ದೇವದೂತ ಬಂದ ನಂತರವೇ  ಸಮಸ್ಯೆ: ಮೋದಿ ಹೇಳಿಕೆಗೆ ಸಚಿವ ಮಹಾದೇವಪ್ಪ ವ್ಯಂಗ್ಯ
x

"ದೇವದೂತ" ಬಂದ ನಂತರವೇ ಸಮಸ್ಯೆ: ಮೋದಿ ಹೇಳಿಕೆಗೆ ಸಚಿವ ಮಹಾದೇವಪ್ಪ ವ್ಯಂಗ್ಯ


ಚುನಾವಣೆಗಾಗಿ ಎಲ್ಲ ಮಾರ್ಗಗಳನ್ನು ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಅವರು ತನ್ನನ್ನು ತಾನು ದೇವದೂತ ಎಂದು ಹೇಳಿಕೊಂಡಿರುವುದು ಹಾಸ್ಯಾಸ್ಪದ ಮತ್ತು ಅಷ್ಟೇ ಮೂಢನಂಬಿಕೆಯಿಂದ ಕೂಡಿದ ಸಂಗತಿಯಾಗಿದೆ. ಜನರಿಂದ ಭಗವಾನ್ ಎಂದು ಕರೆಸಿಕೊಂಡ ಗೌತಮ ಬುದ್ಧರೇ ನಾನು ಎಲ್ಲರಂತೆ ಸಾಮಾನ್ಯ ಎಂದಿರುವಾಗ ಪ್ರಧಾನಿಗಳು ಮೌಢ್ಯದ ಬಿತ್ತಲು ಮಾತನಾಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ದೇವರೇ ನನ್ನನ್ನು ಕಳುಹಿಸಿದ್ದಾನೆ ಎಂಬ ಹೇಳಿಕೆಗೆ ಸಚಿವ ಹೆಚ್​​. ಸಿ.ಮಹದೇವಪ್ಪ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ ಮಾಡಿರುವ ಅವರು, ʻʻದೇವದೂತ ಬಂದ ನಂತರವೇ ಈ ಎಲ್ಲ ಸಮಸ್ಯೆ ಶುರುವಾದವು. 72 ರೂಪಾಯಿ ಇದ್ದ ಪೆಟ್ರೋಲ್ ಬೆಲೆ 100 ರೂಪಾಯಿಗೆ ಏರಿತು. 60 ರೂಪಾಯಿ ಇದ್ದ ಡೀಸೆಲ್ 85 ರೂಪಾಯಿಗೆ ಏರಿಕೆಯಾಯಿತು. ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಭಾರಿ ಕುಸಿತ ಕಂಡಿತು. ಅಡುಗೆ ಸಿಲಿಂಡರ್ ಬೆಲೆ 400 ರಿಂದ 1,000 ರೂ.ಗೆ ಏರಿಕೆ ಕಂಡಿತು. ಪುಲ್ವಾಮ ದಾಳಿ ನಡೆದು ಸೈನಿಕರು ಸಾವನ್ನಪ್ಪುವಂತಾಯಿತುʼʼ ಎಂದು ವಾಗ್ದಾಳಿ ಮಾಡಿದ್ದಾರೆ.

