ಪಕ್ಷ ವಿರೋಧಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಹೈಕಮಾಂಡಿಗೆ ಡಿ ವಿ ಸದಾನಂದ ಗೌಡ ಪತ್ರ
x

ಪಕ್ಷ ವಿರೋಧಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಹೈಕಮಾಂಡಿಗೆ ಡಿ ವಿ ಸದಾನಂದ ಗೌಡ ಪತ್ರ


ಆರ್.ಅಶೋಕ್‌ ಅವರಿಗೆ ಆಡಳಿತ ಪಕ್ಷದಲ್ಲಿದ್ದು ಗೊತ್ತೇ ಹೊರತು ವಿಪಕ್ಷ ನಾಯಕನಾಗಿ ಅನುಭವವಿಲ್ಲ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಸ್ವಪಕ್ಷೀಯ ನಾಯಕರ ವಿರುದ್ಧವೇ ಸಿಡಿದೆದ್ದಿದ್ದಾರೆ.

ಸಂಜಯನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʻʻನಮ್ಮ ಪಕ್ಷ ಇಷ್ಟು ಇಷ್ಟು ಹಾಳಾಗಲು ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳದಿರುವುದು. ಮಾತಾಡುವವರಿಗೆ ಮಣೆ ಹಾಕುತ್ತಾರೆ. ಹಾಗೆ ಮಾತಾಡುವವರನ್ನು ಹಾಗೆ ಮಾಡಬೇಡ ಎಂದು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲವೇ ಅವರನ್ನು ಪಕ್ಷದಿಂದ ದೂರ ಇಡಬೇಕು. ನಾನು ಪಕ್ಷದ ಅಧ್ಯಕ್ಷ ಆಗಿದ್ದಾಗ ಜನಾರ್ದನ ರೆಡ್ಡಿ, ರೇಣುಕಾಚಾರ್ಯ, ಯತ್ನಾಳ್ ಅವರನ್ನು ಸಸ್ಪೆಂಡ್ ಮಾಡಿದ್ದೇನೆ. ಎಷ್ಟೇ ದೊಡ್ಡವರಾಗಿದ್ದರೂ ಪಕ್ಷ ವಿರೋಧಿ ಆದವರನ್ನು ಬಿಡುತ್ತಿರಲಿಲ್ಲʼʼ ಎಂದು ಗುಡುಗಿದರು.

ʻʻಇಂದು ನಮ್ಮ ಪಕ್ಷದಲ್ಲಿ ಆ ಕೆಲಸ ಆಗುತ್ತಿಲ್ಲ. ಅದಕ್ಕಾಗಿಯೇ ನಾನು ಪಕ್ಷ ಸರಿ ಮಾಡಿ ಎಂದು ಹೈಕಮಾಂಡ್‌ಗೆ ಪತ್ರ ಬರೆದಿದ್ದೇನೆ. ಪಕ್ಷ ಸರಿ ಮಾಡಿ ಎಂದು ಮನವಿ ಮಾಡಿದ್ದೇನೆ. ಈ ಪತ್ರವನ್ನು ಈಗ ನಾನು ರಿಲೀಸ್ ಮಾಡುವುದಿಲ್ಲ. ಪತ್ರದ ವಿಚಾರ ತಿಳಿದು ವಿಜಯೇಂದ್ರ ಅವರು ನನ್ನ ಮನೆಗೆ ಬಂದು ಚರ್ಚೆ ಮಾಡಿದರು. ಒಂದು ಪಕ್ಷ ಸರಿಯಾಗಬೇಕು, ಪಕ್ಷ ಶುದ್ಧೀಕರಣ ಆಗಬೇಕು, ಪಕ್ಷ ಸರಿಯಾಗದಿದ್ದರೆ ನನ್ನನ್ನ ಹೊರಗೆ ಹಾಕಲಿ. ನಾನು ಗುಂಪು ಕಟ್ಟಿಕೊಂಡು ಪಕ್ಷ ಸರಿ ಮಾಡಲು ಹೊರಟಿಲ್ಲ. ನಾನು ಅಧ್ಯಕ್ಷ ಆಗಿದ್ದಾಗ ಯಡಿಯೂರಪ್ಪ ಅವರದ್ದು ಒಂದು ಗುಂಪು, ಅನಂತ್ ಕುಮಾರ್ ಅವರದ್ದು ಒಂದು ಗುಂಪು ಇತ್ತು. ನಾನು ಯಾವ ಗುಂಪನ್ನೂ ಸೇರದೆ ಕೆಲಸ ಮಾಡಿದೆ. ಇದರಿಂದಾಗಿ ನನ್ನನ್ನು ದೂರ ಮಾಡಿದರು. ಮೊನ್ನೆ ಕಾಂಗ್ರೆಸ್ ಪಕ್ಷದ ನಾಯಕ ನನ್ನನ್ನು ಅವರ ಪಕ್ಷಕ್ಕೆ ಆಹ್ವಾನಿಸಿದರು. ನಾಲ್ಕು ಶರ್ಟು, ಪ್ಯಾಂಟ್ ತನ್ನಿ ಅಂತ ಅಂದರು. ನಾನು ಮತ್ತೊಬ್ಬ ಜಗದೀಶ್ ಶೆಟ್ಟರ್ ಆಗಲು ಇಷ್ಟ ಇಲ್ಲ ಎಂದೆʼʼ ಎಂದರು.

