
ಮುಖ್ಯಮಂತ್ರಿ ಸಿದ್ದರಾಮಯ್ಯ
ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ನಾನಲ್ಲ; ಮಂಡಳಿಯ ಸದಸ್ಯ ಅಷ್ಟೇ- ಸಿಎಂ ಸ್ಪಷ್ಟನೆ
ಎಐಸಿಸಿಯ ಒಬಿಸಿ ಸಲಹಾ ಮಂಡಳಿಯ ಅಧ್ಯಕ್ಷರನ್ನಾಗಿ ನನ್ನನ್ನು ನೇಮಕ ಮಾಡಿಲ್ಲ. ನಾನು ಮಂಡಳಿಯ ಸದಸ್ಯ ಮಾತ್ರ. ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾಗಿರುವ ಡಾ. ಅನಿಲ್ ಜೈಹಿಂದ್ ಅಧ್ಯಕ್ಷತೆಯಲ್ಲಿ ಜುಲೈ 15ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ಎಐಸಿಸಿಯ ಒಬಿಸಿ ಸಲಹಾ ಮಂಡಳಿ ಅಧ್ಯಕ್ಷರನ್ನಾಗಿ ತಮ್ಮನ್ನು ನೇಮಕ ಮಾಡಲಾಗಿದೆ ಎಂಬುದು ಸುಳ್ಳು. ಅಂತಹ ಯಾವುದೇ ನೇಮಕಾತಿ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಒಬಿಸಿ ಸಲಹಾ ಮಂಡಳಿಯ ಸದಸ್ಯರಲ್ಲಿ ನಾನೂ ಒಬ್ಬ. ಸಲಹಾ ಮಂಡಳಿ ಸಭೆ ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾಗಿರುವ ಡಾ. ಅನಿಲ್ ಜೈಹಿಂದ್ ಅಧ್ಯಕ್ಷತೆಯಲ್ಲಿ ಜುಲೈ 15ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.
ಸಭೆಯ ಆತಿಥ್ಯವನ್ನು ಮುಖ್ಯಮಂತ್ರಿಗಳು ವಹಿಸಿಕೊಂಡಿದ್ದು, ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಸಭೆ ನಡೆಯಲಿದೆ. ವಿವಿಧ ರಾಜ್ಯಗಳ ಪಕ್ಷದ ಮಾಜಿ ಮುಖ್ಯಮಂತ್ರಿಗಳು, ಹಾಲಿ ಮತ್ತು ಮಾಜಿ ಸಂಸದರು, ಶಾಸಕರು ಸೇರಿ 50 ಮಂದಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಕಚೇರಿ ತಿಳಿಸಿದೆ.
ಶನಿವಾರವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ರಾಷ್ಟ್ರೀಯ ಸಲಹಾ ಮಂಡಳಿಯನ್ನು ರಚಿಸಲಾಗಿದೆ. ದೇಶಾದ್ಯಂತ ಒಬಿಸಿ ಮತಗಳನ್ನು ಗುರಿಯಾಗಿಸಿ ರಾಜಕೀಯ ಮಾಡುತ್ತಿರುವ ಬಿಜೆಪಿಗೆ ಪ್ರತ್ಯುತ್ತರ ನೀಡಲೆಂದೇ ಕಾಂಗ್ರೆಸ್ ದಿಟ್ಟ ನಿರ್ಧಾರ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗಿತ್ತು. ಆ ಮೂಲಕ ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವವನ್ನು ರಾಷ್ಟ್ರಮಟ್ಟಕ್ಕೆ ವಿಸ್ತರಿಸುವ ಉದ್ದೇಶ ಹೊಂದಿದೆ ಎನ್ನಲಾಗಿತ್ತು.
