ಧರ್ಮಸ್ಥಳ ವಸತಿಗೃಹಗಳಲ್ಲಿ ಸರಣಿ ಸಾವು: ಕೊಲೆ ಪ್ರಕರಣ ದಾಖಲಿಸುವಂತೆ ಎಸ್​​ಐಟಿಗೆ ಮಹೇಶ್ ಶೆಟ್ಟಿ ತಿಮರೋಡಿ ದೂರು
x

ಧರ್ಮಸ್ಥಳ ವಸತಿಗೃಹಗಳಲ್ಲಿ ಸರಣಿ ಸಾವು: ಕೊಲೆ ಪ್ರಕರಣ ದಾಖಲಿಸುವಂತೆ ಎಸ್​​ಐಟಿಗೆ ಮಹೇಶ್ ಶೆಟ್ಟಿ ತಿಮರೋಡಿ ದೂರು

2006 ರಿಂದ 2014ರ ಅವಧಿಯಲ್ಲಿ ಧರ್ಮಸ್ಥಳದ ವಸತಿ ಗೃಹಗಳಲ್ಲಿ ನಡೆದ ಅಸಹಜ ಸಾವುಗಳ ನಿರ್ವಹಣೆಯಲ್ಲಿ ಹಲವಾರು ಕಾನೂನುಗಳ ಲೋಪ ಆಗಿವೆ ಎಂದು ತಿಮರೋಡಿ ದೂರಿನಲ್ಲಿ ತಿಳಿಸಿದ್ದಾರೆ.


Click the Play button to hear this message in audio format

ಧರ್ಮಸ್ಥಳ ದೇವಸ್ಥಾನದ ಆಡಳಿತಕ್ಕೆ ಸೇರಿದ ವಸತಿಗೃಹಗಳಲ್ಲಿ 2006ರಿಂದ 2010ರ ಅವಧಿಯಲ್ಲಿ ನಡೆದ ನಾಲ್ಕು ಸಂಶಯಾಸ್ಪದ ಸಾವುಗಳ ಕುರಿತು ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಆಗ್ರಹಿಸಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ವಿಶೇಷ ತನಿಖಾ ದಳಕ್ಕೆ ದೂರು ಸಲ್ಲಿಸಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖಲೆಗಳನ್ನು ಆಧರಿಸಿ, ತಿಮರೋಡಿ ಅವರು ಈ ಸಾವುಗಳು ಸಹಜವಲ್ಲ, ಬದಲಿಗೆ ವ್ಯವಸ್ಥಿತ ಕೊಲೆಗಳಾಗಿರಬಹುದು ಎಂಬ ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ನಾಲ್ಕು ಪ್ರಕರಣಗಳಲ್ಲಿ ಮೃತಪಟ್ಟವರನ್ನು 'ಅಪರಿಚಿತರು'' ಅಥವಾ 'ಅನಾಥ ಶವ' ಎಂದು ಘೋಷಿಸಿ, ಕೇವಲ ಅಸಹಜ ಸಾವು ಪ್ರಕರಣ ದಾಖಲಿಸಿ ತನಿಖೆಯನ್ನು ಮುಕ್ತಾಯಗೊಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ದೂರಿನಲ್ಲಿ ಏನಿದೆ?

ಸೆಪ್ಟೆಂಬರ್ 11ರಂದು ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಅವರಿಗೆ ಸಲ್ಲಿಸಲಾದ ದೂರಿನಲ್ಲಿ, ಗಾಯತ್ರಿ, ಶರಾವತಿ ಮತ್ತು ವೈಶಾಲಿ ವಸತಿಗೃಹಗಳಲ್ಲಿ ನಡೆದ ನಾಲ್ಕು ನಿರ್ದಿಷ್ಟ ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ. ಈ ಪ್ರಕರಣಗಳ ವಿವರಗಳು ಹೀಗಿವೆ.

