Bus Fare Hike | ಪ್ರಯಾಣ ದರ ಏರಿಕೆಗೆ ಆಟೊ, ಖಾಸಗಿ ಬಸ್ ಮಾಲಿಕರಿಂದಲೂ ಆಗ್ರಹ
ಆಟೊ ಪ್ರಯಾಣದ ಮೂಲ ದರ ಮೊದಲ ಎರಡು ಕಿ.ಮೀ.ಗೆ 30 ರೂ. ಇದೆ. ಇದನ್ನು 40 ರೂ.ಗೆ ಹೆಚ್ಚಿಸುವಂತೆ ಬೆಂಗಳೂರಿನ ಆಟೊ ರಿಕ್ಷಾ ಚಾಲಕರ ಸಂಘಟನೆಗಳು ಒತ್ತಾಯಿಸಿವೆ. ಖಾಸಗಿ ಬಸ್ ಮಾಲೀಕರ ಸಂಘಗಳು ಕೂಡ ಪ್ರಯಾಣ ದರ ಏರಿಕೆಗೆ ಅವಕಾಶ ನೀಡುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದಿವೆ.
ಬಸ್ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಈಗ ಆಟೊ ಹಾಗೂ ಖಾಸಗಿ ಬಸ್‌ಗಳ ಒಕ್ಕೂಟಗಳು ಪ್ರಯಾಣ ದರ ಏರಿಕೆಗೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ.
ಆಟೊ ಪ್ರಯಾಣದ ಮೂಲ ದರ ಮೊದಲ ಎರಡು ಕಿ.ಮೀ.ಗೆ 30 ರೂ. ಇದೆ. ಇದನ್ನು 40 ರೂ.ಗೆ ಹೆಚ್ಚಿಸುವಂತೆ ಬೆಂಗಳೂರಿನ ಆಟೊ ರಿಕ್ಷಾ ಚಾಲಕರ ಸಂಘಟನೆಗಳು ಒತ್ತಾಯಿಸಿವೆ.
ಖಾಸಗಿ ಬಸ್ ಮಾಲೀಕರ ಸಂಘಗಳು ಕೂಡ ಪ್ರಯಾಣ ದರ ಏರಿಕೆಗೆ ಅವಕಾಶ ನೀಡುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದಿವೆ.
ಆಟೊ ಚಾಲಕರ ಬೇಡಿಕೆ ಏನು?
2021ರಲ್ಲಿ ಆಟೊ ಪ್ರಯಾಣದ ಕನಿಷ್ಠ ದರವನ್ನು 30 ರೂ.ಗೆ ಏರಿಕೆ ಮಾಡಲಾಗಿತ್ತು. ಆ ಬಳಿಕ ಪ್ರಯಾಣ ದರ ಏರಿಕೆ ಮಾಡಿರಲಿಲ್ಲ. ಪ್ರಸ್ತುತ ಡೀಸೆಲ್, ಸಿಎನ್‌ಜಿ ಗ್ಯಾಸ್ ಹಾಗೂ ಆಟೊ ಬಿಡಿಭಾಗಗಳ ದರ ಹೆಚ್ಚಿರುವುದರಿಂದ ಮೂಲ ದರವನ್ನು 40 ರೂ.ಗೆ ಏರಿಕೆ ಮಾಡಿ, ಆ ನಂತರದ ಪ್ರತಿ ಕಿ.ಮೀ ಮೇಲೆ 20 ರೂ. ಹೆಚ್ಚಳ ಮಾಡುವಂತೆ ಬೇಡಿಕೆ ಇಟ್ಟಿವೆ.
