ಎಐಸಿಸಿ ಒಬಿಸಿ ಮಂಡಳಿಗೆ ಸಿದ್ದರಾಮಯ್ಯ ನೇತೃತ್ವ: ಹಿಂದುಳಿದ ವರ್ಗಗಳ ರಾಜಕೀಯಕ್ಕೆ ಆನೆ ಬಲ
x

ಮುಖ್ಯಮಂತ್ರಿ ಸಿದ್ದರಾಮಯ್ಯ

ಎಐಸಿಸಿ ಒಬಿಸಿ ಮಂಡಳಿಗೆ ಸಿದ್ದರಾಮಯ್ಯ ನೇತೃತ್ವ: ಹಿಂದುಳಿದ ವರ್ಗಗಳ ರಾಜಕೀಯಕ್ಕೆ ಆನೆ ಬಲ

ಎಐಸಿಸಿಯ ಹಿಂದುಳಿದ ವರ್ಗಗಳ ಘಟಕಕ್ಕೆ ಮುಂದಿನ ಕಾರ್ಯಯೋಜನೆಗಳು, ಅವುಗಳ ಅನುಷ್ಠಾನ, ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಕೈಗೆತ್ತಿಕೊಳ್ಳಬೇಕಾದ ವಿಷಯಗಳ ಕುರಿತು ಈ ಸಲಹಾ ಮಂಡಳಿಯು ಸಲಹೆಗಳನ್ನು ನೀಡಲಿದೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ಜವಾಬ್ದಾರಿಯೊಂದು ಲಭಿಸಿದ್ದು, ಅದು ಅವರ ರಾಜಕೀಯ ವೃತ್ತಿಗೆ ಆನೆ ಬಲ ತುಂಬುವಂತಿದೆ. ಹಿಂದುಳಿದ ವರ್ಗಗಳ ರಾಜಕೀಯದಲ್ಲಿ ಅಪ್ರತಿಮ ಅನುಭವಿಯಾಗಿರುವ ಅವರ ನೇತೃತ್ವದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ರಾಷ್ಟ್ರೀಯ ಸಲಹಾ ಮಂಡಳಿಯನ್ನು ರಚಿಸಿದ್ದು ಶೀಘ್ರದಲ್ಲೇ ಅದರ ಕಾರ್ಯಚಟುವಟಿಕೆಗಳು ಆರಂಭಗೊಳ್ಳಲಿವೆ.

ಈ ಮಂಡಳಿಯ ಚುಕ್ಕಾಣಿಯನ್ನು ಸಿದ್ದರಾಮಯ್ಯ ಅವರಿಗೆ ನೀಡುವ ಮೂಲಕ ದೇಶಾದ್ಯಂತ ಒಬಿಸಿ ಮತಗಳನ್ನು ಗುರಿಯಾಗಿಸಿ ರಾಜಕೀಯ ಮಾಡುತ್ತಿರುವ ಬಿಜೆಪಿಗೆ ಕಾಂಗ್ರೆಸ್ ದಿಟ್ಟ ಪ್ರತ್ಯುತ್ತರ ಎಂದೇ ವಿಶ್ಲೇಷಿಸಲಾಗುತ್ತಿದೆ. ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವವನ್ನು ದೇಶಾದ್ಯಂತ ವಿಸ್ತರಿಸುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಸಿದ್ದರಾಮಯ್ಯ ಅವರ ಹಿಂದುಳಿದ ವರ್ಗಗಳ ರಾಜಕೀಯದ ನಾಗಾಲೋಟ ಮುಂದುವರಿದಿದೆ.

ಕಾಂಗ್ರೆಸ್ ಆಡಳಿತದಲ್ಲಿರುವ ಮೂರು ರಾಜ್ಯಗಳ ಪೈಕಿ (ಕರ್ನಾಟಕ, ಹಿಮಾಚಲ ಪ್ರದೇಶ, ತೆಲಂಗಾಣ), ಸಿದ್ದರಾಮಯ್ಯ ಅವರು ಮಾತ್ರ ಹಿಂದುಳಿದ ವರ್ಗಕ್ಕೆ ಸೇರಿದವರು. ರಾಜಕೀಯದಲ್ಲಿ ಒಬಿಸಿ ನಾಯಕರಾಗಿ ಅವರ ಅನುಭವ ಮತ್ತು ದೂರದೃಷ್ಟಿ, ಈ ಸಮಿತಿಯ ನೇತೃತ್ವಕ್ಕೆ ಅವರನ್ನು ಪರಿಪೂರ್ಣ ಆಯ್ಕೆಯನ್ನಾಗಿ ಮಾಡಿದೆ. ಈ ಸಮಿತಿಯು ಜುಲೈ 15ರಂದು ಬೆಂಗಳೂರಿನಲ್ಲಿ ತನ್ನ ಮೊಟ್ಟಮೊದಲ ಸಭೆಯನ್ನು ನಡೆಸಲಿದೆ.

