Firing in Hyderabad | ಬೀದರ್‌ನಲ್ಲಿ ಎಟಿಎಂ ಹಣ ದೋಚಿದವರಿಂದಲೇ ಇನ್ನೊಂದು ಕೃತ್ಯ?
ಹೈದರಾಬಾದ್‌ನ ಅಫ್ಜಲ್ ಗಂಜ್ ಪ್ರದೇಶದ ಟ್ರಾವೆಲ್ಸ್‌ನಲ್ಲಿ ಟಿಕೆಟ್ ಬುಕ್ ಮಾಡಿದ್ದ ಆರೋಪಿಗಳ ಬ್ಯಾಗ್ ತಪಾಸಣೆ ಮಾಡುವ ವೇಳೆ ಟ್ರಾವೆಲ್ಸ್ ಸಿಬ್ಬಂದಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಹೈದರಾಬಾದ್‌ನಲ್ಲಿ ಟ್ರಾವೆಲ್ಸ್ ಸಿಬ್ಬಂದಿ ಮೇಲೆ ಅಪರಿಚಿತರು ಗುಂಡು ಹಾರಿಸಿರುವ ಘಟನೆ ನಡೆದಿದೆ. ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬಿಸುವ ವಾಹನದ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದ ಆರೋಪಿಗಳೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಹೈದರಾಬಾದ್ ಅಫ್ಜಲ್ ಗಂಜ್ ಪ್ರದೇಶದ ರೋಷನ್ ಟ್ರಾವೆಲ್ಸ್‌ನಲ್ಲಿ ಗುರುವಾರ ಸಂಜೆ 4ರ ಸುಮಾರಿಗೆ ಛತ್ತೀಸಗಢದ ರಾಯಪುರಕ್ಕೆ ತೆರಳಲು ಇಬ್ಬರು ಅಪರಿಚಿತರು ಟಿಕೆಟ್ ಬುಕ್ ಮಾಡಲು ಬಂದಿದ್ದರು. ಆಗ ಬ್ಯಾಗ್ ತಪಾಸಣೆ ಮಾಡಿದಾಗ ಹಣದ ಕಂತೆಗಳಿರುವುದು ಪತ್ತೆಯಾಗಿದೆ. ಟ್ರಾವೆಲ್ಸ್ ಸಿಬ್ಬಂದಿ ಅನುಮಾನಗೊಂಡು ವಿಚಾರಿಸಿದಾಗ ಅಪರಿಚಿತ ವ್ಯಕ್ತಿ ತನ್ನ ಬಳಿ ಇದ್ದ ಪಿಸ್ತೂಲ್‌ನಿಂದ ಗುಂಡು ಹಾರಿಸಿ, ಪರಾರಿಯಾಗಿದ್ದಾನೆ. ಇದೇ ವೇಳೆ ರಾಯಪುರಕ್ಕೆ ತೆರಳುವ ಬಸ್ಸಿನಲ್ಲಿದ್ದ ಕರ್ನಾಟಕದ ಇಬ್ಬರು ಪೊಲೀಸರು ಆರೋಪಿಗಳನ್ನು ಬೆನ್ನತ್ತಿ ಹಿಡಿಯಲು ಪ್ರಯತ್ನಿಸಿದರು. ಆದರೆ, ಆರೋಪಿಗಳು ಪರಾರಿಯಾಗಿದ್ದಾರೆ. ಈ ಅಪರಿಚಿತರು ಬೀದರ್‌ನಲ್ಲಿ ಬೆಳಿಗ್ಗೆ ಎಟಿಎಂ ವಾಹನದಿಂದ ಹಣ ದೋಚಿಸಿದ ಆರೋಪಿಗಳು ಇರಬಹುದು ಎಂದು ಶಂಕಿಸಲಾಗಿದೆ. ಬೀದರ್ ಪೊಲೀಸರು ಹೈದರಾಬಾದ್‌ಗೆ ದೌಡಾಯಿಸಿದ್ದಾರೆ.