ಆಟೊ ಪ್ರಯಾಣ ದರ ಏರಿಕೆ ಸಂಬಂಧ ಕಳೆದ ಡಿ. 23 ರಂದು ಆಟೊ ಚಾಲಕರ ಒಕ್ಕೂಟಗಳೊಂದಿಗೆ ನಗರ ಜಿಲ್ಲಾಧಿಕಾರಿ ಸಭೆ ನಿಗದಿ ಮಾಡಿದ್ದರು. ಕಾರಣಾಂತರದಿಂದ ಸಭೆ ಮುಂದೂಡಿ, ಜನವರಿ ಮೂರನೇ ವಾರಕ್ಕೆ ಮರು ನಿಗದಿಯಾಗಿದೆ. ಓಲಾ, ಉಬರ್, ರಾಪಿಡೊ ಟ್ಯಾಕ್ಸಿ ಸೇವೆಯಿಂದ ಆಟೊ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದು, ಪ್ರಯಾಣ ದರ ಹೆಚ್ಚಿಸಬೇಕು ಎಂದು ಒತ್ತಡ ಹಾಕುತ್ತಿವೆ.
ಬೈಕ್, ಟ್ಯಾಕ್ಸಿ ಸೇವೆ ರದ್ದತಿಗೆ ಆಗ್ರಹ
ಉಬರ್, ಓಲಾ ಹಾಗೂ ರಾಪಿಡೊ ಬೈಕ್ ಹಾಗೂ ಟ್ಯಾಕ್ಸಿಗಳಿಂದ ಆಟೊ ಚಾಲಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಸೇವೆಗಳನ್ನು ರದ್ದು ಮಾಡುವಂತೆ ಆಟೊ ಚಾಲಕರ ಸಂಘಟನೆಗಳು ಒತ್ತಾಯಿಸಿವೆ. ಈ ಮಧ್ಯೆ ಪ್ರಯಾಣ ದರ ಏರಿಕೆ ಕುರಿತಂತೆ ಭಿನ್ನಾಭಿಪ್ರಾಯವೂ ವ್ಯಕ್ತವಾಗಿದೆ. ಕೆಲ ಸಂಘಟನೆಗಳು ಪ್ರಯಾಣ ದರ ಏರಿಕೆಗೆ ಒತ್ತಾಯಿಸಿದರೆ, ಮತ್ತೆ ಕೆಲ ಸಂಘಟನೆಗಳು ಉಬರ್, ಓಲಾ ಟ್ಯಾಕ್ಸಿ ಸೇವೆ ನಿಲ್ಲಿಸುವವರೆಗೂ ದರ ಏರಿಕೆ ಬೇಡ ಎನ್ನುತ್ತಿವೆ. ಆಟೊ ಸಂಘಟನೆಗಳಲ್ಲಿ ಒಮ್ಮತ ಮೂಡಿಸ ಬಳಿಕ ದರ ಏರಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ದರ ಏರಿಕೆ ಸಮಿತಿಯಲ್ಲಿ ಯಾರಿದ್ದಾರೆ?
ಆಟೊ ಪ್ರಯಾಣ ದರ ಏರಿಕೆ ಕುರಿತಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ, ಜಯನಗರ ಆರ್‌ಟಿಒ ಕಚೇರಿಯ ಅಧಿಕಾರಿ ಹಾಗೂ ಕಾರ್ಯದರ್ಶಿ, ಡಿಸಿಪಿ, ಸಂಚಾರ ವಿಭಾಗ, ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿ, ಗ್ರಾಹಕರ ವೇದಿಕೆಯಿಂದ ಒಬ್ಬ ಅಧಿಕಾರಿ ದರ ನಿರ್ಧಾರಣಾ ಸಮಿತಿಯಲ್ಲಿ ಸದಸ್ಯರಾಗಿದ್ದಾರೆ. ಆಟೊ ಚಾಲಕರ ಬೇಡಿಕೆ, ದರ ಏರಿಕೆಯ ಅಗತ್ಯತೆ ಕುರಿತು ಚರ್ಚಿಸಿ ನಿರ್ಧರಿಸಲಿದ್ದಾರೆ.
ಬೆಂಗಳೂರಿನಲ್ಲಿ ಆಟೊಗಳು ಎಷ್ಟಿವೆ?
ಬೆಂಗಳೂರು ನಗರ ಒಂದರಲ್ಲೇ 2.70 ಲಕ್ಷಕ್ಕೂ ಅಧಿಕ ಆಟೊಗಳಿವೆ. ಅಂದಾಜು 10 ಲಕ್ಷ ಮಂದಿ ಆಟೊ ಚಾಲನೆಯಿಂದ ಬರುವ ಆದಾಯವನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ.
