
ಬೃಹತ್ ಹಗರಣಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ N. R. ರಮೇಶ್
ಮಾಗಡಿ ಶಾಸಕ ಬಾಲಕೃಷ್ಣ ಕುಟುಂಬದ ವಿರುದ್ಧ ಭೂ ಹಗರಣ ಆರೋಪ; ಲೋಕಾಯುಕ್ತಕ್ಕೆ ದೂರು ದಾಖಲು
ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು ಇ.ಡಿ. ಮತ್ತು ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದು, ತನಿಖೆಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಮಾಗಡಿ ಶಾಸಕ ಹಾಗೂ ಡಿ.ಕೆ.ಶಿವಕುಮಾರ್ ಆಪ್ತರಾದ ಎಚ್.ಸಿ. ಬಾಲಕೃಷ್ಣ ಮತ್ತು ಅವರ ಪತ್ನಿ ರಾಧಾ ಬಾಲಕೃಷ್ಣ ಅವರು 165 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 26.10 ಎಕರೆ ಸರ್ಕಾರಿ ಗೋಮಾಳ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿ ವ್ಯಾಪ್ತಿಯ ಕುರುಬರಹಳ್ಳಿ ಗ್ರಾಮದ ಸರ್ವೆ ನಂ. 158 ರಲ್ಲಿನ ಸರ್ಕಾರಿ ಗೋಮಾಳವನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಿದ್ದಾರೆ.ಈ ಭೂಮಿಯ ಮಾರುಕಟ್ಟೆ ಮೌಲ್ಯ 165 ಕೋಟಿ ರೂ.ಗೂ ಅಧಿಕ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪಿಸಿದ್ದು, ಈ ಸಂಬಂಧ ಲೋಕಾಯುಕ್ತ ಹಾಗೂ ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಜತೆಗೆ ಭೂ ಹಗರಣದ ಕುರಿತು ತನಿಖೆಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಆರೋಪಗಳೇನು?
ಶಾಸಕ ಎಚ್.ಸಿ. ಬಾಲಕೃಷ್ಣ, ಅವರ ಪತ್ನಿ ರಾಧಾ ಬಾಲಕೃಷ್ಣ, ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಅವರ ಆರು ಮಂದಿ ಆಪ್ತರು ಸೇರಿ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿ ಕುರುಬರಹಳ್ಳಿ ಗ್ರಾಮದ ಸರ್ವೆ ನಂ. 158 ರಲ್ಲಿನ ಸರ್ಕಾರಿ ಗೋಮಾಳ ಜಮೀನಿಗೆ ನಕಲಿ ದಾಖಲೆಗಳ ಮೂಲಕ ಕಬಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಭೂಮಿಯ ಮಾರುಕಟ್ಟೆ ಮೌಲ್ಯ 165 ಕೋಟಿ ರೂ.ಗೂ ಅಧಿಕ ಎನ್ನಲಾಗಿದೆ.
ರಾಧಾ ಬಾಲಕೃಷ್ಣ ಅವರು 54 ಕೋಟಿ ರೂ. ಮೌಲ್ಯದ 8.00 ಎಕರೆ ಸರ್ಕಾರಿ ಗೋಮಾಳವನ್ನು ಕಬಳಿಸಿದ್ದಾರೆ. ಕುರುಬರಹಳ್ಳಿ ಗ್ರಾಮದ ಸರ್ವೆ ನಂ. 158 ರಲ್ಲಿ ನರಸಿಂಹಯ್ಯ, ಗಂಗೂಬಾಯಿ, ನಾಗಮ್ಮ ಮತ್ತು ನೀಲಮ್ಮ ಎಂಬುವವರಿಗೆ ಮಂಜೂರಾದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಈ 8 ಎಕರೆ ಭೂಮಿಯನ್ನು ತಮ್ಮ ಹೆಸರಿಗೆ ಕ್ರಯಪತ್ರ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಕೆಂಗೇರಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ 2025ರ ಏಪ್ರಿಲ್ 3 ಮತ್ತು ಮೇ 15 ರಂದು ಈ ನೋಂದಣಿ ನಡೆದಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಎಸ್.ಟಿ. ಸೋಮಶೇಖರ್ ಆಪ್ತರ ವಿರುದ್ಧ ಆರೋಪ
