A fistfight for the throne | Ahinda Minister holds secret breakfast meeting, meets CM
x

ಸತೀಶ್‌ ಜಾರಕಿಹೊಳಿ, ಡಾ.ಜಿ. ಪರಮೇಶ್ವರ್‌, ಹೆಚ್‌.ಸಿ. ಮಹದೇವಪ್ಪ ಹಾಗೂ ಬಿ.ಕೆ. ಹರಿಪ್ರಸಾದ್‌

ಗದ್ದುಗೆ ಗುದ್ದಾಟ| ಅಹಿಂದ ಸಚಿವರಿಂದ ಬ್ರೇಕ್‌ಫಾಸ್ಟ್‌ ರಹಸ್ಯ ಸಭೆ; ನಂತರ ಸಿಎಂ ಭೇಟಿ

ಸಚಿವ ಸಂಪುಟ ಸಭೆಗೂ ಮುನ್ನ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಅಹಿಂದ ಶಾಸಕರು ಹಾಗೂ ಸಚಿವರು, ಭವಿಷ್ಯದಲ್ಲಿ ನಡೆಯಬಹುದಾದ ರಾಜಕೀಯ ಮೇಲಾಟಗಳ ಬಗ್ಗೆ ಯಾವ ರೀತಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


Click the Play button to hear this message in audio format

ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ದಲಿತ ಶಾಸಕರು ಗುರುವಾರ ಉಪಾಹಾರ ಕೂಟದ ಹೆಸರಲ್ಲಿ ಮಾತುಕತೆ ನಡೆಸಿ, ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿರುವುದು ರಾಜಕೀಯ ಪಡಸಾಲೆಯಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಿದೆ.

ಗುರುವಾರ(ನ.27) ಬೆಳಿಗ್ಗೆ ಸಿಎಂ ಅವರ ಭೇಟಿಗೂ ಮೊದಲೇ ಸಚಿವ ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಅಹಿಂದ ಸಚಿವರ ಬ್ರೇಕ್ ಫಾಸ್ಟ್ ಸಭೆ ನಡೆಸಲಾಗಿದೆ. ಸಭೆಯಲ್ಲಿ ರಾಜಕೀಯ ವಿದ್ಯಾಮಾನಗಳ ಕುರಿತು ಚರ್ಚಿಸಲಾಗಿದೆ. ಸಭೆಯಲ್ಲಿ ಡಾ.ಜಿ. ಪರಮೇಶ್ವರ್‌, ಹೆಚ್‌.ಸಿ. ಮಹದೇವಪ್ಪ, ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಹಲವು ರಹಸ್ಯ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಬುಧವಾರವಷ್ಟೇ (ನ.26) ನಾವು ಸಿಎಂ ಪರವಾಗಿದ್ದೇವೆ ಎಂದು ಸತೀಶ್‌ ಜಾರಕಿಹೊಳಿ ಹೇಳಿಕೆ ನೀಡಿದ್ದರು. ಅಧಿಕಾರ ಹಸ್ತಾಂತರ ಹಾಗೂ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಜೋರಾಗಿರುವ ಸಂದರ್ಭದಲ್ಲಿ ಸಿಎಂ ಜತೆಗಿನ ಸಭೆ ಮಹತ್ವ ಪಡೆದುಕೊಂಡಿದೆ. ಸಚಿವ ಸಂಪುಟ ಸಭೆಗೂ ಮುನ್ನ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಅಹಿಂದ ಶಾಸಕರು ಹಾಗೂ ಸಚಿವರು, ಭವಿಷ್ಯದಲ್ಲಿ ನಡೆಯಬಹುದಾದ ರಾಜಕೀಯ ಮೇಲಾಟಗಳ ಬಗ್ಗೆ ಯಾವ ರೀತಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಸಮಸ್ಯೆಗಳನ್ನು ಎದುರಿಸುವ ಕುರಿತು ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಾಯಕತ್ವ ಗೊಂದಲ ಶೀಘ್ರವೇ ಇತ್ಯರ್ಥ

ಖಾಸಗಿ ಕಾರ್ಯಕ್ರಮದ ನಿಮಿತ್ತ ಬುಧವಾರ (ನ.26) ಸಂಜೆ ಬೆಂಗಳೂರಿಗೆ ಆಗಮಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ(ನ.27) ದೆಹಲಿಗೆ ಪ್ರಯಾಣ ಬೆಳೆಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ದೆಹಲಿಗೆ ಹೋದ ಮೇಲೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಸೇರಿದಂತೆ ಇತರೆ ನಾಯಕರನ್ನು ಕರೆಸಿ ಮಾತನಾಡಲಾಗುವುದು ಎಂದು ತಿಳಿಸಿದರು.

ಹೈಕಮಾಂಡ್‌ ಒಬ್ಬಂಟಿಯಲ್ಲ. ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ಎಐಸಿಸಿ ನಾಯಕರೆಲ್ಲರೂ ಸೇರಿ ರಾಜ್ಯ ರಾಜಕೀಯದ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಶೀಘ್ರವೇ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲಾಗುವುದು ಎಂದು ಹೇಳಿದರು.

Read More
Next Story