Actor Darshan Case | ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ
x
ದರ್ಶನ್‌ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್‌ ಮುಂದೂಡಿದೆ.

Actor Darshan Case | ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

ದರ್ಶನ್ ಹಾಗೂ ಸಹಚರರು, ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿದ ರೀತಿ, ಆ ನಂತರ ನಡೆದ ಘಟನೆಗಳು, ಪ್ರತ್ಯಕ್ಷದರ್ಶಿಗಳು ನೀಡಿರುವ ಹೇಳಿಕೆ ಎಲ್ಲವನ್ನೂ ಉಲ್ಲೇಖಿಸಿದ ಎಸ್‌ಪಿಪಿ, ‘ಇದು ದರ್ಶನ್ ರಕ್ತಚರಿತ್ರೆ’ ಎಂದು ವ್ಯಾಖ್ಯಾನಿಸಿದರು.


Click the Play button to hear this message in audio format

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ 2 ಆರೋಪಿಯಾಗಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಮತ್ತೆ ನಿರಾಶೆಯಾಗಿದೆ. ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ನಟನಿಗೆ ಮಂಗಳವಾರದ ವಿಚಾರಣೆಯಲ್ಲೂ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಅವರ ಅರ್ಜಿ ವಿಚಾರಣೆಯನ್ನು ಮಂಗಳವಾರ (ಅ.8) ಬೆಂಗಳೂರಿನ 57 ನೇ ಸಿಸಿಹೆಚ್‌ ಕೋರ್ಟ್‌ ವಿಚಾರಣೆ ನಡೆಸಿದ್ದು, ಅರ್ಜಿಯ ವಿಚಾರಣೆಯನ್ನು ಮತ್ತೆ ಬುಧವಾರಕ್ಕೆ (ಅ.9)ಗೆ ಮುಂದೂಡಿದೆ.

ಮಂಗಳವಾರ ಪ್ರಕರಣದ ಕೆಲ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಬಳಿಕ ಪ್ರಕರಣದ ಎಸ್​ಪಿಪಿ ಪ್ರಸನ್ನ ಕುಮಾರ್ ಅವರು ವಾದ ಸರಣಿ ಆರಂಭಿಸಿ, ದರ್ಶನ್ ಹಾಗೂ ಪವಿತ್ರಾ ಪರ ವಕೀಲರು ಪ್ರಕರಣದ ತನಿಖೆ ಬಗ್ಗೆ ಎತ್ತಿದ್ದ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಾರಂಭಿಸಿದರು. ಎಸ್​ಪಿಪಿ ಅವರ ವಾದ ಸರಣಿ ಸುದೀರ್ಘವಾಗಿ ನಡೆದಿದ್ದು, ಅಂತಿಮವಾಗಿ ನ್ಯಾಯಾಲಯದ ಸಮಯ ಮೀರಿದ ಕಾರಣ ಪ್ರಕರಣದ ವಿಚಾರಣೆಯನ್ನು ಬುಧವಾರ 12.30ಕ್ಕೆ ಮುಂದೂಡಲಾಯಿತು.

ಮಂಗಳವಾರ ವಾದ ಮಂಡಿಸಿದ ಎಸ್​ಪಿಪಿ ಪ್ರಸನ್ನ ಕುಮಾರ್, ಆರೋಪಿಗಳ ಪರ ವಕೀಲರು ಎತ್ತಿರುವ ಪ್ರತಿ ಪ್ರಶ್ನೆಗೂ ಸಹ ಉತ್ತರ ಇದೆ ಎಂದು ಹೇಳಿಯೇ ವಾದ ಆರಂಭಿಸಿದರು. ಸಿವಿ ನಾಗೇಶ್ ಅವರು ಪ್ರಶ್ನೆ ಮಾಡಿದ್ದ, ಎತ್ತಿ ತೋರಿಸಿದ್ದ ಲೋಪದೋಷಗಳಿಗೆ ಬಹುತೇಕ ಉತ್ತರಗಳನ್ನು ಸ್ಪಷ್ಟತೆಯನ್ನು ಎಸ್​ಪಿಪಿ ನೀಡಿದರು. ಮಾತ್ರವಲ್ಲದೆ, ದರ್ಶನ್ ಹಾಗೂ ಅವರ ತಂಡ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿದ ರೀತಿ, ಆ ನಂತರ ನಡೆದ ಘಟನೆಗಳು, ಪ್ರತ್ಯಕ್ಷದರ್ಶಿಗಳು ನೀಡಿರುವ ಹೇಳಿಕೆ ಎಲ್ಲವನ್ನೂ ಉಲ್ಲೇಖಿಸಿ, ‘ಇದು ದರ್ಶನ್ ರಕ್ತಚರಿತ್ರೆ’ ಎಂದು ವ್ಯಾಖ್ಯಾನಿಸಿದರು.

