ವಿಕ್ಷಿಪ್ತ ಮನಸ್ಸಿನ ಅಕುಮಲ್‌ ಎಂಬ ʻಕಲಾʼ ಪ್ರಜ್ಞೆ
x

ವಿಕ್ಷಿಪ್ತ ಮನಸ್ಸಿನ ಅಕುಮಲ್‌ ಎಂಬ ʻಕಲಾʼ ಪ್ರಜ್ಞೆ

ಅಕುಮಲ್‌ ರಾಮಚಂದರ್‌ ಅಸಾಮಾನ್ಯ ಹೆಸರು, ಅವರದು ಅಸಾಮಾನ್ಯ ವ್ಯಕ್ತಿತ್ವ, ಅಕುಮಲ್‌ ತಮ್ಮನ್ನ ತಾವು ಕರೆದುಕೊಳ್ಳುತ್ತಿದ್ದುದು ʼಅನ್ಯಲೋಕʼದವನೆಂದೇ. ಕಲೆ ಮತ್ತು ಕಲಾವಿದರಿಗೆ ನೆರವಾಗಲು ಅವರದು ಅಸಾಮಾನ್ಯ ಮಿಷನರಿ ಉತ್ಸಾಹ. ಅಮೆರಿಕಾದ ಅಮೂರ್ತ ಅಭಿವ್ಯಕ್ತ ಚಿತ್ರಕಲಾವಿದ (abstract expressionist painter) ಹೆರಾಲ್ಡ್‌ ಷಪಿನ್ಸ್ಕಿ ಎಂಬ ಅಜ್ಞಾತ ಚಿತ್ರಕಾರನನ್ನು ಬೆಳಕಿಗೆ ತಂದಾಗ ಇಡೀ ಪಶ್ಚಿಮದ ಕಲಾ ಜಗತ್ತು ಬೆಚ್ಚಿ ಬಿದ್ದಿದ್ದು ಇಂದು ಇತಿಹಾಸ


ಅಕುಮಲ್‌ ರಾಮಚಂದರ್‌, ಅವರನ್ನು ಬಲ್ಲವರಿಗೆ ಕೇವಲ ʻಅಕುಮಲ್‌ʼ ಆಗಿದ್ದ, ರಾಮಚಂದ್ರ ಗುರುವಾರ ರಾತ್ರಿ (.ಡಿ.26) ಅಗಲಿದ್ದಾರೆ.

ಈ ಬಹುಮುಖಿ ವ್ಯಕ್ತಿತ್ವದ ಅಕುಮಲ್‌ ಎಂಭತ್ತರ ದಶಕದ ಸಾಂಸ್ಕೃತಿಕ, ಸಾಹಿತ್ಯಿಕ, ಸಿನಿಮಾ ಲೋಕದಲ್ಲಿದ್ದವರಿಗೆ ಹೆಚ್ಚು ಪರಿಚಿತ. ಆಗ ನಡೆಯುತ್ತಿದ್ದ ಇಂಗ್ಲಿಷ್‌ ಸಾಹಿತ್ಯದ ಮತ್ತು ಕಲಾತ್ಮಕ ಸಿನಿಮಾಗಳ ಚರ್ಚೆಯಲ್ಲಿ ತೀವ್ರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದವರು. ಈಗಲೂ ಎದುರಿಗೆ ಸಿಕ್ಕ ಅಂದಿನ ಕಾಲದ ಸ್ನೇಹಿತರನ್ನು ಮಾತಿಗೆಳೆದು, ತಮ್ಮ ಸಾಂಸ್ಕೃತಿಕ ಲೋಕದ ಸಾಹಸಗಳ ಬಗ್ಗೆ ತೀವ್ರವಾಗಿ ಮಾತನಾಡುತ್ತಾ, ಬೆಳೆಯುತ್ತಿರುವ ಬೆಂಗಳೂರು ನಗರದ ಅವಾಂತರಗಳ ಬಗ್ಗೆ ತಮ್ಮದೇ ಅದ ರೀತಿಯಲ್ಲಿ ನೋವು ಸಂಕಟಗಳನ್ನು ವ್ಯಕ್ತಪಡಿಸುತ್ತಾ, ತಮ್ನ ಕಾಲದ ಜಯನಗರ, ಮಲ್ಲೇಶ್ವರಂ ಲೋಕವೆಷ್ಟೋ ಚಂದ ಎಂದು ನೆನಪಿಸಿ, ಸಿಕ್ಕಷ್ಟೇ ಅವಸರದಲ್ಲಿ ಮತ್ಯಾರನ್ನೋ ನೋಡುವುದಿದೆ ಎಂದು ಮರೆಯಾಗಿ ಬಿಡುತ್ತಿದ್ದರು.

ಕೆಲವು ತಿಂಗಳ ಕೆಳಗೆ ನಾನು ಮತ್ತು ನಮ್ಮ ʻದ ಫೆಡರಲ್‌ʼ ನ ನಿರ್ವಾಹಕ ಸಂಪಾದಕ ದಕ್ಷಿಣ ಮೂರ್ತಿ ಚರ್ಚ್‌ಸ್ಟ್ರೀಟ್‌ ನಲ್ಲಿನ ಪುಸ್ತಕದಂಗಡಿಯಲ್ಲಿದ್ದಾಗ ಸಿಕ್ಕಿ ʼಉಭಯ ಕುಶಲೋಪರಿ ಸಾಂಪ್ರತʼ ವಿಚಾರಿಸಿ, ಜೀರಿಗೆಯಿಂದ ಜಿಂಬಾಬ್ವೆಯವರೆಗಿನ ಎಲ್ಲ ಸಂಗತಿಗಳನ್ನು ಕ್ಷಣಾರ್ಧದಲ್ಲಿ ಚರ್ಚಿಸಿದ, “ಕ್ಷೇಮವೇನಯ್‌ ಸಕಲ ಪ್ರಜೆಗಳ್‌, ಕ್ಷೇಮವೇನಯ್‌ ಸಕಲ ಸೇನೆಗಳ್‌ʼ ಎಂಬಂತೆ ವಿಚಾರಿಸಿ, ಇಂಡಿಯನ್ ಕಾಫಿ ಹೌಸ್‌ನಲ್ಲಿ ನಮ್ಮೊಂದಿಗೆ ಕಾಫಿ ಕುಡಿದು ವಿದಾಯ ಹೇಳಿದ್ದರು.

ಬೆಂಗಳೂರಿನಲ್ಲಿದ್ದಾಗಲೆಲ್ಲ, ತಮ್ಮ ಹೊಸ ಕೃತಿಯೊಂದರ ಬಗ್ಗೆ ಫೋನಾಯಿಸಿ ಮಾತನಾಡುತ್ತಿದ್ದ ಅಕುಮಲ್‌, ʻಧುತ್‌ʼ ಎಂದು ಎಲ್ಲರೆದುರು ಪ್ರಕಟವಾಗುತ್ತಿದ್ದಂತೆ, ಈಗ ʼದುರ್ದಾನʼ ತೆಗೆದುಕೊಂಡವರಂತೆ ಹೇಳದೇ ಕೇಳದೇ ಹೋಗಿಬಿಟ್ಟರು. ‌ ಕೆಲವು ದಿನಗಳಿಂದ ವಯೋಸಹಜವಾದ ಕಾಯಿಲೆಗಳಿಂದ ನರಳುತ್ತಿದ್ದ ಅಕುಮಲ್‌ ರಾಮಚಂದರ್‌ ಗುರುವಾರ ಬಾರದ ಲೋಕಕ್ಕೆ ತೆರಳಿಬಿಟ್ಟರು. ಅವರ ಮನೆಯವರು ಅವರ ದೇಹವನ್ನು ಅವರ ಇಷ್ಟದಂತೆ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಅಕುಮಲ್‌ ನಿರ್ಗಮನದಿಂದ ಬೆಂಗಳೂರಿನ ಬೌದ್ಧಿಕ ಲೋಕಕ್ಕೆ ತುಂಬಲಾಗದಂಥ ಶೂನ್ಯ ಕವಿದಿದೆ ಎನ್ನುತ್ತಾರೆ ಕನ್ನಡ ಸಾರಸ್ವತ ಲೋಕ ಗೌರವಿಸುವ ಚಿರಂಜೀವಿ ಸಿಂಗ್.‌

ಯಾರೀ ಅಕುಮಲ್‌

ಇಷ್ಟೆಲ್ಲ ಹೇಳಿದ ಮೇಲೆ. ಯಾರೀ ʼಅಕುಮಲ್‌ʼ ಎಂಬ ಪ್ರಶ್ನೆ ಸಹಜವಾಗಿಯೇ ಓದುಗರಲ್ಲಿ ಮೂಡುವುದು ಸಹಜ. ಎಂಭತ್ತರ ದಶಕದಲ್ಲಿ ಸಂಗೀತ, ಸಾಹಿತ್ಯ, ಸಮಾಜ, ರಾಜಕಾರಣ, ಕಲೆ ಮತ್ತು ಸಿನಿಮಾ….ಮುಂತಾದ ಸಂಗತಿಗಳ ಬಗ್ಗೆ ಗಾಢಾನುರಕ್ತ ಸ್ಥಿತಿಯಲ್ಲಿ ಮಾತನಾಡುತ್ತಿದ್ದ, ಎದುರಿಗಿದ್ದವರ ಮೇಲೆ ತನ್ನ ಜ್ಞಾನದ ಛಾಪು ಮೂಡಿಸುತ್ತಿದ್ದ ಅಕುಮಲ್‌ ರಾಮಚಂದ್ರ. ಇಂಗ್ಲಿಷ್‌ ಸಾಹಿತ್ಯವನ್ನು ಅಭ್ಯಾಸಿಸಿ, ಬೆಂಗಳೂರಿನ ಕೃಷಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಇಂಗ್ಲಿಷ್‌ ಬೋಧಕರಾಗಿದ್ದವರು. ಅದೇ ವಿಭಾಗದ ಅನಂತ ದೇವರಾಜೇ ಅರಸು ಜೊತೆ ಸೇರಿ ಫಿಲ್ಮ್‌ ಕ್ಲಬ್ ಒಂದನ್ನು ಆರಂಭಿಸಿ, ವಿದ್ಯಾರ್ಥಿಗಳಿಗೆ ಸದಸ್ಯತ್ವ ನೀಡಿದವರು ಅಕುಮಲ್.‌ ಆ ಕಾಲದಲ್ಲಿ ಬೆಂಗಳೂರಿನ ಬೌದ್ಧಿಕ ವಲಯದ ಚರ್ಚೆಗಳು ನಡೆಯುತ್ತಿದ್ದ ಬೆಂಗಳೂರಿನ ಕಾಫಿ ಹೌಸ್‌ನಲ್ಲಿ ಪಿಕೆ. ಶ್ರೀನಿವಾಸನ್‌ ಹಾಗೂ, ರಾಜಾಜಿನಗರದಲ್ಲಿನ ಟಿ.ಜಿ. ವೈದ್ಯನಾಥನ್‌ ಅವರ ಮನೆಯಲ್ಲಿ ನಡೆಯುತ್ತಿದ್ದ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದ ಅಕುಮಲ್‌ ಒಂದರ್ಥದಲ್ಲಿ ಶ್ರೀ ಸಾಮಾನ್ಯನ ಅಪರಾವತಾರ. “ಕನ್ನಡದಲ್ಲಿ ನಡೆಯುತ್ತಿದ್ದ ಚರ್ಚೆಗಳಲ್ಲಿ “ಇದರಿಂದ ಶ್ರೀ ಸಾಮಾನ್ಯನಿಗೇನು ಉಪಯೋಗ ಎಂದು ಪ್ರಶ್ನಿಸುತ್ತಿದ್ದ ಕನ್ನಡ ನೆಲದ ಕಂಪಿನ ಹಾಸಾಕೃ ಮತ್ತು ಇಂಗ್ಲಿಷ್‌ ಉಚ್ಛಾರದಿಂದ ಹಿಡಿದು ಅವರ ರೀತಿನೀತಿಗಳನ್ನು ಅನುಸರಿಸುತ್ತಿದ್ದ ಅಕುಮಲ್ ಅವರದೂ ಕೂಡ ಅಂತಿಮವಾಗಿ ಇದೇ ಪ್ರಶ್ನೆ” ಎಂದು ಇತ್ತಿಚೆಗೆ ಸಿನಿಮಾ ಮತ್ತು ಸಾಹಿತ್ಯ ತಜ್ಞ ಎನ್.‌ ವಿದ್ಯಾಶಂಕರ್‌ ನೆನಪಿಸಿಕೊಂಡಿದ್ದರು.

