ಇಂದಿನಿಂದ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ: ಕಾರ್ಯಪಡೆ ರಚಿಸಿದ ಸರ್ಕಾರ
x

ಇಂದಿನಿಂದ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ: ಕಾರ್ಯಪಡೆ ರಚಿಸಿದ ಸರ್ಕಾರ

2015ರ ನಂತರ ನಡೆದ ಒತ್ತುವರಿ ತೆರವುಗಳ ಪೈಕಿ, ಒತ್ತುವರಿ ಸಾಭೀತಾದ ಪ್ರಕರಣಗಳನ್ನು ತಕ್ಷಣ ತೆರವುಗೊಳಿಸಬೇಕು, ನ್ಯಾಯಾಲಯದಲ್ಲಿರುವ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಅಡ್ವೋಕೇಟ್ ಜನರಲ್ ಜೊತೆ ಚರ್ಚಿಸಬೇಕು ಮತ್ತು ಪ್ರಕರಣಗಳ ತ್ವರಿತ ವಿಲೇವಾರಿಗೆ ವಾರದಲ್ಲಿ ಎರಡು ದಿನ ಮೀಸಲಿಡಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.

ನೆರೆಯ ರಾಜ್ಯ ಕೇರಳದ ವಯನಾಡ್ ಭೂಕುಸಿತ ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಭೂಕುಸಿತ ದುರಂತಗಳು ಸಂಭವಿಸಿದ ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಅರಣ್ಯ ಒತ್ತುವರಿ ತೆರವು ಮತ್ತು ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.

ಪಶ್ಚಿಮಘಟ್ಟ ಪ್ರದೇಶಗಳ ಅರಣ್ಯ ಒತ್ತುವರಿ ಮತ್ತು ಅನಧಿಕೃತ ನಿರ್ಮಾಣಗಳ ತೆರವಿಗೆ 2023ರಲ್ಲೇ ಅರಣ್ಯ ಇಲಾಖೆ ಟಿಪ್ಪಣಿ ಹೊರಡಿಸಿತ್ತು. ಆದರೆ, ಕಾರ್ಯಪಡೆ ರಚನೆಯಾಗಿರಲಿಲ್ಲ. ಇದೀಗ ರಾಜ್ಯ ಸರ್ಕಾರ ತೆರವು ಕಾ್ಯಕ್ಕೆ ಮುಂದಾಗಿದ್ದು, ಸೋಮವಾರ (ಆ.5) ರಾಜ್ಯದ ಪಶ್ಚಿಮಘಟ್ಟ ಪ್ರದೇಶಗಳ ಅರಣ್ಯ ಒತ್ತುವರಿ, ಅಕ್ರಮ ತೋಟಗಳು, ಅನಧಿಕೃತ ರೆಸಾರ್ಟ್‌ಗಳು ಮತ್ತು ಇತರ ನಿರ್ಮಾಣಗಳ ತೆರವು ಕಾರ್ಯ ಆರಂಭಿಸಲಿದೆ. ಇದಕ್ಕಾಗಿ ಕಾರ್ಯಪಡೆಯನ್ನೂ ಸರ್ಕಾರ ರಚಿಸಿದೆ.

ಈ ಕಾರ್ಯಪಡೆಗೆ ʻಪಶ್ಚಿಮಘಟ್ಟ ಅರಣ್ಯ ಒತ್ತುವರಿ ತೆರವು ಕಾರ್ಯಪಡೆʼ ಎಂದು ಹೆಸರಿಸಲಾಗಿದೆ. ಇದು ಸೋಮವಾರದಿಂದಲೇ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಆರಂಭಿಸಲಿದೆ. ಕೆಲವು ವರ್ಷಗಳಿಂದ ಪಶ್ಚಿಮಘಟ್ಟ ಪ್ರದೇಶದ ವ್ಯಾಪ್ತಿಯಲ್ಲಿರುವ ರಾಜ್ಯದ 10 ಜಿಲ್ಲೆಗಳ ಹಲವೆಡೆ ಭೂಕುಸಿತ ಸಂಭವಿಸಿತ್ತು. ಅಲ್ಲಿನ ಅರಣ್ಯ ಪ್ರದೇಶಗಳಲ್ಲಿ ಅಕ್ರಮವಾಗಿ ನಡೆಸುತ್ತಿರುವ ತೋಟ, ರೆಸಾರ್ಟ್ ಮತ್ತಿತರ ಚಟುವಟಿಕೆಗಳೇ ಇದಕ್ಕೆ ಕಾರಣ. ಒತ್ತುವರಿ ತೆರವು ಮಾಡಿದರೆ ಭೂಕುಸಿತದಂತಹ ದುರಂತಗಳನ್ನು ತಪ್ಪಿಸಬಹುದು. ಇದಕ್ಕಾಗಿ ಕಾರ್ಯಪಡೆ ರಚಿಸಬೇಕು ಎಂದು ಅರಣ್ಯ ಇಲಾಖೆ 2023ರ ಸೆಪ್ಟೆಂಬರ್‌ನಲ್ಲೇ ಟಿಪ್ಪಣಿ ಹೊರಡಿಸಿತ್ತು. ಆದರೆ ಕಾರ್ಯಪಡೆ ರಚನೆಯಾಗಿರಲಿಲ್ಲ.

ಕಳೆದ ತಿಂಗಳಲ್ಲಿ ರಾಜ್ಯದ ಶಿರೂರು, ಸಕಲೇಶಪುರ, ಶಿರಾಡಿ ಘಾಟ್, ಚಾರ್ಮಾಡಿ ಘಾಟ್‌ಗಳಲ್ಲಿ ಭಾರಿ ಪ್ರಮಾಣದಲ್ಲಿ ಸಾಲು ಸಾಲು ಭೂಕುಸಿತ ಸಂಭವಿಸಿದ್ದವು. ಆಗಲೂ ಕಾರ್ಯಪಡೆ ರಚನೆಯ ಅವಶ್ಯಕತೆ ಇದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರತಿಪಾದಿಸಿದ್ದರು. ಆದರೂ ಕಾರ್ಯಪಡೆ ರಚನೆಯಾಗಿರಲಿಲ್ಲ. ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಕೇರಳದ ವಯನಾಡ್ ಜಿಲ್ಲೆಯಲ್ಲಿ ಜುಲೈ ಕೊನೆಯ ವಾರ ಸಂಭವಿಸಿದ ಭಾರಿ ಭೂಕುಸಿತದ ನಂತರ ಸರ್ಕಾರ ಎಚ್ಚೆತ್ತುಕೊಂಡಿದೆ.

2015ರ ನಂತರ ನಡೆದ ಒತ್ತುವರಿ ತೆರವುಗಳ ಪೈಕಿ, ಒತ್ತುವರಿ ಸಾಭೀತಾದ ಪ್ರಕರಣಗಳನ್ನು ತಕ್ಷಣ ತೆರವುಗೊಳಿಸಬೇಕು, ನ್ಯಾಯಾಲಯದಲ್ಲಿರುವ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಅಡ್ವೋಕೇಟ್ ಜನರಲ್ ಜೊತೆ ಚರ್ಚಿಸಬೇಕು ಮತ್ತು ಪ್ರಕರಣಗಳ ತ್ವರಿತ ವಿಲೇವಾರಿಗೆ ವಾರದಲ್ಲಿ ಎರಡು ದಿನ ಮೀಸಲಿಡಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.

Read More
Next Story