2006ರ ಫೆಬ್ರವರಿ 28ರಂದು ಗಾಯತ್ರಿ ವಸತಿಗೃಹದಲ್ಲಿ 50ರಿಂದ 55 ವರ್ಷದ ವ್ಯಕ್ತಿಯ ಶವ ಪತ್ತೆಯಾಗಿತ್ತು. 2006ರ ಏಪ್ರಿಲ್​​ 13ರಂದು ಶರಾವತಿ ವಸತಿಗೃಹದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಇವೆರಡನ್ನೂ ಅಸಹಜ ಸಾವು ಎಂದು ಪೊಲೀಸ್​ ದಾಖಲೆಗಳಲ್ಲಿ ಬರೆಯಲಾಗಿದೆ. 2007ರ ಆಗಸ್ಟ್​ 0ರಂದು ವೈಶಾಲಿ ವಸತಿಗೃಹದಲ್ಲಿ 30ರಿಂದ 35 ವರ್ಷದ ವ್ಯಕ್ತಿಯ ಶವ ಪತ್ತೆಯಾಗಿತ್ತು. ಇದನ್ನೂ ಅಸಹಜ ಸಾವು ಎಂದು ನಿರ್ಧರಿಸಲಾಗಿದೆ.

2010ರ ಸೆಪ್ಟೆಂಬರ್​ 28ರಂದು ಗಾಯತ್ರಿ ವಸತಿಗೃಹದಲ್ಲಿ ಪತ್ತೆಯಾದ ವ್ಯಕ್ತಿಯ ಸಾವು "ವಿಷ ಸೇವನೆ"ಯಿಂದ ಸಂಭವಿಸಿದೆ ಎಂದು ಪೊಲೀಸ್ ದಾಖಲೆಗಳಲ್ಲಿ ಬರೆಯಲಾಗಿದೆ ಎಂದು ದೂರಿನಲ್ಲಿ ತಿಮರೋಡಿ ಅವರು ಆರೋಪಿಸಿದ್ದಾರೆ.

ನಿಯಮಗಳ ಉಲ್ಲಂಘನೆಯ ಆರೋಪ

ವಸತಿಗೃಹಗಳಲ್ಲಿ ಕೊಠಡಿ ಪಡೆಯುವಾಗ ಗುರುತಿನ ಚೀಟಿ, ವಿಳಾಸ ಮತ್ತು ಸಹಿ ನೀಡುವುದು ಕಡ್ಡಾಯ. ಹೀಗಿರುವಾಗ, ಮೃತಪಟ್ಟ ವ್ಯಕ್ತಿಯನ್ನು "ಅಪರಿಚಿತ" ಎಂದು ಪರಿಗಣಿಸುವುದು ಕಾನೂನುಬಾಹಿರ. ಇದು ಅತಿಥಿಗಳ ವಿವರಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿಹಾಕುವ ಅಥವಾ ದಾಖಲೆಗಳನ್ನು ನಾಶಪಡಿಸುವ ಪ್ರಯತ್ನ ಎಂದು ತಿಮರೋಡಿ ತಮ್ಮದೂರಿನಲ್ಲಿ ಆರೋಪಿಸಿದ್ದಾರೆ

ಸಂಭಾವ್ಯ ಕೊಲೆ ಅಥವಾ ಆತ್ಮಹತ್ಯೆಯ ಅನುಮಾನ ಬಂದಾಗ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಥವಾ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸುವುದು ಕಡ್ಡಾಯ. ಆದರೆ, ಈ ಪ್ರಕರಣಗಳಲ್ಲಿ ಕೇವಲ ಅಸಹಜ ಸಾವು ದಾಖಲಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ತಿಮರೋಡಿ ಅವರ ಬೇಡಿಕೆಗಳೇನು?

