
'ಇದು ನ್ಯಾಷನಲ್ ಹೈವೇ, ಕನ್ನಡ ಯಾಕೆ ಮಾತಾಡ್ಬೇಕು?': ದೇವನಹಳ್ಳಿ ಟೋಲ್ ಮ್ಯಾನೇಜರ್ ದರ್ಪಕ್ಕೆ ಕನ್ನಡಿಗರ ಆಕ್ರೋಶ
ಈ ವ್ಯಕ್ತಿ ಕನ್ನಡ ಕಲಿಯುವ ಪ್ರಯತ್ನವನ್ನೂ ಮಾಡಿಲ್ಲ. ತಮ್ಮ ಸಹೋದ್ಯೋಗಿಗಳೊಂದಿಗೂ ತಮಿಳು ಮತ್ತು ತೆಲುಗಿನಲ್ಲಿಯೇ ವ್ಯವಹರಿಸುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
"ನನಗೆ ಕನ್ನಡ ಬರಲ್ಲ, ಇದು ನ್ಯಾಷನಲ್ ಹೈವೇ, ನಾನಿಲ್ಲಿ ಕನ್ನಡ ಯಾಕೆ ಮಾತನಾಡಬೇಕು?" - ಇದು ಬೆಂಗಳೂರು ಹೊರವಲಯದ ದೇವನಹಳ್ಳಿ ತಾಲೂಕಿನ ನಲ್ಲೂರು ಬಳಿಯ ರಾಷ್ಟ್ರೀಯ ಹೆದ್ದಾರಿ ಟೋಲ್‌ಗೇಟ್‌ನಲ್ಲಿ, ಅಲ್ಲಿನ ಮ್ಯಾನೇಜರ್ ಕನ್ನಡಿಗರೊಬ್ಬರ ಪ್ರಶ್ನೆಗೆ ತೋರಿದ ದರ್ಪದ ಉತ್ತರ. ಈ ಘಟನೆಯು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಇಳಿದಿವೆ.
ತೆಲುಗು ಭಾಷಿಕರಾಗಿರುವ ಟೋಲ್ ಮ್ಯಾನೇಜರ್, ವಾಹನ ಸವಾರರೊಂದಿಗೆ ಕನ್ನಡದಲ್ಲಿ ಮಾತನಾಡಲು ನಿರಾಕರಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ, "ನನಗೆ ಕನ್ನಡ ಗೊತ್ತಿಲ್ಲ" ಎಂದು ಉಡಾಫೆಯ ಉತ್ತರ ನೀಡಿದ್ದಾರೆ. ಈ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
ಒಂದು ವರ್ಷದಿಂದ ಇದೇ ಟೋಲ್‌ನಲ್ಲಿ ಕೆಲಸ ಮಾಡುತ್ತಿದ್ದರೂ, ಈ ವ್ಯಕ್ತಿ ಕನ್ನಡ ಕಲಿಯುವ ಪ್ರಯತ್ನವನ್ನೂ ಮಾಡಿಲ್ಲ. ತಮ್ಮ ಸಹೋದ್ಯೋಗಿಗಳೊಂದಿಗೂ ತಮಿಳು ಮತ್ತು ತೆಲುಗಿನಲ್ಲಿಯೇ ವ್ಯವಹರಿಸುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕನ್ನಡಪರ ಸಂಘಟನೆಗಳ ಆಕ್ರೋಶ
ಈ ಘಟನೆಯು ಕೇವಲ ಒಬ್ಬ ವ್ಯಕ್ತಿಯ ವರ್ತನೆಯಲ್ಲ, ಬದಲಿಗೆ ರಾಜ್ಯದಲ್ಲಿ ಕನ್ನಡ ಭಾಷೆಗೆ ಆಗುತ್ತಿರುವ ವ್ಯವಸ್ಥಿತ ಅವಮಾನದ ಸಂಕೇತ ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. "ಕರ್ನಾಟಕಕ್ಕೆ ಬರುವ ಪ್ರತಿಯೊಬ್ಬರೂ ಕನಿಷ್ಠ ಮಟ್ಟದ ಕನ್ನಡವನ್ನು ಕಲಿಯುವ ನಿಯಮವನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕನ್ನಡ ಕಲಿಯದವರಿಗೆ ಸರ್ಕಾರಿ ಸೌಲಭ್ಯಗಳನ್ನು ಮತ್ತು ಅನುಮತಿಗಳನ್ನು ನೀಡಬಾರದು" ಎಂದು ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.
ಈ ಘಟನೆಯು, ಈ ಹಿಂದೆ ಬೆಂಗಳೂರಿನ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಒಬ್ಬರು ಕನ್ನಡದಲ್ಲಿ ಮಾತನಾಡಲು ನಿರಾಕರಿಸಿ, ನಂತರ ಕ್ಷಮೆಯಾಚಿಸಿದ್ದ ಪ್ರಕರಣವನ್ನು ನೆನಪಿಸಿದೆ. ರಾಜ್ಯದಲ್ಲಿ ಪದೇ ಪದೇ ನಡೆಯುತ್ತಿರುವ ಇಂತಹ ಘಟನೆಗಳು, ಭಾಷಾ ಸೂಕ್ಷ್ಮತೆಯ ಅಗತ್ಯವನ್ನು ಮತ್ತು ಸ್ಥಳೀಯ ಭಾಷೆಗಳಿಗೆ ಗೌರವ ನೀಡಬೇಕಾದ ಅನಿವಾರ್ಯತೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿವೆ.