Interim Bail for Darshan | ನಟ ದರ್ಶನ್‌ಗೆ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು
ನಟ ದರ್ಶನ್‌ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ದರ್ಶನ್ ಆರೋಗ್ಯ ಸಮಸ್ಯೆ ಪರಿಗಣಿಸಿ ಆರು ವಾರಗಳವರೆಗೆ ಮಧ್ಯಂತರ ಜಾಮೀನು ನೀಡಲಾಗಿದ್ದು, ಜಾಮೀನಿಗೆ ಸಾಕಷ್ಟು ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ತೂಗುದೀಪ್ ದರ್ಶನ್‌ಗೆ ಹೈಕೋರ್ಟ್ ಆರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ದರ್ಶನ್ ಆರೋಗ್ಯ ಸಮಸ್ಯೆ ಪರಿಗಣಿಸಿ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ. ದರ್ಶನ್ ಅವರಿಗೆ ತೀವ್ರ ಬೆನ್ನುನೋವಿನ ಸಮಸ್ಯೆ ಕಾಡುತ್ತಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವಾಗಿದೆ. ಒಂದೊಮ್ಮೆ ಚಿಕಿತ್ಸೆ ತಡವಾದರೆ ಪಾರ್ಶ್ವವಾಯುವಿಗೆ ತುತ್ತಾಗುವ ಆತಂಕವಿದೆ ಎಂದು ವೈದ್ಯರು ನೀಡಿರುವ ವರದಿ ಆಧರಿಸಿ ಜಾಮೀನು ನೀಡಲಾಗಿದೆ. ಈ ಬಗ್ಗೆ ದರ್ಶನ್ ಪರ ವಕೀಲರು ಮಂಗಳವಾರ ನ್ಯಾಯಾಲಯಕ್ಕೆ ಸವಿವರವಾದ ವರದಿ ಸಲ್ಲಿಸಿದ್ದರು. ಜಾಮೀನು ಆದೇಶವನ್ನು ನ್ಯಾಯಾಲಯ ಬುಧವಾರಕ್ಕೆ ಕಾಯ್ದಿರಿಸಿತ್ತು.
ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ವಾದ ಮಂಡಿಸಿ, ದರ್ಶನ್ ಅವರ ಆರೋಗ್ಯ ಸಮಸ್ಯೆ ಕುರಿತು ವೈದ್ಯರು ನೀಡಿರುವ ವರದಿಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ದರ್ಶನ್ ಗುಣವಾಗಲು ತೆಗೆದುಕೊಳ್ಳುವ ಸಮಯದ ಬಗ್ಗೆ ನಿಖರ ಮಾಹಿತಿ ಇಲ್ಲ. ಸರ್ಕಾರಿ ವೈದ್ಯಕೀಯ ಸಂಸ್ಥೆಗಳಿಂದಲೇ ಚಿಕಿತ್ಸೆ ಕೊಡಿಸಬಹುದು ಎಂದು ವಾದಿಸಿದ್ದರು.
ಎರಡೂ ಕಡೆಯ ವಾದ ಆಲಿಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ, ‘ವೈದ್ಯಕೀಯ ಚಿಕಿತ್ಸೆಯು ವಿಚಾರಣಾಧೀನ ಕೈದಿಯ ಹಕ್ಕು’ ಎಂದು ಉಲ್ಲೇಖಿಸಿ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶಿಸಿದರು. ಚಿಕಿತ್ಸೆಯ ಕಾರಣಕ್ಕಾಗಿ ಈ ಮಧ್ಯಂತರ ಜಾಮೀನು ನೀಡಲಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಜಾಮೀನು ಪಡೆದ ಬಳಿಕ ಒಂದು ವಾರದ ಬಳಿಕ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆಯ ವಿವರವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ದರ್ಶನ್ ಪಾಸ್‌ಪೋರ್ಟ್ ಅನ್ನು ನ್ಯಾಯಾಲಯದ ಸುಪರ್ದಿಗೆ ನೀಡಬೇಕು ಎಂಬ ಷರತ್ತು ವಿಧಿಸಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತೀಥ್ಯ ನೀಡುತ್ತಿರುವ ಫೋಟೊ ವೈರಲ್ ಆದ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. 69ದಿನ ಪರಪ್ಪನ ಅಗ್ರಹಾರದಲ್ಲಿ ಜೈಲು ವಾಸ ಅನುಭವಿಸಿದ್ದ ಅವರನ್ನು ಆ.29 ರಂದು ಬಳ್ಳಾರಿಗೆ ಸ್ಥಳಾಂತರಿಸಲಾಗಿತ್ತು. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದರ್ಶನ್ 5ತಿಂಗಳಿನಿಂದ ವಿಚಾರಣಾಧೀನ ಕೈದಿಯಾಗಿ ಸೆರೆವಾಸ ಅನುಭವಿಸುತ್ತಿದ್ದು, ಈಗ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಭಾಗ್ಯ ದೊರೆತಿದೆ.