ರೇಣುಕಾ ಸ್ವಾಮಿ ಮೇಲೆ ದರ್ಶನ್ ಮತ್ತು ಗ್ಯಾಂಗ್​ನ ಆರ್ಭಟ ಹೇಗಿತ್ತು ಎಂದು ವಿವರಿಸಿದ ಪ್ರಸನ್ನ ಕುಮಾರ್, ಧನರಾಜ್, ಪವನ್ ಮತ್ತು ನಂದೀಶ್ ಕಟ್ಟಿಗೆಯಲ್ಲಿ ರೇಣುಕಾ ಸ್ವಾಮಿಗೆ ಹೊಡೆದಿದ್ದಾರೆ. ಅದಾದ ಬಳಿಕ ಧನರಾಜ್, ರೇಣುಕಾ ಸ್ವಾಮಿಗೆ ಶಾಕ್ ಕೊಟ್ಟಿದ್ದಾನೆ. ಆಗ ರೇಣುಕಾ ಸ್ವಾಮಿ ಕೈ ಮುಗಿಯುತ್ತಿರುವ ಫೋಟೊ ಕಳಿಸಲಾಗಿದೆ. ಅದಾದ ಬಳಿಕ ರೇಣುಕಾ ಸ್ವಾಮಿ ಸುಸ್ತಾಗಿ ಮಲಗಿದ್ದಾನೆ. ಆ ಫೋಟೊವನ್ನು ವಿನಯ್​ಗೆ ಕಳಿಸಿದ್ದಾರೆ. ಬಳಿಕ ದರ್ಶನ್ ಬಂದಿದ್ದಾರೆ. ಆಗ ರೇಣುಕಾ ಸ್ವಾಮಿಯನ್ನು ಎದ್ದು ನಿಲ್ಲಿಸಿ ದರ್ಶನ್ ಎದೆಗೆ ಒದ್ದಿದ್ದಾರೆ, ರೇಣುಕಾ ಸ್ವಾಮಿ ಪ್ಯಾಂಟ್ ಬಿಚ್ಚಿಸಿ ಮರ್ಮಾಂಗಕ್ಕೆ ಒದ್ದಿದ್ದಾರೆ. ಆ ಬಳಿಕ ಮೆಸೇಜ್​ಗಳನ್ನು ಓದುವಂತೆ ಹೇಳಿ, ಪವನ್ ಮೆಸೇಜ್ ಓದುತ್ತಿದ್ದಂತೆ ರೇಣುಕಾ ಸ್ವಾಮಿಯನ್ನು ಹೊಡೆಯುವುದು, ಒದೆಯುವುದು ಮಾಡಿದ್ದಾರೆ ದರ್ಶನ್. ಅದೇ ಸಮಯದಲ್ಲಿ ಮರ್ಮಾಂಗಕ್ಕೂ ಒದ್ದಿದ್ದಾರೆ. ಮಾತ್ರವಲ್ಲದೆ ರೇಣುಕಾ ಸ್ವಾಮಿ ಕೆಳಗೆ ಬಿದ್ದಾಗ ಆತನ ಎದೆಯ ಮೇಲೆ ಹತ್ತಿ ನಿಂತಿದ್ದಾರೆ. ಆಗ ಬಹುಷಃ ರೇಣುಕಾ ಸ್ವಾಮಿ ಎದೆ ಮೂಳೆ ಮುರಿದಿದೆ ಎಂದು ಪ್ರಸನ್ನ ಕುಮಾರ್ ನ್ಯಾಯಾಲಯದ ಮುಂದೆ ವಿವರಿಸಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಹಾಗೂ ಇತರ ಆರೋಪಿಗಳ ಬಂಧನವಾಗಿ ನಾಲ್ಕು ತಿಂಗಳಾಗಿದೆ. ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ನಾಲ್ಕು ಮಂದಿಗೆ ಈಗಾಗಲೇ ಜಾಮೀನು ದೊರೆತಿದೆ. ದರ್ಶನ್​ರ ಜಾಮೀನಿಗಾಗಿ ವಕೀಲ ಸಿ ವಿ ನಾಗೇಶ್ ವಾದ ಮಂಡಿಸುತ್ತಿದ್ದಾರೆ.

Read More
Next Story