ಕಾಂಗ್ರೆಸ್ ಆಡಳಿತದಲ್ಲಿರುವ ಮೂರು ರಾಜ್ಯಗಳ ಪೈಕಿ (ಕರ್ನಾಟಕ, ಹಿಮಾಚಲ ಪ್ರದೇಶ, ತೆಲಂಗಾಣ), ಸಿದ್ದರಾಮಯ್ಯ ಅವರು ಮಾತ್ರ ಹಿಂದುಳಿದ ವರ್ಗಕ್ಕೆ ಸೇರಿದವರು. ರಾಜಕೀಯದಲ್ಲಿ ಒಬಿಸಿ ನಾಯಕರಾಗಿ ಅವರ ಅನುಭವ ಮತ್ತು ದೂರದೃಷ್ಟಿ, ಈ ಸಮಿತಿಯ ನೇತೃತ್ವಕ್ಕೆ ಅವರನ್ನು ಪರಿಪೂರ್ಣ ಆಯ್ಕೆಯನ್ನಾಗಿ ಮಾಡಿದೆ. ಈ ಸಮಿತಿಯು ಜುಲೈ 15ರಂದು ಬೆಂಗಳೂರಿನಲ್ಲಿ ತನ್ನ ಮೊಟ್ಟಮೊದಲ ಸಭೆಯನ್ನು ನಡೆಸಲಿದೆ.
ಒಬಿಸಿ ಮಂಡಳಿಯ ಹಿಂದಿನ ಕಾಂಗ್ರೆಸ್ ತಂತ್ರವೇನು!
ಈ ರಾಷ್ಟ್ರೀಯ ಸಲಹಾ ಮಂಡಳಿಯ ಮೂಲ ಉದ್ದೇಶ ಸ್ಪಷ್ಟ: ದೇಶಾದ್ಯಂತ ಹಿಂದುಳಿದ ವರ್ಗಗಳ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಆಳವಾಗಿ ಅರಿತು, ಅವುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಮತ್ತು ಕಾಂಗ್ರೆಸ್‌ನ ಕಾರ್ಯತಂತ್ರಗಳನ್ನು ಬಲಪಡಿಸುವುದು. ಎಐಸಿಸಿಯ ಹಿಂದುಳಿದ ವರ್ಗಗಳ ಘಟಕಕ್ಕೆ ಮುಂದಿನ ಕಾರ್ಯಯೋಜನೆಗಳು, ಅವುಗಳ ಅನುಷ್ಠಾನ, ಹಾಗೂ ಒಬಿಸಿಗಳಿಗೆ ಸಂಬಂಧಿಸಿದಂತೆ ಪಕ್ಷ ಕೈಗೆತ್ತಿಕೊಳ್ಳಬೇಕಾದ ವಿಷಯಗಳ ಕುರಿತು ಈ ಮಂಡಳಿ ಮಹತ್ವದ ಸಲಹೆಗಳನ್ನು ನೀಡಲಿದೆ.
ಸಿದ್ದರಾಮಯ್ಯ ಅವರ ರಾಜಕೀಯ ವರ್ಚಸ್ಸು ಮತ್ತು ಹಿಂದುಳಿದ ವರ್ಗಗಳ ಮೇಲಿನ ಹಿಡಿತವನ್ನು ಬಳಸಿಕೊಂಡು, ದೇಶಾದ್ಯಂತ ಒಬಿಸಿ ಸಮುದಾಯಗಳನ್ನು ಕಾಂಗ್ರೆಸ್‌ನತ್ತ ಸೆಳೆಯುವುದು ಈ ಮಂಡಳಿಯ ಪ್ರಮುಖ ಅಜೆಂಡಾ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಐತಿಹಾಸಿಕ ಮಂಡಳಿ ರಚನೆಗೆ ಅನುಮೋದನೆ ನೀಡುವ ಮೂಲಕ, ಕಾಂಗ್ರೆಸ್‌ನ ಈ ಹೊಸ ರಾಜಕೀಯ ಚಾಲನೆಗೆ ಹಸಿರು ನಿಶಾನೆ ತೋರಿಸಿದ್ದಾರೆ.
ಕರ್ನಾಟಕದಿಂದ ಸಿದ್ದರಾಮಯ್ಯ ಅವರ ಜೊತೆಗೆ ಬಿ.ಕೆ. ಹರಿಪ್ರಸಾದ್ ಮತ್ತು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿಯಂತಹ ಅನುಭವಿ ನಾಯಕರು ಇದ್ದಾರೆ.