
ಆರ್‌ಎಸ್‌ಎಸ್ ವಿರೋಧಿ ದೇವನೂರು ಮಹಾದೇವ, ಹಂಸಲೇಖಗೆ ವಿಧಾನ ಪರಿಷತ್ ಸ್ಥಾನ: ಅಹಿಂದ ಆಗ್ರಹ
ಆರ್‌ಎಸ್‌ಎಸ್ ಟೀಕಾಕಾರರನ್ನು ಮೇಲ್ಮನೆಗೆ ಕಳುಹಿಸಿ ಬಿಜೆಪಿಗೆ ಮುಜುಗರ ಸೃಷ್ಟಿಸುವುದು ಮತ್ತು ಅಹಿಂದ ಶಕ್ತಿ ಬಲಪಡಿಸುವುದು ಉದ್ದೇಶವಾಗಿದೆ. ಹಾಗಾಗಿ ದೇವನೂರು ಮಹಾದೇವ ಹಾಗೂ ಹಂಸಲೇಖ ನೇಮಕಕ್ಕೆ ಒತ್ತಡ ಹೇರಲಾಗಿದೆ.
ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಾಗಿ ದಲಿತ, ಅಹಿಂದ, ಮೇಲ್ವರ್ಗದ ನಾಯಕರ ನಡುವೆ ಬಹಿರಂಗ ಸಂಘರ್ಷ ನಡೆಯುತ್ತಿರುವಾಗ ವಿಧಾನ ಪರಿಷತ್ತಿನ ಖಾಲಿ ಸ್ಥಾನಗಳಿಗೆ ನಾಮನಿರ್ದೇಶನ ಮಾಡಲು ಅಹಿಂದ ಅಸ್ತ್ರ ಪ್ರಯೋಗವಾಗುತ್ತಿರುವುದು ಕಾಂಗ್ರೆಸ್ ನಲ್ಲಿ ಮತ್ತೊಂದು ರಾಜಕೀಯ ಪಗಡೆಯಾಟಕ್ಕೆ ರಂಗ ಸಿದ್ದವಾಗುವಂತೆ ಕಾಣಿಸುತ್ತಿದೆ.
ಜತೆಗೆ ಆರ್‌ಎಸ್‌ಎಸ್ ಟೀಕಾಕಾರರನ್ನು ಮೇಲ್ಮನೆಗೆ ಕಳುಹಿಸಿ ಬಿಜೆಪಿಗೆ ಮುಜುಗರ ಸೃಷ್ಟಿಸುವುದೂ ಅಹಿಂದ ಉದ್ದೇಶಗಳಲ್ಲೊಂದಾಗಿದೆ ಎನ್ನಲಾಗಿದೆ. ಆ ಕಾರಣಕ್ಕೆ ಹಿರಿಯ ಸಾಹಿತಿ ದೇವನೂರು ಮಹಾದೇವ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಅವರ ಹೆಸರನ್ನು ಅಹಿಂದ ಸಂಘಟನೆ ಪ್ರಬಲವಾಗಿ ಬೆಂಬಲಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಡ ಹೇರಲು ಸಿದ್ಧವಾಗಿದೆ.
ವಿಧಾನ ಪರಿಷತ್ತಿಗೆ ಕಲೆ ಸಾಹಿತ್ಯ, ಸಂಸ್ಕೃತಿ, ರಂಗಭೂಮಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ನಾಮನಿರ್ದೇಶನ ಮಾಡಲು ಕನ್ನಡದ ಹಿರಿಯ ಸಾಹಿತಿ ದೇವನೂರು ಮಹಾದೇವ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡಲು ರಾಜ್ಯಪಾಲರಿಗೆ ಶಿಫಾರಸು ಮಾಡಲು ರಾಜ್ಯ ಸರ್ಕಾರವನ್ನು ಆಗ್ರಹಿಸಲು ಅಹಿಂದ ಸಂಘಟನೆ ನಿರ್ಧರಿಸಿದೆ.
