ನಾಟಕ ಅಕಾಡೆಮಿ ಪ್ರಶಸ್ತಿ | ನನ್ನ ಮನಃ ಸಾಕ್ಷಿ ಒಪ್ಪುತ್ತಿಲ್ಲ, ಕ್ಷಮಿಸಿ: ನಟ ಪ್ರಕಾಶ್ ರಾಜ್
ಕರ್ನಾಟಕ ನಾಟಕ ಅಕಾಡೆಮಿ ನೀಡಿದ್ದ ವಾರ್ಷಿಕ ಪ್ರಶಸ್ತಿಯನ್ನು ನಟ ಪ್ರಕಾಶ್ ರಾಜ್ ತಿರಸ್ಕಾರ ಮಾಡಿದ್ದು, ʻನನ್ನ ಮನಃ ಸಾಕ್ಷಿ ಒಪ್ಪುತ್ತಿಲ್ಲ, ಕ್ಷಮಿಸಿʼ ಎಂದು ಹೇಳಿದ್ದಾರೆ.
ಈ ಬಗ್ಗೆ ಶುಕ್ರವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ʻʻನಾನು ಈಗಷ್ಟೆ ರಂಗಭೂಮಿಗೆ ಮರಳಿ ಬಂದ್ದಿದ್ದೇನೆ.. ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ.. ನನಗಿಂತಲೂ ಅರ್ಹರು ರಂಗಭೂಮಿಯಲ್ಲಿರುವುದರಿಂದ, ಈ ಪುರಸ್ಕಾರವನ್ನು ಸ್ವೀಕರಿಸಲು ನನ್ನ ಮನಃಸಾಕ್ಷಿ ಒಪ್ಪುತ್ತಿಲ್ಲ.. ಕ್ಷಮಿಸಿ. ಅಭಿನಂದಿಸಿದ ಸಹೃದಯರಿಗೆ ಧನ್ಯವಾದಗಳುʼʼ ಎಂದು ಹೇಳಿದ್ದಾರೆ.
ನಾನು ಈಗಷ್ಟೆ ರಂಗಭೂಮಿಗೆ ಮರಳಿ ಬಂದ್ದಿದ್ದೇನೆ .. ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ..ನನಗಿಂತಲೂ ಅರ್ಹರು ರಂಗಭೂಮಿಯಲ್ಲಿರುವುದರಿಂದ, ಈ ಪುರಸ್ಕಾರವನ್ನು ಸ್ವೀಕರಿಸಲು ನನ್ನ ಮನಃಸಾಕ್ಷಿ ಒಪ್ಪುತ್ತಿಲ್ಲ .. ಕ್ಷಮಿಸಿ🙏🏿🙏🏿🙏🏿 ಅಭಿನಂದಿಸಿದ ಸಹ್ರುದಯರಿಗೆ ಧನ್ಯವಾದಗಳು pic.twitter.com/PuzFx3boPK
— Prakash Raj (@prakashraaj) August 9, 2024
ಗುರುವಾರ ತಾನೆ ಕರ್ನಾಟಕ ನಾಟಕ ಅಕಾಡೆಮಿ ರಂಗಭೂಮಿ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ಪ್ರಕಾಶ್ ರಾಜ್ ಅವರಿಗೆ ವಾರ್ಷಿಕ ಪ್ರಶಸ್ತಿ ಘೋಷಿಸಿತ್ತು. ಅವರೊಂದಿಗೆ ನಟಿ ಉಮಾಶ್ರೀ, ನಾಟಕಕಾರರಾದ ಎಚ್.ಎಸ್.ಶಿವಪ್ರಕಾಶ್ ಮತ್ತು ಕೋಟಗಾನಹಳ್ಳಿ ರಾಮಯ್ಯ ಅವರಿಗೂ ಪ್ರಶಸ್ತಿ ಘೋಷಿಸಲಾಗಿತ್ತು.
ವಾರ್ಷಿಕ ಪ್ರಶಸ್ತಿಗೆ ನಾಡಿನ ವಿವಿಧ ಜಿಲ್ಲೆಗಳ ಅತ್ಯುತ್ತಮ ಕಲಾವಿದರ ಜತೆಗೆ ಈಗಾಗಲೇ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಸರು ಮಾಡಿರುವ, ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರದಲ್ಲಿ ತೊಡಗಿ ಸಿಕೊಂಡಿರುವ ಬಿ.ಸುರೇಶ್, ಅಚ್ಯುತ ಕುಮಾರ್, ರಮೇಶ್ ಪಂಡಿತ್ ಮತ್ತು ಮಕ್ಕಳ ರಂಗಭೂಮಿಯ ನಾಟಕಕಾರರಾದ ಡಾ.ಲಕ್ಷ್ಮೀ ಪತಿ ಕೋಲಾರ ಭಾಜನರಾಗಿದ್ದಾರೆ.
ರಂಗಭೂಮಿ ಕ್ಷೇತ್ರದ ಸಾಧಕರಿಗೆ ಪ್ರತಿ ವರ್ಷ ಅಕಾಡೆಮಿಯಿಂದ ಪ್ರಶಸ್ತಿ ನೀಡಲಾಗುತ್ತದೆ. ಕಳೆದ ಎರಡು ವರ್ಷ ಪ್ರಶಸ್ತಿ ನೀಡಿರಲಿಲ್ಲ. ಹಾಗಾಗಿ, 2022-23, 2023-24 ಮತ್ತು 2024-25ನೇ ಸಾಲಿಗೆ ಮೂವರಿಗೆ ಜೀವಮಾನ ಸಾಧನೆಗಾಗಿ ಗೌರವ ಪ್ರಶಸ್ತಿ, ಪ್ರತಿವರ್ಷ 25 ಮಂದಿಯಂತೆ ಒಟ್ಟು 75 ಮಂದಿಗೆ ವಾರ್ಷಿಕ ಪ್ರಶಸ್ತಿ ಮತ್ತು 15 ದತ್ತಿನಿಧಿ ಪ್ರಶಸ್ತಿಗೆ ರಂಗ ಸಾಧಕರನ್ನು ಆಯ್ಕೆ ಮಾಡಲಾಗಿದೆ. ರಾಜ್ಯಾದ್ಯಂತ ವೃತ್ತಿ ರಂಗಭೂಮಿಯ 30ಕ್ಕೂ ಹೆಚ್ಚು ಕಲಾವಿದರಿಗೆ ವಾರ್ಷಿಕ ಮತ್ತು ದತ್ತಿ ಪ್ರಶಸ್ತಿ ನೀಡಲಾಗುತ್ತಿದೆ.