ಸಾರಿಗೆ ಮುಷ್ಕರ ನಡೆಸಿದರೆ ಪರ್ಯಾಯ ವ್ಯವಸ್ಥೆ ಸಿದ್ಧ: ಸಚಿವ ರಾಮಲಿಂಗಾರೆಡ್ಡಿ
x

ಸಾರಿಗೆ ಮುಷ್ಕರ ನಡೆಸಿದರೆ ಪರ್ಯಾಯ ವ್ಯವಸ್ಥೆ ಸಿದ್ಧ: ಸಚಿವ ರಾಮಲಿಂಗಾರೆಡ್ಡಿ

ಮುಷ್ಕರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದ್ದು, ಅದರ ವಿಚಾರಣೆ ಹೈಕೋರ್ಟ್​​ನಲ್ಲಿ ನಡೆದಿದೆ. "ಹೈಕೋರ್ಟ್ ಈಗ ಎರಡು ದಿನಗಳ ಕಾಲ ಮುಷ್ಕರ ನಡೆಸದಂತೆ ಸೂಚನೆ ನೀಡಿದೆ.


ರಾಜ್ಯ ಸಾರಿಗೆ ನಿಗಮಗಳ ನೌಕರರು ಮಂಗಳವಾರದಿಂದ (ಆಗಸ್ಟ್ 5) ನಡೆಸಲು ಉದ್ದೇಶಿಸಿದ್ದ ಮುಷ್ಕರಕ್ಕೆ ಕರ್ನಾಟಕ ಹೈಕೋರ್ಟ್ ಎರಡು ದಿನಗಳ ಕಾಲ ತಡೆ ನೀಡಿದೆ. ಈ ಮೂಲಕ ಸಾರ್ವಜನಿಕರಿಗೆ ತಾತ್ಕಾಲಿಕ ಸಮಾಧಾನ ಸಿಕ್ಕಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಸಭೆ ವಿಫಲವಾದರೂ, ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನೌಕರರು ಮುಷ್ಕರ ನಡೆಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸೋಮವಾರ ನಡೆದ ಸಭೆಯ ನಂತರ ಮಾತನಾಡಿದ ಅವರು, "ಸಾರಿಗೆ ನೌಕರರ ಪ್ರಮುಖ ಬೇಡಿಕೆಯಾದ 38 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ಪಾವತಿ ಕುರಿತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಜುಲೈ ತಿಂಗಳಲ್ಲೇ ಸಭೆ ನಡೆಸಲಾಗಿತ್ತು. ಮುಖ್ಯಮಂತ್ರಿಗಳ ಭರವಸೆಯಂತೆ ನಾವು 14 ತಿಂಗಳ ಬಾಕಿಯನ್ನು ಪಾವತಿಸಲು ಸಿದ್ಧರಿದ್ದೆವು. ಆದರೆ, ಸಂಘಟನೆಗಳು 38 ತಿಂಗಳ ಸಂಪೂರ್ಣ ಹಿಂಬಾಕಿಗಾಗಿ ಪಟ್ಟು ಹಿಡಿದಿದ್ದರಿಂದ ಮಾತುಕತೆ ವಿಫಲವಾಯಿತು," ಎಂದು ವಿವರಿಸಿದರು.

ಮುಷ್ಕರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದ್ದು, ಅದರ ವಿಚಾರಣೆ ಹೈಕೋರ್ಟ್​​ನಲ್ಲಿ ನಡೆದಿದೆ. "ಹೈಕೋರ್ಟ್ ಈಗ ಎರಡು ದಿನಗಳ ಕಾಲ ಮುಷ್ಕರ ನಡೆಸದಂತೆ ಸೂಚನೆ ನೀಡಿದೆ. ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ನ್ಯಾಯಾಲಯದ ಆದೇಶವಿರುವುದರಿಂದ, ಅವರು ಮುಷ್ಕರ ನಡೆಸಲು ಬರುವುದಿಲ್ಲ," ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಒಂದು ವೇಳೆ ಅವರು ನ್ಯಾಯಾಲಯದ ಆದೇಶವನ್ನು ಮೀರಿ ಮುಷ್ಕರ ನಡೆಸಿದರೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲು ನಾವು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಸಚಿವರು ಎಚ್ಚರಿಸಿದರು. ಅಲ್ಲದೆ, "ಸಾರಿಗೆ ನೌಕರರಲ್ಲಿ ಎರಡು ಬಣಗಳಿದ್ದು, ಒಂದು ಬಣವು ಮುಷ್ಕರದಲ್ಲಿ ಭಾಗವಹಿಸುತ್ತಿಲ್ಲ, ಅವರು ಕೇವಲ ಧರಣಿ ನಡೆಸುತ್ತಿದ್ದಾರೆ," ಎಂದು ಸಚಿವರು ಸ್ಪಷ್ಟಪಡಿಸಿದರು.

Read More
Next Story