ಒಬಿಸಿ ಮಂಡಳಿಯ ಹಿಂದಿನ ಕಾಂಗ್ರೆಸ್ ತಂತ್ರವೇನು!

ಈ ರಾಷ್ಟ್ರೀಯ ಸಲಹಾ ಮಂಡಳಿಯ ಮೂಲ ಉದ್ದೇಶ ಸ್ಪಷ್ಟ: ದೇಶಾದ್ಯಂತ ಹಿಂದುಳಿದ ವರ್ಗಗಳ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಆಳವಾಗಿ ಅರಿತು, ಅವುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಮತ್ತು ಕಾಂಗ್ರೆಸ್‌ನ ಕಾರ್ಯತಂತ್ರಗಳನ್ನು ಬಲಪಡಿಸುವುದು. ಎಐಸಿಸಿಯ ಹಿಂದುಳಿದ ವರ್ಗಗಳ ಘಟಕಕ್ಕೆ ಮುಂದಿನ ಕಾರ್ಯಯೋಜನೆಗಳು, ಅವುಗಳ ಅನುಷ್ಠಾನ, ಹಾಗೂ ಒಬಿಸಿಗಳಿಗೆ ಸಂಬಂಧಿಸಿದಂತೆ ಪಕ್ಷ ಕೈಗೆತ್ತಿಕೊಳ್ಳಬೇಕಾದ ವಿಷಯಗಳ ಕುರಿತು ಈ ಮಂಡಳಿ ಮಹತ್ವದ ಸಲಹೆಗಳನ್ನು ನೀಡಲಿದೆ.

ಸಿದ್ದರಾಮಯ್ಯ ಅವರ ರಾಜಕೀಯ ವರ್ಚಸ್ಸು ಮತ್ತು ಹಿಂದುಳಿದ ವರ್ಗಗಳ ಮೇಲಿನ ಹಿಡಿತವನ್ನು ಬಳಸಿಕೊಂಡು, ದೇಶಾದ್ಯಂತ ಒಬಿಸಿ ಸಮುದಾಯಗಳನ್ನು ಕಾಂಗ್ರೆಸ್‌ನತ್ತ ಸೆಳೆಯುವುದು ಈ ಮಂಡಳಿಯ ಪ್ರಮುಖ ಅಜೆಂಡಾ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಐತಿಹಾಸಿಕ ಮಂಡಳಿ ರಚನೆಗೆ ಅನುಮೋದನೆ ನೀಡುವ ಮೂಲಕ, ಕಾಂಗ್ರೆಸ್‌ನ ಈ ಹೊಸ ರಾಜಕೀಯ ಚಾಲನೆಗೆ ಹಸಿರು ನಿಶಾನೆ ತೋರಿಸಿದ್ದಾರೆ.

ನಾಲ್ವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಒಟ್ಟು 24 ಮಂದಿ ಸದಸ್ಯರನ್ನೊಳಗೊಂಡಿರುವ ಈ ಪ್ರಬಲ ಮಂಡಳಿಯ ನೇತೃತ್ವವನ್ನು ಸಿದ್ದರಾಮಯ್ಯ ವಹಿಸಿಕೊಳ್ಳಲಿದ್ದಾರೆ. ಕರ್ನಾಟಕದಿಂದ ಸಿದ್ದರಾಮಯ್ಯ ಅವರ ಜೊತೆಗೆ ಬಿ.ಕೆ. ಹರಿಪ್ರಸಾದ್ ಮತ್ತು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿಯಂತಹ ಅನುಭವಿ ನಾಯಕರು ಇದ್ದಾರೆ.

ಸಲಹಾ ಮಂಡಳಿಯ ಪ್ರಮುಖ ಸದಸ್ಯರು

1. ಸಿದ್ದರಾಮಯ್ಯ (ಮುಖ್ಯಮಂತ್ರಿ, ಕರ್ನಾಟಕ)

2. ಬಿ.ಕೆ. ಹರಿಪ್ರಸಾದ್‌

3. ಅಶೋಕ್‌ ಗೆಹಲೋಟ್‌ (ಮಾಜಿ ಸಿಎಂ)

4. ಭೂಪೇಶ್‌ ಬಘೇಲ್‌ (ಮಾಜಿ ಸಿಎಂ)

5. ವಿ. ನಾರಾಯಣಸ್ವಾಮಿ (ಮಾಜಿ ಸಿಎಂ)

6. ಸಚಿನ್‌ ಪೈಲಟ್‌

7. ಗುರುದೀಪ್‌ ಸಿಂಗ್‌ ಸಪ್ಪಲ್‌

8. ಅರುಣ್‌ ಯಾದವ್‌

9. ವಿಜಯ್‌ ನಾಮ್‌ದೇವ್‌ರಾವ್‌ ವಡೆಟ್ಟಿವಾರ್‌

10. ವಿ. ಹನುಮಂತರಾವ್‌

11. ಅಮಿತ್‌ ಚಾವ್ಡಾ

12. ಬಿ. ಮಹೇಶ್‌ ಕುಮಾರ್‌ ಗೌಡ್‌

13. ಪೊನ್ನಮ್‌ ಪ್ರಭಾಕರ್‌

14. ಡಾ. ವೀರಪ್ಪ ಮೊಯಿಲಿ (ಮಾಜಿ ಸಿಎಂ)

