
ಸಾಂದರ್ಭಿಕ ಚಿತ್ರ
ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ: ಆರೋಪಿ ಬಂಧನ
ಪೋಷಕರು ಮಗಳನ್ನು ಸುಮಾರು ಎರಡು ತಿಂಗಳ ಹಿಂದೆಯೇ ಜೇನು ಕೃಷಿ ಕಲಿಯಲು ಆರೋಪಿಯ ಮನೆಗೆ ಬಿಟ್ಟು ಹೋಗಿದ್ದರು. ಈ ಅವಧಿಯಲ್ಲಿ 17 ದಿನಗಳ ಕಾಲ ಬಾಲಕಿಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಬೆಳಗಾವಿ ಮೂಲದ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಘಟನೆ ಮಂಗಳೂರಿನ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜೇನು ಕೃಷಿ ಕಲಿಸುವ ನೆಪದಲ್ಲಿ ಬಾಲಕಿಯನ್ನು ಮನೆಯಲ್ಲಿ ಇರಿಸಿಕೊಂಡು ನಿರಂತರ 17 ದಿನಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ ದೂರಿನಡಿ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅಬ್ದುಲ್ ಗಫೂರ್ ಎಂದು ಗುರುತಿಸಲಾಗಿದೆ.
ಪೋಷಕರು ಸುಮಾರು ಎರಡು ತಿಂಗಳ ಹಿಂದೆ ಜೇನು ಕೃಷಿ ಕಲಿಯುವ ಉದ್ದೇಶದಿಂದ ಮಗಳನ್ನು ಅಬ್ದುಲ್ ಗಫೂರ್ ಮನೆಯಲ್ಲಿ ಬಿಟ್ಟು ಹೋಗಿದ್ದರು. ಈ ಅವಧಿಯಲ್ಲಿ ಡಿ.2 ರಿಂದ 19 ರವರೆಗೆ ನಿರಂತರವಾಗಿ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಡಿ.19 ರಂದು ಪೋಷಕರು ಮನೆಗೆ ಬಂದಾಗ ಅಪ್ರಾಪ್ತೆ ಅಳುತ್ತಾ ವಿಷಯ ತಿಳಿಸಿದ್ದಾಳೆ. ನಂತರ ಪೋಷಕರು ಉಪ್ಪಿನಂಗಡಿ ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಅಪ್ರಾಪ್ತೆಯನ್ನು ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ನ ಕಲಂ 115(2), 351(2), 65(1) ಹಾಗೂ ಪೋಕ್ಸೋ ಕಾಯ್ದೆ 2012ರ ಕಲಂ 4 ಮತ್ತು 6ರಡಿ ಪ್ರಕರಣ ದಾಖಲಿಸಲಾಗಿದೆ.

