ವರ್ಗಾವಣೆಗೆ ರಾಜಕೀಯ ಪ್ರಭಾವ | ಸರ್ಕಾರಿ ನೌಕರರ ವಿರುದ್ಧ ಕ್ರಮಕ್ಕೆ ಸಿಎಂ ಸೂಚನೆ
x

ವರ್ಗಾವಣೆಗೆ ರಾಜಕೀಯ ಪ್ರಭಾವ | ಸರ್ಕಾರಿ ನೌಕರರ ವಿರುದ್ಧ ಕ್ರಮಕ್ಕೆ ಸಿಎಂ ಸೂಚನೆ


ಸರ್ಕಾರಿ ನೌಕರರು ವರ್ಗಾವಣೆ ಮತ್ತು ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ರಾಜಕೀಯ ಪ್ರಭಾವ ಬೀರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಂತಹವರ ವಿರುದ್ಧ ಕಠಿಣ ಕ್ರಮ ವಹಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಯನ್ನು ಜುಲೈ ತಿಂಗಳಿನಲ್ಲಿ ಪೂರ್ಣಗೊಳಿಸಲಾಗಿದೆ. ಮೊದಲು 15 ದಿನದಲ್ಲಿ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿತ್ತು. ಬಳಿಕ ವರ್ಗಾವಣೆ ಅವಧಿಯನ್ನು ವಿಸ್ತರಣೆ ಮಾಡಲಾಗಿತ್ತು. ಈಗ ಇದೇ ವಿಚಾರದಲ್ಲಿ ಮುಖ್ಯಮಂತ್ರಿಗಳು ಟಿಪ್ಪಣಿಯೊಂದನ್ನು ಹೊರಡಿಸಿದ್ದಾರೆ.

ಮುಖ್ಯಮಂತ್ರಿಗಳ ಟಿಪ್ಪಣಿ

ಸರ್ಕಾರಿ ಆದೇಶ ಸಂಖ್ಯೆ ಜಿಎಡಿ 84 ಎಸ್‌ಆರ್‌ಆ‌ ದಿನಾಂಕ 29/08/1966ರಲ್ಲಿ ಸರ್ಕಾರಿ ನೌಕರರು ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸುವಾಗ ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಯವರಿಗೆ ಸಲ್ಲಿಸುವಂತೆ ಮತ್ತು ಇಲಾಖಾ ಸಚಿವರಿಗೆ ನೇರವಾಗಿ ಸಲ್ಲಿಸದಿರುವಂತೆ ಹಾಗೂ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ ಡಿಪಿಎಆರ್ 11 ಎಸ್‌ಆರ್.ಸಿ. 80, ದಿನಾಂಕ 21/05/1980ರಲ್ಲಿ ಸರ್ಕಾರಿ ನೌಕರರು ತಮ್ಮ ಸೇವಾ ವಿಷಯಗಳ ಬಗ್ಗೆ ರಾಜಕೀಯ ಅಥವಾ ಇನ್ನಿತರೆ ಪ್ರಭಾವವನ್ನು ಬೀರದಿರುವ ಬಗ್ಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ.

ಆದಾಗ್ಯೂ, ಕೆಲವು ಸರ್ಕಾರಿ ನೌಕರರು ಸದರಿ ಸೂಚನೆಗಳನ್ನು ಪಾಲಿಸದ ತಮ್ಮ ವರ್ಗಾವಣೆ ಮತ್ತು ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಮಾನ್ಯ ಮುಖ್ಯಮಂತ್ರಿಯವರಿಗೆ ಸಚಿವರಿಗೆ/ ಶಾಸಕರಿಗೆ ನೇರವಾಗಿ ಮನವಿಗಳನ್ನು ಸಲ್ಲಿಸುತ್ತಿರುವುದು ಹಾಗೂ ರಾಜಕೀಯ ಪ್ರಭಾವ ಬೀರುತ್ತಿರುವುದು ಕಂಡುಬಂದಿದೆ ಎಂದು ಟಿಪ್ಪಣಿಯಲ್ಲಿ ತಿಳಿಸಲಾಗಿದೆ.

