
ಬೆಂಗಳೂರು ಟನಲ್ ರಸ್ತೆ| ಅದಾನಿ ಗ್ರೂಪ್‌ನಿಂದ ಕಡಿಮೆ ಮೊತ್ತದ ಬಿಡ್; ವೆಚ್ಚ ಹೆಚ್ಚಳದಿಂದ ಒಪ್ಪಿಗೆ ವಿಳಂಬ
ಹೆಬ್ಬಾಳದಿಂದ ಎಸ್ಟೀಮ್ ಮಾಲ್‌ನಿಂದ ಸಿಲ್ಕ್ ಬೋರ್ಡ್ವರೆಗಿನ 16.57 ಕಿಮೀ ಉದ್ದದ ಸುರಂಗ ಮಾರ್ಗ ನಿರ್ಮಾಣದ ಹೊಣೆ ಹೊತ್ತಿದ್ದ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಟೆಂಡರ್ ಕರೆದಿತ್ತು.
ಬೆಂಗಳೂರಿನ ಬಹುನಿರೀಕ್ಷಿತ ಸುರಂಗ ರಸ್ತೆ ಯೋಜನೆಗಾಗಿ ಕರೆದಿದ್ದ ಟೆಂಡರ್‌ನಲ್ಲಿ ಅದಾನಿ ಗ್ರೂಪ್ ಕನಿಷ್ಠ ಮೊತ್ತದ ಬಿಡ್ ಸಲ್ಲಿಸಿದೆ. ಆದರೆ, ಇದು ಸರ್ಕಾರದ ಅಂದಾಜು ಯೋಜನಾ ವೆಚ್ಚಕ್ಕಿಂತ ಶೇ 24 ರಿಂದ 28 ರಷ್ಟು ಹೆಚ್ಚು ಮೊತ್ತ ಉಲ್ಲೇಖಿಸಿರುವ ಕಾರಣ ಯೋಜನೆಯ ಗುತ್ತಿಗೆ ಅಂತಿಮಗೊಳಿಸಲು ವಿಳಂಬವಾಗಲಿದೆ.
ಹೆಬ್ಬಾಳದಿಂದ ಎಸ್ಟೀಮ್ ಮಾಲ್‌ನಿಂದ ಸಿಲ್ಕ್ ಬೋರ್ಡ್ವರೆಗಿನ 16.57 ಕಿಮೀ ಉದ್ದದ ಸುರಂಗ ಮಾರ್ಗ ನಿರ್ಮಾಣದ ಹೊಣೆ ಹೊತ್ತಿದ್ದ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಟೆಂಡರ್ ಕರೆದಿತ್ತು.
ಟೆಂಡರ್‌ನಲ್ಲಿ ಅದಾನಿ ಗ್ರೂಪ್, ದಿಲಿಪ್ ಬಿಲ್ಡ್‌ಕಾನ್, ವಿಶ್ವ ಸಮುದ್ರ ಎಂಜಿನಿಯರಿಂಗ್ ಹಾಗೂ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ ಬಿಡ್ ಸಲ್ಲಿಸಿದ್ದವು. ಬಿಡ್‌ದಾರರು ಇತ್ತೀಚಿನ ವರ್ಷಗಳಲ್ಲಿ ನಿರ್ಮಿಸಿದ ರಸ್ತೆ ಅಥವಾ ಸೇತುವೆಗಳು ಕುಸಿದಿರಬಾರದು ಎಂಬ ಷರತ್ತು ವಿಧಿಸಲಾಗಿತ್ತು. ಈ ಷರತ್ತಿನಿಂದ ವಿಶ್ವ ಸಮುದ್ರ ಎಂಜಿನಿಯರಿಂಗ್ ಮತ್ತು ರೈಲ್ ವಿಕಾಸ್ ನಿಗಮ್ ಲಿಮಿಟೆಡ್ ಬಿಡ್ ಅನರ್ಹವಾಗಿದ್ದವು ಎಂದು ಮೂಲಗಳು ತಿಳಿಸಿವೆ.
ಯೋಜನೆಗೆ ಸರ್ಕಾರವು 17,698 ಕೋಟಿ ರೂ. ವೆಚ್ಚ ಅಂದಾಜಿಸಿದ್ದು, ಅದಾನಿ ಸಲ್ಲಿಸಿರುವ ಮೊತ್ತವು ಅದಕ್ಕಿಂತ ಹೆಚ್ಚಿದೆ. ವೆಚ್ಚದ ವ್ಯತ್ಯಾಸ ದೊಡ್ಡ ಮಟ್ಟದಲ್ಲಿರುವುದರಿಂದ ಯೋಜನೆಗೆ ರಾಜ್ಯ ಸಚಿವ ಸಂಪುಟ ಸಭೆಯ ಅನುಮೋದನೆ ಅಗತ್ಯವಿದೆ ಎಂದು ತಿಳಿದುಬಂದಿದೆ.
ಸುರಂಗ ಮಾರ್ಗವನ್ನು ನಿರ್ಮಾಣ–ನಿರ್ವಹಣೆ–ವರ್ಗಾವಣೆ (BOT) ಮಾದರಿಯಲ್ಲಿ ಅನುಷ್ಠಾನಗೊಳಿಸಲಿದ್ದು, ಸರ್ಕಾರವು ಶೇ 40ರಷ್ಟು ವೆಚ್ಚ ಭರಿಸಿದರೆ, ನಿರ್ಮಾಣ ಸಂಸ್ಥೆಯು ಶೇ 60ರಷ್ಟು ವೆಚ್ಚ ಭರಿಸಲಿದೆ.
ಈ ಮಧ್ಯೆ, ಯೋಜನೆ ಅತ್ಯಂತ ದುಬಾರಿಯಾಗಿದ್ದು, ಸಾಮಾನ್ಯ ಜನರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಆರೋಪಿಸಿದ್ದರು.

