ಬೆದರಿಕೆ, ಆಮಿಷ ಆರೋಪ: ಎಫ್‌ಐಆರ್‌ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ಡಿಕೆ ಶಿವಕುಮಾರ
x

ಬೆದರಿಕೆ, ಆಮಿಷ ಆರೋಪ: ಎಫ್‌ಐಆರ್‌ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ಡಿಕೆ ಶಿವಕುಮಾರ


ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಮತದಾರರಿಗೆ ಬೆದರಿಕೆ ಹಾಕಿರುವ ಮತ್ತು ಆಮಿಷವೊಡ್ಡಿರುವ ಆರೋಪದಲ್ಲಿ ತಮ್ಮ ವಿರುದ್ಧ ಬೆಂಗಳೂರಿನ ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿರುವುದನ್ನು ಪ್ರಶ್ನಿಸಿ ಡಿಸಿಎಂ ಡಿಕೆ ಶಿವಕುಮಾರ್ ಮಂಗಳವಾರ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಸಹೋದರ ಡಿಕೆ ಸುರೇಶ್ ಪರವಾಗಿ ರಾಜರಾಜೇಶ್ವರಿ ನಗರದ ಅಪಾರ್ಟ್​ಮೆಂಟೊಂದರಲ್ಲಿ ಮತಯಾಚನೆ ಮಾಡುವ ವೇಳೆ ಡಿಕೆ ಶಿವಕುಮಾರ್ ಅವರು ಮತದಾರರಿಗೆ ಬೆದರಿಕೆ ಹಾಕಿ ಅವರನ್ನು ಬ್ಲ್ಯಾಕ್​ಮೇಲ್ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಆ ಬಗ್ಗೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿತ್ತು.

ಡಿಕೆ ಶಿವಕುಮಾರ್ ವಿರುದ್ಧ ಲಂಚ ಮತ್ತು ಚುನಾವಣೆಯಲ್ಲಿ ಅನಗತ್ಯ ಪ್ರಭಾವ ಬಳಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು.

ರಾಜರಾಜೇಶ್ವರಿ ನಗರದ ಅಪಾರ್ಟ್​ಮೆಂಟೊಂದರಲ್ಲಿ ಮತಯಾಚನೆ ಮಾಡಲು ತೆರಳಿದ್ದ ಡಿಕೆ ಶಿವಕುಮಾರ್, ʻʻನಾನು ಇಲ್ಲಿಗೆ ಬ್ಯುಸಿನೆಸ್ ಡೀಲ್​ ಮಾಡಲು ಬಂದಿದ್ದೇನೆ. ನಿಮಗೆ ಅಪಾರ್ಟ್​​ಮೆಂಟ್ ಪಕ್ಕದ ಸಿಎ ಸೈಟ್ ಬೇಕೆಂದು ಕೇಳಿದ್ದೀರಿ. ನೀವು ನಮಗೆ ಮತ ಹಾಕಿದ 2-3 ತಿಂಗಳಲ್ಲಿ ನಿಮಗೆ ಹಸ್ತಾಂತರಿಸುವ ವ್ಯವಸ್ಥೆ ಮಾಡುತ್ತೇನೆʼʼ ಎಂದು ಆಮಿಷವೊಡ್ಡಿದ್ದರು ಎಂದು ಬಿಜೆಪಿ ಆರೋಪಿಸಿತ್ತು.

ʻʻಕಾವೇರಿ ನೀರು ಸಂಪರ್ಕ ದೊರೆಯದಿರುವುದು ನಿಮ್ಮ ಇನ್ನೊಂದು ಸಮಸ್ಯೆ. ಈ ಎರಡೂ ಸಮಸ್ಯೆಗಳನ್ನು ಬಗೆಹರಿಸಿಕೊಟ್ಟರೆ ನೀವೇನು ಕೊಡುತ್ತೀರಿ? ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಆಡಳಿತ, ಜಲ ಸಂಪನ್ಮೂಲ ಖಾತೆ ಎಲ್ಲವೂ ನನ್ನ ಕೈಯಲ್ಲೇ ಇದೆ. ಹೀಗಾಗಿ ನಾನೇ ಈ ಕೆಲಸವನ್ನು ನಿಮಗೆ ಮಾಡಿಕೊಡಬೇಕಾಗುತ್ತದೆʼʼ ಎಂದು ಡಿಕೆ ಶಿವಕುಮಾರ್ ಮತದಾರರನ್ನು ಉದ್ದೇಶಿಸಿ ಹೇಳಿರುವುದು ಎಂದು ವಿಡಿಯೋವೊಂದನ್ನು ಬಿಜೆಪಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡಿತ್ತು.

Read More
Next Story