ಶನಿವಾರ ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿರುವ ಗಾಂದಿ ಭವನದ ಬಾಪು ಸಭಾಂಗಣದಲ್ಲಿ, "ಅಹಿಂದ" -ಚಳುವಳಿ ಸಂಘಟಣೆ ವತಿಯಿಂದ ರಾಜ್ಯವ್ಯಾಪಿ ಜಿಲ್ಲಾ ಘಟಕಗಳ ಕೇಡರ್‌ಗಳ ಸಭೆಯನ್ನು ಏರ್ಪಡಿಸಲಾಗಿತ್ತು ಈ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಸಂಚಾಲಕ ಎಸ್ ಮೂರ್ತಿ ಪ್ರಟಕಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ಮತ್ತು ಸಂಘ ಪರಿವಾರದ ಸಿದ್ಧಾಂತಗಳನ್ನು ಕಟುವಾಗಿ ವಿರೋಧಿಸುತ್ತಾ ಬಂದಿರುವ ಸಾಹಿತಿ ದೇವನೂರು ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಅವರ ನೇಮಕದಿಂದ ವಿಧಾನ ಪರಿಷತ್‌ನಲ್ಲಿ ಬಿಜೆಪಿ ವಿರುದ್ಧ ಮತ್ತಷ್ಟು ಗಟ್ಟಿ ದನಿಯಲ್ಲಿ ಚರ್ಚಿಸುವ ಶಕ್ತಿ ಬರಲಿದೆ ಹಾಗೂ ಹಿಂದುಳಿದ ಮತ್ತು ದಲಿತರ ಖ್ಯಾತನಾಮರಿಗೆ ಅವಕಾಶ ಕಲ್ಪಿಸುವ ಮೂಲಕ ಅಹಿಂದ ಚಳುವಳಿಯನ್ನು ಇನ್ನೊಂದು ಸ್ತರಕ್ಕೆ ಒಯ್ಯಬಹುದು ಎಂಬುದು ಈ ಬೇಡಿಕೆಯ ತಾತ್ಪರ್ಯವಾಗಿದೆ ಎನ್ನಲಾಗಿದೆ.
ಆರ್‌ಎಸ್‌ಎಸ್ ವಿರೋಧಿ ಸಾಹಿತಿ ದೇವನೂರು
ಹಿಂದುತ್ವ ಸಿದ್ಧಾಂತ ವಿರೋಧಿಸುತ್ತಾ ಬಂದಿರುವ ಹಾಗೂ ʼಕುಸುಮಬಾಲೆ, ಒಡಲಾಳʼ ಕೃತಿಗಳಿಂದ ಖ್ಯಾತರಾದ ಸಾಹಿತಿ ದೇವನೂರು ಮಹಾದೇವ ಅವರು ಎರಡು ವರ್ಷಗಳ ಹಿಂದೆ ʼಆರ್‌ಎಸ್‌ಎಸ್ : ಆಳ ಅಗಲʼ ಎನ್ನುವ ಕಿರುಹೊತ್ತಿಗೆಯನ್ನು ಪ್ರಕಟಿಸುವ ಮೂಲಕ ಆರ್‌ಎಸ್‌ಎಸ್ ನ ವರ್ಣಾಶ್ರಮ ಹಾಗೂ ಇತರ ನೀತಿಗಳ ವಿರುದ್ಧ ಕಟುವಾಗಿ ಟೀಕಿಸಿದ್ದರು.
ಇದು ಕರ್ನಾಟಕದಲ್ಲಿ ಅತಿ ಹೆಚ್ಚು ಮಾರಾಟವಾದ ಕೃತಿಯಾಗಿತ್ತು. ಈಗ ತಮಿಳು, ತೆಲುಗು, ಇಂಗ್ಲಿಷ್ ಮತ್ತಿತರ ಭಾಷೆಗಳಲ್ಲೂ ಪ್ರಕಟವಾಗುತ್ತಿದ್ದು, ದೇಶವ್ಯಾಪಿ ಪ್ರಚಾರಕ್ಕೆ ಬಂದಿದೆ. ದೇವನೂರು ಅವರು ಸಿದ್ದರಾಮಯ್ಯ ಅವರ ಸ್ನೇಹಿತರೂ ಆಗಿರುವ ವಿಚಾರ ಎಲ್ಲರಿಗೂ ಗೊತ್ತಿರುವ ವಿಷಯ.
ಮೋದಿ ವಿರೋಧಿಸಿದ್ದ ಹಂಸಲೇಖ
ಅದೇ ರೀತಿ, ಹಂಸಲೇಖ ಅವರು ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡಿ ವಿವಾದ ಸೃಷ್ಟಿ ಮಾಡಿದ್ದರು. ವರ್ಷದ ಹಿಂದೆ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಂಗ್ಯವಾಡಿದ್ದ ಹಂಸಲೇಖ , ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಗೆದ್ದು ಸಂಸತ್ ಪ್ರವೇಶ ಮಾಡುವ ಸಂದರ್ಭದಲ್ಲಿ ಸಂಸರ್ ಭವನಕ್ಕೆ ನಮಸ್ಕರಿಸಿ ಮೋದಿ ಪ್ರವೇಶಿಸಿದ್ದರು. ಆಗ ಈ ವ್ಯಕ್ತಿಗೆ ಎಷ್ಟು ವಿನಮ್ರತೆ ಇದೆ ಅಂತ ಅಂದುಕೊಂಡಿದ್ದೆ. ಆದರೆ ಕೇರಳದ ಸೌಂಡ್ ಎಂಜಿನಿಯರ್ ಓರ್ವ ಇದು ಬರಿ ನಾಟಕ ಎಷ್ಟೇ ಎಂದಿದ್ದ. ಸಂಸತ್ ಭವನಕ್ಕೆ ಸಮಸ್ಕರಿಸಿದ್ದ ಮೋದಿ ಸಂಸತ್ ಭವನವನ್ನೇ ಬಲಿಸಿದ್ದಾರೆ. ಈ ಬಾರಿ ಸಂವಿಧಾನಕ್ಕೆ ನಮಸ್ಕರಿಸಿದ್ದರು, ಆದ್ದರಿಂದ ಸಂವಿಧಾನವನ್ನೇ ಬದಲಿಸಬಹುದಾಗಿದೆ. ಆದ್ದರಿಂದ ಕನ್ನಡಿಗರು ಎಚ್ಚರಿಕೆ ಇಂದ ಇರ್ಬೇಕು," ಎಂದು ಹೇಳಿಕೆ ನೀಡಿದ್ದರು.
"ದೇಶದ ಪ್ರತಿ ಬ್ರಾಹ್ಮಣನ ಮನೆಯಲ್ಲೂ ಭಗವದ್ಗೀತೆ ಜೊತೆಗೆ ಆರ್ ಎಸ್ ಎಸ್ ನ ಚಿಂತನ ಗಂಗಾ ಪುಸ್ತಕ ಇರುತ್ತೆ. 40 ವರ್ಷದ ಹಿಂದೆ ನಾನು ಚಿಂತನ ಗಂಗಾ ಪುಸ್ತಕ ಓದಿದ್ದೆ, ಅದು ಆರ್ ಎಸ್ ಎಸ್ ಅವರ ಸಂವಿಧಾನ. ಆ ಪುಸ್ತಕ ಎಷ್ಟು ಕೆಲಸ ಮಾಡುತ್ತೆ ಎಂದರೇ, ರಾಷ್ಟ್ರದಲ್ಲಿ ನಡೆಯುತ್ತಿರುವ ಸಂಗತಿಗಳಿಗೆ ವಿರುದ್ಧದವಾದ ಪ್ರತಿದಾಳಿ ಹೇಗೆ ಮಾಡಬೇಕು ಅಂತ ಆ ಚಿಂತನಾ ಗಂಗಾ ಮೂಲಕ ಮೆಸೇಜ್ ಕಳುಹಿಸುತ್ತಾರೆ," ಎಂದೂ ಟೀಕಿಸಿದ್ದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಬಳಿಕ 2023 ರ ಮೈಸೂರು ದಸರಾ ಉದ್ಘಾಟನೆಯನ್ನು ಹಂಸಲೇಖ ಕೈಯ್ಯಿಂದಲೇ ನೆರವೇರಿಸಿದ್ದರು.
ಅಹಿಂದ ಸಂಘಟನೆ ಬೆಂಗಳೂರಿನಲ್ಲಿ ಶನಿವಾರ ನಡೆಸಿದ ಸಭೆ
ಯಾವಾಗ ನಾಮ ನಿರ್ದೇಶನ?
ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಗಳ ಸಾದಕರನ್ನು ಕರ್ನಾಟಕ ವಿಧಾನ ಪರಿಪತ್‌ಗೆ ನಾಮನಿರ್ದೇಶನ ಮಾಡುವ ಸಂಪ್ರದಾಯಗಳಿವೆ. ಹಾಲಿ ಅಂತಹ 2 ಶಾಸಕ ಸ್ಥಾನಗಳು ಖಾಲಿಯಿವೆ ಮತ್ತು ಇದೆ ತಿಂಗಳು 27ರಂದು ಮತ್ತೊಂದು ಸ್ಥಾನ ಖಾಲಿಯಾಗಲಿದೆ. ಆ ಶಾಸಕ ಸ್ಥಾನಗಳಿಗೆ ನಾದಬ್ರಹ್ಮ ಖ್ಯಾತಿಯ ಸಂಗೀತ ನಿರ್ದೇಶಕ ಹಂಸಲೇಖಾ ಮತ್ತು ಹಿರಿಯ ದಲಿತ ಸಾಹಿತಿ ದೇವನೂರು ಮಹಾದೇವ ಅವರನ್ನು ನಾಮನಿರ್ದೇಶನ ಮಾಡಲು ರಾಜ್ಯಪಾಲರಿಗೆ ಶಿಫಾರಸು ಮಾಡುವಂತೆ ಕರ್ನಾಟಕ ಸರ್ಕಾರವನ್ನು ವಿನಂತಿಸಲು ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.
ಜಾತಿ ಗಣತಿ: ಅಹಿಂದ ಒತ್ತಡ
ಇದಲ್ಲದೇ ಹೆಚ್.ಕಾಂತರಾಜ್ ನೇತೃತ್ವದ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015(ಜಾತಿ ಜನಗಣತಿ)ವರದಿಯನ್ನು ಕರ್ನಾಟಕ ಸರ್ಕಾರ ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಲು ಮತ್ತು ಬಿಡುಗಡೆಯ ವಿಳಂಬದ ಬಗ್ಗೆ ರಾಜ್ಯವ್ಯಾಪಿ ಜನಾಂದೋಲನ ಮಾಡಲು ಸಭೆ ತೀರ್ಮಾನಿಸಿದೆ;
ಜನಗಣತಿ ನಮೂನೆಗಳಲ್ಲಿ ಜಾತಿ ಮತ್ತು ಒಳಜಾತಿಗಳ ಕಾಲಂ ಅಳವಡಿಸಿ, ಜನಗಣತಿ ಜೊತೆಯಲ್ಲಿಯೇ ಜಾತಿ ಗಣತಿ ಮಾಡಲು ಭಾರತದ ಜನಗಣತಿ ಆಯುಕ್ತರು ಮತ್ತು ಕೇಂದ್ರ ಸರ್ಕಾರವನ್ನು ಕೋರಲು ಮತ್ತು ರಾಜ್ಯವ್ಯಾಪಿ ಜನಾಂದೋಲನ ಮಾಡಲು ಸಭೆಯು ತೀರ್ಮಾನಿಸಿದೆ;
ಕೇಂದ್ರ ಸರ್ಕಾರ, ಅದರ ಅಧೀನದ ಬೋರ್ಡ್, ಕಾರ್ಪೂರೇಷನ್, ನಿಗಮ ಇತ್ಯಾದಿಗಳು ತನ್ನ ಬಹುತೇಕ ವೃಂದ ನೇಮಕಾತಿಗಳನ್ನು, ನೇರ ನೇಮಕಾತಿ ಬದಲಿಗೆ ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳುವ ವ್ಯವಸ್ಥೆ ತರಲಾಗಿದೆ: ಇನ್ನು, ಕರ್ನಾಟಕ ಸರ್ಕಾರದಲ್ಲಿ 4ನೇ ದರ್ಜೆ, DTP ಮತ್ತು ವಾಹನ ಚಾಲಕ ನೌಕರರ ಹುದ್ದೆಗಳನ್ನು ನೇರ ನೇಮಕಾತಿ ಬದಲು, ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳುವ ವ್ಯವಸ್ಥೆ ಹಿಂದಿನ ಸರ್ಕಾರದ ಅವದಿಯಿಂದ ಇದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಈ ಗುತ್ತಿಗೆ ನೇಮಕಾತಿ ನೀತಿಗಳು ಭಾರತ ಸಂವಿಧಾನ ಅನುಚ್ಚೇದ 16ರ ಉದ್ಯೋಗ ಮೀಸಲಾತಿ ಆಶಯಗಳಿಗೆ ವಿರುದ್ಧವಾದದ್ದು. ಇದರಿಂದ ರಾಜ್ಯದಲ್ಲಿನ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಗಳಿಗೆ ಉದ್ಯೋಗ ಮೀಸಲಾತಿ ಹಕ್ಕುಗಳನ್ನು ಕಸಿದುಕೊಂಡಾಂತಾಗಿದೆ. ಈ ಸಮುದಾಯಗಳಲ್ಲಿನ ನಿರುದ್ಯೋಗಿಗಳಿಗೆ ಅನ್ಯಾಯವಾಗಿದೆ. ಈ “ಗುತ್ತೀಗೆ ನೇಮಕಾತಿ ವ್ಯವಸ್ಥೆಗಳನ್ನು ಕೈಬಿಟ್ಟು, ನೇರ ನೇಮಕಾತಿ ವ್ಯವಸ್ಥೆ ತರಲು" ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಲು ಮತ್ತು ರಾಜ್ಯವ್ಯಾಪಿ ಜನಾಂದೋಲನಗಳನ್ನು ಮಾಡಲು ಸಭೆಯು ತೀರ್ಮಾನಿಸಿದೆ.
