
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
ಆಲ್ ಈಸ್ ನಾಟ್ ವೆಲ್; ಬಿ.ವೈ.ವಿಜಯೇಂದ್ರ ಹೀಗೆ ಹೇಳಿದ್ದು ಏಕೆ?
ರಾಜ್ಯ ಸರ್ಕಾರ ಪ್ರತಿಯೊಂದನ್ನು ಆತುರದಲ್ಲಿ ನಿರ್ಧರಿಸುತ್ತಿದೆ. ಜಾತಿ ಗಣತಿ ವಿಚಾರದಲ್ಲೂ ಯಾವುದೇ ತಯಾರಿ ನಡೆಸಿಲ್ಲ. ಅದರ ಪರಿಣಾಮವಾಗಿ ಶಿಕ್ಷಕರು ಮನೆ ಬಿಟ್ಟು ಹೊರಗೆ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದಿದೆ.
ರಾಜ್ಯ ಸರ್ಕಾರದಲ್ಲಿ ಭುಗಿಲೆದ್ದಿರುವ ಅಸಮಾಧಾನ, ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಮತ ಹಾಗೂ ಸರ್ಕಾರದ ಆಡಳಿತ ವೈಖರಿಗೆ ಪ್ರತಿಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಬೆಂಗಳೂರಿನ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, “ಆಡಳಿತ ಪಕ್ಷದ ಸಚಿವರು ಹಾಗೂ ಶಾಸಕರ ಇತ್ತೀಚಿನ ಪ್ರತಿಕ್ರಿಯೆಗಳನ್ನು ಗಮನಿಸಿದರೆ ʼಆಲ್ ಈಸ್ ನಾಟ್ ವೆಲ್ʼ ಎಂಬುದು ಗೊತ್ತಾಗಲಿದೆ" ಎಂದಿದ್ದಾರೆ.
ಬಿಹಾರ ಚುನಾವಣೆ ಬಳಿಕ ಬದಲಾವಣೆ
ಬಿಹಾರ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸಲಿವೆ. ಅದಕ್ಕಾಗಿ ಈಗಾಗಲೇ ಪ್ರಕ್ರಿಯೆ ಆರಂಭವಾಗಿವೆ. ನವೆಂಬರ್ ಕ್ರಾಂತಿಯ ಕುರಿತು ಕಾಂಗ್ರೆಸ್ ಪಕ್ಷದ ಶಾಸಕರೇ ಮಾತನಾಡಿಕೊಳ್ಳುತ್ತಿದ್ದಾರೆ. ನಾವು ಅದನ್ನೇ ಆರು ತಿಂಗಳ ಹಿಂದೆಯೇ ಹೇಳಿದ್ದೆವು. ಸಿಎಂ ಸ್ಥಾನದಿಂದ ಯಾರಿಗೆ ಗಂಡಾಂತರ ಕಾದಿದೆಯೋ, ಯಾರಿಗೆ ಅದೃಷ್ಟ ಕಾದಿದೆಯೋ ಶೀಘ್ರದಲ್ಲೇ ಗೊತ್ತಾಗಲಿದೆ ಎಂದು ಹೇಳಿದರು.
ಆತುರದ ಜಾತಿ ಗಣತಿಗೆ ಆಕ್ಷೇಪ
ರಾಜ್ಯ ಸರ್ಕಾರ ಪ್ರತಿಯೊಂದನ್ನು ಆತುರದಲ್ಲಿ ನಿರ್ಧರಿಸುತ್ತಿದೆ. ಜಾತಿ ಗಣತಿ ವಿಚಾರದಲ್ಲೂ ಯಾವುದೇ ತಯಾರಿ ನಡೆಸಿಲ್ಲ. ಅದರ ಪರಿಣಾಮವಾಗಿ ಶಿಕ್ಷಕರು ಮನೆ ಬಿಟ್ಟು ಹೊರಗೆ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದಿದೆ. ದಸರಾ ರಜೆಯ ವಿಸ್ತರಣೆ ಮಾಡಿರುವುದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಿದೆ ಎಂದು ಆರೋಪಿಸಿದರು.
ಅಜೆಂಡಾ ಇಲ್ಲದ ಜಿಬಿಎ ಸಭೆ; ಟೀಕೆ
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ಮೊದಲ ಸಭೆಯಲ್ಲಿ ಯಾವುದೇ ಅಜೆಂಡಾವನ್ನು ಶಾಸಕರಿಗೆ ನೀಡಿಲ್ಲ. ಸಭೆಯ ಉದ್ದೇಶ, ನಿರ್ಧಾರಗಳು ಯಾರಿಗೂ ಗೊತ್ತಿಲ್ಲ. ಇಷ್ಟು ಅಸಂಘಟಿತ ಆಡಳಿತವನ್ನು ಈ ಹಿಂದೆ ಯಾವ ಸರ್ಕಾರದಲ್ಲೂ ಕಂಡಿಲ್ಲ ಎಂದು ಟೀಕಿಸಿದರು.
ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಡಿಸೆಂಬರ್ ಒಳಗೆ ನಡೆಸುವ ಕುರಿತು ರಾಜ್ಯ ಸರ್ಕಾರ ಈಗಾಗಲೇ ಸುಪ್ರೀಂಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಿದೆ. ಆದರೆ, ಸರ್ಕಾರದ ಒಳಗಿರುವವರಿಗೂ ಇದರ ಸ್ಪಷ್ಟತೆ ಇಲ್ಲ ಎಂದು ಟೀಕಿಸಿದರು.
ಗುಂಡಿಗಳ ರಸ್ತೆಯಿಂದ ಅಭಿವೃದ್ಧಿ ಕುಸಿತ
ಬೆಂಗಳೂರು ನಗರದ ಅಭಿವೃದ್ಧಿ ಕುರಿತು ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಸರ್ಕಾರದ ನಿಲುವನ್ನು ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಬೆಂಗಳೂರಿನ ರಸ್ತೆಗುಂಡಿಗಳ ಕುರಿತು ಪ್ರತಿಭಟನೆ ನಡೆಸಿದರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರಧಾನಿ ನಿವಾಸದ ಮುಂದೆ ಗುಂಡಿಯಿದೆ ಎನ್ನುತ್ತಾರೆ. ಲಂಡನ್ ನಲ್ಲೂ ಸಂಚಾರ ದಟ್ಟಣೆ ಇದೆ ಎನ್ನುತ್ತಾರೆ. ಇಲ್ಲಿ ಬೆಂಗಳೂರಿನ ಸಮಸ್ಯೆಯನ್ನು ಬೇರೆ ನಗರಗಳಿಗೆ ಹೋಲಿಸುತ್ತಿರುವುದು ಎಷ್ಟು ಸರಿ ಎಂದು ಟೀಕಿಸಿದ್ದಾರೆ. ಬೆಂಗಳೂರಿನಲ್ಲಿ ರಸ್ತೆ ಗುಂಡಿಯಲ್ಲ, ಗುಂಡಿಯಲೇ ರಸ್ತೆಗಳಿವೆ. ಬೆಂಗಳೂರಿನ ಅಭಿವೃದ್ಧಿಯ ಬಗ್ಗೆ ಸರ್ಕಾರಕ್ಕೆ ಯಾವುದೇ ಕಾಳಜಿ ಇಲ್ಲ ಕಿಡಿಕಾರಿದ್ದಾರೆ.
ನಗರಾಭಿವೃದ್ಧಿ ನೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವಿಜಯೇಂದ್ರ ಅವರು, ಇಂದು ಸರ್ಕಾರವೇ ರಿಯಲ್ ಎಸ್ಟೇಟ್ ಲಾಬಿ ಮಾಡುತ್ತಿದೆ. ಖಾಸಗಿಯವರ ಲಾಭಕ್ಕಾಗಿ ಸರ್ಕಾರ ಕಾರ್ಯಕ್ರಮ ರೂಪಿಸುತ್ತಿದೆ. ಜನರ ಕಲ್ಯಾಣ ಎಂಬ ಮಾತೇ ಇಲ್ಲ ಎಂದು ಆರೋಪಿಸಿದ್ದಾರೆ.
ಅತಿವೃಷ್ಟಿ ವೀಕ್ಷಣೆಗೂ ಸಚಿವರಿಗೆ ಸಮಯವಿಲ್ಲ
ಉತ್ತರ ಕರ್ನಾಟಕದಲ್ಲಿ ಸಂಭವಿಸಿರುವ ಅತಿವೃಷ್ಟಿ ಮತ್ತು ರೈತರ ಕಷ್ಟಗಳ ಬಗ್ಗೆ ಉಲ್ಲೇಖಿಸಿದ ಅವರು, ಅಲ್ಲಿ ಜನರು ತೊಂದರೆ ಅನುಭವಿಸುತ್ತಿದ್ದಾರೆ, ಆದರೆ, ಕೃಷಿ ಸಚಿವರು, ಕಂದಾಯ ಸಚಿವರು ಸ್ಥಳಕ್ಕೆ ಹೋಗಿ ಭೇಟಿ ನೀಡಲು ಪುರುಸೋತ್ತಿಲ್ಲ. ಅವರಿಗೆ ಸಮಯ ಇಲ್ಲ ಎಂದರೆ ಬದುಕಿದ್ದು ಸತ್ತ ಹಾಗೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಎಸಿ ರೂಂನಲ್ಲೇ ಸಿಎಂ ಸಭೆ
ಸಿಎಂ ಸಿದ್ದರಾಮಯ್ಯ ಅವರು ಐಷಾರಾಮಿ ಕೊಠಡಿಯಲ್ಲೇ ಕುಳಿತು ಸಭೆ ಮಾಡುತ್ತಿದ್ದಾರೆ. ಜನರ ಸಮಸ್ಯೆ, ನೋವು ಅವರಿಗೆ ಕೇಳುತ್ತಿಲ್ಲ. ಇದು ಪ್ರಜಾಪ್ರಭುತ್ವ ಆಡಳಿತವಾ ಎಂದು ಕಿಡಿಕಾರಿದ್ದಾರೆ.