ಟ್ರಾವೆಲ್ಸ್ ಬಳಿ ನಡೆದ ಗುಂಡಿನ ದಾಳಿಯಲ್ಲಿ ರೋಷನ್ ಟ್ರಾವೆಲ್ಸ್ ವ್ಯವಸ್ಥಾಪಕ ಜಹಾಂಗೀರ್ ಅವರಿಗೆ ಗುಂಡು ತಗುಲಿದ್ದು, ಸ್ಥಿತಿ ಗಂಭೀರವಾಗಿದೆ.
ಬೀದರ್‌ನಲ್ಲಿ ಕೃತ್ಯ ಎಸಗಿದ್ದವರಿಂದಲೇ ಫೈರಿಂಗ್?
ಬೀದರ್‌ನಲ್ಲಿ ಎಟಿಎಂ ಸಿಬ್ಬಂದಿ ಮೇಲೆ ಗುಂಡು ಹಾರಿಸಿ, ಹಣದೊಂದಿಗೆ ಪರಾರಿಯಾಗಿದ್ದ ಆರೋಪಿಗಳೇ ಹೈದರಾಬಾದ್ ಅಫ್ಜಲ್ ಗಂಜ್ ಪ್ರದೇಶದಲ್ಲಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಗುಂಡಿನ ದಾಳಿ ನಡೆಸಿ ಪರಾರಿಯಾದ ಆರೋಪಿಗಳ ಪೈಕಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜ.16ರಂದು ಬೀದರ್ ಶಿವಾಜಿ ಚೌಕದಲ್ಲಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಎಟಿಎಂ ವಾಹನದ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಚಿದ್ರಿ ಗ್ರಾಮದ ನಿವಾಸಿ ಗಿರೀಶ್ ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡಿದ್ದ ಮತ್ತೊಬ್ಬ ಸಿಬ್ಬಂದಿ ಶಿವಕುಮಾರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆರೋಪಿಗಳ ಪತ್ತೆಗಾಗಿ ರಾಜ್ಯ ಪೊಲೀಸರು 9 ತಂಡಗಳನ್ನು ರಚಿಸಿದ್ದರು.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಹೈದರಾಬಾದ್ ಡಿಸಿಪಿ ಬಾಲಸ್ವಾಮಿ, ಆರೋಪಿಗಳು ಹೈದರಾಬಾದ್‌ನಿಂದ ರಾಯಪುರಕ್ಕೆ ಟಿಕೆಟ್ ಕಾಯ್ದಿರಿಸಲು ಬಂದಿದ್ದರು. ಲಗೇಜ್ ಪರಿಶೀಲನೆ ವೇಳೆ ಭಾರೀ ಪ್ರಮಾಣದ ಹಣ ಪತ್ತೆಯಾಗಿತ್ತು. ಆಗ ಟ್ರಾವೆಲ್ಸ್ ವ್ಯವಸ್ಥಾಪಕನ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ರಾಯಪುರಕ್ಕೆ ಹೊರಡುವ ಇಬ್ಬರು ಕರ್ನಾಟಕ ಪೊಲೀಸರು ಆರೋಪಿಗಳನ್ನು ಹಿಡಿಯಲು ಮುಂದಾಗಿದ್ದಾರೆ. ಆದರೆ, ಆರೋಪಿಗಳು ಸಿಗಲಿಲ್ಲ. ಇವರ ಪತ್ತೆಗಾಗಿ ನಾಲ್ಕು ತಂಡಗಳನ್ನು ರಚಿಸಿದ್ದೇವೆ ಎಂದು ತಿಳಿಸಿದ್ದಾರೆ.
ಈ ಮಧ್ಯೆ, ಟ್ರಾವೆಲ್ಸ್ ಸಿಬ್ಬಂದಿಯೊಬ್ಬರು ಮಾತನಾಡಿ, ಆರೋಪಿಗಳನ್ನು ಬಂಧಿಸಲು ಕರ್ನಾಟಕದಿಂದ ಪೊಲೀಸರು ಮುಂದಾದಾಗ ಫೈರಿಂಗ್ ಮಾಡಿದ್ದಾರೆ. ಪೊಲೀಸರ ಮೇಲೆ ಹಾರಿಸಿದ ಗುಂಡು ನಮ್ಮ ಟ್ರಾವೆಲ್ಸ್ ವ್ಯವಸ್ಥಾಪಕರಿಗೆ ತಗುಲಿದೆ ಎಂದು ತಿಳಿಸಿದ್ದಾರೆ.