ಅಹಿಂದ ಸಂಘಟನೆ ಬೆಂಗಳೂರಿನಲ್ಲಿ ಶನಿವಾರ ನಡೆಸಿದ ಸಭೆ
ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಅಧೀನದಲ್ಲಿನ ಅಭಿವೃದ್ಧಿ ನಿಗಮಗಳು SC/ST/OBC ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಅನುಷ್ಟಾನಗೊಳಿಸುತ್ತಿರುವ ಕಲ್ಯಾಣ ಕಾರ್ಯಕ್ರಮಗಳ ಸಂಬಂಧ, ಪ್ರತಿ ತಾಲ್ಲೂಕಿಗೆ ನಿಗದಿಪಡಿಸಿರುವ ಫಲಾನುಭವಿಗಳ ಸಂಖ್ಯೆಯನ್ನು ದುಪ್ಪಟ್ಟು ಹೆಚ್ಚಳ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಲು ಮತ್ತು ರಾಜ್ಯವ್ಯಾಪಿ ಈ ಬಗ್ಗೆ ಜನಾಂದೋಲನಗಳನ್ನು ಮಾಡಲು ಸಭೆಯು ತೀರ್ಮಾನಿಸಿದೆ:
ಮಾಜಿ ಪ್ರಧಾನಿ ಇಂದಿರಾಗಾಂಧಿ ಜಾರಿಗೆ ತಂದಿದ್ದ ಇಂದಿರಾ ಅವಾಜ್ ಯೋಜನೆಯನ್ನು PMY-R ಎಂದು ಮರುನಾಮಕರಣ ಮಾಡಿ, ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸವಿರುವ ಮತ್ತು ನಿವೇಶನವಿರುವ ಬಡವರಿಗೆ ಮನೆ ಕಟ್ಟಿಕೊಳ್ಳಲು ಅನುಕ್ರಮವಾಗಿ ರೂ.2.50ಲಕ್ಷ ಮತ್ತು ರೂ.1.20 ಲಕ್ಷಗಳನ್ನು ನೀಡುತ್ತಿರುವ ಆರ್ಥಿಕ ಸಹಾಯದ ಯೋಜನೆ ಅನುದಾನದ ಹಣವನ್ನು ಕನಿಷ್ಟ ರೂ.10.00 ಲಕ್ಷಗಳಿಗೆ ಹೆಚ್ಚಳ ಮಾಡುವಂತೆ ಭಾರತ ಸರ್ಕಾರವನ್ನು ಕೋರಲು ಮತ್ತು ಆ ಬಗ್ಗೆ ರಾಜ್ಯವ್ಯಾಪಿ ಜನಾಂದೋಲನ ಮಾಡಲು ತೀರ್ಮಾನಿಸಿದೆ.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗುಂಪಿನೊಳಗಿನ ಶೋಷಿತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸಲುವಾಗಿ, ವಿಳಂಬ ಮಾಡದೆ, ರಾಜ್ಯದಲ್ಲಿ “ಒಳ ಮೀಸಲಾತಿ" ಅನುಷ್ಟಾನಗೊಳಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಮತ್ತು ಆ ಬಗ್ಗೆ ರಾಜ್ಯವ್ಯಾಪಿ ಜನಾಂದೋಲನ ಮಾಡಲು ಸಭೆಯು ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.