ʻಅನ್ಯʼಲೋಕದವರು

ಅಕುಮಲ್‌ ಗೆಳೆಯರಾದ ಲೇಖಕ ಹಾಗೂ ಕಲಾವಿದ ಅಶೀಷ್‌ ಖೋಕರ್‌ ತಮ್ಮ ಸ್ನೇಹಿತನ ಬಗ್ಗೆ ಹೇಳಿರುವುದು ಈ ರೀತಿ: ಅಕುಮಲ್‌ ರಾಮಚಂದರ್‌ ಅಸಾಮಾನ್ಯ ಹೆಸರು, ಅವರದು ಅಸಾಮಾನ್ಯ ವ್ಯಕ್ತಿತ್ವ, ಅಕುಮಲ್‌ ತನ್ನನ್ನು ತಾನು ಕರೆದುಕೊಳ್ಳುತ್ತಿದ್ದುದು ʼಅನ್ಯಲೋಕʼದವನೆಂದೇ. ಕಲೆ ಮತ್ತು ಕಲಾವಿದರಿಗೆ ನೆರವಾಗಲು ಅವರದು ಅಸಾಮಾನ್ಯ ಮಿಷನರಿ ಉತ್ಸಾಹ. ಮೈಸೂರ ಅರಸರ ಅಸ್ಥಾನದಲ್ಲಿ ತಾಯಿ ಕಡೆಯವರು, ತಂದೆ ಸೇನೆಯಲ್ಲಿದ್ದವರು. ಹಾಗಾಗಿ ಅಕುಮಲ್‌ ಅವರದು ವರ್ಣರಂಜಿತ ಚಿತ್ರಪಟ. ಹಲವು ಭಾಷೆಗಳು ಅವರಿಗೆ ಗೊತ್ತಿತ್ತು. ಹಿಂದಿ ಹಾಡುಗಳನ್ನು ಹಾಡುತ್ತಿದ್ದರು. ಉರ್ದುವಿನಲ್ಲಿ ಸುಲಲಿತವಾಗಿ ಸಂಭಾಷಿಸುತ್ತಿದ್ದರು. ಪೋಲಿಷ್‌ ಬಲ್ಲವರಾಗಿದ್ದರು. ಫ್ರೆಂಚ್‌ ಅವರಿಗೆ ಗೊತ್ತಿತ್ತು. ಹುಟ್ಟಿನಿಂದ ತೆಲುಗು, ಸ್ವಭಾವತಃ ಪಂಜಾಬಿ. ತಮಿಳು ತಲೆಗಳ ನಡುವೆ ಅವರ ತಲೆ., ಒಟ್ಟಾರೆಯಾಗಿ ನಿಜಾರ್ಥದಲ್ಲಿ ಅಕುಮಲ್‌ ʼವಿಶ್ವ ಪ್ರಜೆʼ.

ಪೋಲೀಷ್‌ ಸಂಸ್ಕೃತಿಯ ಪ್ರಭಾವ

ಈ ಅಕಮಲ್‌ ಸಿನಿಮಾ ಜಗತ್ತಿಗೆ ತೆರೆದುಕೊಂಡಿದ್ದು, 1979ರಲ್ಲಿ ಬೆಂಗಳೂರಿನಲ್ಲಿ ನಡೆದ ಪೋಲಿಷ್‌ ಚಲನಚಿತ್ರೋತ್ಸವದ ಮೂಲಕ. ಅನಂತರ ಪೋಲಿಷ್‌ ಚಿತ್ರಗಳ ಮೇಲೆ ವಿಮರ್ಶಾತ್ಮಾಕ ಲೇಖನಗಳನ್ನು ಬರೆದು, ಭಾರತಕ್ಕಿಂತ ಹೆಚ್ಚಾಗಿ ಪೋಲೆಂಡ್‌ ನಲ್ಲಿ ಖ್ಯಾತಿ ಗಳಿಸಿದವರು. ಅಷ್ಟೇ ಅಲ್ಲ, ಪೋಲೆಂಡ್‌ನ ಆರಾಧ್ಯದೈವವಾದ ಸಿನಿಮಾ ನಿರ್ದೇಶಕ ಕ್ರಿಸ್ತೋವ್‌ ಝಾನೂಸ್ಸಿ ಅವರನ್ನು ತೀರಾ ಹತ್ತಿರದಿಂದ ಬಲ್ಲವರಾಗಿದ್ದರು. 1979ರಲ್ಲಿ ಭಾರತದ ಶ್ರೇಷ್ಠ ಚಿತ್ರ ನಿರ್ದೇಶಕರಲ್ಲಿ ಒಬ್ಬರಾದ ಮೃಣಾಲ್‌ ಸೇನ್‌ ಅವರು ಸಂದರ್ಶಿಸಿದ್ದು. ಆಗ ಮೃಣಾಲ್‌ ಸೇನ್‌ ಅವರು ಹೇಳಿದ ಮಾತುಗಳು ಇಂದಿಗೂ ನಿಜವೆನ್ನಿಸುವಂತಿವೆ. ಆ ಸಂದರ್ಶನವೊಂದು ರೀತಿಯಲ್ಲಿ ನೇರವಾಗಿ ತಾರ್ಕಿಕವಾಗಿ ಮೃಣಾಲ್‌ ಚಿತ್ರಗಳನ್ನು ಕೂಲಂಕಶವಾಗಿ ವಿಮರ್ಶಿಸುವಂಥದ್ದು ಎಂಬುದು ಇಂದಿಗೂ ನೆನಪಾಗುತ್ತದೆ. ಬೆಂಗಳೂರಿನಲ್ಲಿ 2019ರಲ್ಲಿ ನಡೆದ Biffes ನಲ್ಲಿ ಝಾನೂಸ್ಸಿ ಅವರ ಚಿತ್ರಗಳ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟವರು. ನಮ್ಮಂಥ ಕೆಲವು ಪೋಲಿಷ್‌ ಚಿತ್ರಗಳ ಹಾಗೂ ಝಾನೂಸ್ಸಿ ಅವರ ಚಿತ್ರ ಪ್ರೇಮಿಗಳಿಗೆ ಝಾನೂಸ್ಸಿಯನ್ನು ಸಂದರ್ಶಿಸಲು ನೆರವು ನೀಡಿದವರು.