ಈ ನಾಲ್ಕೂ ಪ್ರಕರಣಗಳನ್ನು ಕೊಲೆ ಪ್ರಕರಣಗಳೆಂದು ಪರಿಗಣಿಸಿ, ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಬೇಕು. ಜೊತೆಗೆ, ವಸತಿಗೃಹಗಳ ಅತಿಥಿ ನೋಂದಣಿ ಪುಸ್ತಕ, ಸಿಬ್ಬಂದಿಗಳ ಕರ್ತವ್ಯ ಪಟ್ಟಿ ಮತ್ತು ಪಾವತಿ ವೋಚರ್‌ಗಳನ್ನು ವಶಪಡಿಸಿಕೊಂಡು ತನಿಖೆ ನಡೆಸಬೇಕೆಂದು ಮಹೇಶ್ ಶೆಟ್ಟಿ ತಿಮರೋಡಿ ಅವರು ಎಸ್‌ಐಟಿಯನ್ನು ಒತ್ತಾಯಿಸಿದ್ದಾರೆ.

ಕರಣಕ್ಕೆ ಇದೀಗ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದೆ. ಅತ್ಯಾಚಾರ ಹಾಗೂ ಕೊಲೆಯಾದ ಸೌಜನ್ಯ ಅವರ ಮಾವ ವಿಠಲ ಗೌಡ ಅವರು ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಸ್ಥಳ ಮಹಜರಿನ ವೇಳೆ ತಾವು ಕಂಡ ಭಯಾನಕ ದೃಶ್ಯಗಳನ್ನು ಬಿಚ್ಚಿಟ್ಟಿದ್ದಾರೆ. "ಕಣ್ಣಾರೆ ಐದು ಹೆಣಗಳನ್ನು ನೋಡಿದ್ದೇನೆ, ಅಲ್ಲಿ ಸಣ್ಣ ಮಗುವಿನ ಎಲುಬುಗಳೂ ಇದ್ದವು," ಎಂದು ಅವರು ನೀಡಿರುವ ಹೇಳಿಕೆ ತೀವ್ರ ಸಂಚಲನ ಸೃಷ್ಟಿಸಿದೆ.

ಹೆಣಗಳ ರಾಶಿ ಕಂಡಿದ್ದೇನೆ ಸೌಜನ್ಯಾ ಮಾವ ವಿಠಲ ಗೌಡ ವಿಡಿಯೊ ಬಿಡುಗಡೆ

ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿರುವ ಸೌಜನ್ಯಾ ಅವರ ಮಾವ ವಿಠಲ ಗೌಡ ಅವರು ವಿಡಿಯೊ ಒಂದನ್ನು ಬಿಡುಗಡೆ ಮಾಡಿ ಮಾತನಾಡಿದ್ದು, ಹಲವಾರು ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ. ವಿಡಿಯೊದಲ್ಲಿ ಅವರು ವಿಶೇಷ ತನಿಖಾ ತಂಡವು ತಮ್ಮನ್ನು ಎರಡು ಬಾರಿ ಸ್ಥಳ ಮಹಜರಿಗಾಗಿ ಬಂಗ್ಲಗುಡ್ಡೆಗೆ ಕರೆದೊಯ್ದಿತ್ತು ಎಂದು ತಿಳಿಸಿದ್ದಾರೆ.