15. ಎಸ್‌. ಜೋತಿಮಣಿ (ಸಂಸದೆ)

16. ಶ್ರೀಕಾಂತ್‌ ಜೇನಾ

17. ಕಮಲೇಶ್ವರ್‌ ಪಟೇಲ್‌

18. ಅಜಯ್‌ ಕುಮಾರ್‌ ಲಲ್ಲು

19. ಸುಭಾಷಿಣಿ ಯಾದವ್‌

20. ಅಡೂರು ಪ್ರಕಾಶ್‌ (ಸಂಸದ)

21. ಧನೇಂದ್ರ ಸಾಹು

22. ಹೀನಾ ಕಾವ್ರೆ

23. ಡಾ. ಅನಿಲ್‌ ಜೈಹಿಂದ್ (ಸಲಹಾ ಮಂಡಳಿಯ ಸಂಚಾಲಕರು)

24. ಜಿತೇಂದರ್‌ ಬಘೇಲ್ (ಸಲಹಾ ಮಂಡಳಿಯ ಕಾರ್ಯದರ್ಶಿ)

ಜುಲೈ 15ಕ್ಕೆ ಬೆಂಗಳೂರಿನಲ್ಲಿ ಐತಿಹಾಸಿಕ ಸಭೆ: ಭವಿಷ್ಯದ ರಾಜಕೀಯಕ್ಕೆ ನಾಂದಿ!

ಎಐಸಿಸಿಯು ಈ ಮಹತ್ವದ ಮಂಡಳಿಯ ಚಟುವಟಿಕೆಗಳನ್ನು ಕರ್ನಾಟಕದಿಂದಲೇ ಆರಂಭಿಸಲು ನಿರ್ಧರಿಸಿದೆ. ಜುಲೈ 15 ರಂದು ಬೆಂಗಳೂರಿನ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಆವರಣದಲ್ಲಿನ ಭಾರತ್‌ ಜೋಡೊ ಭವನದಲ್ಲಿ ಮಂಡಳಿಯ ಮೊದಲ ಸಭೆ ನಡೆಯಲಿದೆ.

ಈ ಐತಿಹಾಸಿಕ ಸಭೆಗೆ ಮಂಡಳಿಯ ಸದಸ್ಯರು, ಸಂಚಾಲಕರು, ಕಾರ್ಯದರ್ಶಿಗಳು, ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಪ್ರಮುಖ ನಾಯಕರು ಸೇರಿದಂತೆ ದೇಶದ ವಿವಿಧ ರಾಜ್ಯಗಳ 90ಕ್ಕೂ ಹೆಚ್ಚು ನಾಯಕರಿಗೆ ಆಹ್ವಾನ ನೀಡಲಾಗಿದೆ. ಐವರು ಮಾಜಿ ಮುಖ್ಯಮಂತ್ರಿಗಳು ಮತ್ತು ಹತ್ತು ಮಂದಿ ಕೇಂದ್ರದ ಮಾಜಿ ಸಚಿವರು ಕೂಡ ಈ ಪ್ರಮುಖ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಮುಖ್ಯಮಂತ್ರಿಯವರ ಜೊತೆ ಸಮಾಲೋಚಿಸಿದ ಬಳಿಕ ಮಂಡಳಿಯ ಸದಸ್ಯರು ಸಭೆಯ ಸಿದ್ಧತೆಗಳನ್ನು ಯುದ್ಧೋಪಾದಿಯಲ್ಲಿ ಆರಂಭಿಸಿದ್ದಾರೆ. ಮಂಡಳಿಯ ಸದಸ್ಯರೂ ಆಗಿರುವ ಹರ್ಯಾಣ ಕಾಂಗ್ರೆಸ್‌ನ ಎಐಸಿಸಿ ಉಸ್ತುವಾರಿ ಬಿ.ಕೆ. ಹರಿಪ್ರಸಾದ್‌ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಸಭೆಗೆ ಅಗತ್ಯವಿರುವ ಪೂರಕ ಸಿದ್ಧತೆಗಳ ಕುರಿತು ಚರ್ಚಿಸಿದ್ದಾರೆ. ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವುದು ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಈ ಸಭೆಯಲ್ಲಿ ಕೆಲವು ಐತಿಹಾಸಿಕ ನಿರ್ಣಯಗಳು ಹೊರಬೀಳುವ ಸಾಧ್ಯತೆ ಇದೆ. ಇದು ಕಾಂಗ್ರೆಸ್‌ನ ಭವಿಷ್ಯದ ರಾಜಕೀಯಕ್ಕೆ ಹೊಸ ಆಯಾಮ ನೀಡುವ ಸುಳಿವು ನೀಡಿದೆ.

Read More
Next Story