ಷಪಿನ್ಸ್ಕಿಗೆ ಪುನರ್ಜನ್ಮ ನೀಡಿದ ಅಕುಮಲ್

ಅಕುಮಲ್‌ ಒಂದು ರೀತಿಯ ಗೋಲದ ಮೇಲೊಂದು ಸುತ್ತು ಹಾಕುವ ಪ್ರವೃತ್ತಿಯ ವ್ಯಕ್ತಿ. ಬೆಂಗಳೂರಿಗೆ ಮಾತ್ರ ಸೀಮಿತವಾಗಿ ಅರ್ಥವಾಗಿದ್ದ ಅಕುಮಲ್‌ ತಿಳುವಳಿಕೆ ಜಗದ್ವಿಖ್ಯಾತವಾದದ್ದು ಅವರು ಅಮೆರಿಕಾದ ಅಮೂರ್ತ ಅಭಿವ್ಯಕ್ತ ಚಿತ್ರಕಲಾವಿದ (abstract expressionst painter) ಹೆರಾಲ್ಡ್‌ ಷಪಿನ್ಸ್ಕಿ ಎಂಬ ಅಜ್ಞಾತ ಚಿತ್ರಕಾರನನ್ನು ಬೆಳಕಿಗೆ ತಂದಾಗ. 1984ರಲ್ಲಿ ಪೋಲಿಷ್‌ ಚಲನಚಿತ್ರಗಳ ಮೇಲೆ ಉಪನ್ಯಾಸ ನೀಡಲು ಅಕುಮಲ್‌ ನ್ಯೂಯಾರ್ಕ್‌ಗೆ ಹೋಗಿದ್ದರು. ಆಗ ಅವರನ್ನು ಷಿಕಾಗೋದಲ್ಲಿ ಬೋಧಿಸುತ್ತಿದ್ದ ಕನ್ನಡದ ಖ್ಯಾತ ಲೇಖಕ ಎ.ಕೆ. ರಾಮಾನುಜನ್‌ ಅವರು ಸಮಾರಂಭವೊಂದಕ್ಕೆ ಕರೆದುಕೊಂಡು ಹೋಗಿದ್ದರು. ಆ ಸಭೆಯಲ್ಲಿ ಅಕುಮಲ್‌ ಡೇವಿಡ್‌ ಷಪಿನ್ಸ್ಕಿ ಎಂಬ ವಿದ್ಯಾರ್ಥಿಯನ್ನು ಭೇಟಿಯಾದರು. ಈತ ಹೆರಾಲ್ಡ್‌ ಷಪಿನ್ಸ್ಕಿಯವರ ಮಗ.

ಎಲ್ಲಿಯ ಅಕುಮಲ್‌? ಎಲ್ಲಿಯ ಷಪಿನ್ಸ್ಕಿ?

