
ಅಸ್ಸಾಂ, ಕೇರಳ ಚುನಾವಣೆ: ಎಐಸಿಸಿ ವೀಕ್ಷಕರಾಗಿ ಡಿ.ಕೆ. ಶಿವಕುಮಾರ್, ಕೆ.ಜೆ. ಜಾರ್ಜ್ ನೇಮಕ
ಮುಂಬರುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಎಐಸಿಸಿ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಿದೆ. ಅಸ್ಸಾಂ, ಕೇರಳ, ತಮಿಳುನಾಡು, ಪುದುಚೇರಿ, ಪಶ್ಚಿಮ ಬಂಗಾಳಕ್ಕೆ ವೀಕ್ಷಕರನ್ನು ನೇಮಿಸಲಾಗಿದೆ.
ಮುಂಬರುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಎಐಸಿಸಿ ಚುನಾವಣಾ ಕಾರ್ಯತಂತ್ರ ಮತ್ತು ಉಸ್ತುವಾರಿಗಾಗಿ ಹಿರಿಯ ನಾಯಕರನ್ನು ಹಿರಿಯ ವೀಕ್ಷಕರಾಗಿ ನೇಮಕ ಮಾಡಲಾಗಿದ್ದು, ರಾಜ್ಯದ ಇಬ್ಬರು ಪ್ರಭಾವಿ ನಾಯಕರಿಗೆ ಹೈಕಮಾಂಡ್ ಮಹತ್ವದ ಜವಾಬ್ದಾರಿ ನೀಡಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಅಸ್ಸಾಂ ರಾಜ್ಯದ ವಿಧಾನಸಭಾ ಚುನಾವಣಾ ವೀಕ್ಷಕರನ್ನಾಗಿ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರನ್ನು ಕೇರಳ ರಾಜ್ಯದ ಚುನಾವಣಾ ವೀಕ್ಷಕರನ್ನಾಗಿ ನೇಮಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಸಂಘಟನಾ ಚತುರ ಎಂದೇ ಖ್ಯಾತರಾಗಿರುವ ಡಿ.ಕೆ. ಶಿವಕುಮಾರ್ ಅವರಿಗೆ ಅಸ್ಸಾಂ ರಾಜ್ಯದ ಜವಾಬ್ದಾರಿ ನೀಡಲಾಗಿದೆ. ಇವರೊಂದಿಗೆ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಬಂಧು ತಿರ್ಕಿ ಅವರನ್ನೂ ಅಸ್ಸಾಂಗೆ ಹಿರಿಯ ವೀಕ್ಷಕರನ್ನಾಗಿ ನೇಮಿಸಲಾಗಿದೆ. ಚುನಾವಣಾ ತಂತ್ರಗಾರಿಕೆ ಮತ್ತು ಸಂಘಟನೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಅನುಭವವನ್ನು ಅಸ್ಸಾಂನಲ್ಲಿ ಬಳಸಿಕೊಳ್ಳಲು ಪಕ್ಷ ನಿರ್ಧರಿಸಿದೆ.
ಇನ್ನು, ಇಂಧನ ಸಚಿವ ಕೆ.ಜೆ. ಜಾರ್ಜ್ ಅವರನ್ನು ನೆರೆಯ ಕೇರಳ ರಾಜ್ಯಕ್ಕೆ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಕೇರಳ ರಾಜಕಾರಣದ ಬಗ್ಗೆ ಉತ್ತಮ ತಿಳುವಳಿಕೆ ಹೊಂದಿರುವ ಜಾರ್ಜ್ ಅವರೊಂದಿಗೆ ರಾಜಸ್ಥಾನದ ಪ್ರಭಾವಿ ನಾಯಕ ಸಚಿನ್ ಪೈಲಟ್, ಇಮ್ರಾನ್ ಪ್ರತಾಪ್‌ಗರ್ಹಿ ಮತ್ತು ಕನ್ಹಯ್ಯಾ ಕುಮಾರ್ ಅವರಿಗೆ ಕೇರಳದ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.
ಅಸ್ಸಾಂ ಮತ್ತು ಕೇರಳ ಮಾತ್ರವಲ್ಲದೆ ತಮಿಳುನಾಡು, ಪುದುಚೇರಿ ಮತ್ತು ಪಶ್ಚಿಮ ಬಂಗಾಳಕ್ಕೂ ವೀಕ್ಷಕರನ್ನು ನೇಮಿಸಲಾಗಿದೆ. ತಮಿಳುನಾಡು ಮತ್ತು ಪುದುಚೇರಿಗೆ ಮುಕುಲ್ ವಾಸ್ನಿಕ್, ಉತ್ತಮ್ ಕುಮಾರ್ ರೆಡ್ಡಿ ಮತ್ತು ಖಾಜಿ ಮೊಹಮ್ಮದ್ ನಿಜಾಮುದ್ದೀನ್ ಅವರಿಗೆ ಉಸ್ತುವಾರಿ ನೀಡಲಾಗಿದೆ. ಪಶ್ಚಿಮ ಬಂಗಾಳ ರಾಜ್ಯಕ್ಕೆ ಸುದೀಪ್ ರಾಯ್ ಬರ್ಮನ್, ಶಕೀಲ್ ಅಹ್ಮದ್ ಖಾನ್ ಮತ್ತು ಪ್ರಕಾಶ್ ಜೋಶಿ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ರಾಜ್ಯದ ಇಬ್ಬರು ಹಿರಿಯ ನಾಯಕರು ಅಭ್ಯರ್ಥಿಗಳ ಆಯ್ಕೆ, ಪ್ರಚಾರದ ಕಾರ್ಯತಂತ್ರ ಮತ್ತು ಸ್ಥಳೀಯ ನಾಯಕರ ನಡುವಿನ ಸಮನ್ವಯದ ಜವಾಬ್ದಾರಿಯನ್ನು ಹೊರಲಿದ್ದಾರೆ.

