Alleged vote rigging Former MLA Subhash Guttedars house raided, half-burnt ballot papers found in river
x

ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್‌ ಮನೆ ಮೇಲೆ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.  

ಮತಕಳವು ಆರೋಪ| ಬಿಜೆಪಿ ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್‌ ಮನೆ ಮೇಲೆ ದಾಳಿ, ಅರೆಬೆಂದ ಮತ ಪತ್ರ ಪತ್ತೆ

ಆಳಂದ ಪಟ್ಟಣದ ಸೊಲ್ಲಾಪುರ ಮಾರ್ಗದ ರಾಜ್ಯ ಹೆದ್ದಾರಿಯ ಶಖಾಪುರ ಸೇತುವೆ ಬಳಿ ಮತಪಟ್ಟಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದ ಸ್ಥಳಕ್ಕೆ ಎಸ್‌ಐಟಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Click the Play button to hear this message in audio format

ಕಲಬುರಗಿ ಜಿಲ್ಲೆ ಆಳಂದ ಮತಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಕಳವು ಪ್ರಕರಣ ಕುರಿತು ತನಿಖೆ ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡವು ಬಿಜೆಪಿ ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್ ಮನೆಯ ಮೇಲೆ ದಾಳಿ ನಡೆಸಿದ್ದು, ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಗುತ್ತೇದಾರ್‌ಗೆ ಸೇರಿದ ಮನೆ, ಬಾರ್‌ ಮತ್ತು ರೆಸ್ಟೋರೆಂಟ್‌ , ಪುತ್ರರಾದ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್‌ ಹಾಗೂ ಮತ್ತೊಬ್ಬ ಪುತ್ರ ಉದ್ಯಮಿ ಸಂತೋಷ್‌ ಗುತ್ತೇದಾರ್‌ ನಿವಾಸಗಳ ಮೇಲೂ ದಾಳಿ ನಡೆಸಲಾಗಿದೆ.

ಮಾಜಿ ಶಾಸಕರ ಆಳಂದದ ಮನೆ ಸಮೀಪ ಎರಡು ಸ್ಥಳಗಳಲ್ಲಿ ಮತಪತ್ರ ಹಾಗೂ ವೋಟರ್‌ ಐಡಿ ಕಾರ್ಡ್‌ಗಳನ್ನು ರಾಶಿ ಹಾಕಿ ಬೆಂಕಿ ಹಚ್ಚಲಾಗಿದ್ದು, ಮತಪತ್ರ ಸೇರಿ ಹಲವು ಕಾಗದ ಪತ್ರಗಳಿಗೆ ಬೆಂಕಿ ಬಿದ್ದಿರುವ ವಿಡಿಯೋ ವೈರಲ್‌ ಆಗಿದೆ. ಆಳಂದ ಪಟ್ಟಣದ ಸೊಲ್ಲಾಪುರ ಮಾರ್ಗದ ರಾಜ್ಯ ಹೆದ್ದಾರಿಯ ಶಖಾಪುರ ಸೇತುವೆ ಬಳಿ ಮತಪಟ್ಟಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದ ಸ್ಥಳಕ್ಕೆ ಎಸ್‌ಐಟಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತಪತ್ರ ಹಾಗೂ ವೋಟರ್‌ ಐಡಿ ಸುಟ್ಟು ಹಾಕಿರುವ ಪ್ರಕರಣ ಸಾಕ್ಷ್ಯ ನಾಶಪಡಿಸುವ ಪ್ರಯತ್ನವಾಗಿದೆ ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ದಾಖಲೆಗಳನ್ನು ಮಿನಿ ಗೂಡ್ಸ್‌ ವಾಹನದಲ್ಲಿ ಹೊರವಲಯಕ್ಕೆ ಸಾಗಿಸಿ ನಂತರ ಅವುಗಳನ್ನು ರಾತ್ರಿ ವೇಳೆ ಸುಟ್ಟು ನೀರಿಗೆ ಎಸೆದಿರಬಹುದು ಎಂದು ಮೂಲಗಳು ತಿಳಿಸಿವೆ.