ಕಲಾವಿದರಿಗೆ ನೆರವಾಗಲು ಅವರದು ಅಸಾಮಾನ್ಯ ಮಿಷನರಿ ಉತ್ಸಾಹದ ಅಕುಮಲ್‌ ಹೆರಾಲ್ಡ್‌ ಷಪಿನ್ಸ್ಕಿಯನ್ನು ಭೇಟಿ ಮಾಡಿದರು. ಷಪಿನ್ಸ್ಕಿಯ ಚಿತ್ರಗಳು, ಅವುಗಳ ಅಮೂರ್ತ ಅಭಿವ್ಯಕ್ತಿಯ ಚಿತ್ರಗಳನ್ನು ಕಂಡು ಮಂತ್ರಮುಗ್ಧರಾದರು. ಆ ಕೃತಿಗಳ ಬಗ್ಗೆ ದೀರ್ಘವಾದ ಚರ್ಚೆಗಳನ್ನು ಹುಟ್ಟುಹಾಕಿದರು. ಅಂತಿಮವಾಗಿ ತಮ್ಮ ಪ್ರಭಾವವನ್ನು ಬಳಸಿ ನ್ಯೂಯಾರ್ಕಿನ ಮೇಯರ್‌ ಗ್ಯಾಲರಿಯಲ್ಲಿ ಅವರ ಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಿದರು. ಆಗ ಷಪಿನ್ಸ್ಕಿ ವಿಶ್ವವಿಖ್ಯಾತರಾದರು. ಅವರ ಒಂದೊಂದು ಚಿತ್ರವೂ ತಲಾ 30000 ಡಾಲರ್ ಗಳಿಗೆ ಮಾರಾಟವಾಗಿ ಷಪಿನ್ಸ್ಕಿಯ ಅದೃಷ್ಟವೇ ಬದಲಾಯಿತು. ಷಪಿನ್ಸ್ಕಿ ಕುರಿತು ಬಿಬಿಸಿ ಚಾನೆಲ್‌ 4 ಸಾಕ್ಷ್ಯಾಚಿತ್ರವೊಂದನ್ನು ಬಿಡುಗಡೆ ಮಾಡಿದಾಗ, ಷಪಿನ್ಸ್ಕಿ ಕೃತಜ್ಞತೆ ಸಲ್ಲಿಸಿದ್ದು ತಮ್ಮನ್ನು ಬೆಳಕಿಗೆ ತಂದ ಅಕುಮಲ್‌ ಅವರಿಗೆ. ಈ ಬೆಳವಣಿಗೆಯನ್ನು ಕಾದಂಬರಿಕಾರ ಸಲ್ಮಾನ್‌ ರಶ್ದಿ ಅವರು “ಪಶ್ಚಿಮಕ್ಕೆ ಇದು ಪೂರ್ವ ಜಗತ್ತಿನ ಜ್ಞಾನದ ಕೊಡುಗೆ” ಎಂದು ಹೇಳಿದ್ದು ಇಂದಿಗೂ ನೆನಪಿದೆ. ಬರಹಗಾರ, ಪತ್ರಕರ್ತ, ಚಿತ್ರ ನಿರ್ದೇಶಕ ಹಾಗೂ ಪಬ್ಲಿಕ್‌ ಇಂಟಲೆಕ್‌ಚ್ಯುಯಲ್‌ ತಾರೀಖ್‌ ಅಲಿ ಅವರು ಅಕುಮಲ್‌-ಷಪಿನ್ಸ್ಕಿಯನ್ನು ಶೋಧಿಸಿರುವುದನ್ನು ಕುರಿತು..”ತೃತೀಯ ರಾಷ್ಟ್ರದ ಜಾಗತಿಕ ಪ್ರಜ್ಞೆಯೊಂದು ಪಶ್ಚಿಮದ ಆಕೃತಿಕ ಹೀನ ಸಾಮಾಜಿಕ ಮೌಲ್ಯಗಳ ಮೂಸೆಯಿಂದ ಗುರುತಿಸಿದ ಕಲಾತ್ಮಕತೆಗೆ ಬರೆದ ಹೊಸ ವ್ಯಾಖ್ಯಾನ” ಎಂದಿದ್ದು, ಹಲವರನ್ನು ಕೆಣಕಿದ್ದೂ ಇದೆ. ಕೇವಲ ಷಪಿನ್ಸ್ಕಿಯಷ್ಟೇ ಅಲ್ಲ. ಭಾರತದ ಅಪ್ರತಿಮ ಕಲಾವಿದರಾದ ಮಿಲಿಂದ್‌ ನಾಯಕ್‌, ಸುರೇಶ್‌ ಜಯಕುಮಾರ್‌ ಅವರ ಪ್ರತಿಭೆಯನ್ನೂ ಜಗತ್ತಿಗೆ ಪರಿಚಯಿಸಿದವರು ಅಕುಮಲ್ ಎನ್ನುತ್ತಾರೆ ಅಶೀಷ್‌ ಖೋಕರ್.‌

