ಕೆಐಎಡಿಬಿ ಭೂಸ್ವಾಧೀನ ಅಕ್ರಮ ಆರೋಪ | ಲೋಕಾಯುಕ್ತಕ್ಕೆ ದೂರು
x

ಕೆಐಎಡಿಬಿ ಭೂಸ್ವಾಧೀನ ಅಕ್ರಮ ಆರೋಪ | ಲೋಕಾಯುಕ್ತಕ್ಕೆ ದೂರು

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯಲ್ಲಿ ಸರ್ಕಾರಿ ಜಮೀನನ್ನು ಬೇರೆಯವರ ಹೆಸರಿನಲ್ಲಿ ತೋರಿಸಿ ಅಲ್ಲಿನ ವಿಶೇಷ ಭೂಸ್ವಾಧೀನಾಧಿಕಾರಿ ಬಾಳಪ್ಪ ಹಂದಿಗುಂದ ಅವರು ಕೋಟ್ಯಂತರ ರೂ. ಹಗರಣ ನಡೆಸಿದ್ದಾರೆ ಎಂದು ಸಿಟಿಜನ್‌ ರೈಟ್ಸ್‌ ಫೌಂಡೇಷನ್‌ ಆರೋಪಿಸಿದೆ.


ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಬಹುಕೋಟಿ ಹಗರಣ ನಡೆದಿದೆ ಎಂದು ಆರೋಪಿಸಿ ಬೆಂಗಳೂರಿನ ʼಸಿಟಿಜನ್ ರೈಟ್ಸ್ ಫೌಂಡೇಷನ್ʼ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯಲ್ಲಿ ಸರ್ಕಾರಿ ಜಮೀನನ್ನು ಬೇರೆಯವರ ಹೆಸರಿನಲ್ಲಿ ತೋರಿಸಿ ಅಲ್ಲಿನ ವಿಶೇಷ ಭೂಸ್ವಾಧೀನಾಧಿಕಾರಿ ಬಾಳಪ್ಪ ಹಂದಿಗುಂದ ಅವರು ಕೋಟ್ಯಂತರ ರೂ. ಹಗರಣ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದೆ.

ಕುಂದಾಣ ಹೋಬಳಿಯ ಚಪ್ಪರದಳ್ಳಿ ಸರ್ವೇ 7 ರಲ್ಲಿರುವ ಸರ್ಕಾರಿ ಫಡಾ ಜಮೀನಿನಲ್ಲಿ ಅನಧಿಕೃತವಾಗಿದ್ದವರ ಹೆಸರಿಗೆ ಕೋಟ್ಯಾಂತರ ರೂ. ಹಣ ಸಂದಾಯ ಮಾಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರಿಗೆ ದೂರು ಸಲ್ಲಿಸಿದರೂ ಕ್ರಮ ಜರುಗಿಸಿಲ್ಲ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದೆ ಎಂದು ಸಿಟಿಜನ್ ರೈಟ್ಸ್ ಫೌಂಡೇಷನ್ ಅಧ್ಯಕ್ಷ ಕೆ.ಎ.ಪಾಲ್ ಅವರು ತಿಳಿಸಿದ್ದಾರೆ.

ಏನಿದು ಪ್ರಕರಣ?

ಚಪ್ಪರದಹಳ್ಳಿ ಗ್ರಾಮದ ಸರ್ವೇ ನಂ. 7 ರಲ್ಲಿ ಒಟ್ಟು 43 ಎಕರೆ 38 ಗುಂಟೆ ಸರ್ಕಾರಿ ಜಮೀನಿದೆ. ಈ ಪೈಕಿ 16 ಎಕರೆ 32 ಗುಂಟೆ ಜಮೀನಿನಲ್ಲಿ ಚಪ್ಪರದಳ್ಳಿ ಗ್ರಾಮದ ಮುನಿಯಪ್ಪ, ಆಂಜಿನಪ್ಪ, ದೊಡ್ಡವೆಂಕಟಪ್ಪ, ಮುನಿತಾಯಪ್ಪ ಹಾಗೂ ಇತರರು ಹಲವು ವರ್ಷಗಳಿಂದ ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದರು. ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದ ರೈತರಿಗೆ 1984 ರ ಆಗಸ್ಟ್ 21 ರಂದು ಅಂದಿನ ದೇವನಹಳ್ಳಿ ತಹಶೀಲ್ದಾರ್ ಅವರು ತೆರವು ನೋಟಿಸ್ ಜಾರಿ ಮಾಡಿದ್ದರು.

