CM Sear Debate | ಒಕ್ಕಲಿಗ ಸಿಎಂ ಚರ್ಚೆ ಬೆನ್ನಲ್ಲೇ ಲಿಂಗಾಯತ ಸಿಎಂ ಬೇಡಿಕೆ ಮುನ್ನಲೆಗೆ
x

CM Sear Debate | ಒಕ್ಕಲಿಗ ಸಿಎಂ ಚರ್ಚೆ ಬೆನ್ನಲ್ಲೇ ಲಿಂಗಾಯತ ಸಿಎಂ ಬೇಡಿಕೆ ಮುನ್ನಲೆಗೆ


ಸಿಎಂ ಸ್ಥಾನವನ್ನು ಡಿಸಿಎಂ ಡಿ ಕೆ ಶಿವಕುಮಾರ್‌ ಅವರಿಗೆ ಬಿಟ್ಟುಕೊಡುವಂತೆ ಸಿದ್ದರಾಮಯ್ಯ ಅವರಿಗೆ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರ ಶ್ರೀಗಳು ಮನವಿ ಮಾಡಿದ ಬೆನ್ನಲ್ಲೇ ಇದೀಗ ಲಿಂಗಾಯತ ಸಮುದಾಯದ ಸ್ವಾಮೀಜಿಯೊಬ್ಬರು ವೀರಶೈವ ಲಿಂಗಾಯತರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಈ ಬಗ್ಗೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಮಾತನಾಡಿದ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತರಾದ್ಯ ಶಿವಾಚಾರ್ಯ ಸ್ವಾಮೀಜಿ, ʻʻಮುಖ್ಯಮಂತ್ರಿ ಸ್ಥಾನದಲ್ಲಿ ಬದಲಾವಣೆ ಹಾಗೂ ಡಿಸಿಎಂ ಸ್ಥಾನಗಳನ್ನು ಹೆಚ್ಚುವರಿ ಮಾಡಿದರೆ ಲಿಂಗಾಯತರಿಗೆ ಸ್ಥಾನ ನೀಡಬೇಕುʼʼ ಎಂದು ಆಗ್ರಹಿಸಿದ್ದಾರೆ.

ʻʻಚುನಾವಣೆ ಸಂದರ್ಭದಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಎಂಬಿ ಪಾಟೀಲ್, ಈಶ್ವರ ಖಂಡ್ರೆ, ಎಸ್ಎಸ್ ಮಲ್ಲಿಕಾರ್ಜುನ, ಶಾಮನೂರು ಶಿವಶಂಕರಪ್ಪ ಇಂತಹವರಿಗೆ ಅವಕಾಶ ನೀಡಬೇಕು. ಕಾಶಿ, ಉಜ್ಜಯಿನಿ ಜಗದ್ಗುರುಗಳ ಜೊತೆಗೂ ಈ ವಿಚಾರದಲ್ಲಿ ಚರ್ಚೆ ಮಾಡಲಾಗಿದೆʼʼ ಎಂದು ಹೇಳಿದರು.

ಒಂದು ವೇಳೆ ಆರಂಭದಲ್ಲಿ ಮುಖ್ಯಮಂತ್ರಿ ಆಗುವ ಸಂದರ್ಭದಲ್ಲಿ ಒಡಂಬಡಕೆ ಮಾಡಿಕೊಂಡಿದ್ದರೆ, ಅದರ ಪ್ರಕಾರ ನಡೆದುಕೊಳ್ಳಲಿ ಎಂದು ಶ್ರೀಶೈಲ ಶ್ರೀಗಳು ಹೇಳಿದ್ದಾರೆ.

ಗುರುವಾರ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆಯೇ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರ ಶ್ರೀಗಳು, ʻದಯವಿಟ್ಟು ಡಿಸಿಎಂ ಡಿಕೆ ಶಿವಕುಮಾರ್​ಗೆ ಸಿಎಂ ಸ್ಥಾನ ಬಿಟ್ಟುಕೊಡಿ, ನಿಮಗೆ ಅನುಭವ ಇದೆ, ಈಗ ಡಿಕೆ ಶಿವಕುಮಾರ್‌ಗೆ ಅವಕಾಶ ಮಾಡಿಕೊಡಿʼ ಎಂದು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ ಅಪರೂಪದ ವಿದ್ಯಮಾನ ನಡೆಯಿತು.

ಸ್ವಾಮೀಜಿ ಮನವಿಯಿಂದ ತುಸು ವಿಚಲಿತರಾದಂತೆ ಕಂಡುಬಂದಿದ್ದ ಸಿದ್ದರಾಮಯ್ಯ, ನಂತರ ಆ ಬಗ್ಗೆ ಪ್ರತಿಕ್ರಿಯಿಸಿದ್ದರು. ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತದೆ ಎಂದಿದ್ದರು. ಮತ್ತೊಂದೆಡೆ, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ವಿಚಾರ ಕೂಡ ರಾಜ್ಯ ಕಾಂಗ್ರೆಸ್‌ನಲ್ಲಿ ಗೊಂದಲ ಸೃಷ್ಟಿಸಿದೆ. ಇದೀಗ ಲಿಂಗಾಯತ ಸಮುದಾಯದ ಸ್ವಾಮೀಜಿಗಳು ತಮ್ಮ ಸಮುದಾಯದವರಿಗೆ ಸಿಎಂ, ಡಿಸಿಎಂ ಸ್ಥಾನ ಸಿಗಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ.

Read More
Next Story