Alleged vote rigging in Aland | SIT officers search, seize thousands of voter ID cards
x

ಸಾಂದರ್ಭಿಕ ಚಿತ್ರ

ಆಳಂದ 'ವೋಟ್ ಚೋರಿ' ಪ್ರಕರಣ| ದುರ್ಬಲರ ಮೊಬೈಲ್‌ ಸಂಖ್ಯೆ ಬಳಕೆ ಶಂಕೆ, ತನಿಖೆ ಚುರುಕು

ಆರೋಪಿಗಳು 75 ಮೊಬೈಲ್‌ಗಳನ್ನು ಹ್ಯಾಕ್ ಮಾಡಿರುವ ಸಾಧ್ಯತೆಯೂ ಇದೆ. ಇಲ್ಲವೇ ಅವರಿಗೆ ನೆರವು ನೀಡಿ ಮೊಬೈಲ್‌ನಂಬರ್ ಪಡೆದಿರಬಹುದು ಎಂದು ಎಸ್ ಐಟಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.


ಕಲಬುರಗಿ ಜಿಲ್ಲೆ ಆಳಂದ ಮತಕ್ಷೇತ್ರದಲ್ಲಿ 'ಮತಗಳ್ಳತನ' ನಡೆದಿರುವ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ್ದ ಆರೋಪ‌ಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು ತನಿಖೆ ತೀವ್ರಗೊಳಿಸಿದ್ದು, ಹಲವು ಸಂಗತಿಗಳು ಬೆಳಕಿಗೆ ಬಂದಿವೆ.

ಸಾವಿರಾರು ಮತದಾರರ ಹೆಸರನ್ನು ಪಟ್ಟಿಯಿಂದ ಅಳಿಸಿಹಾಕಲು ಹಣದ ವ್ಯವಹಾರ ನಡೆದಿತ್ತು ಎಂಬುದು ಬಯಲಾಗಿದೆ. ಈ ಮತದಾರರ ಹೆಸರು ಅಳಿಸಲು ಕೋರಿ ಅರ್ಜಿ ಸಲ್ಲಿದುವುದಕ್ಕಾಗಿ ಬಳಸಿರುವ 75 ಮೊಬೈಲ್ ನಂಬರ್ ಗಳು ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಸೇರಿದ್ದು, ಇವನ್ನು ದುರ್ಬಳಕೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಒಟ್ಟು 6,018 ನಕಲಿ ಅರ್ಜಿಗಳನ್ನು‌ ಸೈಬರ್ ಸೆಂಟರ್ ಉದ್ಯೋಗಿಗಳಾದ ಅಕ್ರಮ್, ಅಶ್ಫಾಕ್, ಮುಸ್ತಾಕ್ ಮತ್ತು ನದೀಮ್ ಎಂಬ ನಾಲ್ವರು ಸಲ್ಲಿಸಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ನಾಲ್ವರು ಅರೋಪಿಗಳಲ್ಲಿ ಒಬ್ಬ ಆನ್‌ಲೈನ್ ರಾಜಕೀಯ ಸಮೀಕ್ಷಕ, ಮತ್ತೊಬ್ಬ ಡೇಟಾ ಆಪರೇಟರ್, ಉಳಿದಿಬ್ಬರು ಅರ್ಜಿಗಳನ್ನು ಸಲ್ಲಿಸುವ ಕೆಲಸ ಮಾಡುತ್ತಿದ್ದರು.

ದುರ್ಬಲರ ಮೊಬೈಲ್ ಸಂಖ್ಯೆ ದುರ್ಬಳಕೆ‌

ನಕಲಿ ಅರ್ಜಿಗಳಿಗೆ ಲಾಗಿನ್ ಐಡಿ ರಚಿಸಲು ಆರೋಪಿಗಳು ದುರ್ಬಲ ವರ್ಗದವರ 75 ಮೊಬೈಲ್ ನಂಬರಗಳನ್ನು ದುರ್ಬಳಕೆ‌ ಮಾಡಿಕೊಂಡಿದ್ದಾರೆ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ಪ್ರತಿ ಲಾಗಿನ್‌ಗೆ ಒಟಿಪಿ ಅಗತ್ಯವಿರುವುದರಿಂದ, ಈ ಮೊಬೈಲ್‌ ಸಂಖ್ಯೆಗಳ ಮೂಲಕ ಆಯೋಗದ ವೆಬ್ ಸೈಟ್ ಅನ್ನು ಹೇಗೆ ಪ್ರವೇಶಿಸಿದರು ಎಂಬುದರ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಆರೋಪಿಗಳು 75 ಮೊಬೈಲ್‌ಗಳನ್ನು ಹ್ಯಾಕ್ ಮಾಡಿರುವ ಸಾಧ್ಯತೆಯೂ ಇದೆ. ಇಲ್ಲವೇ ಅವರಿಗೆ ನೆರವು ನೀಡಿ ಮೊಬೈಲ್‌ನಂಬರ್ ಪಡೆದಿರಬಹುದು ಎಂದು ಎಸ್ ಐಟಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

2023ರಲ್ಲಿ ಚುನಾವಣಾ ಆಯೋಗ ಸಲ್ಲಿಸಿದ ದೂರಿನ ಮೇರೆಗೆ ಕಲಬುರಗಿ ಪೊಲೀಸರು ಎಫ್ ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದರು. ರಾಹುಲ್ ಗಾಂಧಿ ಅವರು ನವದೆಹಲಿಯಲ್ಲಿ‌ ಪತ್ರಿಕಾಗೋಷ್ಠಿ ನಡೆಸಿ, ಮತಗಳ್ಳತನದ ಆರೋಪ ಮಾಡಿದ ಬಳಿಕ ಆಳಂದ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಆನಂತರ ರಾಜ್ಯ ಸರ್ಕಾರ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಿತ್ತು.

ತನಿಖೆ ತೀವ್ರಗೊಳಿಸಿದ ಎಸ್ಐಟಿ

ಮತದಾರರ ಪಟ್ಟಿಯಲ್ಲಿ ಹೆಸರು ಅಳಿಸಿ ಹಾಕಲು ಪ್ರಯತ್ನಿಸಿದ ಪ್ರಕರಣದಲ್ಲಿ ಅನೇಕ ತಾಂತ್ರಿಕ ಮತ್ತು ಸೈಬರ್ ಅಂಶಗಳ ಬಗ್ಗೆ ಎಸ್‌ಐಟಿ ತನಿಖೆ ಮುಂದುವರಿಸಿದೆ.

ಆರೋಪಿಗಳು ಯಾವ ರೀತಿಯಲ್ಲಿ ಡೇಟಾ ಸೆಂಟರ್ ಹಾಗೂ ವೆಬ್‌ಸೈಟ್‌ಗೆ ಪ್ರವೇಶ ಪಡೆದರು, OTP ಪ್ರಕ್ರಿಯೆಯನ್ನು ಹೇಗೆ ದಾಟಿದರು ಎಂಬುದು ತನಿಖೆಯ ಪ್ರಮುಖ ಭಾಗವಾಗಿದೆ.

Read More
Next Story