ಲೋಕಾಯುಕ್ತ ಎಡಿಜಿಪಿಗೆ ಬೆದರಿಕೆ ಆರೋಪ | ಕೇಂದ್ರ ಸಚಿವ ಕುಮಾರಸ್ವಾಮಿ, ನಿಖಿಲ್‌ ವಿರುದ್ಧ ಎಫ್‌ಐಆರ್‌
x

ಲೋಕಾಯುಕ್ತ ಎಡಿಜಿಪಿಗೆ ಬೆದರಿಕೆ ಆರೋಪ | ಕೇಂದ್ರ ಸಚಿವ ಕುಮಾರಸ್ವಾಮಿ, ನಿಖಿಲ್‌ ವಿರುದ್ಧ ಎಫ್‌ಐಆರ್‌

ಎಡಿಜಿಪಿ ಬರೆದಿದ್ದ ಪತ್ರದ ಕುರಿತು ಪತ್ರಿಕಾಗೋಷ್ಠಿ ನಡೆಸಿದ್ದ ಕೇಂದ್ರ ಸಚಿವ ಕುಮಾರ ಸ್ವಾಮಿ ಅವರು ಚಂದ್ರಶೇಖರ್‌ ವೈಯಕ್ತಿಕ ಜೀವನ, ಹಣಕಾಸು ವ್ಯವಹಾರ ಸೇರಿದಂತೆ ಇನ್ನಿತರ ಆರೋಪಗಳನ್ನು ಮಾಡಿದ್ದರು.


ಲೋಕಾಯುಕ್ತ ವಿಶೇಷ ತನಿಖಾ ತಂಡದ ಎಡಿಜಿಪಿ ಎಂ. ಚಂದ್ರಶೇಖರ್ ಅವರು ನೀಡಿದ ದೂರಿನ ಆಧಾರದ ಮೇಲೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 224ರಡಿ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಫ್‌ಐಆರ್‌ನಲ್ಲಿಎಚ್‌.ಡಿ ಕುಮಾರಸ್ವಾಮಿ ಆರೋಪಿ ನಂಬರ್ 1 ಆಗಿದ್ದು, ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಎರಡನೇ ಆರೋಪಿಯಾಗಿದ್ದಾರೆ. ಜೊತೆಗೆ ಎಡಿಜಿಪಿ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿ ದೂರು ನೀಡಿದ್ದ ಜೆಡಿಎಸ್‌ ಶಾಸಕ ಸುರೇಶ್ ಬಾಬು ಅವರನ್ನು ಮೂರನೇ ಆರೋಪಿಯನ್ನಾಗಿ ಮಾಡಲಾಗಿದೆ.

ಮೂವರೂ ಆರೋಪಿಗಳು ತಮ್ಮ ವಿರುದ್ಧ ದುರುದ್ದೇಶ ಪೂರಿತ ಆರೋಪ ಮಾಡಿದ್ದಾರೆ. ಜೊತೆಗೆ ಬೆದರಿಕೆ ಹಾಕಿದ್ದಾರೆ ಎಂದು ಎಡಿಜಿಪಿ ಚಂದ್ರಶೇಖರ್ ಅವರು 42ನೇ ಎಸಿಎಂಎಂ ನ್ಯಾಯಾಲಯಕ್ಕೆ ದೂರು ನೀಡಿದ್ದರು. ನ್ಯಾಯಾಲಯದ ಆದೇಶದಂತೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಮೂವರ ವಿರುದ್ಧ ಸಂಜಯನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಗಣಿಗುತ್ತಿಗೆ ಪ್ರಕರಣದಲ್ಲಿ ಭಾಗಿಯಾದ ಆರೋಪಕ್ಕೆ ಸಂಬಂಧಿಸಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ಲೋಕಾಯುಕ್ತ ಎಸ್‌ಐಟಿ ಅಧಿಕಾರಿಗಳು ರಾಜ್ಯಪಾಲರನ್ನು ಕೋರಿದ್ದರು. ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಏಳು ತಿಂಗಳಾದರೂ ರಾಜ್ಯಪಾಲರ ಸಚಿವಾಲಯದ ವಿಲೇವಾರಿ ಮಾಡಿರಲಿಲ್ಲ. ಈ ಸಂಬಂಧ ಮಾಧ್ಯಮಗಳಲ್ಲಿ ವರದಿ ಬಂದಿತ್ತು.

ಅನುಮತಿ ಕೋರಿದ್ದ ಗೌಪ್ಯ ಮಾಹಿತಿಯು ಮಾಧ್ಯಮಗಳಿಗೆ ಸೋರಿಕೆಯಾದ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯಪಾಲರು ಮುಖ್ಯಕಾರ್ಯದರ್ಶಿ ಅವರಿಗೆ ನಿರ್ದೇಶಿಸಿದ್ದರು. ಲೋಕಾಯುಕ್ತ ಡಿಜಿಪಿಗೆ ಮುಖ್ಯಕಾಯದರ್ಶಿ ಪತ್ರ ಬರೆದು ವಿವರಣೆ ಕೇಳಿದ್ದರು. ಆಗ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್‌ ಅವರು ಮಾಹಿತಿ ಸೋರಿಕೆಯಲ್ಲಿ ರಾಜಭವನದ ಸಚಿವಾಲಯದ ಕೈವಾಡದ ಕುರಿತು ವಿಚಾರಣೆ ನಡೆಸಲು ಅನುಮತಿ ನೀಡುವಂತೆ ಲೋಕಾಯುಕ್ತ ಐಜಿಪಿಗೆ ಪತ್ರ ಬರೆದಿದ್ದರು.

ಎಡಿಜಿಪಿ ಬರೆದಿದ್ದ ಪತ್ರದ ಕುರಿತು ಪತ್ರಿಕಾಗೋಷ್ಠಿ ನಡೆಸಿದ್ದ ಕೇಂದ್ರ ಸಚಿವ ಕುಮಾರ ಸ್ವಾಮಿ ಅವರು ಚಂದ್ರಶೇಖರ್‌ ವೈಯಕ್ತಿಕ ಜೀವನ, ಹಣಕಾಸು ವ್ಯವಹಾರ ಸೇರಿದಂತೆ ಇನ್ನಿತರ ಆರೋಪಗಳನ್ನು ಮಾಡಿದ್ದರು.

Read More
Next Story