿಂದೂಯೇತರರ ಪ್ರವೇಶ ನಿರ್ಬಂಧಿಸಲಾಗಿದೆ. ಪಾರ್ವತಿ ದೇವಿಯ ರೂಪವಾದ ಕಾಮಾಕ್ಷಿ ಅಮ್ಮನಿಗೆ ಸಮರ್ಪಿತವಾಗಿರುವ ಈ ದೇವಾಲಯದ ಗರ್ಭಗುಡಿಯು "ಆದಿವರಾಹ ಪೆರುಮಾಳ್" ಎಂಬ ದೇವರನ್ನು ಹೊಂದಿದೆ. ಕಾಮಾಕ್ಷಿ ದೇವಸ್ಥಾನವು ಕಂಚಿ ಕಾಮಕೋಟಿ ಪೀಠ ಮತ್ತು ಶಂಕರಾಚಾರ್ಯರೊಂದಿಗೆ ನಿಕಟ ಸಂಬಂಧ ಹೊಂದಿದೆ.

ತಮಿಳುನಾಡಿನ ಅರುಲ್ಮಿಗು ದಂಡಾಯುತಪಾಣಿ ಸ್ವಾಮಿ ದೇವಸ್ಥಾನ

ಅರುಲ್ಮಿಗು ದಂಡಾಯುತಪಾಣಿ ದೇವಾಲಯದಲ್ಲೂ ಹಿಂದೂಯೇತರರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಆದರೆ, ಇತ್ತೀಚೆಗೆ ಮದ್ರಾಸ್ ಹೈಕೋರ್ಟ್ ದೇವಾಲಯಗಳ ಪ್ರವೇಶದ್ವಾರ, ದೇವಾಲಯದ ಆವರಣದೊಳಗಿನ ಪ್ರಮುಖ ಸ್ಥಳ ಧ್ವಜಸ್ತಂಭದವರೆಗೆ ಮಾತ್ರ ಹಿಂದೂಯೇತರರಿಗೆ ಪ್ರವೇಶ ನೀಬಹುದು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ದೇವರ ದರ್ಶನ ಪಡೆಯಲು ಇಚ್ಛಿಸುವ ಹಿಂದೂಯೇತರರು ತನಗೆ ದೇವರಲ್ಲಿ ನಂಬಿಕೆಯಿದೆ. ಹಿಂದೂ ಧರ್ಮ, ದೇವಸ್ಥಾನದ ಪದ್ಧತಿ ಮತ್ತು ಆಚರಣೆಗಳನ್ನು ಅನುಸರಿಸುವ ಭರವಸೆ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.

Read More
Next Story