"ಮೊದಲ ಬಾರಿಗೆ ಸ್ಥಳ ಮಹಜರಿಗೆ ಹೋದಾಗ, ಹತ್ತಿರ ಹತ್ತಿರ ಹತ್ತು ಅಡಿಗಳ ಅಂತರದಲ್ಲಿ ಮೂರು ಮನುಷ್ಯರ ಕಳೇಬರಗಳು ಪತ್ತೆಯಾದವು," ಎಂದು ವಿಠಲ ಗೌಡರು ವಿವರಿಸಿದ್ದಾರೆ. "ಎರಡನೇ ಬಾರಿ ಸ್ಥಳಕ್ಕೆ ಹೋದಾಗ ಕಂಡ ದೃಶ್ಯ ಇನ್ನೂ ಆಘಾತಕಾರಿಯಾಗಿತ್ತು. ಅಲ್ಲಿ ಹೆಣಗಳ ರಾಶಿಯೇ ಸಿಕ್ಕಿತು. ನನ್ನ ಕಣ್ಣಿಗೆ ಸ್ಪಷ್ಟವಾಗಿ ಐದು ಹೆಣಗಳು ಕಾಣಿಸಿದವು. ಅದರಲ್ಲೊಂದು ಸಣ್ಣ ಮಗುವಿನ ಎಲುಬಿನಂತೆ ಗೋಚರಿಸುತ್ತಿತ್ತು," ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಶವಗಳಿದ್ದ ಸ್ಥಳದಲ್ಲಿ ವಾಮಾಚಾರಕ್ಕೆ ಬಳಸುವಂತಹ ವಸ್ತುಗಳು ಕೂಡ ಪತ್ತೆಯಾಗಿವೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಹೂತಿಟ್ಟ ಶವಗಳು ಕಾಣದಂತೆ ಮಣ್ಣು ತೆಗೆದು ಮುಚ್ಚುವ ಪ್ರಯತ್ನ ನಡೆದಂತೆ ಕಾಣುತ್ತಿತ್ತು ಎಂದಿದ್ದಾರೆ. "ಅಂದಾಜು ಐದಾರು ಅಡಿ ಆಳದಲ್ಲಿ ಬುರುಡೆಗಳ ರಾಶಿಯೇ ಇತ್ತು. ಎಲುಬುಗಳು ಅಲ್ಲಲ್ಲಿ ಚದುರಿಹೋಗಿದ್ದವು. ಮಣ್ಣಿನಿಂದ ಮೇಲೆದ್ದಂತೆ ಕಾಣುತ್ತಿದ್ದ ಬುರುಡೆಗಳನ್ನು ನಾವು ಮುಟ್ಟಿಲ್ಲ, ಅವು ಹಾಗೆಯೇ ಇವೆ," ಎಂದು ಅವರು ದೃಶ್ಯವನ್ನು ವಿವರಿಸಿದ್ದಾರೆ.

ಚಿನ್ನಯ್ಯ ಹೇಳಿದ್ದು ನೂರಕ್ಕೆ ನೂರು ಸತ್ಯ

ಪ್ರಕರಣದ ಪ್ರಮುಖ ಸಾಕ್ಷಿ ಚಿನ್ನಯ್ಯ ಅವರ ಹೇಳಿಕೆಯನ್ನು ವಿಠಲ ಗೌಡ ಅವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. "ಚಿನ್ನಯ್ಯ, ತಾನಾಸಿ, ರಂಗ, ಸುಬ್ರಹ್ಮಣ್ಯ ಅವರು ನೀಡಿದ ಮಾಹಿತಿ ಸತ್ಯ. ಅವರ ಮಾಹಿತಿ ಪ್ರಕಾರ ಸ್ಥಳಗಳನ್ನು ತೋರಿಸಲು ನಾನು ಸಿದ್ಧನಿದ್ದೇನೆ. ಚಿನ್ನಯ್ಯ ಹೇಳಿದ್ದು ನೂರಕ್ಕೆ ನೂರು ಸತ್ಯ, ಅದರಲ್ಲಿ ಯಾವುದೇ ಸಂಶಯವಿಲ್ಲ. ಒಂದೇ ಊರಿನಲ್ಲಿ ಒಂದೇ ಕಡೆ ಇಷ್ಟೊಂದು ಹೆಣಗಳನ್ನು ರಾಶಿ ಹಾಕಿರುವುದನ್ನು ನೋಡಿ ಆಘಾತವಾಗಿದೆ," ಎಂದಿದ್ದಾರೆ.

ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿರುವ ವಿಠಲ ಗೌಡ, "ಯಾವಾಗ ಕರೆದರೂ ಬರಲು ಸಿದ್ಧ" ಎಂದು ಹೇಳಿದ್ದಾರೆ.

Read More
Next Story