
ಶಿಕ್ಷಣ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಸದ್ಬಳಕೆಯಾಗಲಿ: ಅರಣ್ಯ ಸಚಿವ ಈಶ್ವರ ಖಂಡ್ರೆ
ಎಐ ಭವಿಷ್ಯದ ಪರಿಕಲ್ಪನೆಯಲ್ಲ, ಇದು ಈಗ ಬೋಧನೆ ಮತ್ತು ಕಲಿಕೆಯ ತಂತ್ರಗಳನ್ನು ಪರಿವರ್ತಿಸುತ್ತಿದೆ. ಮುಂದಿನ ದಿನದಲ್ಲಿ ಎಐ ಸಂಶೋಧನಾ ಪ್ರಯೋಗಾಲಯಗಳು ಅಥವಾ ಭವಿಷ್ಯದ ಕಲ್ಪನೆಗೆ ಸೀಮಿತವಾಗಿರುವುದಿಲ್ಲ
"ತಂತ್ರಜ್ಞಾನದ ಪ್ರಗತಿಯಲ್ಲಿ ಕೃತಕ ಬುದ್ಧಿಮತ್ತೆ (AI) ಒಂದು ಆಧುನಿಕ ಆವಿಷ್ಕಾರವಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಇದರ ಸದ್ಬಳಕೆಯಾಗಬೇಕು. ಇದು ಭವಿಷ್ಯದ ಪರಿಕಲ್ಪನೆಯಲ್ಲ, ಬದಲಾಗಿ ವರ್ತಮಾನದ ಅಗತ್ಯವಾಗಿದೆ," ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ 'ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ - ಅನ್ವಯಿಕೆಗಳು ಮತ್ತು ಪರಿಣಾಮಗಳು' ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ, ಉದ್ಯೋಗ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರದ ಬಗ್ಗೆ ತಮ್ಮ ಚಿಂತನೆಗಳನ್ನು ಹಂಚಿಕೊಂಡರು.
ಪ್ರೌಢಶಾಲಾ ಹಂತದಿಂದಲೇ ಎಐ ಶಿಕ್ಷಣ ಅಗತ್ಯ
"ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ (Machine Learning) ಭವಿಷ್ಯದ ಅವಿಭಾಜ್ಯ ಅಂಗವಾಗಿದ್ದು, ಪ್ರೌಢಶಾಲಾ ಶಿಕ್ಷಣದ ಹಂತದಿಂದಲೇ ಇದರ ಅಳವಡಿಕೆಯು ಮಕ್ಕಳ ಜ್ಞಾನವರ್ಧನೆಗೆ ಇಂಬು ನೀಡುತ್ತದೆ. ಎಐ ಈಗ ಕೇವಲ ಸಂಶೋಧನಾ ಪ್ರಯೋಗಾಲಯಗಳಿಗೆ ಸೀಮಿತವಾಗಿಲ್ಲ. ಬದಲಾಗಿ, ವೈಯಕ್ತೀಕೃತ ಕಲಿಕೆಯ ವೇದಿಕೆಗಳು, ಸ್ವಯಂಚಾಲಿತ ಶ್ರೇಣೀಕರಣ, ವರ್ಚುವಲ್ ತರಗತಿಗಳು ಮತ್ತು ಸಂಶೋಧನೆಯವರೆಗೆ, ಶಿಕ್ಷಣ ಕ್ಷೇತ್ರದ ಪ್ರತಿಯೊಂದು ಹಂತದಲ್ಲೂ ಕ್ರಮೇಣ ತನ್ನ ಪ್ರಭಾವವನ್ನು ಬೀರಲಿದೆ," ಎಂದು ಅವರು ವಿವರಿಸಿದರು.