ಮಾಜಿ ಸಚಿವ ಮತ್ತು ಹಾಲಿ ಶಾಸಕ ಎಸ್.ಟಿ. ಸೋಮಶೇಖರ್ ಅವರ ಆರು ಆಪ್ತರಾದ ರಂಗಮ್ಮ, ವೆಂಕಟಮ್ಮ, ಬಿ.ವಿ. ಚಂದರ್ ರಾವ್, ಬಿ.ವಿ. ಮನೋಹರ್ ಬಾಬಡೆ, ಶಿವಣ್ಣ ಮತ್ತು ಅಬ್ದುಲ್ ಸತ್ತರ್ ಅವರು 110 ರೂ. ಕೋಟಿಗೂ ಹೆಚ್ಚು ಮೌಲ್ಯದ 18.10 ಎಕರೆ ಸರ್ಕಾರಿ ಗೋಮಾಳವನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಭೂ ಹಗರಣಕ್ಕೆ ಸಹಕರಿಸಿದ ಆರೋಪದ ಮೇಲೆ ಕುರುಬರಹಳ್ಳಿ ಗ್ರಾಮದ ರಾಜಸ್ವ ನಿರೀಕ್ಷಕ ಮೋನಿಷ್, ಗ್ರಾಮ ಲೆಕ್ಕಿಗ (VA) ನಂಜೇಗೌಡ, ಬೆಂಗಳೂರು ದಕ್ಷಿಣ ತಾಲ್ಲೂಕಿನ ವಿಶೇಷ ತಹಸೀಲ್ದಾರ್ ಕೃಷ್ಣಮೂರ್ತಿ ಮತ್ತು ಬೆಂಗಳೂರು ನಗರ ಜಿಲ್ಲೆಯ ಉಪ ವಿಭಾಗಾಧಿಕಾರಿ (AC) ಅಪೂರ್ವ ಬಿದರಿ ಅವರ ವಿರುದ್ಧವೂ ದೂರು ದಾಖಲಿಸಲಾಗಿದೆ. ಸರ್ಕಾರಿ ಭೂ ಕಬಳಿಕೆ, ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ ಮತ್ತು ನಕಲಿ ದಾಖಲೆ ತಯಾರಿಕೆ ಪ್ರಕರಣಗಳನ್ನು ದಾಖಲಿಸಲಾಗಿದೆ.
ನಿಯಮಗಳ ಉಲ್ಲಂಘನೆ ಆರೋಪ
"ದಿ ಕರ್ನಾಟಕ ಲ್ಯಾಂಡ್ ರೆವಿನ್ಯೂ ಆಕ್ಟ್, 1964" ನಿಯಮಗಳ ಪ್ರಕಾರ, ಯಾವುದೇ ಮಂಜೂರಾತಿ ಜಮೀನನ್ನು ಕನಿಷ್ಠ 15 ವರ್ಷಗಳ ಕಾಲ ಮಾರಾಟ ಮಾಡುವಂತಿಲ್ಲ. ಅಲ್ಲದೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗಡಿಯಿಂದ 18 ಕಿ.ಮೀ. ಒಳಗಿರುವ ಸರ್ಕಾರಿ ಸ್ವತ್ತನ್ನು ಮಂಜೂರು ಮಾಡುವಂತಿಲ್ಲ ಎಂಬ ನಿಯಮವಿದ್ದರೂ, ಈ ಪ್ರಕರಣದಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಎನ್.ಆರ್. ರಮೇಶ್ ತಿಳಿಸಿದ್ದಾರೆ.
ಕಬಳಿಕೆಯಾಗಿರುವ 165 ಕೋಟಿ ರೂ.ಗೂ ಹೆಚ್ಚು ಮೌಲ್ಯದ 26.10 ಎಕರೆ ಸರ್ಕಾರಿ ಗೋಮಾಳ ಪ್ರದೇಶವನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವ ಕೃಷ್ಣ ಭೈರೇಗೌಡರನ್ನು ಒತ್ತಾಯಿಸಿದ್ದಾರೆ. ಅಲ್ಲದೆ, ಎಲ್ಲಾ "ಸರ್ಕಾರಿ ನೆಲಗಳ್ಳರ" ವಿರುದ್ಧ ನಿಷ್ಪಕ್ಷಪಾತವಾಗಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮತ್ತು ಈ ಸರ್ಕಾರಿ ಸ್ವತ್ತಿಗೆ ರಕ್ಷಣಾ ಬೇಲಿ ಅಳವಡಿಸುವಂತೆ ಆಗ್ರಹಿಸಿದ್ದಾರೆ. ಈ ಬೃಹತ್ ಭೂ ಕಬಳಿಕೆ ಹಗರಣವನ್ನು ಉನ್ನತ ಮಟ್ಟದ ನ್ಯಾಯಾಂಗ ತನಿಖೆ ಅಥವಾ ಸಿಐಡಿ ತನಿಖೆಗೆ ವಹಿಸುವಂತೆ ಅವರು ಮನವಿ ಮಾಡಿದ್ದಾರೆ.