ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ: ಗಾಂಧೀಜಿ ಚಿತ್ರದ ಜತೆ ಡಾ. ಅಂಬೇಡ್ಕರ್ ಭಾವಚಿತ್ರ ಕಡ್ಡಾಯ
ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮತ್ತು ಶಾಲಾ ಕಾಲೇಜುಗಳಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಭಾವಚಿತ್ರದ ಜತೆಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಇಡಲು ಸೂಚಿಸಲು ಸರ್ಕಾರ ನಿರ್ಧರಿಸಿದೆ.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಜನವರಿ-26ರ ಗಣರಾಜ್ಯೋತ್ಸವ ದಿನದೊಂದಿಗೆ ಆಗಸ್ಟ್-15ರ ಸ್ವಾತಂತ್ರ್ಯ ದಿನಾಚರಣೆಯಂದು ಕೂಡ ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳು, ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ಹಾಗೂ ಶಾಲಾ ಕಾಲೇಜು ಸೇರಿದಂತೆ ಸಕಾರದ ವತಿಯಿಂದ ನಡೆಯುವ ಎಲ್ಲಾ ಸಮಾರಂಭಗಳಲ್ಲಿ ಗಾಂಧೀಜಿಯವರ ಭಾವಚಿತ್ರದೊಂದಿಗೆ ಸಂವಿಧಾನದ ಪಿತಾಮಹ ಅಂಬೇಡ್ಕರ್ ಭಾವಚಿತ್ರವನ್ನು ಸಹ ಕಡ್ಡಾಯವಾಗಿ ಇಡಲು ಸೂಚಿಸಲು ಸಚಿವ ಸಂಪುಟ ನಿರ್ಧರಿಸಿದೆ.
ಹಾಗೂ ನವೆಂಬರ್-26ರ ಸಂವಿಧಾನದ ದಿನಾಚರಣೆ ಸಂದರ್ಭದಲ್ಲಿ ಮೇಲ್ಕಂಡ ಎಲ್ಲಾ ಸಂಸ್ಥೆಗಳು, ಶಾಲಾ ಕಾಲೇಜು ಹಾಗೂ ಸರ್ಕಾರಿ ಕಛೇರಿಗಳಲ್ಲಿ ಭಾರತ ರತ್ನ ಡಾ|| ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಇರಿಸಲು ಸಚಿವ ಸಂಪುಟ ನಿರ್ಧರಿಸಿದೆ.