Ahmedabad plane crash: What did the state leaders say? Here are the details
x

ಅಪಘಾತಕ್ಕೀಡಾಗಿರುವ ಏರ್‌ ಇಂಡಿಯಾ ವಿಮಾನ

ಅಹಮದಾಬಾದ್‌ ವಿಮಾನ ದುರಂತ: ರಾಜ್ಯದ ಪ್ರಮುಖರು ಯಾರು ಏನಂದರು? ಇಲ್ಲಿದೆ ವಿವರ

ಗುಜರಾತ್‌ನ ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ಅಪಘಾತದ ಬಗ್ಗೆ ರಾಜ್ಯದ ಪ್ರಮುಖ ರಾಜಕೀಯ ನಾಯಕರು ಘಟನೆ ಕುರಿತು ಸಂತಾಪಗಳನ್ನು ಸೂಚಿಸಿದ್ದಾರೆ.


ಅಹಮದಾಬಾದ್​ನ ಸರ್ದಾರ್​ ವಲ್ಲಭಭಾಯ್​ ವಿಮಾನ ನಿಲ್ದಾಣದಿಂದ ಲಂಡನ್​ಗೆ ಹಾರಾಟ ಆರಂಭಿಸಿದ್ದ ಏರ್​ಇಂಡಿಯಾ ಪತನಗೊಂಡು ೨೦೦ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ಭೀಕರ ದುರಂತದ ಹಿನ್ನೆಲೆಯಲ್ಲಿ ಕರ್ನಾಟಕದ ರಾಜಕಾರಣಿಗಳು ಸಂತಾಪ ಸೂಚಿಸುತ್ತಿದ್ದಾರೆ. ಅವರ ವಿವರ ಈ ಕೆಳಗೆ ನೀಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ʼಎಕ್ಸ್‌ʼ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದು, "ಸುಮಾರು 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಗುಜರಾತ್‌ನ ಅಹಮದಾಬಾದ್ ನಿಲ್ದಾಣದಲ್ಲಿ ಅಪಘಾತಕ್ಕೀಡಾದ ಸುದ್ದಿ ತಿಳಿದು ಆಘಾತವಾಗಿದೆ. ಇದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಗಳಿಗೆ. ಈ ಅಪಘಾತದಿಂದ ಹೆಚ್ಚಿನ ಹಾನಿಯಾಗದಿರಲಿ, ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸೋಣ." ಎಂದು ಪೋಸ್ಟ್‌ ಮಾಡಿದ್ದಾರೆ.

ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ "ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತವು ಒಂದು ಭೀಕರ ದುರಂತ. ತೀವ್ರ ಆಘಾತ ಮತ್ತು ದುಃಖವಾಗಿದೆ. ಏರ್ ಇಂಡಿಯಾ ವಿಮಾನದಲ್ಲಿದ್ದವರ ಕುಟುಂಬಗಳೊಂದಿಗೆ ನನ್ನ ಸಂತಾಪಗಳು ಮತ್ತು ಪ್ರಾರ್ಥನೆಗಳನ್ನು ಸಲ್ಲಿಸುತ್ತೇನೆ. ದೇವರು ನಮಗೆ ಸಹಾಯ ಮಾಡಲಿ." ಎಂದು ಬರೆದುಕೊಂಡಿದ್ದಾರೆ.

ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ತಮ್ಮ ʼಎಕ್ಸ್‌ʼ ಖಾತೆಯಲ್ಲಿ ಪ್ರತಿಕ್ರಿಯಿಸಿ, "ಅಹಮದಾಬಾದ್​ನಿಂದ ಲಂಡನ್‌ಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ (AI-171) ದುರಂತವು ನನಗೆ ತೀವ್ರ ಆಘಾತ, ದಿಗ್ಭ್ರಮೆ ಉಂಟು ಮಾಡಿದೆ. ಅತ್ಯಂತ ಹೃದಯ ವಿದ್ರಾವಕವಾದ ಈ ದುರ್ಘಟನೆಯಲ್ಲಿ ಅಸುನೀಗಿದ ಪ್ರಯಾಣಿಕರ ಕುಟುಂಬಗಳಿಗೆ ನನ್ನ ದುಃಖತಪ್ತ ಸಂತಾಪಗಳು. ದೇವರ ದಯೆಯಿಂದ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲರೂ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ." ಎಂದು ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, "ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಿಂದ ತೀವ್ರ ಆಘಾತವಾಗಿದೆ. ಆಘಾತವು ಹೃದಯವಿದ್ರಾವಕವಾಗಿದೆ. ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಅವರ ಕುಟುಂಬಗಳೊಂದಿಗೆ ನಾವಿದ್ದೇವೆ" ಎಂದಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಮ್ಮ ಸಾಮಾಜಿಕ ಜಾಲತಾಣ ʼಎಕ್ಸ್‌ʼ ನಲ್ಲಿ "ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತದಿಂದ ಆಘಾತವಾಗಿದೆ. ಸಂತ್ರಸ್ತರಿಗೆ ಹಾಗೂ ಕುಟುಂಬಗಳಿಗೆ ನನ್ನ ಸಂತಾಪಗಳು. ಈ ಕಷ್ಟದ ಸಮಯದಲ್ಲಿ ದುರಂತದಲ್ಲಿ ಬಲಿಯಾದವರಿಗೆ ಪ್ರಾರ್ಥನೆಗಳನ್ನು ಸಲ್ಲಿಸುತ್ತೇನೆ. ಎಲ್ಲರ ಸುರಕ್ಷತೆ ಮತ್ತು ತ್ವರಿತ ತುರ್ತು ಕ್ರಮ ಕೈಗೊಳ್ಳುವಂತೆ ಹಾರೈಸುತ್ತೇನೆ." ಎಂದು ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ತಮ್ಮ ʼಎಕ್ಸ್‌ʼ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದು, "ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದ ಸುದ್ದಿಯಿಂದ ಆಘಾತವಾಗಿದೆ. ಪ್ರಯಾಣಿಕರು, ಸಿಬ್ಬಂದಿ ಮತ್ತು ಅವರ ಕುಟುಂಬಗಳೊಂದಿಗೆ ನಾವಿದ್ದೇವೆ. ಈ ಭೀಕರ ನಷ್ಟದಿಂದ ಬಾಧಿತರಾದವರೊಂದಿಗೆ ನಾವು ಒಗ್ಗಟ್ಟಾಗಿ ನಿಲ್ಲುತ್ತೇವೆ" ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಗುಜರಾತ್‌ನ ಅಹಮದಾಬಾದ್‌ನಲ್ಲಿ ಭೀಕರ ವಿಮಾನ ದುರಂತಕ್ಕೆ ಈಡಾಗಿರುವ ಸುದ್ದಿ ಕೇಳಿ ಅತ್ಯಂತ ಆಘಾತವಾಗಿದೆ. ಈ ಅವಘಡದಲ್ಲಿ ನೂರಾರು ಜನರು ಜೀವ ಕಳೆದುಕೊಂಡಿರುವುದು ಅತ್ಯಂತ ದುಃಖದ ಸಂಗತಿ. ಈ ಘೋರ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ದೇವರು ಚಿರ ಶಾಂತಿ ನೀಡಲಿ, ಮೃತರ ಕುಟುಂಬಸ್ಥರಿಗೆ ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ." ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯಿಸಿದ್ದು "ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದಿಂದ ತೀವ್ರ ಆಘಾತ ಮತ್ತು ನೋವುಂಟಾಗಿದೆ. ಈ ಅತ್ಯಂತ ಕಷ್ಟಕರ ಸಮಯದಲ್ಲಿ ವಿಮಾನದಲ್ಲಿದ್ದ ಪ್ರತಿಯೊಬ್ಬರೂ ಮತ್ತು ಅವರ ಕುಟುಂಬಗಳೊಂದಿಗೆ ನನ್ನ ಸಂತಾಪಗಳು ಮತ್ತು ಪ್ರಾರ್ಥನೆ," ಎಂದು ಬರೆದುಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಸುಧಾಕರ್‌ "ಅಹಮದಾಬಾದ್‌ನಲ್ಲಿ ಸಂಭವಿಸಿದ ದುರದೃಷ್ಟಕರ ವಿಮಾನ ಅಪಘಾತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದೇನೆ. ಈ ಕಷ್ಟದ ಸಮಯದಲ್ಲಿರುವ ಪ್ರಯಾಣಿಕರು, ಸಿಬ್ಬಂದಿ ಮತ್ತು ಅವರ ಕುಟುಂಬಗಳೊಂದಿಗೆ ನಾವಿದ್ದೇವೆ ಎಂದರು.

Read More
Next Story