ʻʻಭಾರತ ಜಾಗತಿಕ ಹಸಿವಿನ ಸೂಚ್ಯಂಕ 55 ರಿಂದ 102ನೇ ಸ್ಥಾನಕ್ಕೆ ಕುಸಿಯಿತು. ಜನ ಸಾಮಾನ್ಯರ ಕೊಳ್ಳುವ ಶಕ್ತಿಯೇ ಕ್ಷೀಣಿಸಿತು. ಕೊರೊನಾ ವೇಳೆ ಆಕ್ಸಿಜನ್ ಸಿಗದೆ ಲೆಕ್ಕವಿಲ್ಲದ ಸಾವು ನೋವುಗಳಾದವು. ಚೀನಾವು ಗಡಿಯಲ್ಲಿ ಭಾರತವನ್ನು ಆಕ್ರಮಿಸಿ ಗ್ರಾಮಗಳನ್ನು ನಿರ್ಮಿಸಿತು. ಬಾಬಾ ಸಾಹೇಬರು ರಚಿಸಿದ ಸಂವಿಧಾನಕ್ಕೆ ಅಪಾಯ ಒದಗಿತು. ಜನರಿಗೆ ನ್ಯಾಯವಾಗಿಯೇ ನೀಡಬೇಕಿದ್ದ ಬರ ಪರಿಹಾರವನ್ನು, ನ್ಯಾಯಾಲಯದ ಮೆಟ್ಟಿಲೇರಿ ಪರಿಹಾರ ಪಡೆಯುವಂತೆ ಆಯಿತು. ಮಣಿಪುರದಂತಹ ರಾಜಕೀಯ ಅರಾಜಕತೆ, ಹಿಂಸೆ ನಡೆಯಿತು. ದೇಶದ ಸಾಲವು 55 ಲಕ್ಷ ಕೋಟಿಗಳಿಂದ 185 ಲಕ್ಷ ಕೋಟಿಗೆ ಏರಿತು. ದೇವದೂತ ಬಂದ ನಂತರ ಈ ಎಲ್ಲ ಸಮಸ್ಯೆಗಳು ಶುರುವಾದವುʼʼ ಎಂದು ಹೆಚ್‌ಸಿ ಮಹದೇವಪ್ಪ ಸರಣಿ ಟ್ವೀಟ್​ ಮಾಡಿದ್ದಾರೆ.

ಮೋದಿ ಹೇಳಿದ್ದೇನು?

ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಪ್ರಧಾನಿ ಮೋದಿ, ʻʻದೇವರು ನನ್ನನ್ನು ಒಂದು ಉದ್ದೇಶಕ್ಕಾಗಿ ಇಲ್ಲಿಗೆ ಕಳುಹಿಸಿದ್ದಾನೆ ಎಂಬುದು ನನಗೆ ಮನವರಿಕೆಯಾಗಿದೆ. ಆ ಉದ್ದೇಶವನ್ನು ಸಾಧಿಸಿದ ನಂತರ, ನನ್ನ ಕೆಲಸ ಒಂದೇ ಆಗಿರುತ್ತದೆ. ಅದಕ್ಕಾಗಿಯೇ ನಾನು ನನ್ನನ್ನು ಸಂಪೂರ್ಣವಾಗಿ ದೇವರಿಗೆ ಅರ್ಪಿಸಿಕೊಂಡಿದ್ದೇನೆ. ದೇವರು ನನಗೆ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಸಾಮರ್ಥ್ಯ, ಸ್ಫೂರ್ತಿ ಮತ್ತು ಶಕ್ತಿ ನೀಡಿದ್ದಾನೆಂದು ಭಾವಿಸುತ್ತೇನೆʼʼ ಎಂದು ಹೇಳಿದ್ದರು.

ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಈ ತಿಂಗಳ ಆರಂಭದಲ್ಲಿ ಭೇಟಿ ನೀಡಿದ್ದ ಮೋದಿ, ದೂರದರ್ಶನಕ್ಕೆ ನೀಡಿದ್ದ ಸಂದರ್ಶನದಲ್ಲಿಯೂ ದೇವರ ಬಗ್ಗೆ ಪ್ರಸ್ತಾಪಿಸಿದ್ದರು. ʻʻನನ್ನ ತಾಯಿ ಜೀವಂತವಾಗಿದ್ದಾಗ, ನಾನು ಜೈವಿಕವಾಗಿ ಹುಟ್ಟಿದ್ದೇನೆ ಎಂದಷ್ಟೇ ನಾನು ಭಾವಿಸಿದ್ದೆ. ಅವರು ತೀರಿಕೊಂಡ ನಂತರದಲ್ಲಿ ದೇವರು ನನ್ನನ್ನು ಕಳುಹಿಸಿದ್ದಾನೆ ಎಂಬುದು ನನಗೆ ಮನವರಿಕೆಯಾಯಿತುʼʼಎಂದು ಹೇಳಿದ್ದರು.

Read More
Next Story