"ಸ್ಮಾರ್ಟ್ ತರಗತಿಗಳು, ಹೊಂದಾಣಿಕೆಯ ಕಲಿಕೆಯ ವೇದಿಕೆಗಳು ಮತ್ತು ಬುದ್ಧಿವಂತ ಬೋಧನಾ ವ್ಯವಸ್ಥೆಗಳ ಮೂಲಕ ಎಐ, ಸಾಂಪ್ರದಾಯಿಕ ಶಿಕ್ಷಣ ಮಾದರಿಯನ್ನು ಪರಿವರ್ತಿಸುತ್ತಿದೆ. ಮುಂದೊಂದು ದಿನ ನಮ್ಮ ರಾಜ್ಯದ ಗ್ರಾಮೀಣ ವಿದ್ಯಾರ್ಥಿಗಳೂ ಸಹ ನ್ಯೂಯಾರ್ಕ್, ಟೋಕಿಯೋದ ವಿದ್ಯಾರ್ಥಿಗಳಂತೆ ಎಐ-ಚಾಲಿತ ವೇದಿಕೆಗಳಲ್ಲಿ ಕಲಿಯಲು ಸಾಧ್ಯವಾಗಲಿದೆ," ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಉದ್ಯೋಗ ಸೃಷ್ಟಿಗೆ ಪೂರಕವಾಗಲಿ, ವಂಚನೆಗಲ್ಲ
ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕ ರಾಷ್ಟ್ರವಾಗಿದೆ ಎಂದು ಉಲ್ಲೇಖಿಸಿದ ಸಚಿವ ಖಂಡ್ರೆ, "ನಮ್ಮ ಬಲವಾದ ಆರ್ಥಿಕ ಬೆಳವಣಿಗೆಯ ಹಿಂದೆ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆ ಹಾಗೂ ಸದೃಢ ಸೇವಾ ವಲಯದ ಕೊಡುಗೆ ಇದೆ. ಭಾರತದ ಯುವ ಮತ್ತು ವಿದ್ಯಾವಂತ ಔದ್ಯೋಗಿಕ ಸಾಮರ್ಥ್ಯಕ್ಕೆ ಎಐ ಖಂಡಿತವಾಗಿಯೂ ಒಂದು ಪರಿವರ್ತಕ ಶಕ್ತಿಯಾಗಬೇಕು. ಆದರೆ, ತಂತ್ರಜ್ಞಾನದ ಬೆಳವಣಿಗೆಯು ಉದ್ಯೋಗ ವಂಚನೆಯ ಭೀತಿಯನ್ನು ಸೃಷ್ಟಿಸಬಾರದು," ಎಂದು ಎಚ್ಚರಿಸಿದರು.
ಸುಸ್ಥಿರ ಅಭಿವೃದ್ಧಿಗೆ ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆ
"ಸುಧಾರಿತ ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆಯಿಲ್ಲದೆ, ಬಹು-ವಲಯ ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ. ಪ್ರಗತಿಯೂ ಆಗಬೇಕು, ಪರಿಸರವೂ ಉಳಿಯಬೇಕು. ಈ ನಿಟ್ಟಿನಲ್ಲಿ ಸುಸ್ಥಿರ ಅಭಿವೃದ್ಧಿಯ ಸಂಪೂರ್ಣ ಪರಿಕಲ್ಪನೆಯು ಸಮಗ್ರ ಅಭಿವೃದ್ಧಿ ಮತ್ತು ಸುಧಾರಣೆಯ ಸೋಪಾನವಾಗಬೇಕು," ಎಂದು ಸಚಿವರು ಪ್ರತಿಪಾದಿಸಿದರು.
"ಭಾರತವು ತಂತ್ರಜ್ಞಾನದಲ್ಲಿ ಜಾಗತಿಕ ನಾಯಕನಾಗುವ ಹೊಸ್ತಿಲಲ್ಲಿದೆ. ನಮ್ಮ ಶಕ್ತಿಯು ಕೇವಲ ಎಂಜಿನಿಯರ್ಗಳು ಮತ್ತು ನಾವೀನ್ಯಕಾರರನ್ನು ಉತ್ಪಾದಿಸುವುದಕ್ಕೆ ಸೀಮಿತವಾಗಬಾರದು. ಬದಲಾಗಿ, ನೈಜ-ಪ್ರಪಂಚದ ಸವಾಲುಗಳನ್ನು ಪರಿಹರಿಸಲು ಎಐ ಅನ್ನು ಸಮರ್ಥವಾಗಿ ಬಳಸಬಲ್ಲ ದೂರದೃಷ್ಟಿಯ ನಾಯಕರನ್ನು ನಾವು ಸಿದ್ಧಪಡಿಸಬೇಕು," ಎಂದು ಅವರು ಕರೆ ನೀಡಿದರು.