ವಿಪಕ್ಷ ನಾಯಕ ಆರ್. ಅಶೋಕ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ʻʻಅಶೋಕ್ ಅವರು ಹಿಂದಿನಿಂದಲೂ ಆಡಳಿತ ಪಕ್ಷದಲ್ಲಿ ಇದ್ದರು. ಹಾಗಾಗಿ ಆಡಳಿತದ ಕಡೆ ಅವರ ಮನಸ್ಸಿದೆ. ವಿಪಕ್ಷ ನಾಯಕನಾಗಿ ಇರುವವರು ಅಧ್ಯಯನ ಮಾಡಬೇಕು. ಜನರ ವಿಶ್ವಾಸ ಗಳಿಸಬೇಕು. ನಾನೂ ಪರಿಷತ್ ವಿಪಕ್ಷ ನಾಯಕ‌ನಾಗಿದ್ದೆ. ನನ್ನ ಇಡೀ ಅವಧಿಯಲ್ಲಿ ಸಮರ್ಥ ವಿಪಕ್ಷ ನಾಯಕನಾಗಿದ್ದಾಗ, ಸಿದ್ದರಾಮಯ್ಯ ಅವರೇ ಕ್ಷಮೆ‌ ಕೇಳಿದ್ದರು. ವಿಪಕ್ಷ ನಾಯಕನಾದವನಿಗೆ ತಾಳ್ಮೆ ಇರಬೇಕುʼʼ ಎಂದು ಉತ್ತರಿಸಿದರು.

ʻʻಪಕ್ಷ ಸಂಘಟನೆ ತಳಮಟ್ಟದಿಂದ ಆಗಬೇಕು. ಕೇವಲ ಸ್ಥಾನದಲ್ಲಿ ಕೂರಿಸಿದರೆ ಆಗಲ್ಲ. ತಳಮಟ್ಟದಲ್ಲಿ ಕೆಲಸ ಮಾಡುವ ಟೀಮ್ ಕೊರತೆ ಇದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಮೇಲೆ ನಾನು ಆರೋಪ ಮಾಡಲ್ಲ. ಅವರು ಈಗಷ್ಟೇ ಬಂದಿದ್ದಾರೆ, ಬಂದ ತಕ್ಷಣ ಚುನಾವಣೆ ಬಂದಿದೆ. ಕರ್ನಾಟಕದಲ್ಲಿ ಬಿಜೆಪಿ ಕೇಡರ್ ಬೇಸ್ ಪಾರ್ಟಿ ಕಾರ್ಯಕರ್ತರನ್ನು ಕಳೆದುಕೊಳ್ಳುತ್ತಿದ್ದೇವೆ‌. ಇದು ನಮಗೆ ಎಚ್ಚರಿಕೆಯ ಗಂಟೆ. ನಮಲ್ಲಿ ಶಕ್ತಿ ಇದೆ, ಕಮಿಟೆಡ್ ಕಾರ್ಯಕರ್ತರಿದ್ದಾರೆ. ಆದರೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆʼʼ ಎಂದರು.

