ಅಳಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತಗಳವು ಆರೋಪ: ಬಂಧನ ತಪ್ಪಿಸಲು ಬಿಜೆಪಿ ಮುಖಂಡ ಸುಭಾಷ್‌ ಗುತ್ತೇದಾರ್‌ ಜಾಮೀನು ಅರ್ಜಿ
x

ಅಳಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತಗಳವು ಆರೋಪ: ಬಂಧನ ತಪ್ಪಿಸಲು ಬಿಜೆಪಿ ಮುಖಂಡ ಸುಭಾಷ್‌ ಗುತ್ತೇದಾರ್‌ ಜಾಮೀನು ಅರ್ಜಿ

ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಹೆಸರು ಪಟ್ಟಿಯಿಂದ ಡಿಲಿಟ್ ಆಗಿದೆ ಎನ್ನುವ ಆರೋಪವನ್ನು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮಾಡಿದ್ದರು. ಅವರು ಕೇಂದ್ರ ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದರು.


Click the Play button to hear this message in audio format

ಕಲಬುರಗಿ ಜಿಲ್ಲೆ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಕಳವು ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡವು (ಎಸ್‌ಐಟಿ) ತನಿಖೆ ತೀವ್ರಗೊಳಿಸಿದ್ದು, ಬಂಧನ ಭೀತಿ ಹಿನ್ನೆಲೆಯಲ್ಲಿ ಬಿಜೆಪಿ ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್‌ ಮತ್ತವರ ಪುತ್ರರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮೊರೆ ಹೋಗಿದ್ದಾರೆ. ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

ಸುಭಾಷ್‌ ಗುತ್ತೇದಾರ್ ಮತ್ತು ಪುತ್ರರಾದ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್‌ ಮತ್ತು ಮತ್ತೊಬ್ಬ ಪುತ್ರ ಉದ್ಯಮಿ ಸಂತೋಷ್‌ ಗುತ್ತೇದಾರ್‌ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಮತಗಳವು ಸಂಬಂಧ ಸರ್ಕಾರವು ರಚಿಸಿದ್ದ ಎಸ್‌ಐಟಿ ತಂಡವು ಇತ್ತೀಚೆಗಷ್ಟೇ ಬಿಜೆಪಿ ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್‌, ಹರ್ಷಾನಂದ ಗುತ್ತೇದಾರ್‌ ಮತ್ತು ಸಂತೋಷ್‌ ಗುತ್ತೇದಾರ್‌ ಮನೆ ಸೇರಿದಂತೆ ಇತರೆ ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಲಾಗಿತ್ತು. ಈ ವೇಳೆ ಹಲವು ದಾಖಲೆಗಳನ್ನು ಎಸ್‌ಐಟಿ ವಶಪಡಿಸಿಕೊಂಡಿತ್ತು.

ಮಾಜಿ ಶಾಸಕರ ಆಳಂದದ ಮನೆ ಸಮೀಪ ಎರಡು ಸ್ಥಳಗಳಲ್ಲಿ ಮತಪತ್ರ ಹಾಗೂ ವೋಟರ್‌ ಐಡಿ ಕಾರ್ಡ್‌ಗಳನ್ನು ರಾಶಿ ಹಾಕಿ ಬೆಂಕಿ ಹಚ್ಚಲಾಗಿದ್ದು, ಮತಪತ್ರ ಸೇರಿ ಹಲವು ಕಾಗದ ಪತ್ರಗಳಿಗೆ ಬೆಂಕಿ ಬಿದ್ದಿರುವ ವಿಡಿಯೋ ವೈರಲ್‌ ಆಗಿದೆ. ಆಳಂದ ಪಟ್ಟಣದ ಸೊಲ್ಲಾಪುರ ಮಾರ್ಗದ ರಾಜ್ಯ ಹೆದ್ದಾರಿಯ ಶಖಾಪುರ ಸೇತುವೆ ಬಳಿ ಮತಪಟ್ಟಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದ ಸ್ಥಳಕ್ಕೆ ಎಸ್‌ಐಟಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮತಪತ್ರ ಹಾಗೂ ವೋಟರ್‌ ಐಡಿ ಸುಟ್ಟು ಹಾಕಿರುವ ಪ್ರಕರಣ ಸಾಕ್ಷ್ಯ ನಾಶಪಡಿಸುವ ಪ್ರಯತ್ನವಾಗಿದೆ ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ದಾಖಲೆಗಳನ್ನು ಮಿನಿ ಗೂಡ್ಸ್‌ ವಾಹನದಲ್ಲಿ ಹೊರವಲಯಕ್ಕೆ ಸಾಗಿಸಿ ನಂತರ ಅವುಗಳನ್ನು ರಾತ್ರಿ ವೇಳೆ ಸುಟ್ಟು ನೀರಿಗೆ ಎಸೆದಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಏನಿದು ಪ್ರಕರಣ ?

ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿನ 256 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಬರುವ 6670 ಮತದಾರರನ್ನು ಮತದಾರರ ಪಟ್ಟಿಯಿಂದ ಅನಧಿಕೃತವಾಗಿ ಕೈಬಿಡಲು ಪ್ರಯತ್ನಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಶಾಸಕ ಬಿ.ಆರ್.ಪಾಟೀಲ್ ದೂರು ಸಲ್ಲಿಸಿದ್ದರು.

ಚುನಾವಣಾ ಆಯೋಗವು ಪರಿಶೀಲಿಸಿದಾಗ ಒಟ್ಟು 6018 ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡುವಂತೆ ಅರ್ಜಿಗಳು ಸ್ವೀಕೃತವಾಗಿದ್ದವು. ಅವುಗಳಲ್ಲಿ 24 ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದು ಕಂಡು ಬಂದಿತ್ತು.

ರಾಹುಲ್‌ಗಾಂಧಿ ಪ್ರಸ್ತಾಪಿಸಿದ್ದರು:

ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಹೆಸರು ಪಟ್ಟಿಯಿಂದ ಡಿಲಿಟ್ ಆಗಿದೆ ಎನ್ನುವ ಆರೋಪವನ್ನು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮಾಡಿದ್ದರು. ಕೇಂದ್ರ ಚುನಾವಣಾ ಆಯೋಗದ ವಿರುದ್ದ ಮಾಡಿದ್ದಾರೆ. 6,018 ಮತಗಳು ಡಿಲಿಟ್ ಆಗಿವೆ. ಇವೆಲ್ಲವೂ, ಕಾಂಗ್ರೆಸ್ ಬೆಂಬಲಿಸುವ ಮತದಾರರಾಗಿದ್ದರು. 2023ರ ಚುನಾವಣೆಗೂ ಮುನ್ನ ಮತದಾರರ ಹೆಸರು ಏಕಾಏಕಿ ಮತದಾರರಿಗೆ ಗೊತ್ತಿಲ್ಲದೆ ತೆಗೆದು ಹಾಕಲಾಗಿತ್ತು. ಅದರ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿತ್ತು. ಅದರ ಆಧಾರದ ಮೇಲೆ ಕಲಬುರಗಿಯಲ್ಲಿ ಎಫ್‌ಐಆ‌ರ್ ದಾಖಲಿಸಲಾಯಿತು. ಪರಿಶೀಲನೆ ಮಾಡಿದಾಗ ಮೊಬೈಲ್ ನಂಬರ್‌ಗಳು ಮಧ್ಯ ಪ್ರದೇಶ, ಬಿಹಾರ, ಗುಜರಾತ್‌ನಲ್ಲಿ ಪತ್ತೆಯಾಗಿತ್ತು. ಸಿಐಡಿ ತನಿಖಾಧಿಕಾರಿಗಳು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆಯಲಾಗಿತ್ತು. ಮೊಬೈಲ್ ನಂಬರ್ ಐಪಿ ವಿಳಾಸ ಎಲ್ಲೆಲ್ಲಿದೆ ಎನ್ನುವ ಮಾಹಿತಿ ಕೇಳಿದ್ದರು. ಆದರೆ, ಚುನಾವಣಾ ಆಯೋಗ ಯಾವುದೇ ಮಾಹಿತಿ ನೀಡಿಲ್ಲ ಎಂದು ಅವರು ಆರೋಪಿಸಿದ್ದರು.

Read More
Next Story