
ಡಿಸಿಎಂ ಡಿ.ಕೆ. ಶಿವಕುಮಾರ್ ಸಭೆ ನಡೆಸಿದರು.
ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ; ರಸ್ತೆ ಗುಂಡಿ ಮುಚ್ಚಲು ಗಡುವು ಕೊಟ್ಟ ಡಿಸಿಎಂ
ಪಾಲಿಕೆಗಳ ಆಯುಕ್ತರು ಪ್ರತಿದಿನ ಬೆಳಿಗ್ಗೆ ನಗರ ಸಂಚಾರದ ಬಗ್ಗೆ ನನಗೆ ಮಾಹಿತಿ ನೀಡಬೇಕು. ಯಾವುದೇ ಕೆಲಸ ತೆಗೆದುಕೊಂಡರೂ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ರಸ್ತೆ ಗುಂಡಿಗಳನ್ನು ಕಾಲಮಿತಿಯಲ್ಲಿ ಮುಚ್ಚುವಂತೆ ಅಧಿಕಾರಿಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಡುವು ನೀಡಿದ್ದಾರೆ. ಅಲ್ಲದೇ ಪಾಲಿಕೆಗಳ ಆಯುಕ್ತರು ನಗರ ಸಂಚಾರದ ವೇಳಾಪಟ್ಟಿ ನೀಡಬೇಕು ಎಂದು ಸೂಚಿಸಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಭೆಯಲ್ಲಿ ಮಾತನಾಡಿದ ಅವರು, "ರಸ್ತೆ ಬದಿ ಸೇರಿದಂತೆ ನಗರಾದ್ಯಂತ ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ತೆಗೆದುಕೊಳ್ಳಬೇಕು. ವಾಹನಗಳಲ್ಲಿ ಕಸ ತಂದು ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಲು ಬೆಂಗಳೂರು ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಹಾಗೂ ಸಂಚಾರಿ ಪೊಲೀಸರೊಂದಿಗೆ ಚರ್ಚೆ ನಡೆಸಲಾಗಿದೆ" ಎಂದು ಹೇಳಿದ್ದಾರೆ.
ನಿಗದಿತ ಗಡುವಿನಲ್ಲಿ ರಸ್ತೆಗುಂಡಿಗಳನ್ನು ಮುಚ್ಚಬೇಕು. ಪಾಲಿಕೆಗಳ ಆಯುಕ್ತರು ನಗರ ಸಂಚಾರದ ಕುರಿತು ವೇಳಾಪಟ್ಟಿ ತಯಾರಿಸಿ ನನಗೆ ನೀಡಬೇಕು. ಸಂಚಾರಿ ಪೊಲೀಸ್ ವಿಭಾಗದವರು ಸಹ ರಸ್ತೆಗುಂಡಿಗಳ ಬಗ್ಗೆ ಮಾಹಿತಿ ನೀಡಬೇಕು. ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಬೋಗಸ್ ಬಿಲ್‌ಗಳಿಗೆ ಅಧಿಕಾರಿಗಳೇ ಹೊಣೆ
"ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಪಾಲಿಕೆಗಳ ಆಯುಕ್ತರು ನಿಗಾ ವಹಿಸಬೇಕು. ಕಾಮಗಾರಿಗಳ ಬಗ್ಗೆ ಯಾರೂ ಕೂಡ ಬೋಗಸ್ ಬಿಲ್ ಬರೆಯುವಂತಿಲ್ಲ. ಒಂದೊಮ್ಮೆ ಈ ರೀತಿಯಾದರೆ ಅಧಿಕಾರಿಗಳನ್ನೇ ಹೊಣೆ. ಯಾವುದೇ ಎಂಜಿನಿಯರ್‌ಗಳನ್ನು ನಂಬಬೇಡಿ ಎಂದು ಹೇಳಿದ್ದೇನೆ ಎಂದಿದ್ದಾರೆ.
ನ್ಯಾಯಾಲಯದ ಆದೇಶ ಆಶ್ಚರ್ಯ ತಂದಿದೆ
ಮಾಲೂರು ವಿಧಾನಸಭಾ ಕ್ಷೇತ್ರದ ಮರುಮತ ಎಣಿಕೆ ಕುರಿತು ನ್ಯಾಯಾಲಯದ ತೀರ್ಪು ಆಶ್ಚರ್ಯ ತಂದಿದೆ. ಈ ಬಗ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಮರು ಮತ ಎಣಿಕೆ ನಡೆದರೂ ಕೆ.ವೈ. ನಂಜೇಗೌಡ ಅವರು ಮತ್ತೆ ಗೆಲ್ಲುವ ವಿಶ್ವಾಸವಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.