ʻʻನಮ್ಮ ನಿರೀಕ್ಷೆಯಂತೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಫಲಿತಾಂಶ ಸಿಕ್ಕಿಲ್ಲ. ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಸಂಘಟನಾತ್ಮಕ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಕಾಂಗ್ರೆಸ್ ಅಭೂತ ಪೂರ್ವ ಗೆಲುವಿನ ಬಳಿಕವೂ ನಮ್ಮ ಪಕ್ಷದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಮೋದಿ ಇಮೇಜ್ ಮೇಲೆ ಚುನಾವಣೆ ನಡೆದು ಬಿಡುತ್ತದೆ ಎಂದು ಅತಿಯಾದ ಆತ್ಮವಿಶ್ವಾಸದಿಂದ ನಮ್ಮ 9 ಸ್ಥಾನ ಕಳೆದುಕೊಳ್ಳಬೇಕಾಯಿತು. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಕಾಂಗ್ರೆಸ್ ಇದ್ದಾಗಲೂ ಅನೇಕ ಬಾರಿ ಬಿಜೆಪಿ ಗೆದ್ದಿದೆ. ಆದರೆ ಈ ಬಾರಿ ಸಾಕಷ್ಟು ವಿಫಲವಾಗಿದೆ. ಇದಕ್ಕೆ ನನ್ನನ್ನೂ ಸೇರಿದಂತೆ ಎಲ್ಲರ ತಪ್ಪಿದೆʼʼಎಂದರು.

ʻʻವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಕೊಹ್ಲಿ 76 ರನ್ ಹೊಡೆದರೂ, ಕಪ್ ತಗೆದುಕೊಂಡಿದ್ದು ಮಾತ್ರ ರೋಹಿತ್ ಶರ್ಮ. ಹಾಗೆ ಎಲ್ಲರ ತಪ್ಪು ಪಕ್ಷಕ್ಕೆ ಹಿನ್ನಡೆಯಾಗಿದೆ. ನಮಗೆ ಹಳೆ ಮೈಸೂರಿನಲ್ಲಿ ಜೆಡಿಎಸ್‌ ಇತ್ತು. ಅವರ ಜೊತೆ ಸೇರಿದ್ದಕ್ಕೆ ಬಿಜೆಪಿ ಗೆದ್ದಿತು ಎಂದು ಜನ ಮಾತನಾಡುತ್ತಿದ್ದಾರೆ. ಆದರೆ, ತುಮಕೂರು, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಎಲ್ಲೆಡೆ ಕಷ್ಟ ಆಗಿತ್ತು. ಜೆಡಿಎಸ್‌ ಜೊತೆ ಸೇರಿದ್ದರೂ ಕೂಡ ನಮ್ಮ ಗೆಲುವಿನ ಮಾರ್ಜಿನ್ ಕಡಿಮೆ ಆಗಿದೆ. ಇದೇ 4ರಂದು ರಾಜ್ಯ ಕಾರ್ಯಕಾರಿಣಿ ಸಭೆ ಇದೆ. ಎಲ್ಲಾ ಮಾಹಿತಿ ಪಡೆದು ಚರ್ಚೆ ಮಾಡುತ್ತೇವೆ. ದಾವಣಗೆರೆಯಲ್ಲಿ ಏಕೆ ಸೋತೆವು. ಇದೆಲ್ಲವೂ ಕರೆದು ಚರ್ಚೆಯಾಗಬೇಕಿದೆ. ಆ ಕೆಲಸ ಮಾಡಲಾಗುತ್ತದೆʼʼ ಎಂದು ಹೇಳಿದರು.

Read More
Next Story