
ಪ್ರಧಾನಿ ಮೋದಿ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು ಅಭಿವೃದ್ಧಿಗೆ 1.50 ಲಕ್ಷ ಕೋಟಿ ರೂಪಾಯಿ ಕೊಡಿ : ಮೋದಿಗೆ ಡಿ.ಕೆ. ಶಿವಕುಮಾರ್ ಮನವಿ
ಬೆಂಗಳೂರು ನಗರವು ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಇಲ್ಲಿನ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯಗಳನ್ನು ಕಲ್ಪಿಸುವುದು ಅತ್ಯಂತ ಅವಶ್ಯಕ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ 1.50 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಅನುದಾನವನ್ನು ಒದಗಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ. ಭಾನುವಾರ ನಡೆದ ಮೆಟ್ರೋ ಹಳದಿ ಮಾರ್ಗದ ಉದ್ಘಾಟನಾ ಸಮಾರಂಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಈ ಮನವಿ ಪತ್ರವನ್ನು ಪ್ರಧಾನಿಗೆ ನೇರವಾಗಿ ಹಸ್ತಾಂತರಿಸಿದರು.
ಬೆಂಗಳೂರು ನಗರವು ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಇಲ್ಲಿನ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯಗಳನ್ನು ಕಲ್ಪಿಸುವುದು ಅತ್ಯಂತ ಅವಶ್ಯಕ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕರ್ನಾಟಕವು ದೇಶಕ್ಕೆ ವಾರ್ಷಿಕವಾಗಿ ಸುಮಾರು 4.50 ಲಕ್ಷ ಕೋಟಿ ರೂಪಾಯಿ ತೆರಿಗೆ ಪಾವತಿಸುತ್ತಿರುವ ಹಿನ್ನೆಲೆಯಲ್ಲಿ, ನಗರದ ಪ್ರಮುಖ ಯೋಜನೆಗಳಿಗೆ ಕೇಂದ್ರದ ಬೆಂಬಲ ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಬೃಹತ್ ಅನುದಾನವನ್ನು ಪ್ರಮುಖವಾಗಿ ಟನಲ್ ರಸ್ತೆ, ಎಲಿವೇಟೆಡ್ ಕಾರಿಡಾರ್‌ಗಳು, ಪೆರಿಫೆರಲ್ ವರ್ತುಲ ರಸ್ತೆ, ಮತ್ತು ಡಬಲ್ ಡೆಕ್ಕರ್ ಕಾರಿಡಾರ್‌ಗಳ ನಿರ್ಮಾಣಕ್ಕಾಗಿ ಬಳಸಲಾಗುವುದು. ಮನವಿಯಲ್ಲಿ, ಈ ಯೋಜನೆಗಳಿಗೆ ಅಗತ್ಯವಿರುವ ಅಂದಾಜು ವೆಚ್ಚಗಳನ್ನೂ ವಿವರವಾಗಿ ನೀಡಲಾಗಿದೆ. ಜೊತೆಗೆ, ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು 'ನಮೋ ಭಾರತ್' ಮಾದರಿಯ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (RRTS) ಜಾರಿಗೊಳಿಸುವಂತೆ ಮತ್ತು ಅದನ್ನು ಸುತ್ತಮುತ್ತಲಿನ ಪಟ್ಟಣಗಳಿಗೆ ವಿಸ್ತರಿಸುವಂತೆಯೂ ಕೋರಲಾಗಿದೆ.
ನಗರದಲ್ಲಿ ದಿನಂಪ್ರತಿ ಉತ್ಪತ್ತಿಯಾಗುವ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ಸಿಎನ್‌ಜಿ ಮತ್ತು ಗೊಬ್ಬರ ಘಟಕಗಳನ್ನು ಸ್ಥಾಪಿಸಲು ಮತ್ತು ಹೆಚ್ಚುತ್ತಿರುವ ಜನಸಂಖ್ಯೆಗೆ ಕುಡಿಯುವ ನೀರಿನ ಪೂರೈಕೆಗಾಗಿ 6ನೇ ಹಂತದ ಕಾವೇರಿ ನೀರು ಯೋಜನೆಗೆ ಅನುದಾನ ನೀಡುವಂತೆಯೂ ಕೋರಲಾಗಿದೆ. ಈ ಎಲ್ಲ ಯೋಜನೆಗಳು ಬೆಂಗಳೂರನ್ನು ಮುಂದಿನ ದಿನಗಳಲ್ಲಿ ವಿಶ್ವದರ್ಜೆಯ ಮಹಾನಗರವನ್ನಾಗಿ ರೂಪಿಸಲು ಸಹಕಾರಿ ಎಂದು ಡಿ.ಕೆ. ಶಿವಕುಮಾರ್ ಪತ್ರದಲ್ಲಿ ವಿವರಿಸಿದ್ದಾರೆ.