
Actor Darshan Case | ದರ್ಶನ್'ಗೆ ಸಿಗದ ಮನೆಯೂಟ ಭಾಗ್ಯ; ಸೆ.5ಕ್ಕೆ ವಿಚಾರಣೆ ಮುಂದೂಡಿಕೆ
ಮನೆ ಊಟ ಪಡೆಯಲು ನಿರ್ದೇಶನ ಕೋರಿದ್ದ ಅರ್ಜಿಯನ್ನು ಅಧೀನ ನ್ಯಾಯಾಲಯ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ನಟ ದರ್ಶನ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಇಂದು ವಿಚಾರಣೆ ನಡೆಸಿತು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್, ತನಗೆ ಜೈಲಿನ ಊಟದಿಂದ ಆರೋಗ್ಯ ಸಮಸ್ಯೆಯಾಗುತ್ತಿದೆ ಎಂದು ಮನೆ ಊಟ ತರಿಸಿಕೊಳ್ಳಲು ಅನುಮತಿ ಕೋರಿ ಹೈಕೋರ್ಟ್ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಇಂದು (ಆ.20) ಹೈಕೋರ್ಟ್ನ ಏಕಸದಸ್ಯ ಪೀಠವು ಅರ್ಜಿಯ ವಿಚಾರಣೆ ನಡೆಸಿದ್ದು ಸೆ.5ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಮನೆ ಊಟ ಪಡೆಯಲು ನಿರ್ದೇಶನ ಕೋರಿದ್ದ ಅರ್ಜಿಯನ್ನು ಅಧೀನ ನ್ಯಾಯಾಲಯ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಇಂದು ವಿಚಾರಣೆ ನಡೆಸಿತು.
ಈ ಹಿಂದೆ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಪೀಠವು, ಜೈಲು ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಿತ್ತು. ಜೈಲು ಅಧಿಕಾರಿಗಳು ತಮ್ಮ ನಿರ್ಣಯವನ್ನು ನೀಡುವಂತೆ ತಿಳಿಸಿತ್ತು..ಅಂತೆಯೇ ನಿರ್ಧಾರವನ್ನು ಹೈಕೋರ್ಟ್ಗೆ ನೀಡಿದ್ದ ಜೈಲು ಅಧಿಕಾರಿಗಳು ದರ್ಶನ್ಗೆ ಜೈಲು ಊಟ ಸಾಕೆಂದಿದ್ದರು. ಜೈಲಿನ ವೈದ್ಯಾಧಿಕಾರಿ ನೀಡಿದ್ದ ವರದಿಯನ್ನು ಸಹ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ವೈದ್ಯಾಧಿಕಾರಿಗಳು ದರ್ಶನ್ಗೆ ಮನೆ ಊಟವನ್ನು ನಿರಾಕರಿಸಿದ್ದಾರೆ ಎಂದು ಹೈಕೋರ್ಟ್ನಲ್ಲಿ ರಾಜ್ಯ ಅಭಿಯೋಜಕ ಬೆಳ್ಳಿಯಪ್ಪ ಹೇಳಿದರು. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿರುವುದಾಗಿ ತಿಳಿಸಿದರು.
ಈ ವೇಳೆ ದರ್ಶನ್ ಪರ ವಕೀಲೆ ಸಂಜೀವಿನಿ ನಾವದಗಿ ಅವರು ವಾದ ಮಂಡಿಸಿ, ನಮ್ಮ ಕೋರಿಕೆಯನ್ನು ತಿರಸ್ಕರಿಸಿರುವ ಆದೇಶವನ್ನು ಪರಿಶೀಲಿಸಿಲ್ಲ. ಅದನ್ನು ನೋಡಿ ಮೆರಿಟ್ ಮೇಲೆ ವಾದಿಸಲಾಗುವುದು. ನ್ಯಾಯಾಲಯ ಸಮಯ ನಿಗದಿಪಡಿಸಬಹುದು ಎಂದು ತಿಳಿಸಿದರು. ಇದಕ್ಕೆ ಒಪ್ಪಿದ ನ್ಯಾಯಪೀಠ, ವಿಚಾರಣೆಯನ್ನು ಸೆ.5 ಕ್ಕೆ ಮುಂದೂಡಿತು.
ಆ.28 ರವೆರಗೆ ದರ್ಶನ್ ನ್ಯಾಯಾಂಗ ಬಂಧನ ವಿಸ್ತರಿಸಿ ಕಳೆದ ವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶ ನೀಡಿದೆ. ಇದೀಗ ಮನೆ ಊಟದ ಅರ್ಜಿಯ ವಿಚಾರಣೆಯನ್ನು ಕೂಡ ಸೆ.5ಕ್ಕೆ ಮುಂದೂಡಲಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಸಾಕ್ಷ್ಯಗಳನ್ನು ಕಲೆ ಹಾಕಿದ್ದು ಕೆಲವು ಡಿಜಿಟಲ್ ಸಾಕ್ಷ್ಯಗಳ ಎಫ್ಎಸ್ಎಲ್ ವರದಿಯಾಗಿ ಕಾಯುತ್ತಿದ್ದಾರೆ. ಹೈದರಾಬಾದ್ನಿಂದ ಈ ಎಫ್ಎಸ್ಎಲ್ ವರದಿಗಳು ಬರಬೇಕಿದ್ದು ವರದಿಗಳು ಬಂದ ಕೂಡಲೇ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.