ವೃದ್ಧೆ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿ ಫೈರೋಜ್‌ ಕಾಲಿಗೆ ಪೊಲೀಸ್ ಗುಂಡು
x

ಸಾಂದರ್ಭಿಕ ಚಿತ್ರ

ವೃದ್ಧೆ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿ ಫೈರೋಜ್‌ ಕಾಲಿಗೆ ಪೊಲೀಸ್ ಗುಂಡು

ಗುರುವಾರ ಮಧ್ಯಾಹ್ನ ಬೈಲಪಾರು ಐ.ಪಿ.ಎಂ ಪ್ರದೇಶದ ಅರಣ್ಯದಲ್ಲಿ 60 ವರ್ಷದ ಅಂಗವಿಕಲ ವೃದ್ಧೆಯ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದ . ನಂತರ ಮಹಿಳೆಯ ಮೊಬೈಲ್ ಮತ್ತು 5,000 ನಗದು ಕಳವು ಮಾಡಿ ಪರಾರಿಯಾಗಿದ್ದ.


60 ವರ್ಷದ ವೃದ್ಧೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದಾಂಡೇಲಿ ನಗರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಂಧಿಸುವ ಕಾರ್ಯಾಚರಣೆ ವೇಳೆ ಆರೋಪಿಯು ಪೊಲೀಸರ ಮೇಲೆ ದಾಳಿ ಮಾಡಿದ್ದ ಹಿನ್ನೆಲೆಯಲ್ಲಿ ಕಾಲಿಗೆ ಗುಂಡು ಹೊಡೆಯಲಾಗಿದೆ.

ಬಂಧಿತ ಆರೋಪಿಯನ್ನು ಫೈರೋಜ್ ಯರಗಟ್ಟಿ (23) ಎಂದು ಗುರುತಿಸಲಾಗಿದೆ. ಗುರುವಾರ ಮಧ್ಯಾಹ್ನ ಬೈಲಪಾರು ಐ.ಪಿ.ಎಂ ಪ್ರದೇಶದ ಅರಣ್ಯದಲ್ಲಿ 60 ವರ್ಷದ ಅಂಗವಿಕಲ ವೃದ್ಧೆಯ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದ . ನಂತರ ಮಹಿಳೆಯ ಮೊಬೈಲ್ ಮತ್ತು 5,000 ನಗದು ಕಳವು ಮಾಡಿ ಪರಾರಿಯಾಗಿದ್ದ.

ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಸುಮಾರು ನೂರು ಜನರ ಫೋಟೋಗಳನ್ನು ತೋರಿಸಿದ ನಂತರ ವೃದ್ಧೆ ಆರೋಪಿ ಗುರುತಿಸಿದ್ದರು. ಬಳಿಕ ಫೈರೋಜ್‌ನನ್ನು ಕುಳಗಿ ಅರಣ್ಯ ಪ್ರದೇಶದಲ್ಲಿ ಉಪನಿರೀಕ್ಷಕ ಕಿರಣ್ ಪಾಟೀಲ ನೇತೃತ್ವದ ತಂಡವು ಪತ್ತೆಹಚ್ಚಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಅವರು ಸುದ್ದಿಗೋಷ್ಠಿ ನಡೆಸಿ ಘಟನೆಯ ವಿವರಗಳನ್ನು ನೀಡಿದ್ದಾರೆ. "ಆರೋಪಿಯನ್ನು ಪತ್ತೆ ಹಚ್ಚಿ ಕರೆದುಕೊಂಡು ಬರುತ್ತಿರುವಾಗ, ಆತ ಏಕಾಏಕಿ ಪೊಲೀಸರ ಮೇಲೆ ಕಲ್ಲು ಮತ್ತು ಚಾಕುವಿನಿಂದ ದಾಳಿ ನಡೆಸಿದ್ದಾನೆ. ಪೊಲೀಸರು ಎಚ್ಚರಿಕೆ ನೀಡಿದ್ದರೂ ದಾಳಿ ನಿಲ್ಲಿಸದ ಕಾರಣಕ್ಕೆ ಆತನ ಕಾಲಿಗೆ ಗುಂಡು ಹಾರಿಸಬೇಕಾಯಿತು" ಎಂದು ಎಂ. ನಾರಾಯಣ ವಿವರಿಸಿದರು.

ಕಾರ್ಯಾಚರಣೆ ವೇಳೆ ದಾಂಡೇಲಿ ಎಸ್.ಐ. ಕಿರಣ್ ಪಾಟೀಲ, ಸಿಬ್ಬಂದಿ ಇಮ್ರಾನ್ ಕಂಬಾರಗಣವಿ ಮತ್ತು ಕೃಷ್ಣಪ್ಪ ಬೆಳ್ಳಿವರಿ ಗಾಯಗೊಂಡಿದ್ದಾರೆ. ಆರೋಪಿ ಫೈರೋಜ್ ಸೇರಿದಂತೆ ಗಾಯಗೊಂಡ ಎಲ್ಲರಿಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ.

Read More
Next Story