ದೇವೆಗೌಡರ ಕುಟುಂಬ ಆಯಿತು, ಈಗ ಯಡಿಯೂರಪ್ಪ ಕುಟುಂಬದ ವಿರುದ್ಧ ಕಾಂಗ್ರೆಸ್ ಸಂಚು: ಎಚ್‌ಡಿಕೆ ಆರೋಪ
x
ಕೇಂದ್ರ ಸಚಿವರಾದ ಬಳಿಕ ಬೆಂಗಳೂರಿಗೆ ಆಗಮಿಸಿ ದೇವೇಗೌಡ ಮತ್ತು ಚೆನ್ನಮ್ಮ ದೇವೇಗೌಡರ ಆಶೀರ್ವಾದ ಪಡೆಯುತ್ತಿರುವ ಎಚ್‌ಡಿ ಕುಮಾರಸ್ವಾಮಿ

ದೇವೆಗೌಡರ ಕುಟುಂಬ ಆಯಿತು, ಈಗ ಯಡಿಯೂರಪ್ಪ ಕುಟುಂಬದ ವಿರುದ್ಧ ಕಾಂಗ್ರೆಸ್ ಸಂಚು: ಎಚ್‌ಡಿಕೆ ಆರೋಪ


ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಬೇಕು ಎನ್ನುವ ಷಡ್ಯಂತ್ರ ಆಯಿತು, ಈಗ ಯಡಿಯೂರಪ್ಪ ಅವರ ಕುಟುಂಬವನ್ನು ರಾಜಕೀಯವಾಗಿ ಮುಗಿಸುವ ಕುತಂತ್ರ ಆರಂಭವಾಗಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್‌ ವಿರುದ್ಧ ಟೀಕೆ ಮಾಡಿದ್ದಾರೆ.

ಕೇಂದ್ರ ಸಚಿವರಾದ ಮೇಲೆ ರಾಜ್ಯಕ್ಕೆ ಮೊದಲ ಭೇಟಿ ಕೊಟ್ಟ ವೇಳೆ ಜಾತ್ಯತೀತ ಜನತಾದಳ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿ, 82 ವರ್ಷದ ಯಡಿಯೂರಪ್ಪ ಅವರ ಮೇಲೆ ಕಾಂಗ್ರೆಸ್‌ ಸೇಡಿನ ರಾಜಕಾರಣ ಮಾಡುತ್ತಿದೆ. ರಾಜ್ಯದ ರೈತ ನಾಯಕ ಯಡಿಯೂರಪ್ಪ ಅವರ ಮೇಲೆ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ಅವರನ್ನು ಜೈಲಿಗೆ ಕಳಿಸಲೇಬೇಕು ಎಂಬಂತೆ ಕಾಂಗ್ರೆಸ್‌ ಕೆಲಸ ಮಾಡುತ್ತಿದೆ. ಯಡಿಯೂರಪ್ಪ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿ ಯುವ ಕೆಲಸ ಮಾಡಲಾಗುತ್ತಿದೆ. ಅವರ ಪ್ರಯತ್ನ ಫಲಪ್ರದ ಆಗುವುದಿಲ್ಲ ಎಂದು ಕುಮಾರಸ್ವಾಮಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಡಿಕೆಶಿ ವಿರುದ್ಧ HDK ಆಕ್ರೋಶ

ನಾಲ್ಕು ತಿಂಗಳ ಹಿಂದಿನ ಪ್ರಕರಣ ಇದು. ಇವತ್ತು ಯಡಿಯೂರಪ್ಪ ಅವರ ಮೇಲೆ ಜಾಮೀನು ರಹಿತ ಕೇಸ್ ಹಾಕಲು ಹೊರಟಿದ್ದಾರೆ. ನಾವು ಎಂಟು ಸ್ಥಾನ ಗೆದ್ದಿದ್ದೀವಿ ಬೀಗುತ್ತಿದ್ದಾರೆ. ಹಾಸನದಲ್ಲಿ ಚುನಾವಣೆಯಲ್ಲಿ ಗೆಲ್ಲಲು ಪೆನ್ ಡ್ರೈವ್ ಗಳನ್ನು ಹರಿಬಿಟ್ಟು ನೀಚ ರಾಜಕಾರಣ ಮಾಡಿದವರು ಇವರು. ಪೆನ್ ಡ್ರೈವ್ ಪ್ರಕರಣದಲ್ಲಿ ಆಡಿಯೋ ಬಂತಲ್ಲಾ, ಅದರ ಬಗ್ಗೆ ಏನು ಕ್ರಮ ತಗೊಂಡರು? ಸಿಡಿ ಶಿವು ಅವರೇ, ನಾನು ಕೇಂದ್ರ ಸಚಿವನಾಗಿದ್ದೇನೆ. ಈಗ ನಾನು ನಿಮ್ಮ ಮಟ್ಟಕ್ಕೆ ಇಳಿಯಲ್ಲ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಪ್ರಹಾರ ನಡೆಸಿದರು.

ನಾನು ಕೇಂದ್ರ ಸಚಿವನಾದ ಮೇಲೆ ಕೆಲವರಿಗೆ ನಿದ್ದೆ ಬರುತ್ತಿಲ್ಲ, ಊಟ ಸೇರುತ್ತಿಲ್ಲ. ನಾನು ಯಾರ ಮೇಲೂ ದ್ವೇಷ ಸಾಧಿಸಲ್ಲ. ಆ ಜಾಯಮಾನ ನನ್ನದಲ್ಲ ಎಂದು ಕೇಂದ್ರ ಸಚಿವರು ತಿರುಗೇಟು ಕೊಟ್ಟರು.

