Actress Ramya Threat Case: Another Accused Arrested, Total Arrests Rise to 7
x

ನಟಿ ರಮ್ಯಾ

ನಟಿ ರಮ್ಯಾ ಬೆದರಿಕೆ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ, ಒಟ್ಟು ಬಂಧಿತರ ಸಂಖ್ಯೆ 7ಕ್ಕೆ ಏರಿಕೆ

ವಿಜಯಪುರ ಮೂಲದ ಸಂತೋಷ್ ಬಂಧಿತ ಏಳನೇ ಆರೋಪಿಯಾಗಿದ್ದು, ಗಾರೆ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈತ ನಟಿ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ.


ನಟಿ ಹಾಗೂ ಮಾಜಿ ಸಂಸದೆ ರಮ್ಯಾ (ದಿವ್ಯ ಸ್ಪಂದನ) ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸಿ, ಕೊಲೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈ ಬಂಧನದೊಂದಿಗೆ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ ಏಳಕ್ಕೆ ಏರಿದೆ.

ವಿಜಯಪುರ ಮೂಲದ ಸಂತೋಷ್ ಬಂಧಿತ ಏಳನೇ ಆರೋಪಿಯಾಗಿದ್ದು, ಗಾರೆ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈತ ನಟಿ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ. ಸೈಬರ್ ಕ್ರೈಂ ಪೊಲೀಸರು ಸಂತೋಷ್ ಬಳಸುತ್ತಿದ್ದ ಖಾತೆಯ ಐಪಿ ವಿಳಾಸವನ್ನು ಪತ್ತೆಹಚ್ಚಿ, ವಿಜಯಪುರದಲ್ಲಿ ಆತನನ್ನು ಬಂಧಿಸಿದ್ದಾರೆ.

ನಟ ದರ್ಶನ್ ತೂಗುದೀಪ ಪ್ರಮುಖ ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ನೀಡಿದ್ದ ಅಭಿಪ್ರಾಯವನ್ನು ಬೆಂಬಲಿಸಿ ರಮ್ಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲೇ, ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡ ಹಲವು ವ್ಯಕ್ತಿಗಳು, ರಮ್ಯಾ ವಿರುದ್ಧ ನಿಂದನೀಯ ಮತ್ತು ಅವಹೇಳನಕಾರಿ ಸಂದೇಶಗಳನ್ನು ಕಳುಹಿಸಿ, ಅತ್ಯಾಚಾರ ಹಾಗೂ ಕೊಲೆ ಬೆದರಿಕೆಗಳನ್ನು ಹಾಕಿದ್ದರು ಎಂದು ಆರೋಪಿಸಲಾಗಿತ್ತು. ಈ ಕುರಿತು ರಮ್ಯಾ ಅವರು ಜುಲೈ 28ರಂದು 43 ಸಾಮಾಜಿಕ ಮಾಧ್ಯಮ ಖಾತೆಗಳ ವಿವರಗಳೊಂದಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಓಬಣ್ಣ ಗಂಗಾಧರ್, ರಾಜೇಶ್, ಭುವನ್ಗೌಡ, ಮಂಜುನಾಥ್ ಮತ್ತು ಪ್ರಮೋದ್ಗೌಡ ಸೇರಿದಂತೆ ಆರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೀಗ ಸಂತೋಷ್ ಬಂಧನದೊಂದಿಗೆ ತನಿಖೆ ಮತ್ತಷ್ಟು ತೀವ್ರಗೊಂಡಿದೆ.

Read More
Next Story