ಆ ನಂತರದಲ್ಲಿ ಜಮೀನನ್ನು ಸರ್ಕಾರಿ ಫಡಾ ಎಂದು ಘೋಷಿಸಲಾಗಿತ್ತು. ಈಗ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಬಾಳಪ್ಪ ಹಂದಿಗುಂದ ಅವರು ಸರ್ಕಾರಿ ಫಡಾ ಜಾಗದಲ್ಲಿರುವವರಿಗೆ ಭೂ ಪರಿಹಾರ ನೀಡಿದ್ದು, ಅರ್ಹರಲ್ಲದವರಿಗೆ ಪರಿಹಾರ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಕೆಐಎಡಿಬಿ ವಿರುದ್ಧ ಆರೋಪ

ಸರ್ಕಾರದ ಸ್ವಾಧೀನದಲ್ಲಿರುವ ಜಮೀನನ್ನು ರೈತರ ಹೆಸರಲ್ಲಿ ಗುರುತಿಸಿ ಅದಕ್ಕೆ ಪರಿಹಾರ ನೀಡಲಾಗಿದೆ. ಚಪ್ಪರದಳ್ಳಿಯ ಸರ್ವೇ ನಂ.7 ರಲ್ಲಿ ಸಾಗುವಳಿ ಮಾಡುತ್ತಿರುವ ಮುನಿತಾಯಪ್ಪ ಹಾಗೂ ಇತರರು ಅನಧಿಕೃತ ಎಂದು 1984 ರಲ್ಲಿ ತಹಶೀಲ್ದಾರ್ ಕಚೇರಿಯಿಂದ ತೆರವು ನೋಟಿಸ್ ಜಾರಿಯಾಗಿದೆ. ಆದರೂ, ವಿಶೇಷ ಭೂಸ್ವಾಧೀನಾಧಿಕಾರಿ ಬಾಳಪ್ಪ ಹಂದಿಗುಂದ ಅವರು ತಾಯಪ್ಪ ಅವರಿದ್ದ 3 ಎಕರೆ 20 ಗುಂಟೆಗೆ 4.37 ಕೋಟಿ ಪರಿಹಾರ ಕೊಟ್ಟಿದ್ದಾರೆ. ಈ ಬಗ್ಗೆ ಸಿಟಿಜನ್ ರೈಟ್ಸ್ ಫೌಂಡೇಷನ್ 2024 ರ ಸೆ.೧೨ ರಂದು ಸಿಎಂ ಹಾಗೂ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರಿಗೆ ದೂರು ನೀಡಿತ್ತು. ಆದರೆ, ಸರ್ಕಾರ ದೂರನ್ನು ಗಂಭೀರವಾಗಿ ಪರಿಗಣಿಸದ ಕಾರಣ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.

ವಿಶೇಷಾಧಿಕಾರಿ ವರ್ಗಾವಣೆಗೆ ತಯಾರಿ-ತಡೆ

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಕುರಿತು ಸಿಟಿಜನ್ ರೈಟ್ಸ್ ಪೌಂಡೇಷನ್ ಲೋಕಾಯುಕ್ತರಿಗೆ ದೂರು ಸಲ್ಲಿಸುತ್ತಿದ್ದಂತೆ ಬಾಳಪ್ಪ ಹಂದಿಗುಂದ ಅವರ ವರ್ಗಾವಣೆಗೆ ಸರ್ಕಾರ ತಯಾರಿ ನಡೆಸಿತ್ತು. ಅಷ್ಟರಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಅಧಿಕಾರ ಪರ ನಿಂತು ವರ್ಗಾವಣೆ ತಡೆದಿದ್ದಾರೆ ಎಂದು ಕೆ.ಎ.ಪಾಲ್ ಆರೋಪಿಸಿದ್ದಾರೆ.

ಸಚಿವ ಎಂ.ಬಿ.ಪಾಟೀಲ ಅವರು ಸೆ.20 ರಂದು, ಮುಖ್ಯಮಂತ್ರಿ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಪತ್ರ ಬರೆದಿದ್ದಾರೆ.

"ಕೆಎಎಸ್ ಕಿರಿಯ ಶ್ರೇಣಿಯ ಬಾಳಪ್ಪ ಹಂದಿಗುಂದ ಅವರು ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ತ್ವರಿತವಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಇದರ ಪರಿಣಾಮ ದೇವನಹಳ್ಳಿಯಲ್ಲಿ ಫಾಕ್ಸ್ ಕಾನ್ ಕಂಪೆನಿ, ದೊಡ್ಡಬಳ್ಳಾಪುರದಲ್ಲಿ ಕ್ವಿನ್ ಸಿಟಿಗೆ ಅಗತ್ಯವಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ. ಎರಡೂ ತಾಲೂಕುಗಳಲ್ಲಿ ಕಂಪನಿಗಳ ಆರಂಭಕ್ಕೆ ಅಗತ್ಯ ಭೂಮಿ ಮಂಜೂರು ಮಾಡುವುದು ತುರ್ತಾಗಿದೆ. ಹಾಗಾಗಿ ಬಾಳಪ್ಪ ಹಂದಿಗುಂದ ಅವರನ್ನು ಸಾರ್ವಜನಿಕ, ಆಡಳಿತಾತ್ಮಕ ಹಾಗೂ ಅಭಿವೃದ್ಧಿ ನಿಟ್ಟಿನಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಮುಂದುವರಿಸಬೇಕು" ಎಂದು ಒತ್ತಡ ಹೇರಿದ್ದಾರೆ.

Read More
Next Story