ಏನಿದು ಪ್ರಕರಣ ?

ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿನ 256 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಬರುವ 6670 ಮತದಾರರನ್ನು ಮತದಾರರ ಪಟ್ಟಿಯಿಂದ ಅನಧಿಕೃತವಾಗಿ ಕೈಬಿಡಲು ಪ್ರಯತ್ನಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಶಾಸಕ ಬಿ.ಆರ್.ಪಾಟೀಲ್ ದೂರು ಸಲ್ಲಿಸಿದ್ದರು.

ಚುನಾವಣಾ ಆಯೋಗವು ಪರಿಶೀಲಿಸಿದಾಗ ಒಟ್ಟು 6018 ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡುವಂತೆ ಅರ್ಜಿಗಳು ಸ್ವೀಕೃತವಾಗಿದ್ದವು. ಅವುಗಳಲ್ಲಿ 24 ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದು ಕಂಡು ಬಂದಿತ್ತು.

ಎಸ್‌ಐಟಿ ರಚಿಸಿದ್ದ ಸರ್ಕಾರ

ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವುದರ ಕುರಿತು 5994 ಅರ್ಜಿಗಳನ್ನು ಪರಿಶೀಲಿಸಿದಾಗ ಕೆಲವು ವ್ಯಕ್ತಿಗಳು ಯಾವುದೋ ದುರುದ್ದೇಶದಿಂದ ವಿವಿಧ ಮೊಬೈಲ್ ಸಂಖ್ಯೆಗಳನ್ನು ಉಪಯೋಗಿಸಿ, ಮೂಲ ಮತದಾರರ ಗಮನಕ್ಕೆ ಬಾರದಂತೆ ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಡಲು ಅರ್ಜಿ ಸಲ್ಲಿಸಿರುವುದು ಕಂಡು ಬಂದಿತ್ತು. ಈ ಬಗ್ಗೆ ಕೆಎಎಸ್‌ ಅಧಿಕಾರಿ ಮಮತಾಕುಮಾರಿ ದೂರು ನೀಡಿದ್ದರು. ಅವರ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಪ್ರಕರಣದ ಸಮಗ್ರ ತನಿಖೆಯನ್ನು ಕೈಗೊಳ್ಳಲು ಸಿಐಡಿಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡುವುದು ಸೂಕ್ತ ಎಂದು ಪರಿಗಣಿಸಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಸರ್ಕಾರ ಹೇಳಿತ್ತು.

ಆರೋಪ ನಿರಾಕರಿಸಿದ್ದ ಆಯೋಗ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಚುನಾವಣಾ ಆಯೋಗದ ಮಾಜಿ ಮುಖ್ಯ ಆಯುಕ್ತ ಎನ್.ಗೋಪಾಲಸ್ವಾಮಿ, ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರನ್ನು ಅಳಿಸಿಹಾಕಲಾಗಿದೆ ಎಂಬುದು ಸುಳ್ಳು. ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕೈಬಿಡಬೇಕೆಂದು ಒಟ್ಟು 6,015 ಮಂದಿ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಪೈಕಿ ಕೇವಲ 24 ಮಂದಿಯ ಹೆಸರನ್ನು ಮಾತ್ರವೇ ಕೈಬಿಡಲಾಗಿದೆ ಎಂದು ಹೇಳಿದ್ದರು.

ಮತದಾರರ ಅನುಕೂಲಕ್ಕಾಗಿ ಆಯೋಗವು ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ. ಮತದಾರರು ಮೂರು ರೀತಿಯ ಕಾರಣಗಳಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಸರು ಸೇರ್ಪಡೆ, ಹೆಸರು ಕೈಬಿಡಲು ಅಥವಾ ಗುರುತಿನ ಚೀಟಿಯಲ್ಲಿ ಯಾವುದೇ ತಪ್ಪುಗಳಿದ್ದರೆ ಅವುಗಳನ್ನು ಸರಿಪಡಿಸಲು ಅರ್ಜಿ ಸಲ್ಲಿಸಿ ಮನವಿ ಮಾಡಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದ್ದರು.

Read More
Next Story