ಇದೇ ರೀತಿ ಕಲಾವಿದ ಚಳ್ಳಕೆರೆ ಸೀಮೆಯ ವೀರೇಂದ್ರ ಕುಮಾರ್‌ ಅವರನ್ನು ಪ್ರೋತ್ಸಾಹಿಸಿದ ಕೀರ್ತಿ ಅಕುಮಲ್‌ ಅವರದು. “ಅಕುಮಲ್‌ ರಾಮಚಂದ್ರ ಅವರು ನನ್ನ ಕೃತಿಗಳನ್ನು ನೋಡಿದ್ದಲ್ಲದೆ, ಅವರೇ ಪ್ರಾಯೋಜಕರೂ ಆದರು. ನನ್ನ ಕಲಾಕೃತಿಗಳನ್ನು curate ಕೂಡ ಮಾಡಿದರು. ʼನಿನ್ನದು ಅಮೂರ್ತ ಕೃತಿಗಳು. ಆರಂಭದಲ್ಲಿ ಸಾಲ್ವೆದಾರ್‌ ಡಾಲಿಯ ಗೆರೆಗಳು ಕೂಡ ಇದೇ ರೀತಿ ಇದ್ದವುʼ ಎಂದು. ನಾನೂ ನನಗರಿವಿಲ್ಲದಂತೆಯೇ ಡಾಲಿಯಿಂದ ಪ್ರಭಾವಿತನಾಗಿದ್ದೆ. ಮೊತ್ತಮೊದಲಿಗೆ ನನ್ನನ್ನು ಕಲಾವಿದ ಎಂದು ಗುರುತಿಸಿದ್ದೇ ಅಕುಮಲ್.‌ ನನ್ನ ಕೃತಿಗಳ ಪ್ರದರ್ಶನವನ್ನು ಏರ್ಪಡಿಸಿದ್ದೂ ಅವರೇ” ಎನ್ನುತ್ತಾರೆ ವೀರೇಂದ್ರಕುಮಾರ್.‌

ಷಪಿನ್ಸ್ಕಿಯನ್ನು ತಾವು ಶೋಧಿಸಿದ ಬಗ್ಗೆ ಅಕುಮಲ್‌ ನಿರುದ್ವಿಗ್ನವಾಗಿ ಆದರೆ, ಅಷ್ಟೇ ರೋಚಕವಾಗಿ ಈ ಪತ್ರಕರ್ತನೊಂದಿಗೆ ಹಂಚಿಕೊಂಡಿದ್ದಿದೆ. ಅಕುಮಲ್‌ ಅವರ ಎರಡು ಪುಸ್ತಕಗಳು ಪ್ರಕಟವಾಗಿವೆ. ʻಲಿಟಲ್‌ ಪಿಗ್‌ʼ ಎಂಬ ಸಚಿತ್ರ ಪುಸ್ತಕ ಅದು. ಅದು ಪ್ರಕಟವಾದದ್ದು 1992ರಲ್ಲಿ ಅದಕ್ಕೆ ಚಿತ್ರಗಳನ್ನು ರಚಿಸಿದವರು Stasys Eidrigevicius.

ಎಲ್ಲೇ ಮಾಯವಾದರೂ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (Biffes) ದಲ್ಲಿ ಸಿಕ್ಕೇ ಸಿಗುತ್ತಾರೆ ಎಂಬ ನಂಬಿಕೆ ನಮ್ಮದಾಗಿತ್ತು. ಈಗ ಆ ಸಾಧ್ಯತೆಯೂ ಇಲ್ಲವಾಗಿದೆ. ವಿಶ್ವದ ಯಾವುದೇ ಭಾಗದಲ್ಲಿರಲಿ Biffes ಗಂತೂ ಅಕುಮಲ್‌ ಕಾಯಂ ಅತಿಥಿ. ಈ ಬಾರಿ Biffes ನಲ್ಲಿ ಅಕುಮಲ್‌ ಕಾಣ ಸಿಗುವುದಿಲ್ಲ ಎಂಬುದನ್ನು ಈಗ ಒಪ್ಪಿಕೊಳ್ಳಲೇ ಬೇಕಿದೆ.


Read More
Next Story