ಆದ್ದರಿಂದ, ಮೇಲ್ಕಂಡ ಸರ್ಕಾರಿ ಆದೇಶಗಳನ್ನು ಪಾಲಿಸುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲು ಹಾಗೂ ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಅಗತ್ಯ ಕ್ರಮವಹಿಸುವಂತೆ ಸೂಚಿಸಿದೆ ಎಂದು ಮುಖ್ಯಮಂತ್ರಿಗಳು ಟಿಪ್ಪಣಿಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.

ಸರ್ಕಾರಿ ನೌಕರರ ವರ್ಗಾವಣೆಗೆ ಮಾರ್ಗಸೂಚಿ

ಕರ್ನಾಟಕ ಸರ್ಕಾರ ಈ ಬಾರಿ ಸರ್ಕಾರಿ ನೌಕರರ ವರ್ಗಾವಣೆಗಾಗಿಯೇ ನೂತನ ಮಾರ್ಗಸೂಚಿಗಳನ್ನು ರಚನೆ ಮಾಡಿತ್ತು. ಸರ್ಕಾರಿ ಆದೇಶದಲ್ಲಿ 2024-25ನೇ ಸಾಲಿನಿಂದ ವರ್ಗಾವಣೆಗಾಗಿ ನೂತನ ಮಾರ್ಗಸೂಚಿಗಳನ್ನು ನೀಡಲಾಗಿದೆ.

ಅವುಗಳ ಅನ್ವಯವೇ ವರ್ಗಾವಣೆ ನಡೆಯಬೇಕು ಎಂದು ಹೇಳಿತ್ತು. ಈಗ ವರ್ಗಾವಣೆ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಆದರೆ ಲಿಖಿತ ಮನವಿಗಳು ಇನ್ನೂ ಸಲ್ಲಿಕೆಯಾಗುತ್ತಿವೆ ಎಂದು ಮುಖ್ಯಮಂತ್ರಿಗಳ ಟಿಪ್ಪಣಿ ಹೇಳಿದೆ. ಸರ್ಕಾರಿ ನೌಕರರ ವರ್ಗಾವಣೆ ಮಾರ್ಗಸೂಚಿಯಲ್ಲಿ ವರ್ಗಾವಣೆಗೊಂಡ ನೌಕರ ವರ್ಗಾಯಿಸಲಾದ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗದೆ, ವೈದ್ಯಕೀಯ ಕಾರಣಗಳನ್ನು ನೀಡಿ ರಜೆ ಅರ್ಜಿಗಳನ್ನು ಸಲ್ಲಿಸುವ ಪ್ರಕರಣಗಳಲ್ಲಿ, ವರ್ಗಾವಣೆಗೊಂಡ ಅಂತಹ ಸರ್ಕಾರಿ ನೌಕರ, ವರ್ಗಾವಣೆ ಆದೇಶವನ್ನು ಹೊರಡಿಸುವ ಪೂರ್ವದಲ್ಲಿ ಅಥವಾ ಸೇರುವಿಕೆ ಕಾಲದಲ್ಲಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯನ್ನು ಪಡೆಯುವ ಸಂದರ್ಭದಲ್ಲಿ ಮಾತ್ರ, ಅಗತ್ಯ ದಾಖಲೆಗಳೊಂದಿಗೆ ಹಾಗೂ ವೈದ್ಯಕೀಯ ರಜೆಯನ್ನು ಕೋರಿ ಮಂಡಳಿಯ ದೃಢೀಕರಣ ಪತ್ರದೊಂದಿಗೆ ಅರ್ಜಿಯನ್ನು ಸಲ್ಲಿಸಿದಲ್ಲಿ, ವೈದ್ಯಕೀಯ ಕಾರಣಗಳ ಮೇಲೆ ರಜೆಯನ್ನು ಮಂಜೂರು ಮಾಡುವ ಬಗ್ಗೆ ಸಕ್ಷಮ ಪ್ರಾಧಿಕಾರ ಪರಿಶೀಲಿಸಿ ರಜೆಯನ್ನು ಮಂಜೂರು ಮಾಡುವ ಬಗ್ಗೆ ನಿರ್ಣಯಿಸಬಹುದಾಗಿದೆ ಎಂದು ಸ್ಪಷ್ಟಪಡಿಸಿತ್ತು.

Read More
Next Story