ಆಟೊ ಗ್ಯಾಸ್ ದರ ಕೆ.ಜಿ ಗೆ 61.56 ರೂ. ಇದೆ. ಅಗತ್ಯ ವಸ್ತುಗಳು, ಆಟೊರಿಕ್ಷಾಗಳ ಬಿಡಿಭಾಗಗಳು, ವಿದ್ಯುತ್, ಅಡುಗೆ ಅನಿಲ ಬೆಲೆ ಹೆಚ್ಚಾಗಿದೆ. ಹಾಗಾಗಿ, ಪ್ರಯಾಣ ದರ ಹೆಚ್ಚಿಸಲೇಬೇಕು ಎಂದು ಬೆಂಗಳೂರಿನ ಆದರ್ಶ ಆಟೊ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಎಂ.ಮಂಜುನಾಥ್ ಒತ್ತಾಯಿಸಿದ್ದಾರೆ.
ಹಿಂದಿನ ಆಟೊ ಪ್ರಯಾಣ ದರ ಎಷ್ಟಿದೆ?
2021 ಡಿಸೆಂಬರ್ 1ರಿಂದ ಅನ್ವಯವಾಗುವಂತೆ ಆಟೊ ಪ್ರಯಾಣದ ಮೂಲ ದರವನ್ನು 30 ರೂ.ಗೆ ಹೆಚ್ಚಿಸಲಾಗಿತ್ತು. ಮೂಲ ದರದ ಬಳಿಕ ಸಂಚರಿಸುವ ಪ್ರತಿ ಕಿ.ಮೀ.ಗೆ 15 ರೂ. ಹೆಚ್ಚಳ ಮಾಡಲಾಗಿತ್ತು.
ಪ್ರಸ್ತುತ, ಮೂಲ ದರದ ನಂತರ ಪ್ರತಿ ಕಿ,ಮೀ. 13 ವಿಧಿಸಲಾಗುತ್ತಿದೆ. ರಾತ್ರಿ 10 ರಿಂದ ಬೆಳಿಗ್ಗೆ 5 ರ ನಡುವೆ ಒಂದೂವರೆ ಪಟ್ಟು ಹೆಚ್ಚಿರುತ್ತದೆ.
ಖಾಸಗಿ ಬಸ್ ಮಾಲೀಕರಿಂದ ಪತ್ರ
ಪ್ರಯಾಣ ದರ ಏರಿಕೆ ಮಾಡುವಂತೆ ಖಾಸಗಿ ಬಸ್ ಮಾಲೀಕರು ಕೂಡ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಶಿವಮೊಗ್ಗ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಆರ್.ರಂಗಪ್ಪ ಪತ್ರ ಬರೆದಿದ್ದು, ಪ್ರಯಾಣ ದರ ಹೆಚ್ಚಳಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.
ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಸರಿ ಸಮವಾಗಿ ಖಾಸಗಿ ಬಸ್‌ಗಳೂ ಸಾರ್ವಜನಿಕರಿಗೆ ಸೇವೆ ಒದಗಿಸುತ್ತಿವೆ. ಕೋವಿಡ್ ನಂತರ ಖಾಸಗಿ ಬಸ್ ಉದ್ಯಮ ಸಂಕಷ್ಟಕ್ಕೆ ತುತ್ತಾಗಿದೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆ ಗಾಯದ ಮೇಲೆ ಬರೆ ಎಳೆದಿದೆ. ಬಿಡಿ ಭಾಗಗಳ ಬೆಲೆ ಹೆಚ್ಚಳ, ಪೆಟ್ರೋಲ್, ಡೀಸೆಲ್ ದರ ಹಾಗೂ ಬಸ್‌ಗಳ ನಿರ್ವಹಣೆ ವೆಚ್ಚ ಏರಿಕೆಯಾಗಿದೆ. ಆದ್ದರಿಂದ ಖಾಸಗಿ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡುವಂತೆ ಕೋರಿದ್ದಾರೆ.