Rayna Rao Case | ನಟಿ ರನ್ಯಾರಿಂದ ಜಾಮೀನು ಕೋರಿಕೆ; ಡಿಆರ್‌ಐಗೆ ಹೈಕೋರ್ಟ್‌ ನೋಟಿಸ್‌
x

ರನ್ಯಾ ರಾವ್‌

Rayna Rao Case | ನಟಿ ರನ್ಯಾರಿಂದ ಜಾಮೀನು ಕೋರಿಕೆ; ಡಿಆರ್‌ಐಗೆ ಹೈಕೋರ್ಟ್‌ ನೋಟಿಸ್‌

ನಟಿ ಹರ್ಷವರ್ಧಿನಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ನೇತೃತ್ವದ ಏಕಸದಸ್ಯ ಪೀಠ, ಪ್ರಕರಣವನ್ನು ಏಪ್ರಿಲ್‌ 17ಕ್ಕೆ ಮುಂದೂಡಿ, ಡಿಆರ್‌ಐಗೆ ಆಕ್ಷೇಪಣೆ ಸಲ್ಲಿಸಲು ನೋಟಿಸ್‌ ನೀಡಿದರು


ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟಿ ಹರ್ಷವರ್ಧಿನಿ ಅಲಿಯಾಸ್‌ ರನ್ಯಾ ರಾವ್‌ ಸಲ್ಲಿಸಿರುವ ಜಾಮೀನು ಅರ್ಜಿಗೆ ಸಂಬಂಧಿಸಿ ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ (ಡಿಆರ್‌ಐ) ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ನಟಿ ಹರ್ಷವರ್ಧಿನಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠ ನಡೆಸಿತು. ಡಿಆರ್‌ಐ ಪರ ವಕೀಲರು ನೋಟಿಸ್‌ ಪಡೆಯಲಾಗುವುದು ಎಂದರು. ರನ್ಯಾ ಪರ ವಕೀಲರು ಪ್ರಕರಣವನ್ನು ಏಪ್ರಿಲ್‌ 17ಕ್ಕೆ ನಿಗದಿಗೊಳಿಸಬೇಕು. ಅದರೊಳಗೆ ಡಿಆರ್‌ಐ ಆಕ್ಷೇಪಣೆ ಸಲ್ಲಿಸಬೇಕು ಎಂದರು.

ಇದನ್ನು ಪುರಸ್ಕರಿಸಿದ ನ್ಯಾಯಾಲಯವು ವಿಚಾರಣೆಯನ್ನು ಏಪ್ರಿಲ್‌ 17ಕ್ಕೆ ಮುಂದೂಡಿತು. ಮಾರ್ಚ್‌ 3ರ ಸಂಜೆ 6.30ಕ್ಕೆ ದುಬೈನಿಂದ ಬೆಂಗಳೂರಿಗೆ ಎಮಿರೇಟ್ಸ್‌ ವಿಮಾನದಲ್ಲಿ ಬಂದಿಳಿದಿದ್ದ ರನ್ಯಾಳನ್ನು ಡಿಆರ್‌ಐ ಅಧಿಕಾರಿಗಳು ಪರಿಶೀಲಿಸಿದ್ದರು. ಮೊದಲಿಗೆ ರನ್ಯಾ ಅವರ ಕೈಚೀಲವನ್ನು (ಹ್ಯಾಂಡ್‌ ಬ್ಯಾಗ್) ಪರಿಶೀಲಿಸಲಾಗಿ, ಅದರಲ್ಲಿ ಏನೂ ಪತ್ತೆಯಾಗಿರಲಿಲ್ಲ. ಹೀಗಾಗಿ, ಮಹಿಳಾ ಡಿಆರ್‌ಐ ತನಿಖಾಧಿಕಾರಿಯು ರನ್ಯಾರನ್ನು ಪರಿಶೀಲಿಸುವ ಉದ್ದೇಶದಿಂದ ಲಿಖಿತವಾಗಿ ಒಪ್ಪಿಗೆ ಪಡೆದಿದ್ದರು. ಈ ಸಂದರ್ಭದಲ್ಲಿ ಆಕೆಯ ನಡುವಿನ ಭಾಗ, ಮಂಡಿಯ ಕೆಳಭಾಗದಲ್ಲಿ ತೊಡೆಗೆ ಚಿನ್ನದ ಬಾರ್‌ಗಳನ್ನು ಮೆಡಿಕಲ್‌ ಅಡೆಸೀವ್‌ ಬ್ಯಾಂಡೇಜ್‌ ಬಳಿ ಅಂಟಿಸಲಾಗಿತ್ತು.

ತಪಾಸಣೆಯ ಸಂದರ್ಭದಲ್ಲಿ ರನ್ಯಾ ಬಳಿ ₹12,56,43,362 ಮೌಲ್ಯದ 14213.05 ಗ್ರಾಂ ತೂಕದ ಚಿನ್ನ ಪತ್ತೆಯಾಗಿತ್ತು. ಇದನ್ನು ಆಧರಿಸಿ ಕಸ್ಟಮ್ಸ್‌ ಕಾಯಿದೆ 1962ರ ಸೆಕ್ಷನ್‌ 135 (1)(a) ಮತ್ತು 135(1)(b) ಅಡಿ ಪ್ರಕರಣ ದಾಖಲಿಸಲಾಗಿದೆ. ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಮತ್ತು ಸತ್ರ ನ್ಯಾಯಾಲಯಗಳು ಮಾರ್ಚ್‌ 14 ಮತ್ತು 27ರಂದು ಕ್ರಮವಾಗಿ ಜಾಮೀನು ತಿರಸ್ಕರಿಸಿವೆ.

Read More
Next Story