ರಾಜಕೀಯದಲ್ಲಿ ಚಕ್ರ ತಿರುಗುತ್ತದೆ

ರಾಜಕೀಯದಲ್ಲಿ ಯಾರು ಯಾರನ್ನು ಮುಗಿಸಲು ಸಾಧ್ಯವಿಲ್ಲ. ನೆರೆಯ ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಹಿಂದಿನ ಚುನಾವಣೆಯಲ್ಲಿ ಎಷ್ಟು ಸ್ಥಾನಗಳನ್ನು ಗೆದ್ದಿದ್ದರು? ಕಡೆಗೆ ಅನೇಕ ಶಾಸಕರು ಅವರನ್ನು ಬಿಟ್ಟು ಹೋದರು. ಅವರನ್ನು ಜೈಲಿಗೂ ಕಳಿಸಿದರು. ಈಗ ಮತ್ತೆ ಎಷ್ಟು ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದರು ಎನ್ನುವುದನ್ನು ಗಮನಿಸಬೇಕು. ಕರ್ನಾಟಕದಲ್ಲಿಯೂ ಇದು ನಡೆಯುತ್ತದೆ. ಒಂದು ಸಲ ಅವಕಾಶ ಕೊಡಿ ಅಂತಾ ಕೇಳಿದೆ. ನಾನು ಹೇಳಿದ ಕಾರ್ಯಕ್ರಮಗಳನ್ನು ಅನುಷ್ಟಾನ ಮಾಡಿಡಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದೆ. ಅದಕ್ಕೂ ಅವಹೇಳನ ಮಾಡಿದರು. ಚಕ್ರ ತಿರುಗುತ್ತದೆ ಎನ್ನುವುದನ್ನು ಯಾರೂ ಮರೆಯಬಾರದು ಎಂದು ಕುಮಾರಸ್ವಾಮಿ ಅವರು ಹೇಳಿದರು.

ನನ್ನ ವಿರುದ್ಧ ಕಾಂಗ್ರೆಸ್‌ ಸಂಚು

ನಾನು ಕೇಂದ್ರ ಸಚಿವನಾಗಿದ್ದು ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರಕ್ಕೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ನನ್ನ ವಿರುದ್ಧ ಒಳಸಂಚು ನಡೆಸುತ್ತಿದೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ದೇವೆಗೌಡರ ಕುಟುಂಬದ ವರ್ಚಸ್ಸು ಹಾಳು ಮಾಡಿದ್ದು ಆಯಿತು. ಈಗ ಯಡಿಯೂರಪ್ಪ ಅವರನ್ನು ಮುಗಿಸಲು ಹೊರಟಿದ್ದಾರೆ. ಅದಾದ ಮೇಲೆ ನನ್ನನ್ನು ಗುರಿ ಮಾಡಿದ್ದಾರೆ. ಯಡಿಯೂರಪ್ಪ ಅವರ ವಿಚಾರದಲ್ಲಿ ರಾಜ್ಯ ಸರ್ಕಾರ ಬಹಳ ಸಂಶಯಾಸ್ಪದವಾಗಿ ನಡೆದುಕೊಳ್ಳುತ್ತಿದೆ. ನನಗೆ ಈ ಸರ್ಕಾರದ ನಾಲ್ಕು ತಿಂಗಳ ನಡುವಳಿಕೆ ಮೇಲೆ ರಾಜ್ಯವೇ ಅನುಮಾನ ಪಡುವಂತೆ ಕಾಣುತ್ತಿದೆ. ಈ ಸರ್ಕಾರದಲ್ಲಿ ಕಾನೂನು ಪಂಡಿತರು ಬಹಳ ಜನ ಇದ್ದಾರೆ. ಅವರಿಗೆ ಹೇಳಿ, ಕುಮಾರಸ್ವಾಮಿಯದ್ದು ಏನಾದರೂ ಸಿಗುತ್ತದೆಯಾ ನೋಡಿ ಎಂದು ಕೆದಕಲು ಹೇಳಿದ್ದಾರೆ. ಅಂತಹ ಸಿಎಂ ಸಿದ್ದರಾಮಯ್ಯ ಅವರು ಈಗ ನಾಲ್ಕು ತಿಂಗಳ ನಂತರ ಯಡಿಯೂರಪ್ಪ ಅವರ ಕೇಸ್ ಕೆದಕ್ಕಿದ್ದಾರೆ. ನನ್ನ ಮುಗಿಸಲು ಪ್ರಯತ್ನ ಮಾಡ್ತಿದ್ದಾರೆ ಎಂದು ಕೇಂದ್ರ ಸಚಿವರು ಆರೋಪ ಮಾಡಿದರು.

ಕೆಲವು ನಾಯಕರು ನನ್ನ ಮುಗಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಅವರ ಪ್ರಯತ್ನ ಅವರು ಮಾಡಲಿ. ನನ್ನ ಮೇಲೆ ಯಾವುದಾದರೂ ಕೇಸ್ ಇದೆಯಾ ಎಂದು ಹುಡುಕುತ್ತಿದ್ದಾರೆ. ಕುಮಾರಸ್ವಾಮಿಯನ್ನು ಜೈಲಿಗೆ ಹಾಕಬೇಕು ಪ್ರಯತ್ನ ನಡೆಯುತ್ತಿದೆ. ಯಾವುದೋ ಹಳೇ ಕೇಸ್ ಹುಡುಕುತ್ತಿದ್ದಾರೆ. ಅವರಿಗೆ ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ. ಕುಮಾರಸ್ವಾಮಿಯನ್ನು ಹೇಗೆ ಮುಗಿಸಿಬೇಕು ಎಂಬುದು ಪ್ಲಾನ್ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

Read More
Next Story